ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IND vs ENG: ಆರ್ಚರ್‌, ಟಂಗ್‌ ಮಾರಕ ದಾಳಿಗೆ ಭಾರತ ಉಡೀಸ್‌, ಇಂಗ್ಲೆಂಡ್‌ಗೆ ಸತತ ಎರಡನೇ ಜಯ!

IND vs ENG 3rd T20I Match Highlights: ಬ್ಯಾಟಿಂಗ್‌ ವೈಫಲ್ಯದಿಂದ ಭಾರತ ತಂಡ, ಮೂರನೇ ಟಿ20ಐ ಪಂದ್ಯದಲ್ಲಿಯೂ ಇಂಗ್ಲೆಂಡ್‌ ವಿರುದ್ಧ 125 ರನ್‌ಗಳ ಅತ್ಯಂತ ಹೀನಾಯ ಸೋಲು ಅನುಭವಿಸಿತು. ಆ ಮೂಲಕ 5 ಪಂದ್ಯಗಳ ಟಿ20ಐ ಸರಣಿಯಲ್ಲಿ ಟೀಮ್‌ ಇಂಡಿಯಾ 0-2 ಅಂತರದಲ್ಲಿ ಹಿನ್ನಡೆ ಅನುಭವಿಸಿದೆ. ಇನ್ನು ಆತಿಥೇಯರು ಟಿ20ಐ ಸರಣಿ ಗೆಲುವಿಗೆ ಇನ್ನಷ್ಟು ಸನಿಹವಾಗಿದ್ದಾರೆ.

ಇಂಗ್ಲೆಂಡ್‌ ಎದುರು ಭಾರತ ತಂಡಕ್ಕೆ 125 ರನ್‌ ಸೋಲು.

ನಾಟಿಂಗ್‌ಹ್ಯಾಮ್‌: ಜೋಫ್ರಾ ಆರ್ಚರ್‌ (Jofra Archer) ಹಾಗೂ ಜಾಶ್‌ ಟಂಗ್‌ (Josh Tongue) ಮಾರಕ ಬೌಲಿಂಗ್‌ ದಾಳಿಗೆ ನಲುಗಿದ ಭಾರತ ತಂಡ, ಇಂಗ್ಲೆಂಡ್‌ ಎದುರು ಮೂರನೇ ಟಿ20ಐ ಪಂದ್ಯದಲ್ಲಿ (IND vs ENG) 125 ರನ್‌ಗಳ ಅತ್ಯಂತ ಹೀನಾಯ ಸೋಲು ಅನುಭವಿಸಿತು. ಆ ಮೂಲಕ ಟಿ20ಐ ಕ್ರಿಕೆಟ್‌ ಇತಿಹಾಸದಲ್ಲಿಯೇ ಶ್ರೇಯಸ್‌ ಅಯ್ಯರ್‌ ನಾಯಕತ್ವದ ಟೀಮ್‌ ಇಂಡಿಯಾಗೆ ಅತಿ ದೊಡ್ಡ ಅಂತರದ ಸೋಲು ಇದಾಗಿದೆ. ಇನ್ನು ಸತತ ಎರಡನೇ ಪಂದ್ಯದಲ್ಲಿಯೂ ಗೆಲುವು ಪಡೆದ ಹ್ಯಾರಿ ಬ್ರೂಕ್‌ ನಾಯಕತ್ವದ ಆಂಗ್ಲರು, 5 ಪಂದ್ಯಗಳ ಟಿ20ಐ ಸರಣಿ ಗೆಲುವಿನ ಸನಿಹವಾಗಿದ್ದಾರೆ. ಮಾರಕ ಬೌಲಿಂಗ್‌ ದಾಳಿ ನಡೆಸಿ 3 ಪ್ರಮುಖ ವಿಕೆಟ್‌ಗಳನ್ನು ಉರುಳಿಸಿ ಇಂಗ್ಲೆಂಡ್‌ ಗೆಲುವಿಗೆ ನೆರವು ನೀಡಿದ ಜೋಫ್ರಾ ಆರ್ಚರ್‌ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಮಂಗಳವಾರ ತಡರಾತ್ರಿ ನಡೆದಿದ್ದ ಈ ಪಂದ್ಯದಲ್ಲಿ ಇಂಗ್ಲೆಂಡ್‌ ನೀಡಿದ್ದ 202 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಭಾರತ ತಂಡ, ತನ್ನ ಬಲಿಷ್ಠ ಬ್ಯಾಟಿಂಗ್‌ ಪಡೆಯಿಂದ ಗೆಲುವು ಸಾಧಿಸಬಹುದು ಎಂದೇ ಭಾವಿಸಲಾಗಿತ್ತು. ಆದರೆ, ಜೋಫ್ರಾ ಆರ್ಚರ್‌ ಹಾಗೂ ಜಾಶ್‌ ಟಂಗ್‌ ಇದಕ್ಕೆ ಅವಕಾಶ ನೀಡಲಿಲ್ಲ. ಈ ಜೋಡಿ ಪವರ್‌ಪ್ಲೇನಲ್ಲಿಯೇ 52 ರನ್‌ಗಳಿಗೆ 5 ವಿಕೆಟ್‌ಗಳನ್ನು ಕಿತ್ತು ಭಾರತಕ್ಕೆ ಆರಂಭಿಕ ಆಘಾತ ನೀಡಿತು. ಹೊಸ ಚೆಂಡಿನಲ್ಲಿ ದಾಳಿ ನಡೆಸಿದ್ದ ಜೋಫ್ರಾ ಆರ್ಚರ್‌ (29ಕ್ಕೆ 3), ಅಪಾಯಕಾರಿ ವೈಭವ್‌ ಸೂರ್ಯವಂಶಿ, ಶ್ರೇಯಸ್‌ ಅಯ್ಯರ್‌ ಹಾಗೂ ಅಕ್ಷರ್‌ ಪಟೇಲ್‌ ಅವರನ್ನು ಉರುಳಿಸಿ, ಇಂಗ್ಲೆಂಡ್‌ಗೆ ಗೆಲುವನ್ನು ಪವರ್‌ಪ್ಲೇನಲ್ಲಿಯೇ ಬಹುತೇಕ ಖಚಿತಪಡಿಸಿದರು.

ʻಟಿ20 ವಿಶ್ವಕಪ್‌ ಜಯದ ಹೀರೋʼ-ಸಂಜು ಸ್ಯಾಮ್ಸನ್‌ಗೆ ಕೊಕ್‌ ನೀಡಿದ ಬಿಸಿಸಿಐ ವಿರುದ್ಧ ಅಜಿಂಕ್ಯ ರಹಾನೆ ಕಿಡಿ!

ಇನ್ನು ಆರ್ಚರ್‌ಗೆ ಸಾಥ್‌ ನೀಡಿದ್ದ ಜಾಶ್‌ ಟಾಂಗ್‌ (28ಕ್ಕೆ 4) ಪವರ್‌ಪ್ಲೇನಲ್ಲಿ ಅಭಿಷೇಕ್‌ ಶರ್ಮಾ ಹಾಗೂ ಇಶಾನ್‌ ಕಿಶನ್‌ ಅವರನ್ನು ಔಟ್‌ ಮಾಡಿದರು. ನಂತರ ಕೊನೆಯ ಹಂತದಲ್ಲಿ ಶಿವಂ ದುಬೇ ಹಾಗೂ ಹರ್ಷಿತ್‌ ರಾಣಾ ಅವರನ್ನು ಔಟ್‌ ಮಾಡಿದ್ದರು. ಆದಿಲ್‌ ರಶೀದ್‌ ಎರಡು ಪಡೆದರು. ಇಂಗ್ಲೆಂಡ್‌ ವೇಗದ ಬೌಲರ್‌ಗಳ ದಾಳಿಯ ಎದುರು ಭಾರತ ತಂಡದ ಯಾವುದೇ ಬ್ಯಾಟ್ಸ್‌ಮನ್‌ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ವೈಭವ್‌ ಸೂರ್ಯವಂಶಿ ಹಾಗೂ ಇಶಾನ್‌ ಕಿಶನ್‌ ತಲಾ 13 ರನ್‌ ಹಾಗೂ ಅಭಿಷೇಕ್‌ ಶರ್ಮಾ ಹಾಗೂ ಅಕ್ಷರ್‌ ಪಟೇಲ್‌ ತಲಾ 10 ರನ್‌ ಗಳಿಸಿದ್ದು ಬಿಟ್ಟರೆ ಇನ್ನುಳಿದವರು ವೈಯಕ್ತಿಕ ಎರಡಂಕಿ ಮೊತ್ತವನ್ನು ಕಲೆಹಾಕುವಲ್ಲಿ ವಿಫಲರಾದರು. ಅಂತಿಮವಾಗಿ ಭಾರತ ತಂಡ 11.4 ಓವರ್‌ಗಳಿಗೆ 76 ರನ್‌ಗಳಿಗೆ ಆಲ್‌ಔಟ್‌ ಆಗಿ ಮುಖಭಂಗ ಅನುಭವಿಸಿತು.



201 ರನ್‌ ಕಲೆ ಹಾಕಿದ್ದ ಇಂಗ್ಲೆಂಡ್‌ ತಂಡ

ಇದಕ್ಕೂ ಮುನ್ನ ಟಾಸ್‌ ಗೆದ್ದು ಎದುರಾಳಿ ಇಂಗ್ಲೆಂಡ್‌ ತಂಡವನ್ನು ಮೊದಲ ಬ್ಯಾಟಿಂಗ್‌ಗೆ ಆಹ್ವಾನಿಸಿದ್ದ ನಾಯಕ ಶ್ರೇಯಸ್‌ ಅಯ್ಯರ್‌ ಅವರ ನಿರ್ಧಾರವನ್ನು ಫಿಲ್‌ ಸಾಲ್ಟ್‌ ಉಲ್ಟಾ ಮಾಡಿದ್ದರು. ಸಾಲ್ಟ್‌ (70 ರನ್‌) ಹಾಗೂ ಸ್ಯಾಮ್‌ ಕರನ್‌ (41* ರನ್‌) ಅವರ ಬ್ಯಾಟಿಂಗ್‌ ಬಲದಿಂದ ಇಂಗ್ಲೆಂಡ್‌ ತನ್ನ ಪಾಲಿನ 20 ಓವರ್‌ಗಳಿಗೆ 7 ವಿಕೆಟ್‌ಗಳ ನಷ್ಟಕ್ಕೆ 201 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಎದುರಾಳಿ ಭಾರತ ತಂಡಕ್ಕೆ 202 ರನ್‌ಗಳ ಸವಾಲಿನ ಗುರಿಯನ್ನು ನೀಡಿತ್ತು.



ಫಿಲ್‌ ಸಾಲ್ಟ್‌ ಸ್ಪೋಟಕ ಅರ್ಧಶತಕ

ಆರಂಭಿಕನಾಗಿ ಕ್ರೀಸ್‌ಗೆ ಬಂದಿದ್ದ ಜೋಸ್‌ ಬಟ್ಲರ್‌ ಪವರ್‌ಪ್ಲೇನಲ್ಲಿ 21 ಎಸೆತಗಳಲ್ಲಿ 36 ರನ್‌ ಗಳಿಸಿದ ಬಳಿಕ ಪ್ರಿನ್ಸ್‌ ಯಾದವ್‌ ಅವರ ಯಾರ್ಕರ್‌ಗೆ ಬೌಲ್ಡ್‌ ಆದರು. ಹ್ಯಾರಿ ಬ್ರೂಕ್‌, ಜೇಕಬ್‌ ಬೆಥೆಲ್‌ ಹಾಗೂ ಟಾಮ್‌ ಬ್ಯಾಂಟನ್‌ ನಿರಾಶೆ ಮೂಡಿಸಿದರು. ಆದರೆ, ಮಧ್ಯಮ ಓವರ್‌ಗಲ್ಲಿ ಒಂದು ತುದಿಯಲ್ಲಿ ನಿಂತು ಅದ್ಭುತವಾಗಿ ಬ್ಯಾಟ್‌ ಮಾಡಿದ ಫಿಲ್‌ ಸಾಲ್ಟ್‌, 44 ಎಸೆತಗಳಲ್ಲಿ 70 ರನ್‌ ಗಳಿಸಿ ತಂಡದ ಮೊತ್ತವನ್ನು 150ರ ಗಡಿ ದಾಟಿಸಿ ಔಟ್‌ ಆದರು. ನಂತರ ಡೆತ್‌ ಓವರ್‌ಗಳಲ್ಲಿ ಸ್ಯಾಮ್‌ ಕರನ್‌ ತಂಡದ ಜವಾಬ್ದಾರಿ ತೆಗೆದುಕೊಂಡು ಕೇವಲ 24 ಎಸೆತಗಳಲ್ಲಿ ಅಜೇಯ 41 ರನ್‌ ಸಿಡಿಸಿದರು. ಇದರೊಂದಿಗೆ ತಂಡದ ಮೊತ್ತವನ್ನು 200ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು.



ಭಾರತದ ಪರ ಮಿಂಚಿದ್ದ ಪ್ರಿನ್ಸ್‌ ಯಾದವ್‌

ಭಾರತ ತಂಡದ ಪರ ಅರ್ಷದೀಪ್‌ ಸಿಂಗ್‌ ವಿಕೆಟ್‌ ಪಡೆಯದೇ ಇದ್ದರೂ ಪರಿಣಾಮಕಾರಿಯಾಗಿ ಬೌಲ್‌ ಮಾಡಿದ್ದರು. ಪ್ರಿನ್ಸ್‌ ಯಾದವ್‌ ತಮ್ಮ ಮಾರಕ ದಾಳಿಯ ಮೂಲಕ ಗಮನ ಸೆಳೆದರು. ವಿಶೇಷವಾಗಿ ತಮ್ಮ ಯಾರ್ಕರ್‌ ಬೌಲಿಂಗ್‌ನಿಂದ ಎರಡು ವಿಕೆಟ್‌ಗಳನ್ನು ಉರುಳಿಸಿದರು. ಹರ್ಷಿತ್‌ ರಾಣಾ ದುಬಾರಿಯಾದರೂ ನಿರ್ಣಾಯಕ ಸಮಯದಲ್ಲಿ ಸತತ ಎರಡು ವಿಕೆಟ್‌ ಕಿತ್ತಿದ್ದರು.

ಸ್ಕೋರ್‌ ವಿವರ

ಇಂಗ್ಲೆಂಡ್‌: 20 ಓವರ್‌ಗಳಿಗೆ 201-7 (ಫಿಲ್‌ ಸಾಲ್ಟ್‌ 70 ರನ್‌, ಸ್ಯಾಮ್‌ ಕರನ್‌ 41* ರನ್‌, ಜೋಸ್‌ ಬಟ್ಲರ್‌ 36 ರನ್‌; ಪ್ರಿನ್ಸ್‌ ಯಾದವ್‌ 30ಕ್ಕೆ 2, ಹರ್ಷಿತ್‌ ರಾಣಾ 40 ಕ್ಕೆ 2)

ಭಾರತ: 11.4 ಓವರ್‌ಗಳಿಗೆ 76-10 (ವೈಭವ್‌ ಸೂರ್ಯವಂಶಿ 13, ಇಶಾನ್‌ ಕಿಶನ್‌ 13; ಜೋಫ್ರಾ ಆರ್ಚರ್‌ 29 ಕ್ಕೆ 3, ಜಾಶ್‌ ಟಂಗ್‌ 28 ಕ್ಕೆ 4, ಆದಿಲ್‌ ರಶೀದ್‌ 14 ಕ್ಕೆ 2)

ಪಂದ್ಯ ಶ್ರೇಷ್ಠ ಪ್ರಶಸ್ತಿ: ಜೋಫ್ರಾ ಆರ್ಚರ್‌