ರಾಯ್ಪುರ: ಇಲ್ಲಿನ ಸಹೀದ್ ವೀರ್ ನಾರಾಯಣ್ ಇಂಟರ್‌ನ್ಯಾಷನಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಇದೀಗ ನಡೆಯುತ್ತಿರುವ ಎರಡನೇ ಟಿ20ಐ ಪಂದ್ಯದಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ (IND vs NZ) ತಂಡಗಳು ಕಾದಾಟ ನಡೆಸುತ್ತಿವೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ (Suryakumar Yadav) ಮೊದಲು ಬೌಲಿಂಗ್ ಆಯ್ದುಕೊಂಡಿದ್ದಾರೆ. ಇದರೊಂದಿಗೆ ಪ್ರವಾಸಿ ನ್ಯೂಜಿಲೆಂಡ್ (New zealand) ತಂಡ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡುತ್ತಿದೆ.
ಭಾರತ ತಂಡ ಈಗಾಗಲೇ ಮೊದಲನೇ ಟಿ20ಐ ಪಂದ್ಯದಲ್ಲಿ ಭರ್ಜರಿ ಗೆಲುವು ಪಡೆದಿತ್ತು. ಆ ಮೂಲಕ ಈ ಸರಣಿಯಲ್ಲಿ ಇದೀಗ 1-0 ಮುನ್ನಡೆಯನ್ನು ಪಡದಿದೆ. ಇದೀಗ ಎರಡನೇ ಪಂದ್ಯದಲ್ಲಿಯೂ ಗೆದ್ದು ಸರಣಿಯಲ್ಲಿ ಮುನ್ನಡೆ ಸಾಧಿಸಲು ಆತಿಥೇಯರು ಎದುರು ನೋಡುತ್ತಿದ್ದಾರೆ. ಅಂದ ಹಾಗೆ ಈ ಪಂದ್ಯದಲ್ಲಿ ಭಾರತ ತಂಡದ ಪ್ಲೇಯಿಂಗ್ XIನಲ್ಲಿ ಎರಡು ಬದಲಾವಣೆಯನ್ನು ತರಲಾಗಿದೆ. ಅಕ್ಷರ್ ಪಟೇಲ್ ಗಾಯದ ಕಾರಣ ವಿಶ್ರಾಂತಿ ಪಡೆದರೆ, ವೇಗದ ಬೌಲರ್ ಜಸ್‌ಪ್ರೀತ್ ಬುಮ್ರಾಗೆ ರೆಸ್ಟ್ ನೀಡಲಾಗಿದೆ. ಈ ಇಬ್ಬರ ಸ್ಥಾನಕ್ಕೆ ಕ್ರಮವಾಗಿ ಕುಲ್ದೀಪ್ ಯಾದವ್ ಮತ್ತು ಹರ್ಷಿತ್ ರಾಣಾ ಬಂದಿದ್ದಾರೆಂದು ನಾಯಕ ಸೂರ್ಯಕುಮಾರ್ ಯಾದವ್ ಟಾಸ್ ವೇಳೆ ತಿಳಿಸಿದ್ದಾರೆ.
T20 World Cup 2026: ನ್ಯೂಜಿಲೆಂಡ್ ತಂಡದ ಗಾಯಾಳು ಆಡಂ ಮಿಲ್ನೆ ಸ್ಥಾನಕ್ಕೆ ಕೈಲ್ ಜೇಮಿಸನ್ ಸೇರ್ಪಡೆ!
ಇನ್ನು ಪ್ರವಾಸಿ ನ್ಯೂಜಿಲೆಂಡ್ ತಂಡದ ಪ್ಲೇಯಿಂಗ್ XIನಲ್ಲಿ ಮೂರು ಬದಲಾವಣೆಯನ್ನು ತರಲಾಗಿದೆ. ಕೈಲ್ ಜೇಮಿಸನ್ ಸ್ಥಾನಕ್ಕೆ ಮ್ಯಾಟ್ ಹೆನ್ರಿ, ಕ್ರಿಸ್ಟಿಯನ್ ಕ್ಲಾರ್ಕ್ ಸ್ಥಾನಕ್ಕೆ ಝ್ಯಾಕ್ ಫೌಲ್ಕ್ಸ್ ಹಾಗೂ ರಾಬಿನ್ಸನ್ ಸ್ಥಾನಕ್ಕೆ ಟಿಮ್ ಸೀಫರ್ಟ್ ಬಂದಿದ್ದಾರೆ. ಈ ಬಗ್ಗೆ ಕಿವೀಸ್ ನಾಯಕ ಮಿಚೆಲ್ ಸ್ಯಾಂಟ್ನರ್ ಟಾಸ್ ವೇಳೆ ಮಾಹಿತಿ ನೀಡಿದ್ದಾರೆ.
ಉಭಯ ತಂಡಗಳ ಪ್ಲೇಯಿಂಗ್ XI
ಭಾರತ: ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್ (ನಾಯಕ), ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ರಿಂಕು ಸಿಂಗ್, ಹರ್ಷಿತ್ ರಾಣಾ, ಅರ್ಷದೀಪ್ ಸಿಂಗ್, ಕುಲ್ದೀಪ್ ಯಾದವ್, ವರುಣ್ ಚಕ್ರವರ್ತಿ
ನ್ಯೂಜಿಲೆಂಡ್: ಡೆವೋನ್ ಕಾನ್ವೆ, ಟಿಮ್ ಸೀಫರ್ಟ್ (ವಿಕೆಟ್ ಕೀಪರ್), ರಚಿನ್ ರವೀಂದ್ರ, ಗ್ಲೆನ್ ಫಿಲಿಪ್ಸ್, ಮಾರ್ಕ್ ಚಾಪ್ಮನ್, ಡ್ಯಾರಿಲ್ ಮಿಚೆಲ್, ಮಿಚೆಲ್ ಸ್ಯಾಂಟ್ನರ್ (ನಾಯಕ), ಝ್ಯಾಕರಿ ಫೌಲ್ಕ್ಸ್, ಮ್ಯಾಟ್ ಹೆನ್ರಿ, ಇಶ್ ಸೋಧಿ, ಜಾಕೋಬ್ ಡಫಿ
ಮೊದಲನೇ ಪಂದ್ಯ ಗೆದ್ದಿದ್ದ ಭಾರತ
ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆದಿದ್ದ ಮೊದಲನೇ ಟಿ20ಐ ಪಂದ್ಯದಲ್ಲಿ ಭಾರತ ತಂಡ 48 ರನ್‌ಗಳ ಗೆಲುವು ಪಡೆದಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಟೀಮ್ ಇಂಡಿಯಾ, 238 ರನ್‌ಗಳನ್ನು ಕಲೆ ಹಾಕಿತ್ತು. ಭಾರತದ ಪರ ಅಭಿಷೇಕ್ ಶರ್ಮಾ 84 ರನ್ ಸಿಡಿಸಿದ್ದರು ಹಾಗೂ ರಿಂಕು ಸಿಂಗ್ ಡೆತ್ ಓವರ್‌ಗಳಲ್ಲಿ ಅಬ್ಬರಿಸಿದ್ದರು. ಬಳಿಕ ಗುರಿಯನ್ನು ಹಿಂಬಾಲಿಸಿದ್ದ ನ್ಯೂಜಿಲೆಂಡ್ ತಂಡ ಕೂಡ ಕಠಿಣ ಹೋರಾಟವನ್ನು ನಡೆಸಿತ್ತಾದರೂ 190 ರನ್‌ಗಳಿಗೆ ಸೀಮಿತವಾಗಿತ್ತು. ಇದೀಗ ಟಿ20ಐ ಸರಣಿಯಲ್ಲಿ ಟೀಮ್ ಇಂಡಿಯಾ 1-0 ಮುನ್ನಡೆ ಪಡೆದಿದೆ.