IND vs WI: 13 ರನ್‌ಗಳಿಂದ ಶತಕ ಕಳೆದುಕೊಂಡ ಬಗ್ಗೆ ಸಾಯಿ ಸುದರ್ಶನ್ ಪ್ರತಿಕ್ರಿಯೆ!
ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನದಂದು ಸಾಯಿ ಸುದರ್ಶನ್ ಕೇವಲ 13 ರನ್‌ಗಳಿಂದ ಶತಕ ವಂಚಿತರಾದರು. ಅವರು 87 ರನ್‌ಗಳಿಗೆ ಔಟಾದರು. ಮೊದಲನೇ ದಿನದಾಟದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಕೇವಲ 13 ರನ್‌ಗಳಿಂದ ಶತಕ ಕಳೆದುಕೊಂಡ ಬಗ್ಗೆ ಸಾಯಿ ಸುದರ್ಶನ್ ಪ್ರತಿಕ್ರಿಯೆ. -

ನವದೆಹಲಿ: ಭಾರತದ ಮೂರನೇ ಕ್ರಮಾಂಕದ ಬ್ಯಾಟ್ಸ್‌ಮನ್ ಸಾಯಿ ಸುದರ್ಶನ್ (Sai Sudarshan) ಶುಕ್ರವಾರ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ (IND vs WI) ತಮ್ಮ ಚೊಚ್ಚಲ ಟೆಸ್ಟ್ ಶತಕ ಗಳಿಸುವ ಭರವಸೆ ಹೊಂದಿದ್ದರು, ಆದರೆ 87 ರನ್‌ಗಳಿಗೆ ಔಟಾದ ನಂತರ ಸ್ವಲ್ಪ ನಿರಾಶೆಗೊಂಡರು. ಎರಡನೇ ಟೆಸ್ಟ್‌ನ ಮೊದಲ ದಿನದಂದು ಸುದರ್ಶನ್ 165 ಎಸೆತಗಳಲ್ಲಿ 12 ಬೌಂಡರಿಗಳೊಂದಿಗೆ ಈ ಇನಿಂಗ್ಸ್ ಆಡಿದರು. ಭಾರತ ತಂಡ (Indian Cricket Team), ವೆಸ್ಟ್ ಇಂಡೀಸ್ ತಂಡವನ್ನು ಇನಿಂಗ್ಸ್ ಮತ್ತು 140 ರನ್‌ಗಳಿಂದ ಸೋಲಿಸಿದ ಮೊದಲ ಟೆಸ್ಟ್‌ನಲ್ಲಿ (ಅಹಮದಾಬಾದ್‌ನಲ್ಲಿ) ಸುದರ್ಶನ್ 7 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದರು.
ತಮ್ಮ ಅತಿದೊಡ್ಡ ಟೆಸ್ಟ್ ಇನಿಂಗ್ಸ್ ಆಡಿದ ನಂತರ ಸುದರ್ಶನ್, "ಇಂದಿನ ನನ್ನ ಇನಿಂಗ್ಸ್‌ಗೆ ನಾನು ಖಂಡಿತವಾಗಿಯೂ ಕೃತಜ್ಞನಾಗಿದ್ದೇನೆ, ಆದರೆ ನನ್ನ ಹೃದಯದಲ್ಲಿ ಯಾವಾಗಲೂ ಶತಕ ತಲುಪುವ ಸಣ್ಣ ಆಸೆ ಇರುತ್ತದೆ. ಆದ್ದರಿಂದ, ನಾನು ಇನ್ನೂ ಹೆಚ್ಚಿನದನ್ನು ನಿರೀಕ್ಷಿಸುತ್ತಿದ್ದೆ," ಎಂದು ಹೇಳಿದರು. ಇಂಗ್ಲೆಂಡ್ ಪ್ರವಾಸದಲ್ಲಿ ಟೆಸ್ಟ್‌ಗೆ ಪದಾರ್ಪಣೆ ಮಾಡಿದ್ದ ಸುದರ್ಶನ್, ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಅವರೊಂದಿಗೆ ಎರಡನೇ ವಿಕೆಟ್‌ಗೆ 193 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಳ್ಳುವ ಮೂಲಕ ದೊಡ್ಡ ಸ್ಕೋರ್‌ಗೆ ಅಡಿಪಾಯ ಹಾಕಿದರು. ಜೈಸ್ವಾಲ್ ಪ್ರಸ್ತುತ 173 ರನ್‌ಗಳೊಂದಿಗೆ ಕ್ರೀಸ್‌ನಲ್ಲಿದ್ದಾರೆ.
IND vs WI 2nd Test: ಯಶಸ್ವಿ ಜೈಸ್ವಾಲ್ ಭರ್ಜರಿ ಶತಕ, ದೊಡ್ಡ ಮೊತ್ತದತ್ತ ಭಾರತ ತಂಡ!
"ಇದು ಉತ್ತಮ ಕೊಡುಗೆಯಾಗಿತ್ತು ಮತ್ತು ಜೈಸ್ವಾಲ್ ಜೊತೆಗಿನ ಉತ್ತಮ ಪಾಲುದಾರಿಕೆ ಇದಾಗಿತ್ತು. ಈ ಬಾರಿ ನಾನು ರನ್ ಗಳಿಸುವ ಬಗ್ಗೆ ಹೆಚ್ಚು ಯೋಚಿಸುತ್ತಿರಲಿಲ್ಲ ಮತ್ತು ಸ್ವಲ್ಪ ಹೆಚ್ಚು ನಿರ್ಭಯವಾಗಿ ಆಡಿದೆ," ಎಂದು ತಿಳಿಸಿದ ಅವರು "ನಾನು ನನಗೆ ಸ್ವಲ್ಪ ಹೆಚ್ಚು ಸಮಯವನ್ನು ನೀಡಿದ್ದೇನೆ ಮತ್ತು ಏನನ್ನಾದರೂ ಒತ್ತಾಯಿಸಲು ಪ್ರಯತ್ನಿಸುವ ಬದಲು ವಿಷಯಗಳು ಸ್ವಾಭಾವಿಕವಾಗಿ ನಡೆಯಲು ಬಿಟ್ಟಿದ್ದೇನೆ," ಎಂದು ಹೇಳಿದ್ದಾರೆ.
ಯಶಸ್ವಿ ಜೈಸ್ವಾಲ್ ಬಗ್ಗೆ ಪ್ರಶಂಸೆ
ಜೈಸ್ವಾಲ್ ಅವರ ಬ್ಯಾಟಿಂಗ್ ಬಗ್ಗೆ ಮಾತನಾಡಿದ "ಅವರು ಇನ್ನೊಂದು ತುದಿಯಿಂದ ಆಡುವುದನ್ನು ನೋಡುವುದು ನಿಜಕ್ಕೂ ರೋಮಾಂಚನಕಾರಿಯಾಗಿತ್ತು. ಅವರು ಉತ್ತಮ ಹೊಡೆತಗಳನ್ನು ಆಡುತ್ತಾರೆ ಮತ್ತು ಉತ್ತಮ ಎಸೆತಗಳನ್ನೂ ಸಹ ಬೌಂಡರಿಗಳಾಗಿ ಪರಿವರ್ತಿಸುತ್ತಾರೆ. ಅವರನ್ನು ನೋಡುವುದು ಒಂದು ಉತ್ತಮ ಕಲಿಕೆಯ ಅನುಭವ. ಯಾವ ಎಸೆತಗಳಲ್ಲಿ ಯಾವ ಹೊಡೆತಗಳನ್ನು ಆಡಬೇಕೆಂದು ಇದು ನನಗೆ ಕಲ್ಪನೆಯನ್ನು ನೀಡುತ್ತದೆ," ಸಾಯಿ ಸುದರ್ಶನ್ ತಿಳಿಸಿದ್ದಾರೆ.
IND vs WI: 7ನೇ ಟೆಸ್ಟ್ ಶತಕ ಬಾರಿಸಿ ದಿಗ್ಗಜರನ್ನೊಳಗೊಂಡ ಎಲೈಟ್ ಲಿಸ್ಟ್‌ಗೆ ಸೇರಿದ ಯಶಸ್ವಿ ಜೈಸ್ವಾಲ್!
ಮೊದಲನೇ ದಿನ ಭಾರತ ತಂಡ ಪ್ರಾಬಲ್ಯ
ಇನ್ನು ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ ತಂಡ, ಯಶಸ್ವಿ ಜೈಸ್ವಾಲ್ (173* ರನ್) ಹಾಗೂ ಸಾಯಿ ಸುದರ್ಶನ್ (87 ರನ್) ಅವರು ಬ್ಯಾಟಿಂಗ್ ಬಲದಿಂದ ಮೊದಲನೇ ದಿನದಾಟದ ಅಂತ್ಯಕ್ಕೆ 90 ಓವರ್‌ಗಳಿಗೆ 2 ವಿಕೆಟ್‌ಗಳ ನಷ್ಟಕ್ಕೆ 318 ರನ್‌ಗಳನ್ನು ಕಲೆ ಹಾಕಿದೆ. ಯಶಸ್ವಿ ಜೈಸ್ವಾಲ್ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದು, ದ್ವಿಶತಕದಂಚಿನಲ್ಲಿದ್ದಾರೆ. ಮತ್ತೊಂದು ತುದಿಯಲ್ಲಿ ಶುಭಮನ್ ಗಿಲ್ (20* ರನ್) ಇದ್ದಾರೆ.