ನವದೆಹಲಿ: ಭಾರತ ಟೆಸ್ಟ್ ತಂಡದಲ್ಲಿ ಅವಕಾಶಕ್ಕಾಗಿ ಎದುರು ನೋಡುತ್ತಿದ್ದ ಜಮ್ಮು ಮತ್ತು ಕಾಶ್ಮೀರ ತಂಡದ ವೇಗಿ ಆಕಿಬ್ ನಬಿ (Auqib Nabi) ಅವರಿಗೆ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯ (IND vs WI) ಭಾರತ ತಂಡದಲ್ಲಿ ಸ್ಥಾನವನ್ನು ನೀಡಲಾಗಿದೆ. ಇದು ಅವರ ಭಾರತ ತಂಡದಲ್ಲಿನ ಚೊಚ್ಚಲ ಅವಕಾಶವಾಗಿದೆ. ಆದರೆ, ರಣಜಿ ಟ್ರೋಫಿ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಕಬಳಿಸಿದ್ದ ವೇಗಿಗೆ ಭಾರತ ವೈಟ್‌ಬಾಲ್ ತಂಡದಲ್ಲಿ ಸ್ಥಾನ ನೀಡಿರುವುದಕ್ಕೆ ಮಾಜಿ ಕ್ರಿಕೆಟಿಗ ಹಾಗೂ ಕ್ರಿಕೆಟ್ ನಿರೂಪಕ ಆಕಾಶ್ ಚೋಪ್ರಾ Aakash Chopra) ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ ಹಾಗೂ ಕಣಿವೆ ವೇಗಿಯ ವೈಟ್‌ಬಾಲ್ ಕ್ರಿಕೆಟ್ ಸಾಮರ್ಥ್ಯವನ್ನು ಪ್ರಶ್ನೆ ಮಾಡಿದ್ದಾರೆ.
ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಆಕಾಶ್ ಚೋಪ್ರಾ, “ಆಕಿಬ್ ನಬಿಗಾಗಿ ನನಗೆ ನಿಜವಾಗಿಯೂ ಸಂತೋಷವಿದೆ. ಆದರೆ ಅದೇ ಸಮಯದಲ್ಲಿ ಸ್ವಲ್ಪ ಆತಂಕವೂ ಇದೆ. ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ. ಆದರೆ ಅವರಿಗೆ ಅವಕಾಶ ನೀಡಲಾಗುತ್ತದೆಯೇ? ನನಗೆ ಖಚಿತವಿಲ್ಲ. ನಬಿ ವೈಟ್-ಬಾಲ್ ಕ್ರಿಕೆಟ್‌ಗೆ ಸಿದ್ಧರಿದ್ದಾರೆಯೇ? ಅವರು ನಿಜವಾಗಿಯೂ ತಂಡಕ್ಕೆ ವ್ಯತ್ಯಾಸ ಮೂಡಿಸಬಲ್ಲರೇ ಎಂಬ ಪ್ರಶ್ನೆ ಇದೆ,” ಎಂದು ಹೇಳಿದ್ದಾರೆ.
IND vs WI 1st ODI: ನಮನ್ ಧೀರ್‌ಗೆ ಚೊಚ್ಚಲ ಅವಕಾಶ? ಭಾರತದ ಸಂಭಾವ್ಯ ಪ್ಲೇಯಿಂಗ್ XI ವಿವರ!
“ಪ್ರಾಮಾಣಿಕವಾಗಿ ಹೇಳುವುದಾದರೆ, ಅವರ ಬಳಿ ಹೆಚ್ಚಿನ ವೇಗವಿಲ್ಲ. ಅವರು 10 ಓವರ್‌ಗಳನ್ನು ಬೌಲ್ ಮಾಡಬೇಕಾಗುತ್ತದೆ. ಅದೂ ಕೂಡ ಇನಿಂಗ್ಸ್‌ನ ವಿಭಿನ್ನ ಹಂತಗಳಲ್ಲಿ ಬೌಲ್ ಮಾಡಬೇಕಾಗುತ್ತದೆ. ಅದಕ್ಕೆ ಅವರು ಸಿದ್ಧರಿದ್ದಾರೆಯೇ? ಇದುವರೆಗೆ ಅದಕ್ಕೆ ಸಾಕಷ್ಟು ಪುರಾವೆಗಳನ್ನು ನಾನು ನೋಡಿಲ್ಲ,” ಎಂದು ಚೋಪ್ರಾ ತಿಳಿಸಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ನಬಿ ನೀಡಿದ ಪ್ರದರ್ಶನವೂ ತಮ್ಮ ಅನುಮಾನಗಳನ್ನು ಸಂಪೂರ್ಣವಾಗಿ ನಿವಾರಿಸಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
“ಐಪಿಎಲ್‌ನಲ್ಲಿ ನಾವು ನೋಡಿದ ಅವರ ಪ್ರದರ್ಶನವು ಇನಿಂಗ್ಸ್‌ನ ಎಲ್ಲಾ ಮೂರು ಹಂತಗಳಲ್ಲಿ ಬೌಲ್ ಮಾಡಬಲ್ಲರು ಎಂಬುದನ್ನು ಸಾಬೀತುಪಡಿಸುವಷ್ಟು ಮನವರಿಕೆ ಮೂಡಿಸಲಿಲ್ಲ. ಆದರೂ ನ್ಯೂಜಿಲೆಂಡ್‌ನಲ್ಲಿ ಅವರು ಪಂದ್ಯಗಳನ್ನು ಆಡುವ ಅವಕಾಶ ಪಡೆಯುತ್ತಾರೆ ಎಂಬ ವಿಶ್ವಾಸ ನನಗಿದೆ. ಅಲ್ಲಿನ ಪರಿಸ್ಥಿತಿಗಳಿಗೆ ಅವರು ಬಹುತೇಕ ಸೂಕ್ತವಾಗಿದ್ದಾರೆ. ಆದರೆ ವೆಸ್ಟ್ ಇಂಡೀಸ್‌ನ ಫ್ಲಾಟ್ ಪಿಚ್‌ಗಳಲ್ಲಿ ಅವರ ಪ್ರದರ್ಶನ ಹೇಗಿರುತ್ತದೆ ಎಂಬ ಬಗ್ಗೆ ನನಗೆ ಖಚಿತವಿಲ್ಲ,” ಎಂದು ಕ್ರಿಕೆಟ್ ನಿರೂಪಕ ತಿಳಿಸಿದ್ದಾರೆ.
IND vs WI 2026 ಸರಣಿಯ ಸಂಪೂರ್ಣ ವೇಳಾಪಟ್ಟಿ, ತಂಡಗಳು, ಲೈವ್ ಸ್ಟ್ರೀಮಿಂಗ್ ವಿವರ!
ರಣಜಿ ಟ್ರೋಫಿಯಲ್ಲಿ ಉತ್ತಮ ದಾಖಲೆ
ಜಮ್ಮು ಮತ್ತು ಕಾಶ್ಮೀರದ ವೇಗಿ ಆಕಿಬ್ ನಬಿ ರಣಜಿ ಟ್ರೋಫಿ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದರೂ, ಮೂಲ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಿರಲಿಲ್ಲ. ಬಳಿಕ ಬದಲಿ ಆಟಗಾರನಾಗಿ ಶ್ರೀಲಂಕಾ ಪ್ರವಾಸಕ್ಕೆ ಅವರನ್ನು ತಂಡಕ್ಕೆ ಕರೆಸಿಕೊಳ್ಳಲಾಯಿತು. ನಬಿ ಇದುವರೆಗೆ 45 ಪ್ರಥಮ ದರ್ಜೆ ಪಂದ್ಯಗಳಲ್ಲಿ 170 ವಿಕೆಟ್‌ಗಳನ್ನು ಪಡೆದಿದ್ದಾರೆ. ಇದೀಗ ವೈಟ್-ಬಾಲ್ ಕ್ರಿಕೆಟ್‌ನಲ್ಲಿ ಅವರಿಗೆ ಅವಕಾಶ ಸಿಕ್ಕರೆ, ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸುವ ಸವಾಲು ಅವರ ಮುಂದಿದೆ.
ಆಕಿಬ್ ನಬಿ ಇರಾನಿ ಕಪ್‌ಗೆ ಗೈರು
ಭಾರತದ ಏಕದಿನ ತಂಡದಲ್ಲಿ ಸ್ಥಾನ ಪಡೆದಿರುವ ಆಕಿಬ್ ನಬಿ ಅವರು ಮುಂಬರುವ ಇರಾನಿ ಕಪ್ ಪಂದ್ಯಕ್ಕೆ ಗೈರಾಗಲಿದ್ದಾರೆ. ಏಕದಿನ ತಂಡದ ಆಯ್ಕೆಯಿಂದಾಗಿ ಜಮ್ಮು ಮತ್ತು ಕಾಶ್ಮೀರ ತಂಡಕ್ಕೆ ನಬಿ ಅವರ ಸೇವೆ ಲಭ್ಯವಾಗುವುದಿಲ್ಲ. ಇರಾನಿ ಕಪ್ ಪಂದ್ಯವು ಅಕ್ಟೋಬರ್ 1ರಿಂದ 5ರವರೆಗೆ ಕಾಶ್ಮೀರದಲ್ಲಿ ನಡೆಯಲಿದೆ. ಜಮ್ಮು ಮತ್ತು ಕಾಶ್ಮೀರ ತಂಡದ ಪ್ರಮುಖ ಆಟಗಾರರಾಗಿರುವ ನಬಿ, ಇದೀಗ ಭಾರತ ತಂಡದ ಏಕದಿನ ಸರಣಿಯಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.