IND vs WI: ರಾಹುಲ್, ಜುರೆಲ್, ಜಡೇಜಾ ಶತಕಗಳ ಬಲದಿಂದ ದೊಡ್ಡ ಮುನ್ನಡೆಯತ್ತ ಭಾರತ!
ವೆಸ್ಟ್ ಇಂಡೀಸ್ ವಿರುದ್ದದ ಮೊದಲನೇ ಟೆಸ್ಟ್ ಪಂದ್ಯದ ಎರಡನೇ ದಿನವೂ ಭಾರತ ತಂಡ ಪ್ರಾಬಲ್ಯವನ್ನು ಮುಂದುವರಿಸಿದೆ. ಕೆಎಲ್ ರಾಹುಲ್, ಧ್ರುವ್ ಜುರೆಲ್ ಹಾಗೂ ರವೀಂದ್ರ ಜಡೇಜಾ ಅವರ ಶತಕಗಳ ಬಲದಿಂದ ಟೀಮ್ ಇಂಡಿಯಾ ಪಂದ್ಯದಲ್ಲಿ ದೊಡ್ಡ ಮುನ್ನಡೆಯತ್ತ ಸಾಗುತ್ತಿದೆ. 5 ವಿಕೆಟ್ ನಷ್ಟಕ್ಕೆ 448 ರನ್ ಗಳಿಸಿರುವ ಭಾರತ, 286 ರನ್‌ಗಳ ಮುನ್ನಡೆಯಲ್ಲಿದೆ.

ಭಾರತ ತಂಡದ ಪರ ರಾಹುಲ್, ಜುರೆಲ್, ಜಡೇಜಾ ಶತಕಗಳನ್ನು ಬಾರಿಸಿದರು. -

ಅಹಮದಾಬಾದ್: ಕೆಎಲ್ ರಾಹುಲ್ (KL Rahul), ಧುವ್ ಜುರೆಲ್ (125 ರನ್) ಹಾಗೂ ರವೀಂದ್ರ ಜಡೇಜಾ (104 ರನ್) ಅವರ ಶತಕಗಳ ಬಲದಿಂದ ಭಾರತ ತಂಡ, ಮೊದಲನೇ ಟೆಸ್ಟ್ ಪಂದ್ಯದ (IND vs WI) ಎರಡನೇ ದಿನವೂ ಎದುರಾಳಿ ವೆಸ್ಟ್ ಇಂಡೀಸ್ ವಿರುದ್ದ ಪ್ರಾಬಲ್ಯವನ್ನು ಮುಂದುವರಿಸಿದೆ. ಮೊದಲನೇ ದಿನದಂತೆ ಎರಡನೇ ದಿನವೂ ಭಾರತ ತಂಡ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನವನ್ನು ತೋರಿತು. ಈ ಹಿನ್ನೆಲೆಯಲ್ಲಿ ಎರಡನೇ ದಿನದಾಟದ ಅಂತ್ಯಕ್ಕೆ ಶುಭಮನ್ ಗಿಲ್ (Shubman Gill) ನಾಯಕತ್ವದ ಟೀಮ್ ಇಂಡಿಯಾ 128 ಓವರ್‌ಗಳಿಗೆ 5 ವಿಕೆಟ್‌ಗಳ ನಷ್ಟಕ್ಕೆ 448 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ 286 ರನ್‌ಗಳ ಮುನ್ನಡೆಯನ್ನು ಪಡೆದಿದೆ. ಪ್ರಥಮ ಇನಿಂಗ್ಸ್‌ನಲ್ಲಿ 162 ರನ್‌ಗಳಿಗೆ ಆಲ್‌ಔಟ್ ಆಗಿದ್ದ ವಿಂಡೀಸ್ ಎದುರು ಆತಿಥೇಯರು ಪಂದ್ಯದ ಮೇಲೆ ಸಂಪೂರ್ಣ ಹಿಡಿತವನ್ನು ಸಾಧಿಸಿದ್ದಾರೆ.
ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಎರಡನೇ ದಿನವಾದ ಶುಕ್ರವಾರ ಬೆಳಿಗ್ಗೆ ಎರಡು ವಿಕೆಟ್ ನಷ್ಟಕ್ಕೆ 121 ರನ್‌ಗಳಿಂದ ಪ್ರಥಮ ಇನಿಂಗ್ಸ್ ಅನ್ನು ಮುಂದುವರಿಸಿದ ಭಾರತ ತಂಡ, ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನವನ್ನು ತೋರಿತು. ಕೆಎಲ್ ರಾಹುಲ್ ಜೊತೆ ಕ್ರೀಸ್‌ಗೆ ಬಂದ ಶುಭಮನ್ ಗಿಲ್ ಉತ್ತಮವಾಗಿ ಬ್ಯಾಟ್ ಮಾಡಿ ಅರ್ಧಶತಕವನ್ನು ಗಳಿಸಿ ವಿಕೆಟ್ ಒಪ್ಪಿಸಿದರು. ಗಿಲ್ ಹಾಗೂ ರಾಹುಲ್ ಜೋಡಿ ಮೂರನೇ ವಿಕೆಟ್‌ಗೆ 98 ರನ್‌ಗಳನ್ನು ದಾಖಲಿಸಿತು.
IND vs WI: ಎಂಎಸ್ ಧೋನಿಯ ಟೆಸ್ಟ್ ಸಿಕ್ಸರ್‌ಗಳ ದಾಖಲೆ ಮುರಿದ ರವೀಂದ್ರ ಜಡೇಜಾ!
ತವರಿನಲ್ಲಿ ಎರಡನೇ ಶತಕ ಬಾರಿಸಿದ ರಾಹುಲ್
ಪಂದ್ಯದ ಮೊದಲನೇ ದಿನ ಅರ್ಧಶತಕವನ್ನು ಗಳಿಸಿದ್ದ ಕೆಎಲ್ ರಾಹುಲ್, ಎರಡನೇ ದಿನವೂ ಅತ್ಯುತ್ತಮ ಬ್ಯಾಟಿಂಗ್ ಮುಂದುವರಿಸಿದರು. ಅವರು ಆಡಿದ 197 ಎಸೆತಗಳಲ್ಲಿ 12 ಬೌಂಡರಿಗಳೊಂದಿಗೆ 100 ರನ್‌ಗಳನ್ನು ಬಾರಿಸಿದರು. ಆ ಮೂಲಕ ತವರಿನಲ್ಲಿ ತಮ್ಮ ಎರಡನೇ ಹಾಗೂ ಒಟ್ಟಾರೆ 11ನೇ ಟೆಸ್ಟ್ ಶತಕವನ್ನು ಬಾರಿಸಿದ್ದಾರೆ ಹಾಗೂ ಭಾರತ ತಂಡಕ್ಕೆ ಭರ್ಜರಿ ಆರಂಭ ನೀಡುವಲ್ಲಿ ಪ್ರಮುಖ ಕೊಡುಗೆಯನ್ನು ನೀಡಿದರು.
Hundreds galore 💯
— BCCI (@BCCI) October 3, 2025
KL Rahul's 1⃣0⃣0⃣, Dhruv Jurel's 1⃣2⃣5⃣, and Ravindra Jadeja's 1⃣0⃣4⃣* leads #TeamIndia's charge!#INDvWI | @IDFCFIRSTBank | @klrahul | @dhruvjurel21 | @imjadeja pic.twitter.com/CProc5qzcL
ಚೊಚ್ಚಲ ಶತಕ ಬಾರಿಸಿದ ಧ್ರುವ್ ಜುರೆಲ್
ರಿಷಭ್ ಪಂತ್ ಅವರ ಅನುಪಸ್ಥಿತಿಯಲ್ಲಿ ವಿಕೆಟ್ ಕೀಪರ್ ಆಗಿ ಆಡುತ್ತಿರುವ ಧ್ರುವ್ ಜುರೆಲ್ ಅವರು ಟೀಮ್ ಮ್ಯಾನೇಜ್‌ಮೆಂಟ್ ಇಟ್ಟಿರುವ ನಿರೀಕ್ಷೆಯನ್ನು ಉಳಿಸಿಕೊಂಡಿದ್ದಾರೆ. ಅವರು ತಮ್ಮ ಟೆಸ್ಟ್ ವೃತ್ತಿ ಜೀವನದ ಚೊಚ್ಚಲ ಶತಕವನ್ನು ಬಾರಿಸಿದರು. ಇವರು ಆಡಿದ 210 ಎಸೆತಗಳಲ್ಲಿ ಮೂರು ಸಿಕ್ಸರ್ ಹಾಗೂ 13 ಬೌಂಡರಿಗಳೊಂದಿಗೆ 125 ರನ್‌ಗಳನ್ನು ಗಳಿಸಿದರು ಹಾಗೂ ರವೀಂದ್ರ ಜಡೇಜಾ ಜೊತೆ 206 ರನ್‌ಗಳ ದ್ವಿಶತಕದ ಜೊತೆಯಾಟವನ್ನು ಆಡಿದರು. ಆ ಮೂಲಕ ತಂಡದ ಮೊತ್ತವನ್ನು 400ರ ಗಡಿ ದಾಟಿಸುವಲ್ಲಿ ಪ್ರಮುಖ ಪಾತ್ರವಹಿಸಿದರು.
That's Stumps on Day 2!
— BCCI (@BCCI) October 3, 2025
1⃣0⃣0⃣s from KL Rahul, Dhruv Jurel, and Ravindra Jadeja ✅#TeamIndia with a massive lead of 286 runs 💪
Scorecard ▶️ https://t.co/MNXdZceTab#INDvWI | @IDFCFIRSTBank pic.twitter.com/cyPiBC6V4I
ರವೀಂದ್ರ ಜಡೇಜಾ ಮಿಂಚಿನ ಶತಕ
ಇನ್ನು ಎರಡನೇ ದಿನ ಆಲ್‌ರೌಂಡರ್ ರವೀಂದ್ರ ಜಡೇಜಾ ಕೂಡ ಮಿಂಚಿನ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದರು. ಅವರು ಆಡಿದ 176 ಎಸೆತಗಳಲ್ಲಿ 5 ಸಿಕ್ಸರ್ ಹಾಗೂ 6 ಬೌಂಡರಿಗಳೊಂದಿಗೆ ಅಜೇಯ 104 ರನ್‌ಗಳನ್ನು ಗಳಿಸಿದ್ದು, ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ರವೀಂದ್ರ ಜಡೇಜಾಗೆ ಇದು ಆರನೇ ಶತಕವಾಗಿದೆ. ಇವರ ಜೊತೆಗೆ ಮತ್ತೊಂದು ತುದಿಯಲ್ಲಿ ವಾಷಿಂಗ್ಟನ್ ಸುಂದರ್ ಇದ್ದಾರೆ.