ನವದೆಹಲಿ: ಭಾರತ ತಂಡದ ಮಾಜಿ ನಾಯಕರಾದ ವಿರಾಟ್ ಕೊಹ್ಲಿ (Virat Kohli) ಹಾಗೂ ರೋಹಿತ್ ಶರ್ಮಾ (Rohit Sharma) ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ಮುಂದುವರಿಯಲು ಬಯಸಿದ್ದರು. ಆದರೆ, ಈ ಇಬ್ಬರೂ ದಿಗ್ಗಜರು ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳವಂತಹ ಕೆಟ್ಟ ವಾತಾವರಣವನ್ನು ತಂಡದಲ್ಲಿ ರೂಪಿಸಲಾಗಿದೆ ಎಂದು ಮಾಜಿ ಕ್ರಿಕೆಟಿಗ ಮನೋಜ್ ತಿವಾರಿ (Manoj Tiwary) ಗಂಭೀರ ಆರೋಪ ಮಾಡಿದ್ದಾರೆ. ಆ ಮೂಲಕ ಹೆಡ್ ಕೋಚ್ ಗೌತಮ್ ಗಂಭೀರ್ ವಿರುದ್ಧ ಪರೋಕ್ಷವಾಗಿ ಆರೋಪ ಮಾಡಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ಅಂದರೆ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ವೇಳೆ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು.
ದಕ್ಷಿಣ ಆಫ್ರಿಕಾ ವಿರುದ್ಧ ಮೊದಲನೇ ಟೆಸ್ಟ್ ಪಂದ್ಯದ ಸೋಲಿನ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಹೆಡ್ ಕೋಚ್ ಗೌತಮ್ ಗಂಭೀರ್, ನಮ್ಮ ದೇಶದಲ್ಲಿ ಪ್ರತಿಭೆಗಳಿಗೆ ಎಂದಿಗೂ ಕೊರತೆ ಇಲ್ಲ, ಹಾಗಾಗಿ ಪರಿವರ್ತನೆಗೆ ನಮ್ಮಲ್ಲಿ ಯಾವುದೇ ಅರ್ಥವಿಲ್ಲ ಎಂದು ಹೇಳಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮನೋಜ್ ತಿವಾರಿ, ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರು ದೀರ್ಘವಾಧಿ ಸ್ವರೂಪದಲ್ಲಿ ಮುಂದುವರಿಯಲು ಬಯಸಿದ್ದರೂ, ಅವರನ್ನು ಅನಗತ್ಯ ಪರಿವರ್ತನೆಯಿಂದ ಹಂತ-ಹಂತವಾಗಿ ತಂಡದಿಂದ ದೂರ ಇಡಲಾಗಿದೆ ಎಂದು ಆರೋಪ ಮಾಡಿದ್ದಾರೆ.
IND vs SA: ʻಗೌತಮ್ ಗಂಭೀರ್ ಮೈದಾನದಲ್ಲಿ ಆಡುತ್ತಿಲ್ಲʼ-ಟೀಕಾಕಾರರಿಗೆ ಉತ್ತಪ್ಪ ತಿರುಗೇಟು!
ಕೊಹ್ಲಿ-ರೋಹಿತ್ ಟೆಸ್ಟ್‌ಗೆ ನಿವೃತ್ತಿ ಹೇಳಲು ಕಾರಣ ತಿಳಿಸಿದ ತಿವಾರಿ
ಇಂಡಿಯಾ ಟುಡೇ ಜೊತೆ ಮಾತನಾಡಿದ ಮನೋಜ್ ತಿವಾರಿ, "ಒಟ್ಟಾರೆ ಪರಿವರ್ತನೆಯ ಹಂತದ ಬಗೆಗಿನ ಮಾತುಗಳನ್ನು ನಾನು ಒಪ್ಪುವುದಿಲ್ಲ. ಭಾರತ ತಂಡಕ್ಕೆ ಪರಿವರ್ತನೆ ಅಗತ್ಯವಿಲ್ಲ. ಜಿಂಬಾಬ್ವೆ ಅಥವಾ ನ್ಯೂಜಿಲೆಂಡ್ ತಂಡಗಳಿಗೆ ಪರವರ್ತನೆ ಅಗತ್ಯವಿದೆ. ನಮ್ಮ ದೇಶಿ ಕ್ರಿಕೆಟ್‌ನಲ್ಲಿ ಅಪಾರ ಪ್ರತಿಭೆಗಳಿದ್ದಾರೆ ಹಾಗೂ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಏಕೆಂದರೆ ಅನಗತ್ಯ ಪರಿವರ್ತನೆಯಿಂದಾಗಿ ಟೆಸ್ಟ್ ಕ್ರಿಕೆಟ್‌ನಲ್ಲಿ ಮುಂದುವರಿದು, ಟೆಸ್ಟ್‌ನ ಪಾವಿತ್ರ್ಯತೆಯನ್ನು ಉಳಿಸಲು ಬಯಸಿದ್ದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರನ್ನು ದೀರ್ಘವಾಧಿ ಸ್ವರೂಪದಿಂದ ಹಂತ-ಹಂತವಾಗಿ ದೂರ ಸರಿಯುವಂತೆ ಮಾಡಲಾಯಿತು. ಅಂದರೆ ಆ ರೀತಿಯ ವಾತಾವರಣವನ್ನು ತಂಡದಲ್ಲಿ ರೂಪಿಸಲಾಯಿತು," ಎಂದು ದೂರಿದ್ದಾರೆ.
ಗೌತಮ್ ಗಂಭೀರ್ ವಿರುದ್ಧ ಮನೋಜ್ ತಿವಾರಿ ಗರಂ
ಮೊದಲನೇ ಟೆಸ್ಟ್ ಪಂದ್ಯದ ಸೋಲಿನ ಬಳಿಕ ಭಾರತ ತಂಡದ ಬ್ಯಾಟ್ಸ್‌ಮನ್‌ಗಳು ಸ್ಪಿನ್ ಎದುರು ಬ್ಯಾಟಿಂಗ್ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳಬೇಕೆಂದು ಹೇಳಿಕೆ ನೀಡಿದ್ದ ಗೌತಮ್ ಗಂಭೀರ್ ಅವರನ್ನು ಇದೇ ವೇಳೆ ಮನೋಜ್ ತಿವಾರಿ ಟೀಕಿಸಿದ್ದಾರೆ.
"ಪಂದ್ಯದ ಸೋಲಿನ ಬಳಿಕ ನೀವು ಆಟಗಾರರ ತಂತ್ರವನ್ನು ನೀವು ಟೀಕಿಸಬಾರದು. ಕೋಚ್ ಆಗಿ ನಿಮ್ಮ ಕೆಲಸ ಏನೆಂದರೆ ಆಟವನ್ನು ಹೇಳಿಕೊಡುವುದು, ಟೀಕಿಸುವುದಿಲ್ಲ. ಬ್ಯಾಟ್ಸ್‌ಮನ್‌ಗಳ ರಕ್ಷಣಾತ್ಮಕ ಆಟ ಆಡಿಲ್ಲವಾದರೆ, ಪಂದ್ಯಕ್ಕೂ ಮುನ್ನ ನೀವು ಏಕೆ ತರಬೇತಿ ನೀಡಲಿಲ್ಲ. ನಾವು ಆಡುವ ವೇಳೆ ಗೌತಮ್ ಗಂಭೀರ್ ಅವರು ಸ್ಪಿನ್ ಎದುರು ಅತ್ಯುತ್ತಮವಾಗಿ ಆಡುತ್ತಿದ್ದರು, ಹಾಗಾಗಿ ಅವರು ಚೆನ್ನಾಗಿ ಹೇಳಿಕೊಡಬಹುದು. ಫಲಿತಾಂಶ ಭಾರತದ ಪರವಾಗಿ ಬಂದಿಲ್ಲ," ಎಂದು ಹೇಳಿದ್ದಾರೆ.
IND vs SA: 2ನೇ ಟೆಸ್ಟ್‌ಗೂ ಮುನ್ನ ದಕ್ಷಿಣ ಆಫ್ರಿಕಾಗೆ ಗಾಯದ ಭೀತಿ; ಇಬ್ಬರು ಪ್ರಧಾನ ಬೌಲರ್‌ಗಳಿಗೆ ಗಾಯ
ಎರಡನೇ ಟೆಸ್ಟ್ ಪಂದ್ಯಕ್ಕೆ ಭಾರತ ಸಜ್ಜು
ಕೋಲ್ಕತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆದಿದ್ದ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ 30 ರನ್‌ಗಳಿಂದ ಸೋಲು ಅನುಭವಿಸಿತ್ತು. ಆ ಮೂಲಕ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 0-1 ಹಿನ್ನಡೆ ಅನುಭವಿಸಿದೆ. ಇದೀಗ ನವೆಂಬರ್ 22 ರಂದು ಗುವಾಹಟಿಯ ಬರ್ಸಪರ ಕ್ರೀಡಾಂಗಣದಲ್ಲಿ ಎರಡನೇ ಟೆಸ್ಟ್ ಪಂದ್ಯಕ್ಕೆ ಭಾರತ ಸಜ್ಜಾಗುತ್ತಿದೆ. ಈ ಪಂದ್ಯವನ್ನು ಗೆದ್ದು ಸರಣಿಯನ್ನು ಡ್ರಾ ಮಾಡಿಕೊಳ್ಳಲು ಎದುರು ನೋಡುತ್ತಿದೆ.