IND vs SA: ದಕ್ಷಿಣ ಆಫ್ರಿಕಾ ವಿರುದ್ಧ ಅರ್ಧಶತಕ ಸಿಡಿಸಿ ವಿಶೇಷ ದಾಖಲೆ ಬರೆದ ಯಶಸ್ವಿ ಜೈಸ್ವಾಲ್!
ದಕ್ಷಿಣ ಆಫ್ರಿಕಾ ವಿರುದ್ದದ ಎರಡನೇ ಟೆಸ್ಟ್ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಬಾರಿಸಿದ ಯಶಸ್ವಿ ಜೈಸ್ವಾಲ್, ಸಚಿನ್ ತೆಂಡೂಲ್ಕರ್ ನಂತರ 24 ವರ್ಷ ವಯಸ್ಸಿಗೂ ಮುನ್ನ ಅತಿ ಹೆಚ್ಚು ಬಾರಿ 50ಕ್ಕೂ ಹೆಚ್ಚು ರನ್ ಗಳಿಸಿದ ಭಾರತದ ಎರಡನೇ ಆಟಗಾರ ಎಂದೆನಿಸಿಕೊಂಡಿದ್ದಾರೆ. ಇವರು ಸದ್ಯ ಟೆಸ್ಟ್ ಕ್ರಿಕೆಟ್‌ನಲ್ಲಿ 20 ಬಾರಿ 50ಕ್ಕೂ ಅಧಿಕ ಬಾರಿ ರನ್ ಗಳಿಸಿದ್ದಾರೆ.
ಅರ್ಧಶತಕ ಬಾರಿಸಿ ಟೆಸ್ಟ್ ಕ್ರಿಕೆಟ್‌ನಲ್ಲಿ ವಿಶೇಷ ದಾಖಲೆ ಬರೆದ ಯಶಸ್ವಿ ಜೈಸ್ವಾಲ್. -
ಗುವಾಹಟಿ: ಇಲ್ಲಿನ ಬರ್ಸಪರ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ದದ (IND VS SA) ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ಕಳಪೆ ಬ್ಯಾಟಿಂಗ್ ಪ್ರದರ್ಶನ ತೋರಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಪ್ರವಾಸಿ ತಂಡ 489 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಪ್ರತಿಯಾಗಿ ಮೊದಲ ಇನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾಗೆ ಆರಂಭಿಕ ಬ್ಯಾಟರ್‌ಗಳಾಗಿ ಕಣಕ್ಕಿಳಿದ ಯಶಸ್ವಿ ಜೈಸ್ವಾಲ್ (Yashaswi Jaiswal) ಮತ್ತು ಕೆ ಎಲ್ ರಾಹುಲ್ (KL Rahul) ಉತ್ತಮ ಆರಂಭ ಒದಗಿಸಿದರೂ, ದೊಡ್ಡ ಮೊತ್ತವನ್ನು ಕಲೆ ಹಾಕಲು ಸಾಧ್ಯವಾಗಲಿಲ್ಲ. ಅಗ್ರ ಬ್ಯಾಟರ್‌ಗಳ ಹೊರತಾಗಿಯೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಮಾರ್ಕೊ ಯೆನ್ಸನ್ ಬೌಲಿಂಗ್ ದಾಳಿಗೆ ಮಕಾಡೆ ಮಲಗಿದರು.
ಭಾರತದ ಪರ ಕೆಲ ಕಾಲ ದಿಟ್ಟ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ್ದ ಯಶಸ್ವಿ ಜೈಸ್ವಾಲ್, ಅರ್ಧಶತಕವನ್ನು ಬಾರಿಸಿದರು. ಅವರು ಆಡಿದ 97 ಎಸೆತಗಳಲ್ಲಿ ಒಂದು ಸಿಕ್ಸರ್ ಹಾಗೂ 7 ಬೌಂಡರಿಗಳೊಂದಿಗೆ 58 ರನ್‌ಗಳನ್ನು ಕಲೆ ಹಾಕಿದರು. ಈ ಅರ್ಧಶತಕದ ಮೂಲಕ ಜೈಸ್ವಾಲ್ ವಿಶೇಷ ದಾಖಲೆಯನ್ನು ಬರೆದಿದ್ದಾರೆ. ತಮ್ಮ ಟೆಸ್ಟ್ ವೃತ್ತಿ ಜೀವನದಲ್ಲಿ 20ನೇ ಬಾರಿ 50ಕ್ಕೂ ಅಧಿಕ ರನ್ ಗಳಿಸಿದ್ದಾರೆ. ಸಚಿನ್ ತೆಂಡುಲ್ಕರ್ ನಂತರ 24 ವರ್ಷ ವಯಸ್ಸಿಗೆ ಕಾಲಿಡುವ ಮೊದಲೇ ಅತಿ ಹೆಚ್ಚು ಬಾರಿ 50ಕ್ಕೂ ಹೆಚ್ಚು ರನ್ ಗಳಿಸಿದ ಭಾರತದ ಎರಡನೇ ಆಟಗಾರ ಎಂದೆನಿಸಿಕೊಂಡಿದ್ದಾರೆ.
IND vs SA: ಮಾರ್ಕೊ ಯೆನ್ಸನ್ ಮಾರಕ ದಾಳಿಗೆ ಭಾರತ 201ಕ್ಕೆ ಆಲ್‌ಔಟ್, ಆಫ್ರಿಕಾ ಹಿಡಿತದಲ್ಲಿ ಎರಡನೇ ಟೆಸ್ಟ್!
ಅದರಲ್ಲೂ 21ನೇ ಶತಮಾನದಲ್ಲಿ ಈ ಸಾಧನೆ ಮಾಡಿದ ಮೊದಲ ಆಟಗಾರನಾದ ಜೈಸ್ವಾಲ್, ತಮ್ಮ ಟೆಸ್ಟ್ ಕ್ರಿಕೆಟ್‌ನ 28ನೇ ಪಂದ್ಯ ಆಡುತ್ತಿದ್ದು, 49.9ರ ಸರಾಸರಿಯಲ್ಲಿ 2498 ರನ್ ಗಳಿಸಿದ್ದಾರೆ. 148 ವರ್ಷದ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಕೇವಲ ಆರು ಆಟಗಾರರು ಮಾತ್ರ ಈ ಸಾಧನೆ ಮಾಡಿದ್ದಾರೆ. ಜೈಸ್ವಾಲ್ ಅವರು ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದು, ಡಾನ್ ಬ್ರಾಡ್ಮನ್, ಸಚಿನ್ ತೆಂಡೂಲ್ಕರ್ ಮತ್ತು ಗ್ಯಾರಿ ಸೋಬರ್ಸ್ ಕ್ರಮವಾಗಿ ಮೊದಲ ಮೂರು ಸ್ಥಾನಗಳಲ್ಲಿದ್ದಾರೆ.
ಯಶಸ್ವಿ ಜೈಸ್ವಾಲ್ ಆರಂಭಿಕ ಆಟಗಾರರಾಗಿ ಈವರೆಗೆ ಬಾರಿಸಿರುವ ಏಳು ಶತಕಗಳಲ್ಲಿ ಐದು ಇನಿಂಗ್ಸ್‌ಗಳಲ್ಲಿ 150+ ರನ್ ಬಾರಿಸಿದ್ದಾರೆ. 23ರ ವಯಸ್ಸಿನಲ್ಲಿ ಬ್ರಾಡ್‌ಮನ್ ಮಾತ್ರ ಈ ದಾಖಲೆಯನ್ನು ಬರೆದಿದ್ದರು. ಈ ಪಂದ್ಯದ ದ್ವಿತೀಯ ಇನಿಂಗ್ಸ್‌ನಲ್ಲಿ ಜೈಸ್ವಾಲ್ ಬ್ಯಾಟ್ ಮಾಡುವುದು ಬಾಕಿ ಇದೆ. ಆ ಮೂಲಕ ಮುಂದಿನ ತಿಂಗಳು ತಮ್ಮ 24ನೇ ಹುಟ್ಟುಹಬ್ಬಕ್ಕೂ ಮುನ್ನ ಟೆಸ್ಟ್ ಕ್ರಿಕೆಟ್‌ನಲ್ಲಿ ಕೊನೆಯ ಬಾರಿ ಬ್ಯಾಟ್ ಮಾಡಲಿದ್ದಾರೆ.
A fine knock so far 👌@ybj_19 reaches his 1⃣3⃣th Test fifty 🙌
— BCCI (@BCCI) November 24, 2025
Updates ▶️ https://t.co/Hu11cnrocG#TeamIndia | #INDvSA | @IDFCFIRSTBank | pic.twitter.com/GNn5DlsJBH
23ನೇ ವಯಸ್ಸಿನಲ್ಲಿ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು 50+ ಸ್ಕೋರ್‌ಗಳು
- ಸಚಿನ್ ತೆಂಡೂಲ್ಕರ್: 29
- ರಾಮನರೇಶ್ ಸರವಣ್: 25
- ಆಸ್ಟೈರ್ ಕುಕ್: 23
- ಜಾವೇದ್ ಮಿಯಾಂದದ್: 22
- ಯಶಸ್ವಿ ಜೈಸ್ವಾಲ್: 20
- ಕೇನ್ ವಿಲಿಯಮ್ಸನ್: 20
ಟೀಮ್ ಇಂಡಿಯಾ ಪಾಲಿಗೆ ಮಾಡು ಇಲ್ಲವೇ ಮಡಿ ಪಂದ್ಯ
ದಕ್ಷಿಣ ಆಫ್ರಿಕಾ ವಿರುದ್ದದ ಎರಡನೇ ಪಂದ್ಯ ಭಾರತದ ಪಾಲಿಗೆ ನಿರ್ಣಾಯಕವಾಗಿದೆ. ಮೊದಲ ಪಂದ್ಯದಲ್ಲಿ ಪ್ರವಾಸಿ ತಂಡ ಜಯ ಸಾಧಿಸಿ ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆ ಪಡೆದುಕೊಂಡಿತ್ತು. ಈ ಹಿನ್ನೆಲೆಯಲ್ಲಿ ತವರಿನಲ್ಲಿ ವೈಟ್ ವಾಶ್ ಮುಜುಗರದಿಂದ ಪಾರಾಗಲು ಟೀಮ್ ಇಂಡಿಯಾಗೆ ಎರಡನೇ ಟೆಸ್ಟ್ ಅನ್ನು ಗೆಲ್ಲಲೇಬೇಕಾದ ಅನಿವಾರ್ಯತೆ ಎದುರಾಗಿದೆ.