ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

PAK vs NAM: ಯುಎಸ್‌ಎ ಕನಸು ಭಗ್ನ, ನಮೀಬಿಯಾ ವಿರುದ್ಧ ಗೆದ್ದ ಪಾಕಿಸ್ತಾನಕ್ಕೆ ಸೂಪರ್‌-8ರ ಟಿಕೆಟ್‌!

ಸಾಹಿಬ್‌ಝಾದ ಫರ್ಹಾನ್‌ ಅವರ ಚೊಚ್ಚಲ ಶತಕದ ಬಲದಿಂದ ಪಾಕಿಸ್ತಾನ ತಂಡ, ನಮೀಬಿಯಾ ತಂಡವನ್ನು ಕೊನೆಯ ಲೀಗ್‌ ಪಂದ್ಯದಲ್ಲಿ 102 ರನ್‌ಗಳಿಂದ ಮಣಿಸಿತು. ಆ ಮೂಲಕ ಎ ಗುಂಪಿನಲ್ಲಿ ಯುಎಸ್‌ಎ ತಂಡವನ್ನು ಹಿಂದಿಕ್ಕಿ 2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಸೂಪರ್-8ಕ್ಕೆ ಅರ್ಹತೆ ಪಡೆಯಿತು. ಪಾಕ್‌ ತಂಡ ಸೂಪರ್‌-8 ಬಿ ಗುಂಪಿನಲ್ಲಿ ಸ್ಥಾನವನ್ನು ಪಡೆದಿದೆ.

ನಮೀಬಿಯಾವನ್ನು ಮಣಿಸಿದ ಪಾಕಿಸ್ತಾನಕ್ಕೆ ಸೂಪರ್‌-8ರ ಟಿಕೆಟ್‌!

ನಮೀಬಿಯಾ ವಿರುದ್ಧ ಗೆದ್ದು ಸೂಪರ್‌-8ಕ್ಕೆ ಪ್ರವೇಶಿಸಿದ ಪಾಕ್‌. -

Profile
Ramesh Kote Feb 18, 2026 6:21 PM

ಕೊಲಂಬೊ: ಸಾಹಿಬ್‌ಝಾದ ಫರ್ಹಾನ್‌ (Sahibzada Farhan) ಅವರ ಶತಕ ಹಾಗೂ ಉಸ್ಮಾನ್‌ ತಾರಿಖ್‌ (Usman Tariq) ಮತ್ತು ಶದಾಬ್‌ ಖಾನ್‌ ಅವರ ಸ್ಪಿನ್‌ ಮೋಡಿಯ ಸಹಾಯದಿಂದ ಪಾಕಿಸ್ತಾನ (Pakistan) ತಂಡ, ನಮೀಬಿಯಾ ತಂಡವನ್ನು ತನ್ನ ಕೊನೆಯ ಲೀಗ್‌ ಪಂದ್ಯದಲ್ಲಿ 102 ರನ್‌ಗಳಿಂದ ಮಣಿಸಿತು. ಆ ಮೂಲಕ ಸಲ್ಮಾನ್‌ ಅಲಿ ಆಘಾ ನಾಯಕತ್ವದ ಪಾಕಿಸ್ತಾನ, 2026ರ ಐಸಿಸಿ ಟಿ20 ವಿಶ್ವಕಪ್‌ (T20 World Cup 2026) ಟೂರ್ನಿಯ ಸೂಪರ್‌-8ರ ಹಂತಕ್ಕೆ ಪ್ರವೇಶ ಪಡೆಯಿತು. ಪಾಕ್‌ ತಂಡದ ಸೋಲನ್ನು ಬಯಸುತ್ತಿದ್ದ ಯುಎಸ್‌ಎ ತಂಡ ಅಧಿಕೃತವಾಗಿ ಚುಟುಕು ವಿಶ್ವಕಪ್‌ ಟೂರ್ನಿಯಿಂದ ಹೊರ ನಡೆಯಿತು. ನಮೀಬಿಯಾ ತಂಡ ಒಂದೂ ಗೆಲುವು ಕಾಣದೆ ಈ ಟೂರ್ನಿಯಲ್ಲಿನ ತನ್ನ ಅಭಿಯಾನವನ್ನು ಮುಗಿಸಿತು.

ಬುಧವಾರ ಇಲ್ಲಿನ ಸಿಂಹಳೀಸ್‌ ಸ್ಪೋರ್ಟ್ಸ್‌ ಕ್ಲಬ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿ ಪಾಕಿಸ್ತಾನ ತಂಡ ನೀಡಿದ್ದ 200 ರನ್‌ಗಳ ಗುರಿಯನ್ನು ಹಿಂಬಾಲಿಸಿದ ನಮೀಬಿಯಾ ತಂಡ, ಶದಾಬ್‌ ಖಾನ್‌ ಮತ್ತು ಉಸ್ಮಾನ್‌ ತಾರಿಖ್‌ ಅವರ ಸ್ಪಿನ್‌ ಮೋಡಿಗೆ ನಲುಗಿತು. ಆ ಮೂಲಕ 17.3 ಓವರ್‌ಗಳಿಗೆ 97 ರನ್‌ಗಳಿಗೆ ಆಲ್‌ಔಟ್‌ ಆಯಿತು. ನಮೀಬಿಯಾ ಪರ ಲಾರೆನ್‌ ಸ್ಟೀನ್‌ಕಾಂಪ್‌ 23 ರನ್‌ ಹಾಗೂ ಅಲೆಕ್ಸಾಂಡರ್ ವೋಲ್ಕೆನ್ 20 ರನ್‌ ಗಳಿಸಿದ್ದು,ಬಿಟ್ಟರೆ ಇನ್ನಳಿದ ಯಾವುದೇ ಬ್ಯಾಟ್ಸ್‌ಮನ್‌ ವೈಯಕ್ತಿಕ 20 ರನ್‌ ದಾಟಲಿಲ್ಲ. ಪಾಕಿಸ್ತಾನ ಪರ ಉಸ್ಮಾನ್‌ ತಾರಿಖ್‌ 4 ವಿಕೆಟ್‌ ಕಿತ್ತರೆ, ಶದಾಬ್‌ ಖಾನ್‌ ಮೂರು ವಿಕೆಟ್‌ಗಳನ್ನು ಕಬಳಿಸಿದರು.

PAK vs NAM: ಹೆಡ್‌ ಕೋಚ್‌ ಮೈಕ್‌ ಹೇಸನ್‌ ಜೊತೆಗೆ ಸಲ್ಮಾನ್‌ ಆಘಾ ಮಾತಿನ ಚಕಮಕಿ!

199 ರನ್‌ಗಳನ್ನು ಕಲೆ ಹಾಕಿದ ಪಾಕಿಸ್ತಾನ

ಇದಕ್ಕೂ ಮುನ್ನ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿದ್ದ ಪಾಕಿಸ್ತಾನ ತಂಡ, ಸಾಹಿಬ್‌ಝಾದ ಅವರ ಶತಕದ ಬಲದಿಂದ ತನ್ನ ಪಾಲಿನ 20 ಓವರ್‌ಗಳಿಗೆ 3 ವಿಕೆಟ್‌ಗಳ ನಷ್ಟಕ್ಕೆ 199 ರನ್‌ಗಳನ್ನು ಕಲೆ ಹಾಕಿತ್ತು. ಆ ಮೂಲಕ ಎದುರಾಳಿ ನಮೀಬಿಯಾ ತಂಡಕ್ಕೆ 200 ರನ್‌ಗಳ ಸವಾಲಿನ ಗುರಿಯನ್ನು ನೀಡಿತ್ತು. ಪಾಕ್‌ ಪರ ಬ್ಯಾಟಿಂಗ್‌ನಲ್ಲಿ ಗಮನ ಸೆಳೆದ ಸಾಹಿಬ್‌ಝಾದ ಫರ್ಹಾನ್‌ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಎರಡನೇ ಶತಕವನ್ನು ಬಾರಿಸಿದರು. ಆ ಮೂಲಕ ಪಾಕ್‌ ದೊಡ್ಡ ಮೊತ್ತವನ್ನು ಕಲೆ ಹಾಕುವಲ್ಲಿ ನೆರವು ನೀಡಿದರು.



ಸಾಹಿಬ್‌ಝಾದ ಫರ್ಹಾನ್‌ ಭರ್ಜರಿ ಶತಕ

ಪಾಕಿಸ್ತಾನ ತಂಡದ ಪರ ಇನಿಂಗ್ಸ್‌ ಆರಂಭಿಸಿದ ಸಾಹಿಬ್‌ಝಾದ ಫರ್ಹಾನ್‌ ಅವರು ಕೊನೆಯವರೆಗೂ ಕ್ರೀಸ್‌ನಲ್ಲಿ ಅಜೇಯರಾಗಿ ಉಳಿದು ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದರು. ಮತ್ತೊಂದು ಆರಂಭಿಕ ಸೈಯಮ್‌ ಆಯುಬ್‌ ಬಹುಬೇಗ ಔಟ್‌ ಆದರು. ಬಳಿಕ ಎರಡನೇ ವಿಕೆಟ್‌ಗೆ ಸಲ್ಮಾನ್‌ ಆಘಾ ಹಾಗೂ ಫರ್ಹಾನ್‌ 42 ಎಸೆತಗಳ್ಲಿ 67 ರನ್‌ಗಳ ಜೊತೆಯಾಟವನ್ನು ಆಡಿದರು. 23 ಎಸೆತಗಳಲ್ಲಿ 38 ರನ್‌ ಗಳಿಸಿದ ಬಳಿಕ ನಾಯಕ ಆಘಾ ಸುಲಭ ಕ್ಯಾಚ್‌ ಕೊಟ್ಟು ಔಟ್‌ ಆದರು. ಆದರೆ, ಕೊನೆಯವರೆಗೂ ಸ್ಪೋಟಕ ಬ್ಯಾಟ್‌ ಮಾಡಿದ ಫರ್ಹಾನ್‌, 58 ಎಸೆತಗಳಲ್ಲಿ 4 ಸಿಕ್ಸರ್‌ ಹಾಗೂ 11 ಬೌಂಡರಿಗಳೊಂದಿಗೆ ಅಜೇಯ 100 ರನ್‌ ಗಳಿಸಿದರು. ಆ ಮೂಲಕ ಪಾಕ್‌ಗೆ 200 ರನ್‌ ತಲುಪಲು ನೆರವು ನೀಡಿದರು.



ಫರ್ಹಾನ್‌-ಶದಾಬ್‌ 81 ರನ್‌ ಜೊತೆಯಾಟ

ಸಾಹಿಬ್‌ಝಾದ ಹಾಗೂ ಶದಾಬ್‌ ಖಾನ್‌ ಅವರು ನಾಲ್ಕನೇ ವಿಕೆಟ್‌ಗೆ ದೊಡ್ಡ ಜೊತೆಯಾಟವನ್ನು ಆಡಿದರು. ಈ ಜೋಡಿ ಸ್ಪೋಟಕ ಬ್ಯಾಟ್‌ ಮಾಡಿ 40 ಎಸೆತಗಳಲ್ಲಿ 81 ರನ್‌ಗಳ ಜೊತೆಯಾಟವನ್ನು ಆಡಿದರು. ಶದಾಬ್‌ ಖಾನ್‌ ಕೇವಲ 22ಎಸೆತಗಳಲ್ಲಿ 36 ರನ್‌ಗಳನ್ನು ಬಾರಿಸಿದರು.