ಕೊಲಂಬೊ: ಇಲ್ಲಿನ ಸಿಂಹಳೀಸ್ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ (IND vs SL) ನಾಲ್ಕನೇ ದಿನವೂ ಭಾರತ ತಂಡ, ಎದುರಾಳಿ ಶ್ರೀಲಂಕಾ ಎದುರು ಮೇಲುಗೈ ಸಾಧಿಸಿದೆ. ಪಸಿಂದು ಸೂರ್ಯಬಂದಾರ (Pasindu Bandara) ಹಾಗೂ ಕಮಿಂದು ಮೆಂಡಿಸ್ ಅವರ ಅರ್ಧಶತಕಗಳ ಹೊರತಾಗಿಯೂ ಭಾರತೀಯ ಬೌಲರ್‌ಗಳ ಶಿಸ್ತುಬದ್ದ ಬೌಲಿಂಗ್ ದಾಳಿಗೆ ನಲುಗಿದ ಶ್ರೀಲಂಕಾ ತಂಡ ಸೋಲಿನ ಸುಳಿಯಲ್ಲಿ ಸಿಲುಕಿದೆ. ಆದರೆ, ಭಾರತ ತಂಡ ಎರಡನೇ ಟೆಸ್ಟ್ ಗೆಲುವಿನ ಸನಿಹಕ್ಕೆ ಬಂದಿದ್ದು, ಟೆಸ್ಟ್ ಸರಣಿಯನ್ನು 2-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿಕೊಳ್ಳುವುದನ್ನು ಖಚಿತಪಡಿಸಿಕೊಂಡಿದೆ.
ಪಂದ್ಯದ ನಾಲ್ಲನೇ ದಿನವಾದ ಬುಧವಾರ ಬೆಳಿಗ್ಗೆ 8 ವಿಕೆಟ್‌ಗಳ ನಷ್ಟಕ್ಕೆ 265 ರನ್‌ಗಳಿಂದ ಪ್ರಥಮ ಇನಿಂಗ್ಸ್ ಅನ್ನು ಮುಂದುವರಿಸಿದ ಶ್ರೀಲಂಕಾ ತಂಡ, 89.4 ಓವರ್‌ಗಳಿಗೆ 290 ರನ್‌ಗಳಿಗೆ ಆಲ್‌ಔಟ್ ಆಯಿತು. ಆ ಮೂಲಕ ಪ್ರಥಮ ಇನಿಂಗ್ಸ್‌ನಲ್ಲಿ 213 ರನ್‌ಗಳ ಭಾರಿ ಹಿನ್ನಡೆಯ ಪರಿಣಾಮ ಆತಿಥೇಯ ಶ್ರೀಲಂಕಾ ತಂಡ ಫಾಲೋ ಆನ್‌ಗೆ ಒಳಗಾಗಿ, ದ್ವಿತೀಯ ಇನಿಂಗ್ಸ್ ಆರಂಭಿಸಬೇಕಾದ ಪರಿಸ್ಥಿತಿಗೆ ಒಳಗಾಯಿತು. ಶ್ರೀಲಂಕಾ ಪರ ಪ್ರಥಮ ಇನಿಂಗ್ಸ್‌ನಲ್ಲಿ ಪಸಿಂದು ಸೂರ್ಯಬಂದಾರ 80 ರನ್ ಹಾಗೂ ಸೋನಲ್ ದಿನುಷಾ 103 ರನ್‌ಗಳನ್ನು ಗಳಿಸಿದರು. ಭಾರತದ ಪರ ಪ್ರಸಿಧ್ ಕೃಷ್ಣ ಹಾಗೂ ಮಾನವ್ ಸುತಾರ್ ತಲಾ ಮೂರು ವಿಕೆಟ್‌ಗಳನ್ನು ಕಬಳಿಸಿದರು.
IND vs SL: ಕೊಲಂಬೊದಲ್ಲಿ ಶತಕದ ಯಶಸ್ಸಿಗೆ ಕಾರಣರಾದ ಆಟಗಾರನನ್ನು ಹೆಸರಿಸಿದ ಧ್ರುವ್ ಜುರೆಲ್!
ನಾಲ್ಕನೇ ದಿನವೇ ದ್ವಿತೀಯ ಇನಿಂಗ್ಸ್ ಆರಂಭಿಸಿದ ಶ್ರೀಲಂಕಾ ತಂಡದ ಇನಿಂಗ್ಸ್ ಆರಂಭಿಸಿದ ಲಹಿರು ಉದಾರ ಕೇವಲ ಮೂರು ರನ್ ಗಳಿಸಿ ಮೊಹಮ್ಮದ್ ಸಿರಾಜ್‌ಗೆ ವಿಕೆಟ್ ಒಪ್ಪಿಸಿದರು. ಬಳಿಕ ಎರಡನೇ ವಿಕೆಟ್‌ಗೆ ಜೊತೆಯಾದ ಕಮಿಲ್ ಮಿಶಾರ ಹಾಗೂ ಪಸಿಂದು ಸೂರ್ಯಬಂದಾರ 58 ರನ್‌ಗಳ ಜೊತೆಯಾಟವನ್ನು ಆಡಿದರು. 39 ಎಸೆತಗಳಲ್ಲಿ 32 ರನ್ ಗಳಿಸಿ ಸಿಕ್ಕಿದ್ದ ಉತ್ತಮ ಆರಂಭದಲ್ಲಿ ದೊಡ್ಡ ಇನಿಂಗ್ಸ್ ಆಡುವಲ್ಲಿ ಕಮಿಲ್ ವಿಫಲರಾದರು. ಇವರನ್ನು ರವೀಂದ್ರ ಜಡೇಜಾ ಔಟ್ ಮಾಡಿದರು.
ಪಸಿಂದು-ಮೆಂಡಿಸ್ ಶತಕದ ಜೊತೆಯಾಟ
ಮೂರನೇ ವಿಕೆಟ್‌ಗೆ ಜೊತೆಯಾದ ಪಸಿಂದು ಸೂರ್ಯಬಂದಾರ ಹಾಗೂ ಕಮಿಂದು ಮೆಂಡಿಸ್ ಅವರು ನಾಲ್ಕನೇ ದಿನ ಭಾರತೀಯ ಬೌಲರ್‌ಗಳನ್ನು ದೀರ್ಘಾವಧಿ ಕಾಡಿದರು. ಈ ಇಬ್ಬರೂ 170 ಎಸೆತಗಳಲ್ಲಿ 115 ರನ್‌ಗಳ ಜೊತೆಯಾಟವನ್ನು ಆಡಿ ಶ್ರೀಲಂಕಾ ತಂಡವನ್ನು ಉತ್ತಮ ಹಾದಿಯಲ್ಲಿ ತಂದಿರಿಸಿದ್ದರು. ಕಮಿಂದು ಮೆಂಡಿಸ್ ಮಧ್ಯಮ ಕ್ರಮಾಂಕದಲ್ಲಿ ಜವಾಬ್ದಾರಿಯುತ ಇನಿಂಗ್ಸ್ ಆಡಿದರು. ಅವರು ಆಡಿದ 92 ಎಸೆತಗಳಲ್ಲಿ 55 ರನ್ ಗಳಿಸಿದ್ದ ವೇಳೆ ಅವರನ್ನು ಪ್ರಸಿಧ್ ಕೃಷ್ಣ ಔಟ್ ಮಾಡಿದರು. ಆ ಮೂಲಕ ದೊಡ್ಡ ಜೊತೆಯಾಟವನ್ನು ಮುರಿಯುವಲ್ಲಿ ಯಶಸ್ವಿಯಾದರು.
ಶತಕ ವಂಚಿತ ಸೂರ್ಯಬಂದಾರ
ಪ್ರಥಮ ಇನಿಂಗ್ಸ್‌ನಂತೆ ದ್ವಿತೀಯ ಇನಿಂಗ್ಸ್‌ನಲ್ಲಿಯೂ ಅದ್ಭುತವಾಗಿ ಬ್ಯಾಟ್ ಮಾಡಿದ ಪಸಿಂದು ಸೂರ್ಯಬಂದಾರ ಭಾರತೀಯ ಬೌಲರ್‌ಗಳನ್ನು ದೀರ್ಘಾವಧಿ ಕಾಡಿದರು. ಅವರು ಆಡಿದ 173 ಎಸೆತಗಳಲ್ಲಿ ಒಂದು ಸಿಕ್ಸರ್ ಹಾಗೂ 10 ಬೌಂಡರಿಗಳೊಂದಿಗೆ 92 ರನ್‌ಗಳನ್ನು ಗಳಿಸಿ ಇನ್ನೇನು ಶತಕ ಪೂರ್ಣಗೊಳಿಸುವ ಸನಿಹದಲ್ಲಿ ಮಾನವ್ ಸುತಾರ್ ಎಸೆತದಲ್ಲಿ ಮುಂದೆ ಬಂದು ಆಡಲು ಪ್ರಯತ್ನಿಸಿ ಸ್ಟಂಪ್ ಔಟ್ ಆದರು. ಅಂತಿಮವಾಗಿ ಅವರು 8 ರನ್‌ಗಳಿಂದ ಶತಕ ವಂಚಿತರಾದರು. ನಾಯಕ ಧನಂಜಯ್ ಡಿ ಸಿಲ್ವಾ 23 ರನ್‌ಗಳಿಗೆ ಸೀಮಿತರಾದರು.
ಐಸಿಸಿ ಟೆಸ್ಟ್ ಶ್ರೇಯಾಂಕ; ಅಗ್ರಸ್ಥಾನ ಕಳೆದುಕೊಂಡ ಜಸ್‌ಪ್ರೀತ್ ಬುಮ್ರಾ
ಶ್ರೀಲಂಕಾ ತಂಡಕ್ಕೆ ಅಲ್ಪ ಮುನ್ನಡೆ
ಪ್ರಥಮ ಇನಿಂಗ್ಸ್‌ನಲ್ಲಿ ಶತಕ ಸಿಡಿಸಿದ್ದ ಸೋನಲ್ ದಿನುಷ (7* ರನ್) ಹಾಗೂ ಕೇಶಾರ ನುವಾಂತ (3* ರನ್) ಅವರು ನಾಲ್ಕನೇ ದಿನದಾಟದ ಅಂತ್ಯಕ್ಕೆ ಅಜೇಯರಾಗಿ ಉಳಿದಿದ್ದು, ಐದನೇ ದಿನ ಬ್ಯಾಟಿಂಗ್‌ಗೆ ಮರಳಲಿದ್ದಾರೆ. ಇನ್ನೂ ಶ್ರೀಲಂಕಾ ತಂಡ ಮಳೆ ಬಂದು ದಿನದಾಟವನ್ನು ನಿಲ್ಲಿಸುವ ಹೊತ್ತಿಗೆ 72.4 ಓವರ್‌ಗಳಿಗೆ 6 ವಿಕೆಟ್‌ಗಳ ನಷ್ಟಕ್ಕೆ 229 ರನ್‌ಗಳನ್ನು ಗಳಿಸಿದೆ ಹಾಗೂ 16 ರನ್‌ಗಳ ಮುನ್ನಡೆ ಪಡೆದಿದೆ. ಭಾರತದ ಪರ ಮಾನವ್ ಸುತಾರ್ ಎರಡು ವಿಕೆಟ್ ಕಿತ್ತರೆ, ಇನ್ನುಳಿದ ಬೌಲರ್‌ಗಳು ತಲಾ ಒಂದೊಂದ ವಿಕೆಟ್ ಪಡೆದಿದ್ದಾರೆ.
ಭಾರತದ ಐದನೇ ದಿನ ಪ್ಲ್ಯಾನ್ ಏನು?
ಅಂದ ಹಾಗೆ ಭಾರತ ತಂಡ ಐದನೇ ದಿನವಾದ ಗುರುವಾರ ಮೊದಲನೇ ಸೆಷನ್‌ನಲ್ಲಿ ಇನ್‌ಫಾರ್ಮ್ ಬ್ಯಾಟರ್ ಸೋನಲ್ ದಿನುಷಾ ಅವರನ್ನು ಬಹುಬೇಗ ಔಟ್ ಮಾಡಿದರೆ, ಕಡಿಮೆ ಗುರಿಯೊಂದಿಗೆ ಪಂದ್ಯವನ್ನು ಗೆದ್ದು ಟೆಸ್ಟ್ ಸರಣಿಯನ್ನು 2-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿಕೊಳ್ಳಲಿದೆ. ಆ ಮೂಲಕ ಭಾರತ ತಂಡ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ರೇಸ್‌ನಲ್ಲಿ ಉಳಿಯಲಿದೆ.