ತಿರುವನಂತಪುರಂ: ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಣ ಮೂರು ಪಂದ್ಯಗಳ ಏಕದಿನ ಸರಣಿಗೆ (IND vs WI) ಸಜ್ಜಾಗುತ್ತಿರುವ ಟೀಮ್ ಇಂಡಿಯಾ ಮಾಜಿ ನಾಯಕ ರೋಹಿತ್ ಶರ್ಮಾ (Rohit Sharma), 2027ರ ಐಸಿಸಿ ಏಕದಿನ ವಿಶ್ವಕಪ್ (ICC ODI Wordl Cup 2027) ಟೂರ್ನಿಯಲ್ಲಿ ಆಡುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ ಹಾಗೂ 50 ಓವರ್‌ಗಳ ವಿಶ್ವಕಪ್ ಗೆಲ್ಲಬೇಕೆಂದು ಹೇಳಿದ್ದಾರೆ. ಸೆಪ್ಟಂಬರ್ 27 ರಂದು ಇಲ್ಲಿನ ಗ್ರೀನ್‌ಫೀಲ್ಡ್ ಇಂಟರ್‌ನ್ಯಾಷನಲ್ ಕ್ರೀಡಾಂಗಣದಲ್ಲಿ ನಡೆಯುವ ಮೊದಲನೇ ಪಂದ್ಯದಲ್ಲಿ ರೋಹಿತ್ ಶರ್ಮಾ ಕಣಕ್ಕೆ ಇಳಿಯಲಿದ್ದಾರೆ.
2027ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಹೊತ್ತಿಗೆ ರೋಹಿತ್ ಶರ್ಮಾ ಅವರು 40ನೇ ವಯಸ್ಸಿನಲ್ಲಿರುತ್ತಾರೆ. ಟಿ20ಐ ಹಾಗೂ ಟೆಸ್ಟ್ ಕ್ರಿಕೆಟ್‌ಗೆ ಈಗಾಗಲೇ ಅವರು ನಿವೃತ್ತಿ ಘೋಷಿಸಿದ್ದು, ಇದೀಗ ಅವರು 50 ಓವರ್‌ಗಳ ಸ್ವರೂಪದಲ್ಲಿ ಸಕ್ರಿಯರಾಗಿದ್ದಾರೆ. ಅಕ್ಟೋಬರ್ 4 ರಿಂದ ನವೆಂಬರ್ 11ರವರೆಗೆ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಹಾಗೂ ನಮೀಬಿಯಾ ಜಂಟಿ ಆತಿಥ್ಯದಲ್ಲಿ ಏಕದಿನ ವಿಶ್ವಕಪ್ ಟೂರ್ನಿ ನಡೆಯಲಿದೆ.
2027ರ ಏಕದಿನ ವಿಶ್ವಕಪ್ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುತ್ತೇನೆಂದ ವಿರಾಟ್ ಕೊಹ್ಲಿ!
ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ವೇಳೆ ರೋಹಿತ್ ಶರ್ಮಾ ಅವರ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನ ಅಂತ್ಯವಾಗಲಿದೆ ಎಂಬ ಚರ್ಚೆಗಳು ನಡೆದಿದ್ದವು. ಲಂಡನ್‌ನ ಲಾರ್ಡ್ಸ್ ಅಂಗಣದ ಪಂದ್ಯ ರೋಹಿತ್ ಪಾಲಿಗೆ ಭಾರತದ ಪರ ಕೊನೆಯ ಪಂದ್ಯವೆಂದು ಹೇಳಲಾಗಿತ್ತು. ಆದರೆ, ಆ ಪಂದ್ಯದಲ್ಲಿ ಹಿಟ್‌ಮ್ಯಾನ್ ಶತಕವನ್ನು ಬಾರಿಸಿ ತಮ್ಮ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದರು. ಇದಾದ ಬಳಿಕ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಅವರು, ರೋಹಿತ್ ಅವರ ಅಂತಾರಾಷ್ಟ್ರೀಯ ಕ್ರಿಕೆಟ್ ನಿವೃತ್ತಿಯ ವದಂತಿಗಳಿಗೆ ತೆರೆ ಎಳೆದಿದ್ದರು.
ಜಿಯೊಹಾಟ್‌ಸ್ಟಾರ್ ಜೊತೆ ಮಾತನಾಡಿದ ರೋಹಿತ್ ಶರ್ಮಾ, ತಾನು ಎಷ್ಟೇ ದೀರ್ಘಾವಧಿ ಮುಂದುವರಿದರೂ ನನ್ನ ಗುರಿ ಏನಿದ್ದರೂ ಏಕದಿನ ವಿಶ್ವಕಪ್ ಗೆಲ್ಲುವುದಾಗಿದೆ ಎಂದಿದ್ದಾರೆ.
“ನಾನು ಹೊಂದಿರುವುದು ಮುಗಿದುಹೋಯಿತು ಎಂಬ ಯೋಚನೆ ಎಂದಿಗೂ ನನ್ನ ಮನಸ್ಸಿಗೆ ಬರುವುದಿಲ್ಲ. ನೀವು ಆಡುತ್ತಿರುವವರೆಗೂ, ಎದುರು ನೋಡಲು ಯಾವಾಗಲೂ ಏನಾದರೂ ಇರುತ್ತದೆ. ನಾನು ವಿಶ್ವಕಪ್‌ಗಾಗಿ ಎದುರು ನೋಡುತ್ತಿದ್ದೇನೆ. ನನ್ನ ಮುಂದಿರುವ ಸವಾಲುಗಳು ಹಾಗೂ ಅವಕಾಶಗಳತ್ತ ಗಮನ ಹರಿಸುತ್ತಿದ್ದೇನೆ,” ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.
IND vs WI: ʻ24 ವರ್ಷಗಳ ಬಳಿಕ ಸರಣಿ ಗೆಲ್ಲುತ್ತೇವೆʼ-ಭಾರತ ತಂಡಕ್ಕೆ ಡೆರೆನ್ ಸಾಮಿ ವಾರ್ನಿಂಗ್!
ವಿಶ್ವಕಪ್‌ಗಾಗಿ ವಿಭಿನ್ನ ರೀತಿಯಲ್ಲಿ ಸಿದ್ಧತೆ ಅಗತ್ಯ
2023ರ ಏಕದಿನ ವಿಶ್ವಕಪ್‌ನಲ್ಲಿ ರೋಹಿತ್ ಶರ್ಮಾ ಭಾರತ ತಂಡದ ನಾಯಕರಾಗಿದ್ದರು. ಭಾರತ ತಂಡವನ್ನು ಫೈನಲ್‌ವರೆಗೆ ಮುನ್ನಡೆಸಿದ್ದರು. ಈ ಹಿಂದಿನ ವಿಶ್ವಕಪ್‌ಗಳಿಗಿಂತ ಭಿನ್ನವಾಗಿ, ರೋಹಿತ್ ಬ್ಯಾಟಿಂಗ್‌ನಲ್ಲಿ ನಿಸ್ವಾರ್ಥ ಮನೋಭಾವವನ್ನು ಅಳವಡಿಸಿಕೊಂಡಿದ್ದರು. ಆರಂಭದಲ್ಲೇ ಎದುರಾಳಿ ಬೌಲರ್‌ಗಳ ಮೇಲೆ ಆಕ್ರಮಣಕಾರಿ ಆಟವಾಡುತ್ತಿದ್ದರು.
ವಿಶ್ವಕಪ್‌ಗಾಗಿ ತಯಾರಿ ಯಾವಾಗಲೂ ವಿಭಿನ್ನವಾಗಿರುತ್ತದೆ ಎಂದು ಮಾಜಿ ಭಾರತೀಯ ನಾಯಕ ಹೇಳಿದ್ದಾರೆ. ಏಕೆಂದರೆ ಟೂರ್ನಿಯಲ್ಲಿ ವಿಭಿನ್ನ ಎದುರಾಳಿಗಳನ್ನು ಎದುರಿಸುವುದರ ಜೊತೆಗೆ ಬೇರೆ ಬೇರೆ ಮೈದಾನಗಳಲ್ಲಿ ಆಡಬೇಕಾಗುತ್ತದೆ.
“ವಿಶ್ವಕಪ್ ನಡೆಯುವಾಗ ಅಥವಾ ನಾವು ಐಸಿಸಿ ಟೂರ್ನಿಯಲ್ಲಿ ಆಡುತ್ತಿರುವಾಗ, ಅದಕ್ಕೆ ತನ್ನದೇ ಆದ ವಿಶಿಷ್ಟ ಸವಾಲುಗಳಿರುತ್ತವೆ. ವಿಭಿನ್ನ ಎದುರಾಳಿಗಳನ್ನು ಎದುರಿಸಬೇಕು, ಬೇರೆ ಬೇರೆ ಮೈದಾನಗಳಲ್ಲಿ ಆಡಬೇಕು. ಹೀಗಾಗಿ ವಿಭಿನ್ನ ರೀತಿಯಲ್ಲಿ ಸಿದ್ಧತೆ ಮಾಡಿಕೊಳ್ಳಬೇಕು ಮತ್ತು ವಿಭಿನ್ನವಾಗಿ ಯೋಚಿಸಬೇಕು. ಅದೇ ದೊಡ್ಡ ಸವಾಲು,” ಎಂದು ರೋಹಿತ್ ಹೇಳಿದ್ದಾರೆ.