ನವದೆಹಲಿ: ಭಾರತ (India), ಪಾಕಿಸ್ತಾನ ಮತ್ತು ಜಿಂಬಾಬ್ವೆ ಸೇರಿದಂತೆ ಒಟ್ಟು 9 ತಂಡಗಳು 2028ರ ಐಸಿಸಿ ಟಿ20 ವಿಶ್ವಕಪ್ (T20 World Cup 2028) ಟೂರ್ನಿಗೆ ನೇರವಾಗಿ ಅರ್ಹತೆ ಪಡೆದಿವೆ. ಮುಂದಿನ ಟಿ20 ವಿಶ್ವಕಪ್ ಟೂರ್ನಿಗೆ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಜಂಟಿ ಆತಿಥ್ಯ ವಹಿಸಲಿವೆ. ಪ್ರಸ್ತುತ ನಡೆಯುತ್ತಿರುವ 2026ರ ಚುಟುಕು ವಿಶ್ವಕಪ್ (T20 World Cup 2026) ಟೂರ್ನಿಯ ಸೂಪರ್-8ಕ್ಕೆ ಅರ್ಹತೆ ಪಡೆದ ಎಲ್ಲಾ ತಂಡಗಳು ಮುಂದಿನ ಟಿ20 ವಿಶ್ವಕಪ್‌ಗೆ ಸ್ವಯಂ ಅರ್ಹತೆಯನ್ನು ಪಡೆದಿವೆ. ಭಾರತ, ಪಾಕಿಸ್ತಾನ ಮತ್ತು ಜಿಂಬಾಬ್ವೆ ಜೊತೆಗೆ ಶ್ರೀಲಂಕಾ, ವೆಸ್ಟ್ ಇಂಡೀಸ್, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ತಂಡಗಳೂ 2028ರ ವಿಶ್ವಕಪ್ ಟೂರ್ನಿಯಲ್ಲಿ ತಮ್ಮ-ತಮ್ಮ ಸ್ಥಾನಗಳನ್ನು ಭದ್ರಪಡಿಸಿಕೊಂಡಿವೆ. ಇನ್ನುಳಿದ ಸ್ಥಾನಗಳನ್ನು ಪ್ರಾದೇಶಿಕ ಅರ್ಹತಾ ಪಂದ್ಯಗಳ ಮೂಲಕ ನಿರ್ಧರಿಸಲಾಗುತ್ತದೆ ಎಂದು ಐಸಿಸಿ ಮೂಲಗಳು ತಿಳಿಸಿವೆ.
ಸೂಪರ್-8ರ ಹಂತದ ಅಂತಿಮ ಪಟ್ಟಿಯನ್ನು ಫೆಬ್ರವರಿ 18ರಂದು ಗ್ರೂಪ್ ‘ಎ’ ಪಂದ್ಯದಲ್ಲಿ ಪಾಕಿಸ್ತಾನವು ನಮೀಬಿಯಾವನ್ನು 102 ರನ್‌ಗಳಿಂದ ಸೋಲಿಸಿದ ಬಳಿಕ ಅಧಿಕೃತವಾಗಿ ದೃಢಪಡಿಸಲಾಯಿತು. ಗುಂಪು ಹಂತದಲ್ಲಿ ಶ್ರೀಲಂಕಾ ಮತ್ತು ಜಿಂಬಾಬ್ವೆ ವಿರುದ್ಧ ಸೋಲು ಕಂಡ ಆಸ್ಟ್ರೇಲಿಯಾ ಸೂಪರ್ ಎಂಟರಲ್ಲಿ ಅರ್ಹತೆ ಪಡೆಯಲು ವಿಫಲವಾಯಿತು. ಆದರೆ 2028ರ ಟೂರ್ನಿಯ ಜಂಟಿ ಆತಿಥ್ಯದ ರಾಷ್ಟ್ರವಾಗಿರುವ ಕಾರಣ ಆಸ್ಟ್ರೇಲಿಯಾ, ಮುಂದಿನ ವಿಶ್ವಕಪ್ ಟೂರ್ನಿಯಲ್ಲಿ ತನ್ನ ಸ್ಥಾನವನ್ನು ಖಚಿತಪಡಿಸಿಕೊಂಡಿದೆ.
T20 world Cup: ನೆದರ್ಲೆಂಡ್ಸ್ ವಿರುದ್ಧವೂ ವೈಫಲ್ಯ, ಹ್ಯಾಟ್ರಿಕ್ ಡಕ್‌ಔಟ್ ಆದ ಅಭಿಷೇಕ್ ಶರ್ಮಾ!
ಬಾಂಗ್ಲಾದೇಶ ತಂಡಕ್ಕೆ ನೇರ ಅರ್ಹತೆ ಇದೆಯಾ?
2028ರ ಟಿ20 ವಿಶ್ವಕಪ್ ಟೂರ್ನಿಗೆ ಈಗಾಗಲೇ ಅರ್ಹತೆ ಪಡೆದಿರುವ ಒಂಬತ್ತು ತಂಡಗಳ ಜೊತೆಗೆ, ಐಸಿಸಿ ಪುರುಷರ ಟಿ20ಐ ತಂಡಗಳ ಶ್ರೇಯಾಂಕದ ಆಧಾರವಾಗಿ ಇನ್ನೂ ಮೂರು ತಂಡಗಳು ನೇರ ಪ್ರವೇಶ ಪಡೆಯಲಿವೆ. ಮಾರ್ಚ್ 8ರಂದು ನಡೆಯಲಿರುವ ಫೈನಲ್ ಪಂದ್ಯದ ನಂತರ ಹಾಗೂ ಮಾರ್ಚ್ 9 ರಂದು ಶ್ರೇಯಾಂಕ ಪಟ್ಟಿ ಪ್ರಕಟವಾದ ಬಳಿಕ ಇದು ನಿರ್ಧಾರವಾಗಲಿದೆ.
ಈ ನೇರ ಪ್ರವೇಶ ಸ್ಥಾನಗಳು ಈಗಾಗಲೇ ಅರ್ಹತೆ ಪಡೆಯದ ಅಗ್ರ ಹಂತದ ಮೂರು ತಂಡಗಳಿಗೆ ನೀಡಲಾಗುತ್ತದೆ. ಪ್ರಸ್ತುತ ಬಾಂಗ್ಲಾದೇಶ, ಅಫ್ಘಾನಿಸ್ತಾನ ಮತ್ತು ಐರ್ಲೆಂಡ್ ಈ ಸ್ಥಾನಗಳಿಗೆ ಪೈಪೋಟಿಯಲ್ಲಿ ಇದ್ದು, ಕಟ್‌ಆಫ್ ದಿನಾಂಕಕ್ಕೂ ಮುನ್ನ ಯಾವುದೇ ಅಂತಾರಾಷ್ಟ್ರೀಯ ಪಂದ್ಯಗಳಿರದ ಕಾರಣ, ಅವರ ಶ್ರೇಯಾಂಕದಲ್ಲಿ ಬದಲಾವಣೆ ಸಾಧ್ಯತೆ ಕಡಿಮೆ. ಹೀಗಾಗಿ, ಈ ಮೂರು ತಂಡಗಳು ನೇರವಾಗಿ ಅರ್ಹತೆ ಪಡೆಯುವ ಅವಕಾಶ ಇದೆ.
PAK vs NAM: ಯುಎಸ್‌ಎ ಕನಸು ಭಗ್ನ, ನಮೀಬಿಯಾ ವಿರುದ್ಧ ಗೆದ್ದ ಪಾಕಿಸ್ತಾನಕ್ಕೆ ಸೂಪರ್-8ರ ಟಿಕೆಟ್!
ಬಾಂಗ್ಲಾದೇಶ ಆರಂಭದಲ್ಲಿ ನಿಗದಿತ ವೇಳಾಪಟ್ಟಿಯಂತೆ 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸಲು ಬಯಸಿತ್ತು. ಆದರೆ, ಭಾರತದಲ್ಲಿನ ಭದ್ರತೆ ಸಮಸ್ಯೆಗಳಿಂದ ಬಾಂಗ್ಲಾ, ತನ್ನ ಪಂದ್ಯಗಳನ್ನು ಶ್ರೀಲಂಕಕ್ಕೆ ಸ್ಥಳಾಂತರಗೊಳಿಸಬೇಕೆಂದು ಐಸಿಸಿಗೆ ಮನವಿ ಮಾಡಿತ್ತು. ಆದರೆ, ಐಸಿಸಿ ಇದನ್ನು ನಿರಾಕರಿಸಿದ ಬಳಿಕ ಬಾಂಗ್ಲಾದೇಶ ಸ್ಥಾನಕ್ಕೆ ಸ್ಕಾಟ್ಲೆಂಡ್ ತಂಡವನ್ನು ಸೇರಿಸಲಾಯಿತು.
ಅಫ್ಘಾನಿಸ್ತಾನ ಮತ್ತು ಐರ್ಲೆಂಡ್ 2026ರ ವಿಶ್ವಕಪ್‌ನಲ್ಲಿ ಸೂಪರ್ ಎಂಟರ ಹಂತಕ್ಕೆ ತಲುಪುವಲ್ಲಿ ವಿಫಲಗೊಂಡು ನಿರಾಶೆಯೊಂದಿಗೆ ಟೂರ್ನಿಯ ಅಭಿಯಾನವನ್ನು ಮುಗಿಸಿದವು. ಆದರೂ, ಆ ತಂಡಗಳ ಶ್ರೇಯಾಂಕ ಸ್ಥಿರವಾಗಿದ್ದರೆ ಅವರು 2028ರ ಟೂರ್ನಿಗೆ ನೇರ ಅರ್ಹತೆ ಪಡೆಯಬಹುದು. ಇನ್ನುಳಿದ 8 ಸ್ಥಾನಗಳನ್ನು 20 ತಂಡಗಳ ಟೂರ್ನಿಯಲ್ಲಿ ಪ್ರಾದೇಶಿಕ ಅರ್ಹತಾ ಟೂರ್ನಿಗಳ ಮೂಲಕ ಭರ್ತಿ ಮಾಡಲಾಗುವುದು.