ಅಹಮದಾಬಾದ್: ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ಮೊದಲನೇ ಟೆಸ್ಟ್ ಪಂದ್ಯದ (IND vs WI) ಎರಡನೇ ದಿನ ಭಾರತ ತಂಡದ ಆಲ್‌ರೌಂಡರ್ ರವೀಂದ್ರ ಜಡೇಜಾ (Ravindra Jadeja) ತಮ್ಮ ಟೆಸ್ಟ್ ವೃತ್ತಿ ಜೀವನದ ಆರನೇ ಶತಕವನ್ನು ಬಾರಿಸಿದರು. ಆ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಆರಕ್ಕೂ ಅಧಿಕ ಶತಕ ಹಾಗೂ 300ಕ್ಕೂ ಅಧಿಕ ವಿಕೆಟ್‌ಗಳನ್ನು ಕಬಳಿಸಿದ ಕಪಿಲ್ ದೇವ್ (Kapil Dev), ಇಮ್ರಾನ್ ಖಾನ್ ಒಳಗೊಂಡ ಎಲೈಟ್ ಲಿಸ್ಟ್‌ಗೆ ರವೀಂದ್ರ ಜಡೇಜಾ ಸೇರ್ಪಡೆಯಾಗಿದ್ದಾರೆ. ದೀರ್ಘಾವಧಿ ಸ್ವರೂಪದಲ್ಲಿ ಈ ಸಾಧನೆ ಮಾಡಿದ ವಿಶ್ವದ ಆರನೇ ಕ್ರಿಕೆಟಿಗ ಎಂಬ ದಾಖಲೆಯನ್ನು ಸ್ಟಾರ್ ಆಲ್‌ರೌಂಡರ್ ಬರೆದಿದ್ದಾರೆ.
ಟೆಸ್ಟ್ ಕ್ರಿಕೆಟ್‌ನಲ್ಲಿ ಆರು ಅಥವಾ ಅದಕ್ಕಿಂತೆ ಹೆಚ್ಚು ಶತಕಗಳು ಹಾಗೂ 300 ವಿಕೆಟ್‌ಗಳನ್ನು ಕಬಳಿಸಿದ ದಿಗ್ಗಜರ ಸಾಲಿನಲ್ಲಿ ಇಂಗ್ಲೆಂಡ್‌ನ ಮಾಜಿ ಆಲ್‌ರೌಂಡರ್ ಇಯಾನ್ ಬೋಥಮ್, ಭಾರತದ ಕಪಿಲ್ ದೇವ್ ಹಾಗೂ ಆರ್ ಅಶ್ವಿನ್, ಪಾಕಿಸ್ತಾನದ ಇಮ್ರಾನ್ ಖಾನ್ ಹಾಗೂ ನ್ಯೂಜಿಲೆಂಡ್ ದಿಗ್ಗಜ ಡೇನಿಯಲ್ ವೆಟ್ಟೋರಿ ಇದ್ದಾರೆ. ಎರಡನೇ ದಿನದಾಟದ ಕೊನೆಯಲ್ಲಿ ಜಡೇಜಾ ಅವರು ತಮ್ಮ 169 ಎಸತೆಗಳಲ್ಲಿ ಮೂರಂಕಿ ವೈಯಕ್ತಿಕ ಮೊತ್ತವನ್ನು ದಾಖಲಿಸಿದರು. ಎಡಗೈ ಸ್ಪಿನ್ನರ್ ಜೊಮೆಲ್ ವಾರಿಕನ್ ಅವರ ಬೌಲ್ ಮಾಡಿದ 126ನೇ ಓವರ್‌ನ ಎಸೆತದಲ್ಲಿ ಸಿಂಗಲ್ ಪಡೆಯುವ ಈ ಸಾಧನೆ ಮಾಡಿದರು.
IND vs WI: ರಾಹುಲ್, ಜುರೆಲ್, ಜಡೇಜಾ ಶತಕಗಳ ಬಲದಿಂದ ದೊಡ್ಡ ಮುನ್ನಡೆಯತ್ತ ಭಾರತ!
4000 ರನ್‌ಗಳ ಸನಿಹದಲ್ಲಿ ರವೀಂದ್ರ ಜಡೇಜಾ
ಟೆಸ್ಟ್ ಕ್ರಿಕೆಟ್‌ನಲ್ಲಿ ರವೀಂದ್ರ ಜಡೇಜಾ 4000 ರನ್‌ಗಳನ್ನು ಪೂರ್ಣಗೊಳಿಸಲು ಇನ್ನು ಕೇವಲ 10 ರನ್‌ಗಳ ಅಗತ್ಯವಿದೆ. ಮೂರನೇ ದಿನ ಅವರು 10 ರನ್ ಗಳಿಸಿದರೆ ಟೆಸ್ಟ್ ಕ್ರಿಕೆಟ್‌ನಲ್ಲಿ 4000 ರನ್‌ಗಳು ಹಾಗೂ 300 ವಿಕೆಟ್‌ಗಳನ್ನು ಕಬಳಿಸಿದ ಸಾಧನೆಗೆ ಭಾಜನವಾಗಲಿದೆ. ಆ ಮೂಲಕ ಭಾರತ ತಂಡದ ಮಾಜಿ ನಾಯಕ ಕಪಿಲ್ ದೇವ್ ಹಾಗೂ ಕಿವೀಸ್ ದಿಗ್ಗಜ ಡೇನಿಯಲ್ ವೆಟ್ಟೋರಿ ಅವರನ್ನು ಒಳಗೊಂಡ ಎಲೈಟ್‌ಲಿಸ್ಟ್‌ಗೆ ಸೇರ್ಪಡೆಯಾಗಲಿದ್ದಾರೆ.
ವಿಂಡೀಸ್ ಎದುರು ಭಾರತದ ಪ್ರಾಬಲ್ಯ
ರವೀಂದ್ರ ಜಡೇಜಾ, ಕೆಎಲ್ ರಾಹುಲ್ ಹಾಗೂ ಧ್ರುವ್ ಜುರೆಲ್ ಅವರ ಶತಕಗಳ ಬಲದಿಂದ ಭಾರತ ತಂಡ, ಮೊದಲನೇ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಪ್ರಾಬಲ್ಯ ಸಾಧಿಸಿದೆ. ತಂಡದ ಮೊತ್ತ 218 ರನ್‌ಗಳಿರುವಾಗ ಕೆಎಲ್ ರಾಹುಲ್ ವಿಕೆಟ್ ಒಪ್ಪಿಸಿದರು. ಬಳಿಕ ಕ್ರೀಸ್‌ಗೆ ಬಂದ ರವೀಂದ್ರ ಜಡೇಜಾ, ವಿಕೆಟ್ ಕೀಪರ್ ಧ್ರುವ್ ಜುರೆಲ್ ಅವರ ಜೊತೆ 206 ರನ್‌ಗಳ ದ್ವಿಶತಕದ ಜೊತೆಯಾಟವನ್ನು ಆಡಿದರು. ಅದ್ಭುತವಾಗಿ ಬ್ಯಾಟ್ ಮಾಡಿದ ರವೀಂದ್ರ ಜಡೇಜಾ ಎರಡನೇ ದಿನದಾಟದ ಅಂತ್ಯಕ್ಕೆ 176 ಎಸೆತಗಳಲ್ಲಿ 5 ಸಿಕ್ಸರ್ ಹಾಗೂ 6 ಬೌಂಡರಿಗಳೊಂದಿಗೆ ಅಜೇಯ 104 ರನ್‌ಗಳನ್ನು ಕಲೆ ಹಾಕಿದ್ದು, ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಎರಡನೇ ದಿನದಾಟದ ಅಂತ್ಯಕ್ಕೆ ಭಾರತ ತಂಡ, ಪ್ರಥಮ ಇನಿಂಗ್ಸ್‌ನಲ್ಲಿ 128 ಓವರ್‌ಗಳಿಗೆ 5 ವಿಕೆಟ್‌ಗಳ ನಷ್ಟಕ್ಕೆ 448 ರನ್‌ಗಳನ್ನು ಕಲೆ ಹಾಕಿದೆ. ಆ ಮೂಲಕ ಎದುರಾಳಿ ವಿಂಡೀಸ್ ವಿರುದ್ದ 286 ರನ್‌ಗಳ ಮುನ್ನಡೆಯನ್ನು ಕಾಯ್ದುಕೊಂಡಿದೆ. ರವೀಂದ್ರ ಜಡೇಜಾ ಹಾಗೂ ವಾಷಿಂಗ್ಟನ್ ಸುಂದರ್ ಅವರು ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.