ಹೊರ್ಮುಜ್ ಜಲಸಂಧಿಯಲ್ಲಿ ಹೆಚ್ಚಿದ ಆತಂಕ: ಇರಾನಿನ 16 ದೋಣಿ ನಾಶ
ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ದಾಳಿ ನಡೆಸುತ್ತಲೇ ಇದೆ. ಇದಕ್ಕೆ ತಿರುಗೇಟು ನೀಡುತ್ತಲೇ ಇರುವ ಇರಾನ್ ಕೂಡ ಪ್ರತಿ ದಾಳಿಯನ್ನು ಮುಂದುವರಿಸಿದೆ. ತೈಲ ಗಣಿಗಾರಿಕೆ ನಡೆಸುವ ಇರಾನಿನ 16 ದೋಣಿಗಳನ್ನು ನಾಶ ಪಡಿಸಿರುವುದಾಗಿ ಇದೀಗ ಅಮೆರಿಕ ಹೇಳಿದ್ದು, ಇದಕ್ಕೆ ಪ್ರತಿಯಾಗಿ ಇರಾನ್ ಕೂಡ ಹೊರ್ಮುಜ್ ಜಲಸಂಧಿಯಲ್ಲಿ ಶತ್ರು ರಾಷ್ಟ್ರಗಳಿಗೆ ಒಂದು ಲೀಟರ್ ತೈಲ ಕೂಡ ಸಾಗದಂತೆ ಮಾಡುವುದಾಗಿ ಪ್ರತಿಜ್ಞೆ ಮಾಡಿದೆ.
ಸಂಗ್ರಹ ಚಿತ್ರ -
ಟೆಹರಾನ್: ಗಣಿಗಾರಿಕೆ ನಡೆಸುವ ಇರಾನಿನ 16 ದೋಣಿಗಳನ್ನು (Iran boat) ನಾಶ ಪಡಿಸಿರುವುದಾಗಿ ಅಮೆರಿಕ (america) ಹೇಳಿದ್ದು, ಇದರ ಬಳಿಕ ಹೊರ್ಮುಜ್ ಜಲಸಂಧಿಯಲ್ಲಿ (Hormuz Strait) ಶತ್ರು ರಾಷ್ಟ್ರಗಳಿಗೆ ಒಂದು ಲೀಟರ್ ತೈಲ ಕೂಡ ಸಾಗದಂತೆ ಮಾಡುವುದಾಗಿ ಇರಾನ್ ಪ್ರತಿಜ್ಞೆ ಮಾಡಿದೆ. ಫೆಬ್ರವರಿ 28ರಂದು ಯುಎಸ್ (US) ಮತ್ತು ಇಸ್ರೇಲ್ (Israel) ಸೇನಾ ಪಡೆಯು ಇರಾನ್ (Iran war) ಮೇಲೆ ದಾಳಿ ನಡೆಸಿದ್ದು, ಇದರ ಬಳಿಕ ದಾಳಿ, ಪ್ರತಿ ದಾಳಿಗಳು ಮುಂದುವರಿಯುತ್ತಲೇ ಇದೆ. ಇರಾನ್ ಮೇಲೆ ಶತ್ರು ರಾಷ್ಟ್ರಗಳು ನಡೆಸುವ ದಾಳಿಯ ಪರಿಣಾಮ ಈಗ ವಿಶ್ವವೇ ಎದುರಿಸುವಂತಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬಿಕ್ಕಟ್ಟು ದಿನೇ ದಿನೇ ಉಲ್ಬಣಗೊಳ್ಳುತ್ತಲೇ ಇದೆ.
ಹೊರ್ಮುಜ್ ಜಲಸಂಧಿಯಲ್ಲಿ 16 ಇರಾನಿನ ದೋಣಿಗಳನ್ನು ನಾಶಪಡಿಸಲಾಗಿದೆ ಎಂದು ಅಮೆರಿಕ ಮಂಗಳವಾರ ಹೇಳಿದ ಬಳಿಕ ಯುದ್ಧದ ಪರಿಣಾಮ ಜಲಮಾರ್ಗದಲ್ಲಿ ಈಗ ಆತಂಕದ ವಾತಾವರಣ ನಿರ್ಮಾಣವಾಗಿದೆ. ಇದಕ್ಕೆ ಪ್ರತಿಯಾಗಿ ಈ ಪ್ರದೇಶದಿಂದ ಸಾಗುವ ತೈಲ ರಫ್ತುಗಳನ್ನು ನಿರ್ಬಂಧಿಸುವುದಾಗಿ ಪ್ರತಿಜ್ಞೆ ಮಾಡಿದ್ದು, ಒಂದು ಲೀಟರ್ ತೈಲ ಕೂಡ ಶತ್ರು ರಾಷ್ಟ್ರಗಳಿಗೆ ಸಾಗದಂತೆ ತಡೆಯುವುದಾಗಿ ಹೇಳಿದೆ.
ಅಮೆರಿಕದ ಭಯಕ್ಕೆ ಅಡಗಿ ಕುಳಿತ್ರಾ ಇರಾನ್ ನೂತನ ಸುಪ್ರೀಂ ಲೀಡರ್? ಮೊಜ್ತಬಾ ಹತ್ಯೆಗೆ ಇಸ್ರೇಲ್ ಪ್ಲಾನ್!
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಈ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿ, ಯುಎಸ್ ಸೇನಾ ಪಡೆಯು ಇರಾನ್ ನ 16 ತೈಲ ಗಣಿಗಾರಿಕೆ ನಡೆಸುವ ಹಡಗುಗಳನ್ನು ನಾಶಪಡಿಸಿದೆ ಎಂದು ಹೇಳಿದ್ದರೂ ಕೂಡ ಹೊರ್ಮುಜ್ ಜಲಸಂಧಿಯಲ್ಲಿ ಯಾವುದೇ ಸ್ಪೋಟವಾಗಿರುವ ಬಗ್ಗೆ ವರದಿಗಳಾಗಿಲ್ಲ. ಈ ಜಲಸಂಧಿಯ ಮೂಲಕ ವಿಶ್ವದ ಶೇ. 20ರಷ್ಟು ತೈಲ ರಫ್ತು ನಡೆಯುತ್ತದೆ.
ವಿಡಿಯೊ ಇಲ್ಲಿದೆ:
U.S. forces eliminated multiple Iranian naval vessels, March 10, including 16 minelayers near the Strait of Hormuz. pic.twitter.com/371unKYiJs
— U.S. Central Command (@CENTCOM) March 10, 2026
ಈ ಪ್ರದೇಶದಲ್ಲಿ ಗಣಿಗಾರಿಕೆ ನಡೆಸುವುದನ್ನು ಇರಾನ್ ನಿಲ್ಲಿಸದೇ ಇದ್ದರೆ ಹಿಂದೆಂದೂ ನೋಡಿರದ ರೀತಿಯಲ್ಲಿ ಇರಾನ್ ಅನ್ನು ಹೊಡೆಯುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ ಬಳಿಕ ಇರಾನ್ ನ ಕೆಲವು ಹಡಗುಗಳನ್ನು ನಾಶ ಪಡಿಸಿರುವುದಾಗಿ ಅವರು ಹೇಳಿದ್ದರು.
ಯುಎಸ್, ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷವು 11ನೇ ದಿನಕ್ಕೆ ಕಾಲಿಟ್ಟಿದ್ದು, ಎರಡೂ ಕಡೆಯಿಂದ ದಾಳಿ, ಪ್ರತಿದಾಳಿ ಮುಂದುವರಿದಿದೆ. ಸಂಘರ್ಷದ ಪರಿಣಾಮ ಮಧ್ಯಪ್ರಾಚ್ಯ ಮತ್ತು ಅದರಾಚೆಗೂ ಹಬ್ಬಿದ್ದು ಗಲ್ಫ್ ಅರಬ್ ರಾಷ್ಟ್ರಗಳ ಮೇಲೂ ನಿರಂತರ ದಾಳಿಗಳಾಗುತ್ತಿವೆ.
ಯುದ್ಧದ ಭೀಕರತೆಯ ಬಗ್ಗೆ ಮಾಧ್ಯಮವೊಂದರ ಜೊತೆ ಮಾತನಾಡಿರುವ ಟೆಹರಾನ್ ಮಹಿಳೆಯೊಬ್ಬರು, ವಸತಿ ಕಟ್ಟಡವೊಂದಕ್ಕೆ ದಾಳಿಯಾಗಿರುವುದನ್ನು ನಾನು ನೋಡಿದ್ದೇನೆ. ಹತ್ತಾರು ಸಾವಿರ ಇರಾನಿಯನ್ನರು ಗ್ರಾಮಾಂತರ ಭಾಗದಲ್ಲಿ ಆಶ್ರಯ ಪಡೆದಿದ್ದಾರೆ ಎಂದು ತಿಳಿಸಿದ್ದಾರೆ.
ದಕ್ಷಿಣ ಲೆಬನಾನ್‌ನಾದ್ಯಂತ ಮಂಗಳವಾರ ನಡೆದ ಅನೇಕ ಇಸ್ರೇಲಿ ದಾಳಿಗಳಲ್ಲಿ ರೆಡ್ ಕ್ರಾಸ್ ಸದಸ್ಯರೊಬ್ಬರು ಸೇರಿದಂತೆ ಏಳು ಜನ ಸಾವನ್ನಪ್ಪಿದ್ದಾರೆ. ಸೋಮವಾರ ತಮ್ಮ ತಂಡವನ್ನು ಗುರಿಯಾಗಿಸಿಕೊಂಡು ಇಸ್ರೇಲ್ ದಾಳಿ ನಡೆಸಿದೆ. ಮಂಗಳವಾರ ನಡೆದ ವಾಯುದಾಳಿಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡುತ್ತಿದ್ದ ಹೆಜ್ಬೊಲ್ಲಾ- ಸಂಬಂಧಿತ ಇಸ್ಲಾಮಿಕ್ ಆರೋಗ್ಯ ಪ್ರಾಧಿಕಾರದಲ್ಲಿ ಕೆಲಸ ಮಾಡುತ್ತಿದ್ದ ಅರೆವೈದ್ಯರು ಕೂಡ ಸಾವನ್ನಪ್ಪಿದ್ದಾರೆ ಎಂದು ಲೆಬನಾನ್ ಆರೋಗ್ಯ ಸಚಿವಾಲಯ ಬುಧವಾರ ಮುಂಜಾನೆ ತಿಳಿಸಿದೆ.
ಇಸ್ರೇಲ್ ಮಂಗಳವಾರ ನಡೆಸಿದ ದಾಳಿಯಲ್ಲಿ ಲೆಬನಾನಿನ ಸೈನಿಕನೊಬ್ಬ ಸಾವನ್ನಪ್ಪಿದ್ದಾನೆ ಎಂದು ಲೆಬನಾನಿನ ಸೇನೆ ತಿಳಿಸಿದೆ. ಇರಾನ್ ಮತ್ತು ಇಸ್ರೇಲ್ ಸಂಘರ್ಷ ಪ್ರಾರಂಭವಾದ ಬಳಿಕ ಒಟ್ಟು ಐದು ಮಂದಿ ಇರಾನ್ ಸೈನಿಕರು ಸಾವನ್ನಪ್ಪಿದ್ದಾರೆ.
ಸೌದಿಯಲ್ಲಿನ ಪ್ರಿನ್ಸ್ ಸುಲ್ತಾನ್ ಏರ್ ಬೇಸ್ ಮೇಲೆ ಹಲವಾರು ದಲಿಗಳಾಗಿವೆ. ಎರಡು ಪ್ರಮುಖ ನಗರಗಳ ಬಳಿ ಡ್ರೋನ್‌ಗಳನ್ನು ನಾಶಪಡಿಸಿರುವುದಾಗಿ ಸೌದಿ ಅರೇಬಿಯಾದ ರಕ್ಷಣಾ ಸಚಿವಾಲಯ ಬುಧವಾರ ತಿಳಿಸಿದೆ.
ಇರಾಕ್‌ನ ಬಾಗ್ದಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದೊಳಗಿನ ಮಿಲಿಟರಿ ನೆಲೆಗಳನ್ನು ಮಂಗಳವಾರ ತಡರಾತ್ರಿ ಡ್ರೋನ್‌ಗಳು ಗುರಿಯಾಗಿಸಿಕೊಂಡಿತ್ತು ಎಂದು ಇಬ್ಬರು ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ.
ಯುನೈಟೆಡ್ ಅರಬ್ ಎಮಿರೇಟ್ಸ್ ನ ವಾಯು ರಕ್ಷಣಾ ಪಡೆಗಳ ಒಳಬರುವ ಇರಾನಿನ ಗುಂಡಿನ ದಾಳಿಗೆ ಪ್ರತಿ ದಾಳಿಯನ್ನು ನಡೆಸುತ್ತಿದೆ. ದುಬೈಯಲ್ಲಿ ಇರಾನ್ ದಾಳಿಯಿಂದ ಆರು ಮಂದಿ ಸಾವನ್ನಪ್ಪಿದ್ದು, 122 ಮಂದಿ ಗಾಯಗೊಂಡಿರುವುದಾಗಿ ತಿಳಿಸಿದೆ.
ಬಹರೈನ್ ನಲ್ಲಿ ನಡೆದ ದಾಳಿಯಲ್ಲಿ 29 ವರ್ಷದ ಮಹಿಳೆಯೊಬ್ಬರು ಸಾವನ್ನಪ್ಪಿದ್ದು, ಎಂಟು ಜನರು ಗಾಯಗೊಂಡಿರುವುದಾಗಿ ಹೇಳಿದೆ.
ಈ ಸಂಘರ್ಷದಲ್ಲಿ ಸುಮಾರು 140 ಯುಎಸ್ ಸೇವಾ ಸದಸ್ಯರು ಗಾಯಗೊಂಡಿದ್ದು, ಇವರಲ್ಲಿ 108 ಸೇವಾ ಸದಸ್ಯರು ಈಗಾಗಲೇ ಕರ್ತವ್ಯಕ್ಕೆ ಮರಳಿದ್ದಾರೆ. ಎಂಟು ಯುಎಸ್ ಸೇವಾ ಸದಸ್ಯರಿಗೆ ತೀವ್ರ ಗಾಯಗಳಾಗಿವೆ ಮತ್ತು ಏಳು ಮಂದಿ ಸಾವನ್ನಪ್ಪಿದ್ದಾರೆ. ಇರಾನ್‌ನಲ್ಲಿ ಸುಮಾರು 1,230 ಜನರು ಸಾವನ್ನಪ್ಪಿದ್ದು, ಲೆಬನಾನ್‌ನಲ್ಲಿ 480 ಕ್ಕೂ ಹೆಚ್ಚು ಜನರು ಮತ್ತು ಇಸ್ರೇಲ್‌ನಲ್ಲಿ 12 ಜನರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಇರಾನ್ ವಿರುದ್ಧದ ಯುದ್ಧಕ್ಕೆ ಅಮೆರಿಕನ್ನರಿಂದಲೇ ವ್ಯಕ್ತವಾಯ್ತು ವಿರೋಧ; ಯಾರಿಗೂ ಬೇಡದ ಸಂಘರ್ಷ ಟ್ರಂಪ್‌ಗೇಕೆ?
ಈ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿರುವ ಇರಾನ್‌ನ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಘರ್ ಖಲಿಬಾಫ್, ದೇಶದ ನಾಯಕತ್ವ, ಮಿಲಿಟರಿ, ಬ್ಯಾಲಿಸ್ಟಿಕ್ ಕ್ಷಿಪಣಿ ಮತ್ತು ವಿವಾದಿತ ಪರಮಾಣು ಘಟಕಗಳ ಮೇಲೆ ನಿರಂತರ ದಾಳಿ ನಡೆಸಿರುವುದನ್ನು ಖಂಡಿಸಿರುವ ಅವರು, ಇರಾನ್ ಖಂಡಿತವಾಗಿಯೂ ಕದನ ವಿರಾಮವನ್ನು ಬಯಸುತ್ತಿಲ್ಲ. ಆಕ್ರಮಣಕಾರನು ಪಾಠ ಕಲಿಯುವಂತೆ ಮಾಡಲು ನಾವು ಹೋರಾಡಬೇಕು. ಇದರಿಂದ ಅವರು ಮತ್ತೆಂದು ನಮ್ಮ ಮೇಲೆ ದಾಳಿ ಮಾಡಲು ಯೋಚಿಸಬಾರದು ಎಂದು ಹೇಳಿದ್ದಾರೆ.
ಇರಾನಿನ ಉನ್ನತ ಭದ್ರತಾ ಅಧಿಕಾರಿ ಅಲಿ ಲಾರಿಜಾನಿ ಅವರು, ನೀವು ಮಾತ್ರವಲ್ಲ ನಿಮಗಿಂತ ದೊಡ್ಡವರು ಕೂಡ ಇರಾನ್ ಅನ್ನು ನಿರ್ಮೂಲನೆ ಮಾಡಲು ಸಾಧ್ಯವಿಲ್ಲ. ನಿಮ್ಮನ್ನು ನೀವೇ ನಿರ್ಮೂಲನೆ ಮಾಡದಂತೆ ಜಾಗರೂಕರಾಗಿರಿ ಎಂದು ಹೇಳಿದ್ದಾರೆ.