ನವದೆಹಲಿ: ನ್ಯೂಜಿಲೆಂಡ್ ವಿರುದ್ಧ ಮೂರನೇ ಪಂದ್ಯವನ್ನು (IND vs NZ) ಸೋಲುವ ಮೂಲಕ ಭಾರತ ತಂಡ, ಏಕದಿನ ಸಣಿಯನ್ನು 1-2 ಅಂತರದಲ್ಲಿ ಸೋಲು ಅನುಭವಿಸಿತು. ಇದರಿಂದಾಗಿ ಹೆಡ್ ಕೋಚ್ ಗೌತಮ್ ಗಂಭೀರ್ ಟೀಕೆಗಳಿಗೆ ಗುರಿಯಾಗಿದ್ದಾರೆ. ಮೂರನೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ (Virat Kohli) ಬಿಟ್ಟರೆ, ಇನ್ನುಳಿದ ಹಿರಿಯ ಬ್ಯಾಟ್ಸ್‌ಮನ್‌ಗಳು ವಿಫಲರಾಗಿದ್ದರು. ಇದು ಟೀಮ್ ಮ್ಯಾನೇಜ್‌ಮೆಂಟ್‌ಗೆ ತಲೆ ಬಿಸಿ ಉಂಟು ಮಾಡಿದೆ. 2027ರ ಐಸಿಸಿ ಏಕದಿನ ವಿಶ್ವಕಪ್ (ICC ODI World Cup 2027) ಟೂರ್ನಿಗೆ ಇನ್ನು ಕೇವಲ ಒಂದು ವರ್ಷ ಮಾತ್ರ ಬಾಕಿ ಇದೆ. ಹಾಗಾಗಿ ಭಾರತ ತಂಡ ಮೂರೂ ವಿಭಾಗದಲ್ಲಿ ತನ್ನ ಆಟಗಾರರನ್ನು ಸಜ್ಜುಗೊಳಿಸಬೇಕಾದ ಅಗತ್ಯವಿದೆ. ಆದರೆ, ಕಿವೀಸ್ ವಿರುದ್ಧದ ಸೋಲಿನಿಂದ ಟೀಮ್ ಇಂಡಿಯಾ ಎಚ್ಚೆತ್ತುಕೊಳ್ಳಬೇಕಾಗಿದೆ.
ಈ ಬಾರಿ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯು ದಕ್ಷಿಣ ಆಫ್ರಿಕಾ, ನಮೀಬಿಯಾ ಹಾಗೂ ಜಿಂಬಾಬ್ವೆ ಜಂಟಿ ಆತಿಥ್ಯದಲ್ಲಿ ನಡೆಯಲಿದೆ. ದಕ್ಷಿಣ ಆಫ್ರಿಕಾದಲ್ಲಿ ಪಿಚ್‌ಗಳು ಬೌನ್ಸ್ ಅನ್ನು ಹೊಂದಿದೆ. ಇದಕ್ಕೆ ತಕ್ಕಂತೆ ಭಾರತ ತಂಡದಲ್ಲಿ ಅದ್ಭುತ ಬ್ಯಾಟಿಂಗ್ ಲೈನ್‌ಅಪ್ ಇದೆ. ಶುಭಮನ್ ಗಿಲ್ ಜೊತೆ ರೋಹಿತ್ ಶರ್ಮಾ ಇನಿಂಗ್ಸ್ ಆರಂಭಿಸಲಿದ್ದಾರೆ. ಮೂರನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಆಡಲಿದ್ದಾರೆ. ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಕೊಹ್ಲಿ ಮತ್ತು ರೋಹಿತ್ ತಮ್ಮ ವೃತ್ತಿ ಜೀವನದ ಕೊನೆಯ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಲಿದ್ದಾರೆ. ಹಾಗಾಗಿ ಇವರು ಭಾರತಕ್ಕೆ ಏಕದಿನ ವಿಶ್ವಕಪ್ ಗೆದ್ದುಕೊಟ್ಟು ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನವನ್ನು ಮುಗಿಸಲು ಎದುರು ನೋಡುತ್ತಿದ್ದಾರೆ.
IND vs NZ: ವಿರಾಟ್ ಕೊಹ್ಲಿ ಅಲ್ಲ, ನಾವು ಟಾರ್ಗೆಟ್ ಮಾಡಿದ್ದು ಈ ಆಟಗಾರನನ್ನು ಎಂದ ಡ್ಯಾರಿಲ್ ಮಿಚೆಲ್!
ನಾಲ್ಕು ಹಾಗೂ ಐದನೇ ಕ್ರಮಾಂಕದಲ್ಲಿ ಕ್ರಮವಾಗಿ ಶ್ರೇಯಸ್ ಅಯ್ಯರ್ ಹಾಗೂ ಕೆಎಲ್ ರಾಹುಲ್ ಆಡಲಿದ್ದಾರೆ. ರವೀಂದ್ರ ಜಡೇಜಾ ಬದಲು ಅಕ್ಷರ್ ಪಟೇಲ್ ಅವರನ್ನು ಸ್ಪಿನ್ ಆಲ್‌ರೌಂಡರ್ ಆಗಿ ಆಡಿಸಬಹುದು. ಇದರಿಂದ ತಂಡದ ಬ್ಯಾಟಿಂಗ್ ಡೆಪ್ತ್ ಹೆಚ್ಚಾಗಲಿದೆ. ರವೀಂದ್ರ ಜಡೇಜಾ ಅವರು ಏಕದಿನ ಕ್ರಿಕೆಟ್‌ನಲ್ಲಿ ಸತತ ವೈಫಲ್ಯ ಅನುಭವಿಸುತ್ತಿದ್ದಾರೆ. ಇದರು ಅಕ್ಷರ್ ಪಟೇಲ್‌ಗೆ ಲಾಭವಾಗಬಹುದು. ಇನ್ನು ಸೀಮ್ ಬೌಲಿಂಗ್ ಆಲ್‌ರೌಂಡರ್ ಆಗಿ ಹಾರ್ದಿಕ್ ಪಾಂಡ್ಯ ಆಡಬಹುದು.
ʻಯಂಗ್ ಕ್ರಿಕೆಟರ್‌ಗಳಿಗೆ ಇದು ದೊಡ್ಡ ಪಾಠʼ: ವಿರಾಟ್ ಕೊಹ್ಲಿ ಬ್ಯಾಟಿಂಗ್‌ಗೆ ಸುನೀಲ್ ಗವಾಸ್ಕರ್ ಮೆಚ್ಚುಗೆ!
ಮೊಹಮ್ಮದ್ ಶಮಿಗೆ ಅವಕಾಶ
ಭಾರತ ತಂಡಕ್ಕೆ ನಾಲ್ವರು ಪ್ರಮುಖ ವೇಗಿಗಳು ಆಡಬೇಕಾದ ಅಗತ್ಯವಿದೆ. ಜಸ್‌ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ ಅವರ ಜೊತೆಗೆ ಅರ್ಷದೀಪ್ ಸಿಂಗ್ ಹಾಗೂ ಹರ್ಷಿತ್ ರಾಣಾ ಅವರನ್ನು ಆಡಿಸಬಹುದು. ವೇಗದ ಬೌಲಿಂಗ್ ಆಲ್‌ರೌಂಡರ್ ಆಗಿ ಹಾರ್ದಿಕ್ ಆಡಿದರೆ, ನಿತೀಶ್ ಕುಮಾರ್ ರೆಡ್ಡಿ ಬ್ಯಾಕ್ ಅಪ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಸ್ಪಿನ್ನರ್‌ಗಳಾಗಿ ಕುಲ್ದೀಪ್ ಯಾದವ್ ಹಾಗೂ ಅಕ್ಷರ್ ಪಟೇಲ್ ಕಾಣಿಸಿಕೊಂಡರೆ, ವಾಷಿಂಗ್ಟನ್ ಸುಂದರ್ ಬ್ಯಾಕ್ ಆಪ್ ಆಗಿ ಇರಲಿದ್ದಾರೆ.
2027ರ ಐಸಿಸಿ ಏಕದಿನ ವಿಶ್ವಕಪ್‌ಗೆ ಭಾರತ ಸಂಭಾವ್ಯ ಆಟಗಾರರ ತಂಡ: ರೋಹಿತ್ ಶರ್ಮಾ, ಶುಭಮನ್ ಗಿಲ್ (ನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಹರ್ಷಿತ್ ರಾಣಾ, ಮೊಹಮ್ಮದ್ ಶಮಿ, ಜಸ್‌ಪ್ರೀತ್ ಬುಮ್ರಾ, ಕುಲ್‌ದೀಪ್ ಯಾದವ್, ಅರ್ಷದೀಪ್ ಸಿಂಗ್, ರಿಷಬ್ ಪಂತ್ (ವಿಕೆಟ್ ಕೀಪರ್), ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್ ರೆಡ್ಡಿ.