ʻಟಿ20 ವಿಶ್ವಕಪ್ ಜಯದ ಹೀರೋʼ-ಸಂಜು ಸ್ಯಾಮ್ಸನ್‌ಗೆ ಕೊಕ್ ನೀಡಿದ ಬಿಸಿಸಿಐ ವಿರುದ್ಧ ಅಜಿಂಕ್ಯ ರಹಾನೆ ಕಿಡಿ!
IND vs ZIM 2026: ಜಿಂಬಾಬ್ವೆ ವಿರುದ್ಧದ ಮೂರು ಪಂದ್ಯಗಳ ಟಿ20ಐ ಸರಣಿಯ ಭಾರತ ತಂಡದಿಂದ ಸಂಜು ಸ್ಯಾಮ್ಸನ್ ಅವರನ್ನು ಕೈ ಬಿಟ್ಟಿದ್ದಕ್ಕೆ ಹಿರಿಯ ಬ್ಯಾಟ್ಸ್‌ಮನ್ ಅಜಿಂಕ್ಯ ರಹಾನೆ ಬೇಸರ ವ್ಯಕ್ತಪಡಿಸಿದ್ದಾರೆ. ಅವರು 2026ರ ಟಿ20 ವಿಶ್ವಕಪ್ ಹೀರೋ ಎಂದು ಅವರು ಬಣ್ಣಿಸಿದ್ದಾರೆ.
ಸಂಜು ಸ್ಯಾಮ್ಸನ್ ಪರ ಅಜಿಂಕ್ಯ ರಹಾನೆ ಬ್ಯಾಟಿಂಗ್. -
ನವದೆಹಲಿ: ಜಿಂಬಾಬ್ವೆ ವಿರುದ್ಧದ ಮೂರು ಪಂದ್ಯಗಳ ಟಿ20ಐ ಸರಣಿಯ (IND vs ENG) ಭಾರತ ತಂಡದಿಂದ ಸಂಜು ಸ್ಯಾಮ್ಸನ್ (Sanju Samson) ಅವರನ್ನು ಕೈಬಿಟ್ಟಿರುವ ಹಿನ್ನೆಲೆಯಲ್ಲಿ ಬಿಸಿಸಿಐ ಆಯ್ಕೆದಾರರು ಹಾಗೂ ಭಾರತದ ಟೀಮ್ ಮ್ಯಾನೇಜ್‌ಮೆಂಟ್ ವಿರುದ್ಧ ಹಿರಿಯ ಬ್ಯಾಟ್ಸ್‌ಮನ್ ಅಜಿಂಕ್ಯ ರಹಾನೆ (Ajinkya Rahane) ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜುಲೈ 6 ರಂದು ಅಜಿತ್ ಅಗರ್ಕರ್ ಸಾರತ್ಯದ ಬಿಸಿಸಿಐ ಆಯ್ಕೆ ಸಮಿತಿಯು 15 ಸದಸ್ಯರ ಭಾರತ ತಂಡವನ್ನು ಪ್ರಕಟಿಸಿತ್ತು. ಆದರೆ, ಇಂಗ್ಲೆಂಡ್ ಸರಣಿಯಲ್ಲಿ ಆಡುತ್ತಿರುವ ಸಂಜುಗೆ ಕೊಕ್ ನೀಡಿ, ಎರಡನೇ ವಿಕೆಟ್ ಕೀಪರ್ ಆಗಿ ಪ್ರಭ್‌ಸಿಮ್ರನ್ ಸಿಂಗ್‌ಗೆ ಅವಕಾಶ ನೀಡಿತ್ತು. ಅಲ್ಲದೆ ಮೂವರು ಹೊಸ ಆಟಗಾರರಿಗೆ ತಂಡದಲ್ಲಿ ಮಣೆ ಹಾಕಿತ್ತು.
ಸಂಜು ಸ್ಯಾಮ್ಸನ್ ಮಾತ್ರವಲ್ಲ, ಇಂಗ್ಲೆಂಡ್‌ನಲ್ಲಿ ಟಿ20ಐ ಸರಣಿಯಲ್ಲಿರುವ ಏಳು ಮಂದಿ ಆಟಗಾರರನ್ನು ಬಿಸಿಸಿಐ ಕಡೆಗಣಿಸಿದೆ. ಅಂದ ಹಾಗೆ ಸಂಜು ಐರ್ಲೆಂಡ್ ವಿರುದ್ಧದ ಎರಡು ಪಂದ್ಯಗಳು ಹಾಗೂ ಇಂಗ್ಲೆಂಡ್ ವಿರುದ್ಧ ಆರಂಭಿಕ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದರು. ಈ ಹಿನ್ನೆಲೆಯಲ್ಲಿ ಎರಡನೇ ಪಂದ್ಯದಲ್ಲಿ ಅವರ ಬದಲು ಯುವ ಬ್ಯಾಟ್ಸ್‌ಮನ್ ವೈಭವ್ ಸೂರ್ಯವಂಶಿಗೆ ಸ್ಥಾನವನ್ನು ನೀಡಲಾಗಿತ್ತು.
IND vs ZIM: ಜಿಂಬಾಬ್ವೆ ಟಿ20ಐ ಸರಣಿಗೆ ಭಾರತ ತಂಡ ಪ್ರಕಟ, ಸಂಜು ಸ್ಯಾಮ್ಸನ್ ಔಟ್!
ಎರಡನೇ ಪಂದ್ಯದಲ್ಲಿ ಸಂಜುಗೆ ಕೊಕ್ ನೀಡಿದ್ದರ ಫಲವಾಗಿ ವೈಭವ್ ಸೂರ್ಯವಂಶಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಲು ಸಾಧ್ಯವಾಗಿತ್ತು. ಇದೀಗ ಜಿಂಬಾಬ್ವೆ ಸರಣಿಯಿಂದ ಕೈ ಬಿಟ್ಟಿರುವುದು ಹಲವು ಮಾಜಿ ಕ್ರಿಕೆಟಿಗರಿಗೆ ಅಸಮಾಧಾನವನ್ನು ಉಂಟು ಮಾಡಿದೆ. ಅದರಂತೆ ಮುಂಬೈ ಹಿರಿಯ ಬ್ಯಾಟ್ಸ್‌ಮನ್ ಅಜಿಂಕ್ಯ ರಹಾನೆಗೂ ಕೂಡ ಸಂಜು ಅವರನ್ನು ಕೈ ಬಿಟ್ಟಿರುವ ನಿರ್ಧಾರ ಬೇಸರ ತರಿಸಿದೆ.
ಸಂಜು ಸ್ಯಾಮ್ಸನ್ ಪರ ಬ್ಯಾಟ್ ಬೀಸಿದ ಅಜಿಂಕ್ಯ ರಹಾನೆ
ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯ ಸ್ಟೋರಿಯಲ್ಲಿ ಅಜಿಂಕ್ಯ ರಹಾನೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಸಂಜು ಸ್ಯಾಮ್ಸನ್ 2026ರ ಐಸಿಸಿ ಟಿ20 ವಿಶ್ವಕಪ್ ಗೆಲುವಿನಲ್ಲಿ ಮಹತ್ತರ ಪಾತ್ರವನ್ನು ವಹಿಸಿದ್ದಾರೆ. ಅಂಥಾ ಆಟಗಾರರನ್ನು ಕೈ ಬಿಡುವ ನಿರ್ಧಾರವನ್ನು ರಹಾನೆ ಪ್ರಶ್ನೆ ಮಾಡಿದ್ದಾರೆ. ಕೇರಳ ಮೂಲದ ಆಟಗಾರನ ಬಳಿ ಟೀಮ್ ಮ್ಯಾನೇಜ್‌ಮೆಂಟ್ ಸೂಕ್ತ ಸಂವಹನವನ್ನು ನಡೆಸಿದೆ ಎಂದು ಭಾವಿಸುತ್ತೇನೆಂದು ಅವರು ಹೇಳಿದ್ದಾರೆ.
IND vs ZIM: ʻಸಂಜು ಸ್ಯಾಮ್ಸನ್‌ಗೆ ಅನ್ಯಾಯʼ-ಬಿಸಿಸಿಐ ವಿರುದ್ದ ಮಾಜಿ ಕ್ರಿಕೆಟಿಗರು ಕಿಡಿ!
"ಸಂಜು ಸ್ಯಾಮ್ಸನ್ ಬಳಿ ಸೂಕ್ತ ಸಂವಹನ ನಡೆದಿರಬೇಕೆಂದು ನಾನು ಭಾವಿಸುತ್ತೇನೆ. ಭಾರತದ 2026ರ ಐಸಿಸಿ ಟಿ20 ವಿಶ್ವಕಪ್ ಗೆಲುವಿನ ಹೀರೋ ಸಂಜು ಸ್ಯಾಮ್ಸನ್ ಅವರನ್ನು ಜಿಂಬಾಬ್ವೆ ಪ್ರವಾಸದ ಟಿ20ಐ ಸರಣಿಯಿಂದ ಕೈಬಿಡಲಾಗಿದೆ. ಅವರು ಮತ್ತೆ ಭಾರತ ತಂಡಕ್ಕೆ ಮರಳಲಿದ್ದಾರೆಂದು ಭಾವಿಸುತ್ತೇನೆ," ಎಂದು ಅಜಿಂಕ್ಯ ರಹಾನೆ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದಿದ್ದಾರೆ.
ಟಿ20 ವಿಶ್ವಕಪ್‌ನಲ್ಲಿ ಮಿಂಚಿದ್ದ ಸಂಜು
ಯುಕೆ ಪ್ರವಾಸದಲ್ಲಿ ಸಂಜು ಸ್ಯಾಮ್ಸನ್ ವೈಫಲ್ಯ ಅನುಭವಿಸುವುದಕ್ಕೂ ಮುನ್ನ 31ರ ಪ್ರಾಯದ ಸಂಜು ಸ್ಯಾಮ್ಸನ್ ಉತ್ತಮ ಫಾರ್ಮ್‌ನಲ್ಲಿದ್ದರು. ಭಾರತ ತಂಡ 2026ರ ಐಸಿಸಿ ಟಿ20 ವಿಶ್ವಕಪ್ ಗೆಲುವಿನಲ್ಲಿ ಸಂಜು ಮಹತ್ವದ ಪಾತ್ರವನ್ನು ನಿರ್ವಹಿಸಿದ್ದರು. ಕ್ವಾರ್ಟರ್ ಫೈನಲ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಅಜೇಯ 97 ರನ್ ಸಿಡಿಸಿದ್ದ ಸಂಜು, ಇಂಗ್ಲೆಂಡ್ ವಿರುದ್ಧ ಸೆಮಿಫೈನಲ್ ಹಾಗೂ ನ್ಯೂಜಿಲೆಂಡ್ ಎದುರು ಫೈನಲ್‌ನಲ್ಲಿ ತಲಾ 89 ರನ್‌ಗಳನ್ನು ಸಿಡಿಸಿದ್ದರು. ಆ ಮೂಲಕ ಟೂರ್ನಿ ಶ್ರೇಷ್ಠ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು.