ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Women's Asia cup: ಮತ್ತೊಮ್ಮೆ ಪಾಕಿಸ್ತಾನದ ಮೊಹ್ಸಿನ್‌ ನಖ್ವಿಯಿಂದ ಟ್ರೋಫಿ ಸ್ವೀಕರಿಸಲು ನಿರಾಕರಿಸಿದ ಭಾರತ!

ಶ್ರೀಲಂಕಾ ವಿರುದ್ಧದ ಫೈನಲ್‌ನಲ್ಲಿ ಭರ್ಜರಿ ಗೆಲುವು ಸಾಧಿಸಿ 8ನೇ ಬಾರಿ ಮಹಿಳಾ ಏಷ್ಯಾ ಕಪ್ ಪ್ರಶಸ್ತಿ ಗೆದ್ದ ಭಾರತ ಮಹಿಳಾ ತಂಡ, ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಕಿಸ್ತಾನ ಕ್ರಿಕೆಟ್ ಮುಖ್ಯಸ್ಥ ಮೊಹ್ಸಿನ್ ನಖ್ವಿ ಅವರಿಂದ ಏಷ್ಯಾ ಕಪ್ ಟ್ರೋಫಿ ಸ್ವೀಕರಿಸಲು ನಿರಾಕರಿಸಿತು. ಸೆಪ್ಟೆಂಬರ್ 13, ಭಾನುವಾರ ದುಬೈನಲ್ಲಿ ಈ ಫೈನಲ್ ಪಂದ್ಯ ನಡೆದಿತ್ತು. ಶ್ರೀಲಂಕಾವನ್ನು 72 ರನ್‌ಗಳಿಂದ ಮಣಿಸಿದ ಭಾರತ ತಂಡ ಚಾಂಪಿಯನ್ ಪಟ್ಟಕ್ಕೇರಿತು.

ಪಾಕ್‌ನ ಮೊಹ್ಸಿನ್‌ ನಖ್ವಿಯಿಂದ ಟ್ರೋಫಿ ಸ್ವೀಕರಿಸಲು ಭಾರತ ನಕಾರ!

ಮೊಹ್ಸಿನ್‌ ನಖ್ವಿಗೆ ಮತ್ತೊಮ್ಮೆ ಮುಖಭಂಗ, ಮಹಿಳಾ ಏಷ್ಯಾ ಕಪ್‌ ಸ್ವೀಕರಿಸಲು ನಿರಾಕರಿಸಿದ ಭಾರತ. -

Profile
Ramesh Kote Sep 14, 2026 8:58 AM

ದುಬೈ: ಶ್ರೀಲಂಕಾ ತಂಡವನ್ನು ಫೈನಲ್‌ ಪಂದ್ಯದಲ್ಲಿ (INDW vs SLW) ಮಣಿಸಿದ ಬಳಿಕ ಹರ್ಮನ್‌ಪ್ರೀತ್‌ ಕೌರ್‌ ನಾಯಕತ್ವದ ಭಾರತ ತಂಡ, ಎಂಟನೇ ಬಾರಿ ಮಹಿಳಾ ಚಾಂಪಿಯನ್ಸ್‌ ಟ್ರೋಫಿಯನ್ನು (Harmanpreet Kaur) ಮುಡಿಗೇರಿಸಿಕೊಂಡಿತು. ಆದರೆ, ಪಂದ್ಯದ ಬಳಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಏಷ್ಯನ್‌ ಕ್ರಿಕೆಟ್‌ ಕೌನ್ಸಿಲ್‌ ಹಾಗೂ ಪಾಕಿಸ್ತಾನ ಕ್ರಿಕೆಟ್‌ ಮಂಡಳಿಯ ಅಧ್ಯಕ್ಷ ಮೊಹ್ಸಿನ್‌ ನಖ್ವಿ (Mohsin Naqvi) ಅವರಿಂದ ಮಹಿಳಾ ಏಷ್ಯಾ ಕಪ್‌ ಟ್ರೋಫಿಯನ್ನು ಸ್ವೀಕರಿಸಲು ಭಾರತ ಮಹಿಳಾ ತಂಡ ನಿರಾಕರಿಸಿತು. ಇದದೊಂದಿಗೆ ಮತ್ತೊಮ್ಮೆ ಮೊಹ್ಸಿನ್‌ ನಖ್ವಿಗೆ ಜಾಗತಿಕ ಮಟ್ಟದಲ್ಲಿ ಮುಖಭಂಗವಾಯಿತು.

ಇಲ್ಲಿನ ದುಬೈ ಇಂಟರ್‌ನ್ಯಾಷನಲ್‌ ಕ್ರೀಡಾಂಗಣದಲ್ಲಿ ನಡೆದಿದ್ದ ಫೈನಲ್‌ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ್ದ ಭಾರತ ಮಹಿಳಾ ತಂಡ, ಸ್ಮೃತಿ ಮಂಧಾನಾ ಹಾಗೂ ಶಫಾಲಿ ವರ್ಮಾ ಅವರ ಅರ್ಧಶತಕಗಳ ಬಲದಿಂದ ಭಾರತ ತಂಡ ತನ್ನ ಪಾಲಿನ 20 ಓವರ್‌ಗಳಿಗೆ 5 ವಿಕೆಟ್‌ಗಳ ನಷ್ಟಕ್ಕೆ 185 ರನ್‌ಗಳನ್ನು ಕಲೆ ಹಾಕಿತು. ಬಳಿಕ ಗುರಿಯನ್ನು ಹಿಂಬಾಲಿಸಿದ ಶ್ರೀಲಂಕಾ ಮಹಿಳಾ ತಂಡ, ಶ್ರೀ ಚರಣಿ ಸ್ಪಿನ್‌ ಮೋಡಿಗೆ ನಲುಗಿತು. ಆ ಮೂಲಕ ತನ್ನ 20 ಓವರ್‌ಗಳನ್ನು ಪೂರ್ಣಗೊಳಿಸಿದರೂ ಕೇವಲ 111 ರನ್‌ಗಳಿಗೆ ಆಲ್‌ಔಟ್‌ ಆಯಿತು.

Women's Asia Cup 2026: ಶ್ರೀಲಂಕಾ ವಿರುದ್ಧ 72 ರನ್‌ಗಳ ಭರ್ಜರಿ ಗೆಲುವು; 8ನೇ ಬಾರಿ ಚಾಂಪಿಯನ್ ಆದ ಭಾರತ!

ಈ ಹಿಂದೆ 2025ರ ಏಷ್ಯಾ ಕಪ್ ಫೈನಲ್‌ ಪಂದ್ಯದ ಬಳಿಕವೂ ಭಾರತ ಪುರುಷರ ತಂಡ ಚಾಂಪಿಯನ್‌ ಆದ ಬಳಿಕ ಇದೇ ಘಟನೆ ನಡೆದಿತ್ತು. ಮೊದಲ ಬಾರಿ ಮೊಹ್ಸಿನ್‌ ನಖ್ವಿ ಕೈಯಿಂದ ಟ್ರೋಫಿಯನ್ನು ಸ್ವೀಕರಿಸಲು ಸೂರ್ಯಕುಮಾರ್‌ ಯಾದವ್‌ ನಾಯಕತ್ವದ ಭಾರತ ತಂಡ ನಿರಾಕರಿಸಿತ್ತು. ಇದೀಗ ಕ್ರಿಕೆಟ್‌ ಅಂಗಣದಲ್ಲಿ ಅದೇ ರೀತಿಯ ಘಟನೆ ನಡೆದಿದೆ.

ಶ್ರೀಲಂಕಾ ವಿರುದ್ಧ ಭಾರತ 72 ರನ್‌ಗಳ ಗೆಲುವು ಸಾಧಿಸಿ ಪ್ರಶಸ್ತಿ ಗೆದ್ದ ಸಂದರ್ಭದಲ್ಲಿ ನಖ್ವಿ ಗಣ್ಯರ ಸಾಲಿನಲ್ಲಿ ಉಪಸ್ಥಿತರಿದ್ದರು. ಭಾರತ ಪ್ರಶಸ್ತಿಯತ್ತ ಮುನ್ನಡೆಯುತ್ತಿದ್ದ ವೇಳೆ ನಖ್ವಿ, ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ, ಕಾರ್ಯದರ್ಶಿ ದೇವಜಿತ್ ಸೈಕಿಯಾ ಸೇರಿದಂತೆ ಇತರ ಅಧಿಕಾರಿಗಳೊಂದಿಗೆ ಕುಳಿತಿದ್ದರು.



ಪಂದ್ಯ ಮುಗಿದ ಬಳಿಕ ಭಾರತ ತಂಡದ ಆಟಗಾರರು ಮುಖ್ಯ ಕೋಚ್ ಅಮೋಲ್ ಮಜುಂದಾರ್ ಅವರ ಸುತ್ತಲೂ ಸೇರಿದರು. ಅವರು ತಂಡವನ್ನು ಉದ್ದೇಶಿಸಿ ಮಾತನಾಡಿ ಗೆಲುವಿನ ಸಂಭ್ರಮ ಹಂಚಿಕೊಂಡರು. ಬಳಿಕ ತಂಡವೇ ತನ್ನದೇ ಆದ ಪದಕ ಪ್ರದಾನ ಸಮಾರಂಭ ನಡೆಸಿತು. ಈ ವೇಳೆ ಸೈಕಿಯಾ ಮತ್ತು ಶುಕ್ಲಾ ಅವರು ಫೀಲ್ಡಿಂಗ್ ಪದಕವನ್ನು ನಂದನಿ ಶರ್ಮಾಗೆ ಪ್ರದಾನ ಮಾಡಿದರು. ದೇವಜಿತ್‌ ಸೈಕಿಯಾ ಕೂಡ ಆಟಗಾರರೊಂದಿಗೆ ಸಮಯ ಕಳೆಯುತ್ತಾ, ಪ್ರಶಸ್ತಿ ಗೆದ್ದ ತಂಡಕ್ಕೆ ಅಭಿನಂದನೆ ಸಲ್ಲಿಸಿದರು.

ಇದೇ ವೇಳೆ ಅಧಿಕೃತ ಪ್ರಶಸ್ತಿ ಪ್ರದಾನ ಸಮಾರಂಭದ ಸಿದ್ಧತೆಗಳು ನಡೆಯುತ್ತಿದ್ದಾಗ ನಖ್ವಿ ಮೈದಾನದಲ್ಲಿದ್ದ ಇತರ ಗಣ್ಯರೊಂದಿಗೆ ಮಾತುಕತೆ ನಡೆಸುತ್ತಿರುವುದು ಕಂಡುಬಂತು. ನಂತರ ನಖ್ವಿ ವೇದಿಕೆಗೆ ತೆರಳಿ ಶ್ರೀಲಂಕಾ ನಾಯಕಿ ಚಾಮರಿ ಅಟ್ಟಪಟ್ಟುಗೆ ರನ್ನರ್‌ಅಪ್ ಚೆಕ್ ಹಸ್ತಾಂತರಿಸಿದರು. ಅಟಪಟ್ಟು ಅವರು ಫರ್ವೇಜ್ ಮಹರೂಫ್ ಅವರೊಂದಿಗೆ ಮಾತನಾಡಿದ ಬಳಿಕ ಸಮಾರಂಭ ಮುಕ್ತಾಯವಾಯಿತು.



ಆದರೆ, ಇದರ ನಂತರ ಏನಾಯಿತು ಎಂಬುದನ್ನು ಮೈದಾನದಿಂದ ಪ್ರಸಾರವಾದ ಲೈವ್ ಫೀಡ್‌ನಲ್ಲಿ ತೋರಿಸಲಾಗಲಿಲ್ಲ. ಅಟಪಟ್ಟು ಅವರು ಮಹರೂಫ್ ಅವರೊಂದಿಗೆ ಮಾತನಾಡಿದ ತಕ್ಷಣವೇ ನೇರ ಪ್ರಸಾರ ಕೊನೆಗೊಂಡಿತ್ತು. ಪ್ರಶಸ್ತಿ ಪ್ರದಾನ ಸಮಾರಂಭ ಮುಗಿದ ಕೆಲವೇ ಸಮಯದ ಬಳಿಕ ನಖ್ವಿ, ಇತರ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ಅಧಿಕಾರಿಗಳೊಂದಿಗೆ ಮೈದಾನದಿಂದ ಹೊರಹೋಗುತ್ತಿರುವುದು ಕಂಡುಬಂತು. ಈ ವೇಳೆ ಮೈದಾನದಲ್ಲಿ ನಡೆದ ಘಟನೆ ಕುರಿತು ಅಭಿಮಾನಿಗಳು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸುತ್ತಿದ್ದರು. ನಂತರ ನಖ್ವಿ ಕ್ರೀಡಾಂಗಣದಿಂದ ಹೊರಟರೂ, ಟ್ರೋಫಿ ಅವರೊಂದಿಗೆ ಅಥವಾ ಅವರ ಜತೆಗಿದ್ದ ಇತರ ಅಧಿಕಾರಿಗಳ ಬಳಿ ಕಾಣಿಸಿಕೊಳ್ಳಲಿಲ್ಲ.

ಭಾರತ ತಂಡ ಟ್ರೋಫಿ ಸ್ವೀಕರಿಸಲು ಏಕೆ ನಿರಾಕರಿಸಿತು?

ಶ್ರೀಲಂಕಾ ವಿರುದ್ಧದ ಫೈನಲ್‌ನಲ್ಲಿ ಗೆದ್ದು 2026ರ ಮಹಿಳಾ ಏಷ್ಯಾ ಕಪ್ ಚಾಂಪಿಯನ್ ಆದ ಬಳಿಕ, ಪಾಕಿಸ್ತಾನ ಕ್ರಿಕೆಟ್ ಮುಖ್ಯಸ್ಥ ಮೊಹ್ಸಿನ್ ನಖ್ವಿ ಅವರಿಂದ ಟ್ರೋಫಿ ಸ್ವೀಕರಿಸಲು ಭಾರತ ಮಹಿಳಾ ತಂಡ ನಿರಾಕರಿಸಿತ್ತು. ಈ ನಿರ್ಧಾರದ ಹಿಂದಿನ ಕಾರಣವನ್ನು ಭಾರತ ತಂಡದ ಮುಖ್ಯ ಕೋಚ್ ಅಮೋಲ್ ಮಜುಂದಾರ್ ಬಹಿರಂಗಪಡಿಸಿದ್ದಾರೆ.

ಪಂದ್ಯದ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಜುಂದಾರ್‌, ಟ್ರೋಫಿಯನ್ನು ಸ್ವೀಕರಿಸದಿರುವ ನಿರ್ಧಾರವನ್ನು ಬಿಸಿಸಿಐ ತೆಗೆದುಕೊಂಡಿದ್ದು, ಮಂಡಳಿಯ ನಿರ್ಧಾರವನ್ನು ತಂಡ ಬೆಂಬಲಿಸುತ್ತದೆ ಎಂದು ಸ್ಪಷ್ಟಪಡಿಸಿದರು.

IND vs AFG: ಅಭಿಷೇಕ್‌ ಶರ್ಮಾ ಅಬ್ಬರ, ಆಫ್ಘನ್‌ ಎದುರು ಭಾರತಕ್ಕೆ 7 ವಿಕೆಟ್‌ ಜಯ!

“ಈ ನಿರ್ಧಾರವನ್ನು ಬಿಸಿಸಿಐ ತೆಗೆದುಕೊಂಡಿದೆ ಮತ್ತು ನಾವು ಅದನ್ನು ಬೆಂಬಲಿಸುತ್ತೇವೆ. ನಮಗೆ ಈ ಟೂರ್ನಿ ಮುಗಿದಿದೆ. ನಾವು ಚಾಂಪಿಯನ್ಸ್. ಅದು ನಮಗೆ ಸಾಕು. ‘ಏಷ್ಯಾ ಕಪ್ 2026ರ ಚಾಂಪಿಯನ್ಸ್ ಭಾರತ’ ಎಂದು ದೊಡ್ಡ ಪರದೆಯಲ್ಲೇ ತೋರಿಸಲಾಗಿದೆ. ನಮ್ಮ ಪಾಲಿಗೆ ಈ ಟೂರ್ನಿ ಅಧಿಕೃತವಾಗಿ ಮುಗಿದಿದೆ,” ಎಂದು ಅವರು ಹೇಳಿದರು.

“ನಾವು ಚಾಂಪಿಯನ್ಸ್ ಆಗಿರುವುದಕ್ಕೆ ಸಂತೋಷವಾಗಿದೆ. ಇದೀಗ ನಮ್ಮ ಗಮನ ಏಷ್ಯನ್ ಗೇಮ್ಸ್‌ನತ್ತ. ನಾವು ಚಾಂಪಿಯನ್ಸ್ ಆಗಿರುವುದು ಬಹಳ ಖುಷಿಯ ಸಂಗತಿ. ಈ ತಂಡದ ಪ್ರತಿಯೊಬ್ಬರ ಬಗ್ಗೆಯೂ ನನಗೆ ಹೆಮ್ಮೆ ಇದೆ. ಆಟಗಾರರು ಮಾತ್ರವಲ್ಲದೆ, ಸಹಾಯಕ ಸಿಬ್ಬಂದಿಯ ಬಗ್ಗೆಯೂ ಹೆಮ್ಮೆ ಇದೆ,” ಎಂದರು.