ಅಹಮದಾಬಾದ್: ಟೀಮ್ ಇಂಡಿಯಾ ವಿಕೆಟ್ ಕೀಪರ್ ಧ್ರುವ್ ಜುರೆಲ್ (Dhruv Jurel) ಭಾರತ ಹಾಗೂ ವೆಸ್ಟ್ ಇಂಡೀಸ್ (IND vs WI) ನಡುವೆ ಇಲ್ಲಿನ ನರೇಂದ್ರ ಮೋದಿ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ತಮ್ಮ ಚೊಚ್ಚಲ ಟೆಸ್ಟ್ ಶತಕವನ್ನು ಬಾರಿಸಿದರು. ಜುರೆಲ್ 210 ಎಸೆತಗಳಲ್ಲಿ 125 ರನ್‌ಗಳ ಕಲೆಹಾಕಿದರು. ಇದರಲ್ಲಿ 15 ಬೌಂಡರಿ ಮತ್ತು ಮೂರು ಸಿಕ್ಸರ್‌ಗಳು ಒಳಗೊಂಡಿವೆ. ಜುರೆಲ್, ಕೆ ಎಲ್ ರಾಹುಲ್ ಮತ್ತು ರವೀಂದ್ರ ಜಡೇಜಾ ಅವರ ಶತಕಗಳ ನೆರವಿನಿಂದ ಭಾರತ ತಂಡ, ಎರಡನೇ ದಿನದಾಟದ ಅಂತ್ಯಕ್ಕೆ ಐದು ವಿಕೆಟ್ ನಷ್ಟಕ್ಕೆ 448 ರನ್ ಗಳಿಸಿದೆ ಹಾಗೂ 286 ರನ್‌ಗಳ ಮುನ್ನಡೆಯನ್ನು ಪಡೆದಿದೆ.
ತಮ್ಮ ಚೊಚ್ಚಲ ಶತಕವನ್ನು ಬಾರಿಸಿದ ಬಳಿಕ 24 ವರ್ಷದ ಬ್ಯಾಟರ್, ಎರಡೂ ಕೈಗಳನ್ನು ಮೇಲೆತ್ತಿ ಆಕಾಶ ನೋಡುವ ಮೂಲಕ ವಿಶಿಷ್ಟವಾಗಿ ಸಂಭ್ರಮಿಸಿದರು. ಎರಡನೇ ದಿನದಾಟದ ಬಳಿಕ ಮಾತನಾಡಿದ ಜುರೆಲ್, ಐವತ್ತು ತಲುಪಿದಾಗ ಆಚರಿಸಿದ ಸಂಭ್ರಮಾಚರಣೆ ತನ್ನ ತಂದೆಗೆ ಮತ್ತು ಶತಕ ಗಳಿಸಿದ್ದನ್ನು ಭಾರತೀಯ ಸೇನೆಗೆ ಅರ್ಪಿಸುತ್ತೇನೆ ಎಂದು ಹೇಳಿದರು. ವಿಕೆಟ್ ಕೀಪರ್ ಯುದ್ಧಭೂಮಿಯಲ್ಲಿರುವ ಸೈನಿಕರನ್ನು ಗೌರವಿಸುತ್ತೇನೆ ಎಂದು ಇದೇ ವೇಳೆ ತಿಳಿಸಿದರು.
"ಅರ್ಧಶತಕ ದಾಟಿದ ಬಳಿಕ ಸೆಲ್ಯೂಟ್ (ಆಚರಣೆ) ನನ್ನ ತಂದೆಗೆ, ಆದರೆ ಶತಕವನ್ನು ಭಾರತೀಯ ಸೇನೆಗೆ ಸಮರ್ಪಿಸಬೇಕೆಂದು ದೀರ್ಘಾವಧಿ ನನ್ನ ಮನಸಿನಲ್ಲಿತ್ತು. ಏಕೆಂದರೆ, ನಾನು ಭಾರತೀಯ ಸೇನೆಗೆ ತುಂಬಾ ಹತ್ತಿರವಾಗಿದ್ದೇನೆ, ನನ್ನ ಬಾಲ್ಯದಿಂದಲೂ ನನ್ನ ತಂದೆಯನ್ನು ನೋಡಿದ್ದೇನೆ," ಎಂದು ಜುರೆಲ್ ಹೇಳಿದರು.
IND vs WI: ರಾಹುಲ್, ಜುರೆಲ್, ಜಡೇಜಾ ಶತಕಗಳ ಬಲದಿಂದ ದೊಡ್ಡ ಮುನ್ನಡೆಯತ್ತ ಭಾರತ!
"ಮೈದಾನದಲ್ಲಿ ನಾವು ಏನು ಮಾಡುತ್ತೇವೆ ಹಾಗೂ ಅವರು (ಸೇನೆ) ಯುದ್ಧಭೂಮಿಯಲ್ಲಿ ಏನು ಮಾಡುತ್ತಾರೆ ಎಂಬುದು ವಿಭಿನ್ನವಾಗಿದೆ ಹಾಗೂ ಕಠಿಣವಾಗಿದೆ. ಇದನ್ನು ನಾವು ಹೋಲಿಕೆ ಮಾಡಲು ಸಾಧ್ಯವಿಲ್ಲ. ನಾನು ಯಾವಾಗಲೂ ಅವರನ್ನು ಗೌರವಿಸುತ್ತೇನೆ ಹಾಗೂ ಭವಿಷ್ಯದಲ್ಲಿಯೂ ಕೂಡ ಅವರಿಗಾಗಿ ನಾನು ಉತ್ತಮವಾದ ಕೆಲಸವನ್ನು ಮಾಡುತ್ತೇನೆ," ಎಂದು ವಿಕೆಟ್ ಕೀಪರ್-ಬ್ಯಾಟರ್ ತಿಳಿಸಿದ್ದಾರೆ.
"ಅವರು ಮಾಡುವ ಕೆಲಸಕ್ಕಾಗಿ ನಾನು ನನ್ನ ಶತಕವನ್ನು ಅವರಿಗೆ (ಭಾರತೀಯ ಸೇನೆಗೆ) ಅರ್ಪಿಸಲು ಇಷ್ಟಪಡುತ್ತೇನೆ. ಅದು ಹೇಗಿರುತ್ತದೆ ಎಂದು ನಾನು ಅವರನ್ನು ಹತ್ತಿರದಿಂದ ನೋಡಿದ್ದೇನೆ ಮತ್ತು ಆ ವಿಷಯಗಳಲ್ಲಿ ನಾನು ತುಂಬಾ ಆಕರ್ಷಿತನಾಗಿದ್ದೇನೆ. ಈ ಬಗ್ಗೆ ನಾನು ನನ್ನ ತಂದೆಯನ್ನು ಕೇಳುತ್ತಲೇ ಇದ್ದೆ. ಅರ್ಹರಿಗೆ ನಾನು ಇದನ್ನು ಅರ್ಪಿಸುತ್ತೇನೆ," ಎಂದು ಧ್ರುವ್ ಜುರೆಲ್ ಹೇಳಿದ್ದಾರೆ.
ರಿಷಭ್ ಪಂತ್ ಇಂಗ್ಲೆಂಡ್ ಪ್ರವಾಸದಲ್ಲಿ ಗಾಯಕ್ಕೆ ತುತ್ತಾಗಿ ಚೇತರಿಸಿಕೊಳ್ಳುತ್ತಿರುವುದರಿಂದ ಜುರೆಲ್ ವೆಸ್ಟ್ ಇಂಡೀಸ್ ಸರಣಿಯಲ್ಲಿ ಆಡುವ ಅವಕಾಶ ಪಡೆದರು. ಸಿಕ್ಕಿರುವ ಅವಕಾಶವನ್ನು ಉತ್ತಮವಾಗಿ ಬಳಸಿಕೊಂಡು ಆಯ್ಕೆ ಸಮಿತಿ ಗಮನ ಸೆಳೆದಿದ್ದಾರೆ.