ಮುಲ್ಲಾನ್‌ಪುರ: ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ (IND vs WI) ಭರ್ಜರಿ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ ಕೆಎಲ್ ರಾಹುಲ್ (KL Rahul) ಅಜೇಯ ಶತಕ ಸಿಡಿಸಿ ಹಲವು ದಾಖಲೆಗಳನ್ನು ಬರೆದಿದ್ದಾರೆ. 87 ಎಸೆತಗಳಲ್ಲಿ 129* ರನ್ ಗಳಿಸಿದ ರಾಹುಲ್, ಭಾರತದ 5ನೇ ಕ್ರಮಾಂಕದ ಬ್ಯಾಟರ್‌ಗಳ ವಿಶೇಷ ಪಟ್ಟಿಯಲ್ಲಿ ಎಂಎಸ್ ಧೋನಿ ಜೊತೆ ಜಂಟಿ ಎರಡನೇ ಸ್ಥಾನಕ್ಕೇರಿದ್ದಾರೆ. ಕೆಎಲ್ ರಾಹುಲ್ ಶತಕದ ಬಲದಿಂದ ಭಾರತ ತಂಡ ಪ್ರಥಮ ಇನಿಂಗ್ಸ್‌ನಲ್ಲಿ ದೊಡ್ಡ ಮೊತ್ತವನ್ನು ಕಲೆ ಹಾಕಿತ್ತು.
ಭಾರತದ ಪರ ಏಕದಿನ ಕ್ರಿಕೆಟ್‌ನಲ್ಲಿ ನಂ.5 ಕ್ರಮಾಂಕದಲ್ಲಿ ರಾಹುಲ್ ಇದೀಗ ನಾಲ್ಕು ಶತಕಗಳನ್ನು ಗಳಿಸಿದ್ದಾರೆ. ಈ ಮೂಲಕ ಎಂ.ಎಸ್ ಧೋನಿ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಭಾರತದ ಪರ ನಂ.5 ಕ್ರಮಾಂಕದಲ್ಲಿ ಅತಿ ಹೆಚ್ಚು ಏಕದಿನ ಶತಕಗಳ ದಾಖಲೆ ಯುವರಾಜ್ ಸಿಂಗ್ ಅವರ ಹೆಸರಿನಲ್ಲಿದ್ದು, ಅವರು 99 ಪಂದ್ಯಗಳಲ್ಲಿ 7 ಶತಕಗಳನ್ನು ದಾಖಲಿಸಿದ್ದಾರೆ. ರಾಹುಲ್ ಕೇವಲ 39 ಪಂದ್ಯಗಳಲ್ಲಿ ನಾಲ್ಕು ಶತಕಗಳನ್ನು ಗಳಿಸಿರುವುದು ಗಮನಾರ್ಹ.
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 10,000 ರನ್‌ಗಳ ಮೈಲುಗಲ್ಲು ತಲುಪಿದ ಕೆಎಲ್ ರಾಹುಲ್!
ಭಾರತದ ಪರ 5ನೇ ಕ್ರಮಾಂಕದಲ್ಲಿ ಶತಕ ಸಿಡಿಸಿದ ಬ್ಯಾಟರ್‌ಗಳು
ಯುವರಾಜ್ ಸಿಂಗ್ –7 ಶತಕ, 99 ಪಂದ್ಯ
ಎಂ.ಎಸ್. ಧೋನಿ –4 ಶತಕ, 95 ಪಂದ್ಯ
ಕೆಎಲ್ ರಾಹುಲ್ –4 ಶತಕ, 39 ಪಂದ್ಯ
ಯುವರಾಜ್ ಸಿಂಗ್ ದಾಖಲೆ ಹಿಂದಿಕ್ಕಿದ ರಾಹುಲ್
ವೆಸ್ಟ್ ಇಂಡೀಸ್ ವಿರುದ್ಧ ಐದನೇ ಕ್ರಮಾಂಕದಲ್ಲಿ ಭಾರತದ ಬ್ಯಾಟರ್ ಗಳಿಸಿದ ಗರಿಷ್ಠ ಸ್ಕೋರ್ ದಾಖಲೆಯನ್ನೂ ರಾಹುಲ್ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಮುಲ್ಲಾನ್‌ಪುರದಲ್ಲಿ 129 ರನ್* ಗಳಿಸುವ ಮೂಲಕ ಅವರು 2005ರಲ್ಲಿ ಕೊಲಂಬೊದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಯುವರಾಜ್ ಸಿಂಗ್ ಗಳಿಸಿದ್ದ 110 ರನ್‌ಗಳ ದಾಖಲೆಯನ್ನು ಹಿಂದಿಕ್ಕಿದರು.
ವೆಸ್ಟ್ ಇಂಡೀಸ್ ವಿರುದ್ಧ 5ನೇ ಕ್ರಮಾಂಕದಲ್ಲಿ ಭಾರತದ ಪರ ಗರಿಷ್ಠ ಸ್ಕೋರ್
ಕೆಎಲ್ ರಾಹುಲ್ – 129*, ಮಲ್ಲನ್‌ಪುರ, 2026
ಯುವರಾಜ್ ಸಿಂಗ್ – 110, ಕೊಲಂಬೊ, 2005
ಎಂ.ಎಸ್. ಧೋನಿ – 95, ಕಿಂಗ್‌ಸ್ಟನ್, 2009
ಅರ್ಧಶತಕದ ಬಳಿಕ ರಾಹುಲ್ ಅಬ್ಬರ
ರಾಹುಲ್ ಆರಂಭದಲ್ಲಿ ಆಂಕರ್ ಪಾತ್ರವನ್ನು ನಿರ್ವಹಿಸಿದರು. ಮಧ್ಯಮ ಓವರ್‌ಗಳಲ್ಲಿ ಸ್ಟ್ರೈಕ್ ತಿರುಗಿಸುತ್ತಾ, ಬೌಲರ್‌ಗಳು ತಪ್ಪು ಮಾಡಿದಾಗ ಬೌಂಡರಿ ಗಳಿಸಿದರು. 41 ಎಸೆತಗಳಲ್ಲಿ ಅರ್ಧಶತಕ ಪೂರ್ಣಗೊಳಿಸಿದ ಬಳಿಕ ಅವರ ಬ್ಯಾಟಿಂಗ್ ಸಂಪೂರ್ಣವಾಗಿ ಬದಲಾಗಿತ್ತು. ಶಾರ್ಟ್ ಬಾಲ್‌ಗಳನ್ನು ಬಲಿಷ್ಠ ಪುಲ್ ಶಾಟ್‌ಗಳ ಮೂಲಕ ಬೌಂಡರಿ ದಾಟಿಸಿದ ಅವರು, ಆಫ್‌ಸೈಡ್‌ನಲ್ಲಿ ಅದ್ಭುತ ಡ್ರೈವ್‌ಗಳ ಮೂಲಕವೂ ರನ್ ಗಳಿಸಿದರು. ಮ್ಯಾಥ್ಯೂ ಫೋರ್ಡ್ ಎಸೆತದಲ್ಲಿ 78 ಮೀಟರ್ ಸಿಕ್ಸರ್ ಹಾಗೂ ಜೇಡನ್ ಸೀಲ್ಸ್ ವಿರುದ್ಧದ ನೇರ ಡ್ರೈವ್ ಅವರ ಆತ್ಮವಿಶ್ವಾಸವನ್ನು ತೋರಿಸಿತು.
IND vs WI: ವಿಂಡೀಸ್ ಬೌಲರ್‌ಗಳನ್ನು ಬೆಂಡೆತ್ತಿ 9ನೇ ಒಡಿಐ ಶತಕ ಬಾರಿಸಿದ ಕೆಎಲ್ ರಾಹುಲ್!
50ರಿಂದ 100ಕ್ಕೆ ಕೇವಲ 39 ಎಸೆತ
ರಾಹುಲ್ 90ರ ಗಡಿ ದಾಟಿದ ಬಳಿಕ ಇನ್ನಷ್ಟು ಅಪಾಯಕಾರಿ ಆಟಕ್ಕೆ ಮುಂದಾದರು. ಅಲ್ಜಾರಿ ಜೋಸೆಫ್ ಬೌಲಿಂಗ್‌ನಲ್ಲಿ 84 ಮೀಟರ್ ಸಿಕ್ಸರ್ ಸಿಡಿಸಿದ ಅವರು, ನಂತರ ಸೀಲ್ಸ್ ವಿರುದ್ಧ ಮತ್ತೊಂದು ಸಿಕ್ಸರ್ ಬಾರಿಸುವ ಮೂಲಕ ತಮ್ಮ 9ನೇ ಏಕದಿನ ಶತಕ ಪೂರ್ಣಗೊಳಿಸಿದರು. ಅರ್ಧಶತಕದಿಂದ ಶತಕ ತಲುಪಲು ರಾಹುಲ್ ಕೇವಲ 39 ಎಸೆತಗಳನ್ನು ತೆಗೆದುಕೊಂಡರು.
ಶತಕದ ಬಳಿಕವೂ ಅವರು ವೇಗ ಕಡಿಮೆ ಮಾಡಲಿಲ್ಲ. ಸೀಲ್ಸ್ ವಿರುದ್ಧ ಮತ್ತೊಂದು ಸಿಕ್ಸರ್ ಬಾರಿಸಿದ ರಾಹುಲ್, ಅಂತಿಮ ಓವರ್‌ನಲ್ಲಿ ಕೀಮೋ ಪಾಲ್ ಅವರನ್ನು ಗುರಿಯಾಗಿಸಿಕೊಂಡು ಎರಡು ಸಿಕ್ಸರ್ ಹಾಗೂ ಒಂದು ಬೌಂಡರಿ ಸಿಡಿಸಿದರು. ರಿವರ್ಸ್ ಸ್ಕೂಪ್ ಮೂಲಕ ಎರಡು ರನ್ ಗಳಿಸಿ ತಮ್ಮ ಇನ್ನಿಂಗ್ಸ್‌ಗೆ ಮತ್ತಷ್ಟು ರೋಚಕ ಅಂತ್ಯ ನೀಡಿದರು.
ನಾಮನ್ ಧೀರ್ ಮತ್ತು ಗುರ್‌ನೂರ್ ಬ್ರಾರ್ ಅವರಿಂದಲೂ ಉತ್ತಮ ಬೆಂಬಲ ಪಡೆದ ರಾಹುಲ್, ಅಂತಿಮವಾಗಿ 87 ಎಸೆತಗಳಲ್ಲಿ 129 ರನ್‌ಗಳೊಂದಿಗೆ ಅಜೇಯರಾಗಿ ಉಳಿದರು. ಅವರ ಸ್ಫೋಟಕ ಇನಿಂಗ್ಸ್‌ನ ನೆರವಿನಿಂದ ಭಾರತ 7 ವಿಕೆಟ್‌ಗೆ 351 ರನ್‌ಗಳ ಬೃಹತ್ ಮೊತ್ತ ದಾಖಲಿಸಿತು.