IND vs SA: ʻಪಂದ್ಯ ಟರ್ನ್ ಆಗಿದ್ದೇ ಇಲ್ಲಿʼ-ಭಾರತ ತಂಡ ಸೋಲಲು ಪ್ರಮುಖ ಕಾರಣ ತಿಳಿಸಿದ ಚೇತೇಶ್ವರ್ ಪೂಜಾರ!
ದಕ್ಷಿಣ ಆಫ್ರಿಕಾ ವಿರುದ್ಧ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ 30 ರನ್‌ಗಳಿಂದ ಸೋಲು ಅನುಭವಿಸಿದೆ. ಆ ಮೂಲಕ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ 0-1 ಹಿನ್ನಡೆ ಅನುಭವಿಸಿದೆ. ಈ ಪಂದ್ಯದ ಸೋಲಿಗೆ ಬಗ್ಗೆ ಹಿರಿಯ ಬ್ಯಾಟ್ಸ್‌ಮನ್ ಚೇತೇಶ್ವರ್ ಪೂಜಾರ ಪ್ರತಿಕ್ರಿಯೆ ನೀಡಿದ್ದಾರೆ. ಭಾರತದ ಸೋಲಿಗೆ ಪ್ರಮುಖ ಕಾರಣವೇನೆಂದು ಟೆಸ್ಟ್ ಸ್ಪೆಷಲಿಸ್ಟ್ ಬ್ಯಾಟ್ಸ್‌ಮನ್ ತಿಳಿಸಿದ್ದಾರೆ.
ಭಾರತದ ಸೋಲಿಗೆ ಪ್ರಮುಖ ಕಾರಣ ತಿಳಿಸಿದ ಚೇತೇಶ್ವರ್ ಪೂಜಾರ. -
ನವದೆಹಲಿ: ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಭಾರತ ತಂಡ, ಮೊದಲನೇ ಟೆಸ್ಟ್ ಪಂದ್ಯದಲ್ಲಿ (IND vs SA) ದಕ್ಷಿಣ ಆಫ್ರಿಕಾ ವಿರುದ್ಧ 30 ರನ್‌ಗಳ ಸೋಲು ಅನುಭವಿಸಿತು. ಆ ಮೂಲಕ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆತಿಥೇಯ ಟೀಮ್ ಇಂಡಿಯಾ 0-1 ಹಿನ್ನಡೆ ಅನುಭವಿಸಿದೆ. ಈ ಪಂದ್ಯದ ಬಳಿಕ ಭಾರತೀಯ ಹಿರಿಯ ಬ್ಯಾಟ್ಸ್‌ಮನ್ ಚೇತೇಶ್ವರ್ ಪೂಜಾರ (Cheteshwar Pujara) ಪ್ರತಿಕ್ರಿಯೆ ನೀಡಿದ್ದಾರೆ. ನಾಯಕ ಶುಭಮನ್ ಗಿಲ್ (Shubman Gill) ಗಾಯಕ್ಕೆ ತುತ್ತಾಗಿದ್ದು ಪಂದ್ಯದ ಪಾಲಿಗೆ ಟರ್ನಿಂಗ್ ಪಾಯಿಂಟ್ ಆಯಿತು. ಆದರೆ, ಭಾರತ ತಂಡದ ಬ್ಯಾಟ್ಸ್‌ಮನ್‌ಗಳು ಕಂಡೀಷನ್ಸ್‌ಗೆ ಬಹುಬೇಗ ಹೊಂದಿಕೊಂಡು ಬ್ಯಾಟ್ ಮಾಡಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕೋಲ್ಕತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದ ಪಿಚ್ ಬ್ಯಾಟ್ಸ್‌ಮನ್‌ಗಳಿಗೆ ತುಂಬಾ ಕಠಿಣವಾಗಿತ್ತು. ಈ ನಾಲ್ಕೂ ಇನಿಂಗ್ಸ್‌ಗಳ ಪೈಕಿ ಕನಿಷ್ಠ ಒಂದರಲ್ಲಿಯೂ ಎರಡೂ ತಂಡಗಳಿಂದ ಕನಿಷ್ಠ 200 ರನ್‌ಗಳ ಮೊತ್ತವನ್ನು ಕಲೆ ಹಾಕಲು ಸಾಧ್ಯವಾಗಲಿಲ್ಲ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ದಕ್ಷಿಣ ಆಫ್ರಿಕಾ, 159 ರನ್‌ಗಳಿಗೆ ಆಲ್‌ಔಟ್ ಆಗಿತ್ತು. ನಂತರ ಭಾರತ 189 ರನ್‌ಗಳಿಂದ ಸರ್ವಪತನ ಕಂಡಿತ್ತು. ಬಳಿಕ ದ್ವಿತೀಯ ಇನಿಂಗ್ಸ್‌ನಲ್ಲಿ 153 ರನ್‌ಗಳಿಗೆ ಆಲ್‌ಔಟ್ ಆಗಿದ್ದ ಹರಿಣ ಪಡೆ, ಭಾರತಕ್ಕೆ 124 ರನ್‌ಗಳ ಗುರಿಯನ್ನು ನೀಡಿತ್ತು.
IND vs SA: 15 ವರ್ಷಗಳ ಬಳಿಕ ಭಾರತದಲ್ಲಿ ಟೆಸ್ಟ್ ಪಂದ್ಯ ಜಯಿಸಿದ ದಕ್ಷಿಣ ಆಫ್ರಿಕಾ
ಸಾಧಾರಣ ಮೊತ್ತದ ಗುರಿಯನ್ನು ಹಿಂಬಾಲಿಸಿದ ಭಾರತ ತಂಡ, ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. ವಾಷಿಂಗ್ಟನ್ ಸುಂದರ್ (31) ಹಾಗೂ ಅಕ್ಷರ್ ಪಟೇಲ್ (26) ಅವರನ್ನು ಹೊರತುಪಡಿಸಿ ಇನ್ನುಳಿದ ಬ್ಯಾಟ್ಸ್‌ಮನ್‌ಗಳು ಸೈಮನ್ ಹಾರ್ಮರ್ ಹಾಗೂ ಮಾರ್ಕೊ ಯೆನ್ಸನ್ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸುವಲ್ಲಿ ವಿಫಲರಾದರು. ಹಾಗಾಗಿ ಟೀಮ್ ಇಂಡಿಯಾ ಅಂತಿಮ ಇನಿಂಗ್ಸ್‌ನಲ್ಲಿ 35 ಓವರ್‌ಗಳಿಗೆ 93 ರನ್‌ಗಳಿಗೆ ಆಲ್‌ಔಟ್ ಆಗಿತ್ತು. ಇದರೊಂದಿಗೆ ಟೀಮ್ ಇಂಡಿಯಾ 30 ರನ್‌ಗಳಿಂದ ಸೋಲುಂಡು ತವರು ಅಭಿಮಾನಿಗಳ ಮುಖಭಂಗ ಅನುಭವಿಸಿತು.
15 ವರ್ಷಗಳ ಬಳಿಕ ಭಾರತದ ನೆಲದಲ್ಲಿ ದಕ್ಷಿಣ ಆಫ್ರಿಕಾ ತಂಡಕ್ಕೆ ಮೊದಲ ಟೆಸ್ಟ್ ಪಂದ್ಯ ಗೆಲುವು ಇದಾಯಿತು. ಈ ಪಂದ್ಯದ ಬಳಿಕ ಭಾರತ ತಂಡದ ಪ್ರದರ್ಶನದ ಬಗ್ಗೆ ಹಿರಿಯ ಬ್ಯಾಟ್ಸ್‌ಮನ್ ಚೇತೇಶ್ವರ್ ಪೂಜಾರ ಪ್ರತಿಕ್ರಿಯೆ ನೀಡಿದ್ದಾರೆ. ಜಿಯೊ ಸಿನಿಮಾ ಜೊತೆ ಮಾತನಾಡಿದ ಪೂಜಾರ, ಟೀಮ್ ಮ್ಯಾನೇಜ್‌ಮೆಂಟ್ ಯಾವ ಬಗೆಯ ಪಿಚ್‌ಗೆ ಬೇಡಿಕೆ ಇಟ್ಟಿದೆ ಎಂಬುದರ ಬಗ್ಗೆ ಗಮನ ಹರಿಸುವ ಬದಲು, ಇಂಥಾ ಪಿಚ್‌ಗಳಲ್ಲಿ ಹೇಗೆ ಆಡಬೇಕೆಂಬುದರ ಬಗ್ಗೆ ತಯಾರಿ ನಡೆಸುವ ಕಡೆಗೆ ಗಮನ ಕೊಡಬೇಕೆಂದು ಹೇಳಿದ್ದಾರೆ.
Temba Bavuma: ಭಾರತವನ್ನು ಮಣಿಸಿ ವಿಶೇಷ ದಾಖಲೆ ಬರೆದ ಸೋಲಿಲ್ಲದ ಸರದಾರ ಟೆಂಬ ಬವುಮಾ
ಶುಭಮನ್ ಗಾಯಕ್ಕೆ ತುತ್ತಾಗಿದ್ದು ಭಾರತಕ್ಕೆ ನಷ್ಟ
"ಮೊದಲನೆಯದಾಗಿ, ಟೀಮ್ ಮ್ಯಾನೇಜ್‌ಮೆಂಟ್ ನಿಜವಾಗಿಯೂ ಇಂತಹ ಪಿಚ್ ಅನ್ನು ಬಯಸಿದೆಯೋ? ಅಥವಾ ಇಲ್ಲವೋ? ನಮಗೆ ತಿಳಿದಿಲ್ಲ ಎಂದು ನಾನು ನಂಬುತ್ತೇನೆ. ಆದರೆ ಪಿಚ್ ಮೇಲ್ಮೈ ಏನೇ ಇರಲಿ, ನೀವು ಅದರ ಮೇಲೆ ಪ್ರದರ್ಶನ ನೀಡಬೇಕು ಮತ್ತು ನೀವು ಅದಕ್ಕೆ ತಕ್ಕಂತೆ ಚೆನ್ನಾಗಿ ಸಿದ್ಧರಾಗಿರಬೇಕು. ನಾವು ಸ್ವಲ್ಪ ಉತ್ತಮವಾಗಿ ಬೌಲ್ ಮಾಡಬೇಕಾಗಿತ್ತು ಮತ್ತು ಅದೇ ಸಮಯದಲ್ಲಿ ಉತ್ತಮವಾಗಿ ಬ್ಯಾಟ್ ಕೂಡ ಮಾಡಬೇಕಾಗಿತ್ತು ಎಂದು ನಾನು ಹೇಳುತ್ತೇನೆ. ದುರದೃಷ್ಟವಶಾತ್, ನಮಗೆ ಒಬ್ಬ ಬ್ಯಾಟ್ಸ್‌ಮನ್ ಕೊರತೆ ಇತ್ತು. ಶುಭಮನ್ ಗಿಲ್ ಪ್ರಥಮ ಇನಿಂಗ್ಸ್‌ನಲ್ಲಿ ಗಾಯಗೊಂಡರು ಮತ್ತು ದ್ವಿತೀಯ ಇನಿಂಗ್ಸ್‌ನಲ್ಲಿಯೂ ಲಭ್ಯವಿರಲಿಲ್ಲ. ಇದು ಭಾರತ ತಂಡಕ್ಕೆ ದೊಡ್ಡ ನಷ್ಟವಾಗಿತ್ತು," ಎಂದು ಚೇತೇಶ್ವರ್ ಪೂಜಾರ ಅಭಿಪ್ರಾಯ ವ್ಯಕ್ತಪಡಿಸಿದರು.
🚨 MATCH RESULT 🚨
— Proteas Men (@ProteasMenCSA) November 16, 2025
An incredible performance from #TheProteas Men at Eden Gardens! 🏟🔥
A phenomenal turnaround as South Africa claims victory by 30 runs to go 1-0 up in the Test series! 🇿🇦 pic.twitter.com/3jDrTZpCVd
ಭಾರತದ ಬ್ಯಾಟ್ಸ್‌ಮನ್‌ಗಳ ಫುಟ್‌ವರ್ಕ್ ಸುಧಾರಿಸಬೇಕು
"ಈ ರೀತಿಯ ಪಿಚ್‌ಗಳಲ್ಲಿ ಸ್ಕೋರ್ ಮಾಡುವ ಹಾದಿಯನ್ನು ಇಂಡಿಯನ್ ಬ್ಯಾಟ್ಸ್‌ಮನ್‌ಗಳು ಕಂಡುಕೊಳ್ಳಬೇಕು. ಇಂಥಾ ಪಿಚ್‌ಗಳಲ್ಲಿ ಹೆಚ್ಚಿನ ಪಂದ್ಯಗಳನ್ನು ಭಾರತ ತಂಡ ಆಡಿದಾಗ, ನೀವು ರನ್ ಗಳಿಸುವ ಅವಕಾಶಗಳು ಹೇಗೆ ಸಿಗುತ್ತವೆ? ಈ ವಿಷಯಕ್ಕೆ ಸಂಬಂಧಿಸಿದಂತೆ ತಂಡದ ಮೀಟಿಂಗ್‌ನಲ್ಲಿ ಚರ್ಚೆ ನಡೆಸಬೇಕಾದ ಅಗತ್ಯವಾಗಿದೆ. ಬ್ಯಾಟಿಂಗ್ ಕೋಚ್ ಕೂಡ ಬ್ಯಾಟ್ಸ್‌ಮನ್‌ಗಳ ಬಳಿ ಮಾತನಾಡಬೇಕಾದ ಅಗತ್ಯವಿದೆ. ಬ್ಯಾಟ್ಸ್‌ಮನ್‌ಗಳು ತಮ್ಮ ಪಾದವನ್ನು ಸರಿಯಾಗಿ ಬಳಸಿಕೊಂಡು ಸ್ವೀಪ್ ಶಾಟ್ ಹೊಡೆಯಬೇಕಾದ ಅಗತ್ಯವಿದೆ. ಇಂಥಾ ಪಿಚ್‌ಗಳಲ್ಲಿ ಸ್ವಲ್ಪ ಸಕಾರಾತ್ಮಕವಾಗಿ ಆಡಬೇಕು ಹಾಗೂ ಎದುರಾಳಿ ಬೌಲರ್‌ಗಳ ಮೇಲೆ ಒತ್ತಡ ಹೇರಬೇಕು. ಆದರೆ, ಈ ಪಂದ್ಯದಲ್ಲಿ ಇದು ನಡೆದಿಲ್ಲ," ಎಂದು ಹಿರಿಯ ಬ್ಯಾಟ್ಸ್‌ಮನ್ ತಿಳಿಸಿದ್ದಾರೆ.