ಕೋಲ್ಕತಾ: ದಕ್ಷಿಣ ಆಫ್ರಿಕಾ ವಿರುದ್ದ ಮೊದಲನೇ ಟೆಸ್ಟ್ ಪಂದ್ಯದಲ್ಲಿ (IND vs SA) ಭಾರತ ತಂಡ 30 ರನ್‌ಗಳಿಂದ ಸೋಲು ಅನುಭವಿಸಿದ ಬಳಿಕ ಹೆಡ್ ಕೋಚ್ ಗೌತಮ್ ಗಂಭೀರ್ (Gautam Gambhir) ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ಪ್ರವಾಸಿ ತಂಡ ನೀಡಿದ್ದ 124 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಭಾರತ ತಂಡ, 93 ರನ್‌ಗಳಿಗೆ ಆಲ್‌ಔಟ್ ಆಗಿತ್ತು. ಆ ಮೂಲಕ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ 0-1 ಅಂತರದಲ್ಲಿ ಹಿನ್ನಡೆ ಅನುಭವಿಸಿದೆ. ಭಾರತ ತಂಡ (India) ಹೀನಾಯ ಸೋಲು ಅನುಭವಿಸಿದ ಬೆನ್ನಲ್ಲೆ ಆತಿಥೇಯ ತಂಡದ ಹೆಡ್ ಕೋಚ್ ಗೌತಮ್ ಗಂಭೀರ್ ವಿರುದ್ದ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದು, ಇವರು ಅತ್ಯಂತ ಕೆಟ್ಟ ಕೋಚ್ ಎಂದು ವ್ಯಂಗ್ಯವಾಡಿದ್ದಾರೆ.
ಇಲ್ಲಿನ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಮೂರನೇ ದಿನವಾದ ಭಾನುವಾರವೇ ಪಂದ್ಯ ಅಂತ್ಯವಾಗಿತ್ತು. ಕೇವಲ 124 ರನ್‌ಗಳ ಗುರಿಯನ್ನು ಹಿಂಬಾಲಿಸಿದ್ದ ಭಾರತ ತಂಡದ ಪರ ವಾಷಿಂಗ್ಟನ್ ಸುಂದರ್ (31) ಹಾಗೂ ಅಕ್ಷರ್ ಪಟೇಲ್ (26) ಅವರನ್ನು ಬಿಟ್ಟರೆ ಇನ್ನುಳಿದ ಬ್ಯಾಟ್ಸ್‌ಮನ್‌ಗಳು ವಿಫಲರಾದರು. ಸೈಮನ್ ಹಾರ್ಮರ್ (4/30) ಹಾಗೂ ಮಾರ್ಕೊ ಯೆನ್ಸನ್ (3/35) ಅವರ ಬೌಲಿಂಗ್ ದಾಳಿಗೆ ನಲುಗಿದ ಭಾರತ ಮೂರಂಕಿ ಮೊತ್ತವನ್ನು ಕಲೆ ಹಾಕದ ಆಲ್‌ಔಟ್ ಆಯಿತು.
IND vs SA: ʻಪಂದ್ಯ ಟರ್ನ್ ಆಗಿದ್ದೇ ಇಲ್ಲಿʼ-ಭಾರತ ತಂಡ ಸೋಲಲು ಪ್ರಮುಖ ಕಾರಣ ತಿಳಿಸಿದ ಚೇತೇಶ್ವರ್ ಪೂಜಾರ!
ಗೌತಮ್ ಗಂಭೀರ್ ಕೆಟ್ಟ ಕೋಚ್ ಎಂದ ಫ್ಯಾನ್ಸ್
ಈ ಪಂದ್ಯದಲ್ಲಿನ ಗೌತಮ್ ಗಂಭೀರ್ ಅವರ ರಣತಂತ್ರ ಅಭಿಮಾನಿಗಳಿಗೆ ಇಷ್ಟವಾಗಲಿಲ್ಲ. ಅಭಿಮಾನಿಯೊಬ್ಬರು ಗೌತಮ್ ಗಂಭೀರ್ ಭಾರತ ತಂಡದ ಅತ್ಯಂತ ಕೆಟ್ಟ ಕೋಚ್ ಎಂದು ಟೀಕಿಸಿದ್ದಾರೆ. ಮತ್ತೊಬ್ಬ ಅಭಿಮಾನಿ, ಗಂಭೀರ್ ಅವರನ್ನು ಟೆಸ್ಟ್ ತಂಡದಿಂದ ಕೈ ಬಿಟ್ಟು, ವಿವಿಎಸ್ ಲಕ್ಷ್ಮಣ್ ಅವರನ್ನು ಹೆಡ್ ಕೋಚ್ ಆಗಿ ನೇಮಿಸಬೇಕೆಂದು ಆಗ್ರಹಿಸಿದ್ದಾರೆ. ಗಂಭೀರ್ ಕೋಚ್ ಆದ ಬಳಿಕ, ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಬಹುಬೇಗ ಟೆಸ್ಟ್‌ಗೆ ನಿವೃತ್ತಿ ಘೋಷಿಸಿದರು, ಶಮಿಯನ್ನು ಕೈ ಬಿಡಲಾಯಿತು. ತಮ್ಮ ಆತ್ಮೀಯ ಸ್ನೇಹಿತರನ್ನು ಮಾತ್ರ ಕೋಚಿಂಗ್ ವಿಭಾಗಕ್ಕೆ ಸೇರಿಸಿಕೊಂಡಿದ್ದಾರೆ. ಶ್ರಯಸ್ ಅಯ್ಯರ್ ಮತ್ತು ಸರ್ಫರಾಝ್ ಖಾನ್ ಅವರನ್ನು ಕೂಡ ಆಡಿಸುತ್ತಿಲ್ಲ ಎಂದು ಅಭಿಮಾನಿಯೊಬ್ಬರು ಆರೋಪ ಮಾಡಿದ್ದಾರೆ.
IND vs SA: 15 ವರ್ಷಗಳ ಬಳಿಕ ಭಾರತದಲ್ಲಿ ಟೆಸ್ಟ್ ಪಂದ್ಯ ಜಯಿಸಿದ ದಕ್ಷಿಣ ಆಫ್ರಿಕಾ
ಕೋಲ್ಕತಾ ಪಿಚ್ ಅನ್ನು ಸಮರ್ಥಿಸಿಕೊಂಡ ಗಂಭೀರ್
ಮಾಜಿ ಕ್ರಿಕೆಟಿಗರು ಹಾಗೂ ಅಭಿಮಾನಿಗಳು ಕೋಲ್ಕತಾ ಪಿಚ್ ಬಗ್ಗೆ ಟೀಕೆಗಳನ್ನು ವ್ಯಕ್ತಪಡಿಸಿದರೆ, ಟೀಮ್ ಇಂಡಿಯಾ ಹೆಡ್ ಕೋಚ್ ಗೌತಮ್ ಗಂಭೀರ್, ಈಡನ್ ಗಾರ್ಡನ್ಸ್ ಪಿಚ್ ಅನ್ನು ಸಮರ್ಥಿಸಿಕೊಂಡರು. ಈ ರೀತಿಯ ಪಿಚ್ ಬೇಕೆಂದು ನಾವು ಬಯಸಿದ್ದೆವು, ಆದರೆ ನಮ್ಮ ಬ್ಯಾಟ್ಸ್‌ಮನ್‌ಗಳು ಇಲ್ಲಿನ ಸವಾಲನ್ನು ಮೆಟ್ಟಿ ನಿಲ್ಲುವಲ್ಲಿ ವಿಫಲರಾಗಿದ್ದಾರೆ ಎಂದು ಹೇಳಿದ್ದಾರೆ.
"ಆಡಲು ಸಾಧ್ಯವಾಗದ ಪಿಚ್ ಇದೇನಲ್ಲ. ನಾನು ಕೇಳಿದ್ದು ಕೂಡ ಇದೇ ಪಿಚ್ ಹಾಗೂ ಇದೇ ನಮಗೆ ಸಿಕ್ಕಿದೆ. ಇಲ್ಲಿನ ಪಿಚ್ ಕ್ಯುರೇಟರ್ ಸೃಜನ್ ಮುಖರ್ಜಿ ಅವರು ತುಂಬಾ ಬೆಂಬಲವಾಗಿದ್ದಾರೆ. ಉತ್ತಮ ರಕ್ಷಣೆಯೊಂದಿಗೆ ಆಡಿದವರು ರನ್ ಗಳಿಸಿದ್ದರಿಂದ, ಇದು ನಿಮ್ಮ ಮಾನಸಿಕ ದೃಢತೆಯನ್ನು ನಿರ್ಣಯಿಸುವ ವಿಕೆಟ್ ಎಂದು ನಾನು ಭಾವಿಸುತ್ತೇನೆ," ಎಂದು ಗೌತಮ್ ಗಂಭೀರ್ ತಿಳಿಸಿದ್ದಾರೆ.
"ನಾವು ಬಯಸುತ್ತಿದ್ದ ವಿಕೆಟ್ ಇದಾಗಿತ್ತು. ಪಿಚ್ ಬಗ್ಗೆ ನಾವು ಯಾವುದೇ ಬೇಡಿಕೆ ಇಟ್ಟಿರಲಿಲ್ಲ ಅಥವಾ ಆಡಲು ಸಾಧ್ಯವಾಗದ ಪಿಚ್ ಅನ್ನು ಬಯಸಿರಲಿಲ್ಲ. ಅಕ್ಷರ್, ತೆಂಬಾ, ವಾಷಿಂಗ್ಟನ್ ಸುಂದರ್ ರನ್‌ಗಳನ್ನು ಗಳಿಸಿದ್ದಾರೆ. ಇದು ಟರ್ನಿಂಗ್ ವಿಕೆಟ್ ಎಂದು ನೀವು ಹೇಳಬಹುದು, ಆದರೆ, ಇಲ್ಲಿ ಹೆಚ್ಚಿನ ವಿಕೆಟ್‌ಗಳನ್ನು ವೇಗದ ಬೌಲರ್‌ಗಳು ಪಡೆದಿದ್ದಾರೆ. ಟಾಸ್ ನಿರ್ಣಾಯಕವಾಗದಂತೆ ಸ್ಪಿನ್ನರ್‌ಗಳಿಗೆ ಸಹಾಯ ಮಾಡುವ ಪಿಚ್ ಅನ್ನು ನಾವು ಮೊದಲ ದಿನದಿಂದಲೇ ಕೇಳಿದ್ದೆವು. ನಾವು ಟೆಸ್ಟ್ ಗೆದ್ದಿದ್ದರೆ ನೀವು ಪಿಚ್ ಬಗ್ಗೆ ಇಷ್ಟೊಂದು ಕೇಳುತ್ತಿರಲಿಲ್ಲ ಅಥವಾ ಚರ್ಚಿಸುತ್ತಿರಲಿಲ್ಲ. ಯಾವುದೇ ಪರಿಸ್ಥಿತಿಯಲ್ಲೂ ಉತ್ತಮ ಪ್ರದರ್ಶನ ನೀಡುವ ಆಟಗಾರರು ನಮ್ಮಲ್ಲಿದ್ದಾರೆ," ಎಂದು ಹೇಳಿದ್ದಾರೆ.
ಗಂಭೀರ್ ಹೇಳಿಕೆಗೆ ಅಭಿಮಾನಿಗಳು ತಿರುಗೇಟು
ಪಂದ್ಯದ ಬಳಿಕ ಪಿಚ್ ಬಗ್ಗೆ ಹೆಡ್ ಕೋಚ್ ಗೌತಮ್ ಗಂಭೀರ್ ನೀಡಿದ ಹೇಳಿಕೆ ಅಭಿಮಾನಿಗಳನ್ನು ಕೆರಳಿಸಿತು. ಇವರ ಅಡಿಯಲ್ಲಿ ಭಾರತ ಟೆಸ್ಟ್ ತಂಡ ಅತ್ಯಂತ ಹೀನಾಯವಾಗಿ ಸೋಲು ಅನುಭವಿಸಿದೆ ಎಂದು ಫ್ಯಾನ್ಸ್ ಕಿಡಿಕಾರಿದ್ದಾರೆ. ಗಂಭೀರ್ ಅಡಿಯಲ್ಲಿ ಭಾರತ 18 ಟೆಸ್ಟ್ ಪಂದ್ಯಗಳನ್ನು ಆಡಿದೆ. ಇದರಲ್ಲಿ ಭಾರತ 7 ರಲ್ಲಿ ಗೆಲುವು ಪಡೆದಿದ್ದರೆ, 9 ರಲ್ಲಿ ಸೋಲು ಅನುಭವಿಸಿದೆ.