ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʻಭಾರತ ಏಷ್ಯಾ ಕಪ್‌ಗೆ ಅರ್ಹ ತಂಡವಲ್ಲʼ: ಪಾಕಿಸ್ತಾನ ಅಭಿಮಾನಿಗಳು ಮೊಹ್ಸಿನ್‌ ನಖ್ವಿಗೆ ಬೆಂಬಲ!

2026ರ ಮಹಿಳಾ ಏಷ್ಯಾಕಪ್ ಟ್ರೋಫಿ ಪ್ರದಾನ ಸಮಾರಂಭಕ್ಕೆ ಸಂಬಂಧಿಸಿದಂತೆ ಅಭಿಮಾನಿಯೊಬ್ಬರು ನೀಡಿರುವ ಹೇಳಿಕೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮೊಹ್ಸಿನ್ ನಖ್ವಿ ಅವರು ಭಾರತ ಮಹಿಳಾ ಕ್ರಿಕೆಟ್ ತಂಡಕ್ಕೆ ಟ್ರೋಫಿ ನೀಡಲು ಮುಂದಾದ ನಿಲುವನ್ನು ಅಭಿಮಾನಿಯೊಬ್ಬರು ಬೆಂಬಲಿಸಿದ್ದಾರೆ. ಇದೇ ಕಾರಣಕ್ಕೆ ಭಾರತ ತಂಡ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಬಹಿಷ್ಕರಿಸಿ, ನಖ್ವಿ ಅವರಿಂದ ಟ್ರೋಫಿ ಸ್ವೀಕರಿಸದೆ ಉಳಿಯಿತು ಎಂದು ಅವರು ಹೇಳಿದ್ದಾರೆ.

ಮೊಹ್ಸಿನ್‌ ನಖ್ವಿಗೆ ಪಾಕಿಸ್ತಾನ ಫ್ಯಾನ್ಸ್‌ ಬೆಂಬಲ.

ನವದೆಹಲಿ: ಶ್ರೀಲಂಕಾ ತಂಡವನ್ನು ಫೈನಲ್‌ ಪಂದ್ಯದಲ್ಲಿ ಮಣಿಸಿ ಭಾರತ ತಂಡ, ಮಹಿಳಾ ಏಷ್ಯಾಕಪ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಆದರೆ ಪ್ರಶಸ್ತಿ ಗೆದ್ದ ಬಳಿಕ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾರತ ತಂಡ, ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಮುಖ್ಯಸ್ಥ ಮೊಹ್ಸಿನ್ ನಖ್ವಿ (Mohsin Naqvi) ಅವರಿಂದ ಟ್ರೋಫಿ ಸ್ವೀಕರಿಸದಿರುವುದು ಭಾರಿ ವಿವಾದಕ್ಕೆ ಕಾರಣವಾಗಿದೆ. ಪಹಲ್ಗಾಮ್‌ನಲ್ಲಿ ನಡೆದಿದ್ದ ಭಯೋತ್ಪಾದಕ ದಾಳಿಯ ಬಳಿಕ ಭಾರತ, ಪಾಕಿಸ್ತಾನದೊಂದಿಗೆ ಅಂತರ ಕಾಯ್ದುಕೊಂಡಿದೆ. ಈ ಹಿನ್ನೆಲೆಯಲ್ಲಿ ಭಾರತ ಪುರುಷರ ತಂಡವೂ ಈ ಹಿಂದೆ ಮೊಹ್ಸಿನ್ ನಖ್ವಿ ಅವರಿಂದ ಏಷ್ಯಾ ಕಪ್‌ ಅನ್ನು ಸ್ವೀಕರಿಸಿರಲಿಲ್ಲ. ಇದೀಗ ಮಹಿಳಾ ತಂಡವೂ ಅದೇ ನಿಲುವನ್ನು ಅನುಸರಿಸಿದೆ.

ಟ್ರೋಫಿ ಪ್ರದಾನ ಸಮಾರಂಭದಲ್ಲಿ ನಖ್ವಿ ಅವರು ವೇದಿಕೆಯ ಬಳಿ ಭಾರತ ತಂಡಕ್ಕಾಗಿ ಕಾಯುತ್ತಿದ್ದರು. ಆದರೆ ಭಾರತ ತಂಡ ಅಲ್ಲಿಗೆ ಆಗಮಿಸಲಿಲ್ಲ. ಕೆಲ ಸಮಯದ ಬಳಿಕ ನಖ್ವಿ ಅವರು ಕ್ರೀಡಾಂಗಣದಿಂದ ನಿರ್ಗಮಿಸಿದರು. ಭಾರತ ತಂಡದ ಈ ನಿರ್ಧಾರ ಪಿಸಿಬಿ ಮುಖ್ಯಸ್ಥ ನಖ್ವಿಗೆ ಮುಜುಗರದ ಪರಿಸ್ಥಿತಿ ತಂದಿದ್ದರೂ, ಕೆಲವು ಪಾಕಿಸ್ತಾನಿ ಅಭಿಮಾನಿಗಳು ಇದನ್ನು ವಿಭಿನ್ನವಾಗಿ ಅರ್ಥೈಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೊವೊಂದರಲ್ಲಿ ಪಾಕಿಸ್ತಾನಿ ಅಭಿಮಾನಿಯೊಬ್ಬರು ನಖ್ವಿ ಅವರನ್ನು ಬೆಂಬಲಿಸಿ, “ನೀವು ಮಾಡಿದ್ದು ಸರಿಯಾಗಿದೆ. ಭಾರತ ತಂಡ ಟ್ರೋಫಿಗೆ ಅರ್ಹವಾಗಿರಲಿಲ್ಲ,” ಎಂದು ಹೇಳಿದ್ದಾರೆ.

Women's Asia cup: ಮತ್ತೊಮ್ಮೆ ಪಾಕಿಸ್ತಾನದ ಮೊಹ್ಸಿನ್‌ ನಖ್ವಿಯಿಂದ ಟ್ರೋಫಿ ಸ್ವೀಕರಿಸಲು ನಿರಾಕರಿಸಿದ ಭಾರತ!

ಮೊಹ್ಸಿನ್ ನಖ್ವಿಯಿಂದ ಭಾರತ ಟ್ರೋಫಿ ಸ್ವೀಕರಿಸದಿರಲು ಕಾರಣವೇನು?

ಭಾರತ ಮಹಿಳಾ ತಂಡ, ಮೊಹ್ಸಿನ್ ನಖ್ವಿ ಅವರಿಂದ ಟ್ರೋಫಿ ಸ್ವೀಕರಿಸದಿರುವುದಕ್ಕೆ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಕಾರಣವನ್ನು ಬಹಿರಂಗಪಡಿಸಿದ್ದಾರೆ. ಪುರುಷರ ತಂಡವೂ ನಖ್ವಿ ಅವರಿಂದ ಟ್ರೋಫಿ ಸ್ವೀಕರಿಸಿರಲಿಲ್ಲ. ಅದಕ್ಕೆ ಒಗ್ಗಟ್ಟನ್ನು ಪ್ರದರ್ಶಿಸುವ ಉದ್ದೇಶದಿಂದ ಮಹಿಳಾ ತಂಡವೂ ಅದೇ ನಿರ್ಧಾರ ಕೈಗೊಂಡಿದೆ ಎಂದು ಸೈಕಿಯಾ ತಿಳಿಸಿದ್ದಾರೆ.

ಪಾಕಿಸ್ತಾನ ಸರ್ಕಾರದಲ್ಲಿ ಪ್ರಮುಖ ಸ್ಥಾನ ಹೊಂದಿರುವ ನಖ್ವಿ ಅವರಿಂದ ಟ್ರೋಫಿ ಸ್ವೀಕರಿಸುವ ವಿಚಾರದಲ್ಲಿ ದೇಶದ ಜನರ ಭಾವನೆಗಳನ್ನು ಗೌರವಿಸಬೇಕಾಗಿದೆ ಎಂದು ಅವರು ಹೇಳಿದ್ದಾರೆ. ಇದೇ ವೇಳೆ, ಬಹುರಾಷ್ಟ್ರೀಯ ಟೂರ್ನಿಗಳಲ್ಲಿ ಎಲ್ಲ ತಂಡಗಳ ವಿರುದ್ಧ ಆಡಬೇಕು ಎಂಬ ಬಿಸಿಸಿಐ ನೀತಿಯನ್ನು ಕೂಡ ಪಾಲಿಸಬೇಕಾಗಿದೆ ಎಂದು ಸೈಕಿಯಾ ಸ್ಪಷ್ಟಪಡಿಸಿದ್ದಾರೆ.



“ಏಷ್ಯಾಕಪ್‌ ಟೂರ್ನಿಯಲ್ಲಿ ಟ್ರೋಫಿ ವಿಚಾರ ವಿವಾದಾತ್ಮಕವಾಗಿದೆ. ನಮ್ಮ ಪುರುಷರ ತಂಡ ಸುಮಾರು ಒಂದೂವರೆ ವರ್ಷಗಳ ಹಿಂದೆ ಏಷ್ಯಾಕಪ್ ಗೆದ್ದಿತ್ತು. 2025ರ ಏಪ್ರಿಲ್‌ನಲ್ಲಿ ನಡೆದಿದ್ದ ಪಹಲ್ಗಾಮ್ ಘಟನೆಯ ಬಳಿಕ ಸಂಪೂರ್ಣ ಪರಿಸ್ಥಿತಿ ಬದಲಾಗಿದೆ. ಆ ಬಳಿಕ ನಮ್ಮ ದೇಶದ ನಾಗರಿಕರಿಂದ ನೆರೆಯ ದೇಶದೊಂದಿಗೆ ಯಾವುದೇ ಸಂಬಂಧ ಇಟ್ಟುಕೊಳ್ಳಬಾರದು ಹಾಗೂ ಅವರೊಂದಿಗೆ ಕ್ರಿಕೆಟ್ ಆಡಬಾರದು ಎಂಬ ಒತ್ತಡ ನಮ್ಮ ಮೇಲಿತ್ತು. ಆದರೆ ನಮ್ಮ ಸರ್ಕಾರದ ನೀತಿಯ ಪ್ರಕಾರ, ಬಹುರಾಷ್ಟ್ರೀಯ ಟೂರ್ನಿಗಳಲ್ಲಿ ನಾವು ಪ್ರತಿಯೊಂದು ದೇಶದ ವಿರುದ್ಧವೂ ಆಡಬೇಕಾಗಿದೆ,” ಎಂದು ದೇವಜಿತ್ ಸೈಕಿಯಾ ತಿಳಿಸಿದ್ದಾರೆ.

ಮೊಹ್ಸಿನ್‌ ನಖ್ವಿಯಿಂದ ಮಹಿಳಾ ಏಷ್ಯಾ ಕಪ್‌ ಸ್ವೀಕರಿಸದೇ ಇರಲು ಕಾರಣ ತಿಳಿಸಿದ ಕೋಚ್‌ ಅಮೋಲ್‌ ಮಝುಮ್ದಾರ್‌!

ಹೀಗಾಗಿ ಭಾರತ ತಂಡ ಪಾಕಿಸ್ತಾನದ ವಿರುದ್ಧ ದ್ವಿಪಕ್ಷೀಯ ಕ್ರಿಕೆಟ್‌ನಿಂದ ದೂರ ಉಳಿದಿದ್ದರೂ, ಏಷ್ಯಾಕಪ್‌ನಂತಹ ಬಹುರಾಷ್ಟ್ರೀಯ ಟೂರ್ನಿಗಳಲ್ಲಿ ಭಾಗವಹಿಸುವ ನೀತಿಯನ್ನು ಮುಂದುವರಿಸಿದೆ. ಟ್ರೋಫಿ ಸ್ವೀಕಾರದ ವಿಚಾರದಲ್ಲಿ ಮಾತ್ರ ಬಿಸಿಸಿಐ ತನ್ನ ನಿಲುವನ್ನು ಸ್ಪಷ್ಟವಾಗಿ ಕಾಯ್ದುಕೊಂಡಿದೆ.