ಗುವಾಹಟಿ: ಸತತ ಎರಡು ಪಂದ್ಯಗಳನ್ನು ಆರಾಮದಾಯಕವಾಗಿ ಗೆದ್ದಿರುವ ಭಾರತ ತಂಡ, ಇದೀಗ ಜನವರಿ 25 ರಂದು ಇಲ್ಲಿನ ಬರ್ಸಪರ ಕ್ರೀಡಾಂಗಣದಲ್ಲಿ ನಡಯುವ ಮೂರನೇ ಪಂದ್ಯಕ್ಕೆ (IND vs NZ) ಸಜ್ಜಾಗುತ್ತಿದೆ. ಈ ಪಂದ್ಯವನ್ನೂ ಗೆದ್ದು ಟಿ20ಐ ಸರಣಿಯನ್ನು 3-0 ಅಂತರದಲ್ಲಿ ವಶಪಡಿಸಿಕೊಳ್ಳಲು ಸೂರ್ಯಕುಮಾರ್ ಯಾದವ್ (Suryakumar Yadav) ನಾಯಕತ್ವದ ಟೀಮ್ ಇಂಡಿಯಾ ಎದುರು ನೋಡುತ್ತಿದೆ. ಇದರೊಂದಿಗೆ 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ವಿಶ್ವಾಸವನ್ನು ಹೆಚ್ಚಿಸಿಕೊಳ್ಳುವ ಗುರಿಯನ್ನು ಆತಿಥೇಯರು ಹೊಂದಿದ್ದಾರೆ. ಮತ್ತೊಂದು ಕಡೆ ಐದು ಪಂದ್ಯಗಳ ಟಿ20ಐ ಸರಣಿಯನ್ನು ಜೀವಂತವಾಗಿ ಉಳಿಸಿಕೊಳ್ಳಬೇಕೆಂದರೆ ಪ್ರವಾಸಿ ಕಿವೀಸ್ (New Zealand) ತಂಡಕ್ಕೆ ಗುವಾಹಟಿಯಲ್ಲಿ ಗೆಲುವು ಅನಿವಾರ್ಯ. ಹಾಗಾಗಿ ಮೂರನೇ ಪಂದ್ಯದಲ್ಲಿ ಉಭಯ ತಂಡಗಳಿಂದ ತೀವ್ರ ಪೈಪೋಟಿಯನ್ನು ನಿರೀಕ್ಷೆ ಮಾಡಬಹುದು.
ರಾಯ್ಪುರದಲ್ಲಿ ನಡೆದಿದ್ದ ಎರಡನೇ ಟಿ20ಐ ಪಂದ್ಯದಲ್ಲಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ್ದ ಇಶಾನ್ ಕಿಶನ್ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಸಂಜು ಸತತ ಎರಡೂ ಪಂದ್ಯಗಳಲ್ಲಿ ವೈಫಲ್ಯ ಅನುಭವಿಸಿ ಒತ್ತಡಕ್ಕೆ ಒಳಗಾಗಿದ್ದಾರೆ. ಇವರು ಮೂರನೇ ಪಂದ್ಯದಲ್ಲಿ ದೊಡ್ಡ ಮೊತ್ತವನ್ನು ಕಲೆ ಹಾಕಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಬೇಕಾದ ಅಗತ್ಯವಿದೆ. ಮೊದಲನೇ ಪಂದ್ಯದಲ್ಲಿ 84 ರನ್ ಸಿಡಿಸಿದ್ದ ಕಾರಣ ಅಭಿಷೇಕ್ ಶರ್ಮಾ ಮೇಲೆ ಯಾವುದೇ ಒತ್ತಡವಿಲ್ಲ. ಆದರೂ ಸಂಜು ಹಾಗೂ ಅಭಿ ಇನಿಂಗ್ಸ್ ಆರಂಭಿಸಲಿದ್ದಾರೆ.
IND vs NZ 3rd T20: ಮೂರನೇ ಪಂದ್ಯದ ಪಿಚ್ ರಿಪೋರ್ಟ್ ಹೇಗಿದೆ?
ಭಾರತ ತಂಡದ ಪರ ಮತ್ತೊಂದು ಸಿಹಿ ಸುದ್ದಿ ಏನೆಂದರೆ ನಾಯಕ ಸೂರ್ಯಕುಮಾರ್ ಯಾದವ್ ಅವರು ಎರಡನೇ ಪಂದ್ಯದಲ್ಲಿ ಸ್ಪೋಟಕ ಅರ್ಧಶತಕ ಬಾರಿಸಿರುವುದು. ಆ ಮೂಲಕ ಇವರು ಕೂಡ ಫಾರ್ಮ್‌ಗೆ ಮರಳಿದ್ದಾರೆ. ಟಿ20 ವಿಶ್ವಕಪ್‌ಗೂ ಮುನ್ನ ಭಾರತ ತಂಡದ ಬ್ಯಾಟಿಂಗ್ ವಿಭಾಗಕ್ಕೆ ಆನೆ ಬಲಬಂದಂತಾಗಿದೆ. ವೇಗದ ಬೌಲಿಂಗ್ ಆಲ್‌ರೌಂಡರ್‌ಗಳಾಗಿ ಹಾರ್ದಿಕ್ ಪಾಂಡ್ಯ ಹಾಗೂ ಶಿವಂ ದುಬೆ ಮುಂದುವರಿಯಲಿದ್ದಾರೆ. ರಿಂಕು ಸಿಂಗ್ ಮ್ಯಾಚ್ ಫಿನಿಷರ್ ಆಗಿ ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲಿದ್ದಾರೆ.
ಇನ್ನು ಸಂಪೂರ್ಣ ಫಿಟ್ ಇಲ್ಲದ ಕಾರಣ ಎರಡನೇ ಪಂದ್ಯಕ್ಕೆ ಉಪ ನಾಯಕ ಅಕ್ಷರ್ ಪಟೇಲ್ ಅಲಭ್ಯರಾಗಿದ್ದರು. ಇದೀಗ ಅವರು ಫಿಟ್ ಇದ್ದರೆ ಮೂರನೇ ಪಂದ್ಯದಲ್ಲಿ ಆಡುವ ಮೂಲಕ ಕುಲ್ದೀಪ್ ಯಾದವ್ ಅವರ ಸ್ಥಾನವನ್ನು ತುಂಬಬಹುದು. ಎರಡನೇ ಪಂದ್ಯಕ್ಕೆ ವಿಶ್ರಾಂತಿ ಪಡೆದಿದ್ದ ಜಸ್‌ಪ್ರೀತ್ ಬುಮ್ರಾ, ಮೂರನೇ ಪಂದ್ಯಕ್ಕೆ ಮರಳಲಿದ್ದಾರೆ. ಅವರು ಬಂದರೆ ಹರ್ಷಿತ್ ರಾಣಾ ತಮ್ಮ ಸ್ಥಾನವನ್ನು ಬಿಟ್ಟುಕೊಡಬೇಕಾಗುತ್ತದೆ. ಇನ್ನುಳಿದಂತೆ ಅರ್ಷದೀಪ್ ಸಿಂಗ್ ಹಾಗೂ ಪೂರ್ಣ ಪ್ರಮಾಣದ ಸ್ಪಿನ್ನರ್ ಆಗಿ ವರುಣ್ ಚಕ್ರವರ್ತಿ ಆಡಲಿದ್ದಾರೆ.
ʻನನಗೆ ಸ್ಟ್ರೈಕ್ ನೀಡಲಿಲ್ಲ, ತುಂಬಾ ಕೋಪ ಬಂದಿತ್ತುʼ: ಇಶಾನ್ ಕಿಶನ್ ಬಗ್ಗೆ ಸೂರ್ಯಕುಮಾರ್ ಹೇಳಿದ್ದಿದು!
ಮೂರನೇ ಟಿ20ಐ ಪಂದ್ಯಕ್ಕೆ ಭಾರತದ ಸಂಭಾವ್ಯ ಪ್ಲೇಯಿಂಗ್ XI
1.ಅಭಿಷೇಕ್ ಶರ್ಮಾ (ಓಪನರ್)
2.ಸಂಜು ಸ್ಯಾಮ್ಸನ್ (ಓಪನರ್, ವಿಕೆಟ್ ಕೀಪರ್)
3.ಇಶಾನ್ ಕಿಶನ್ (ಬ್ಯಾಟ್ಸ್‌ಮನ್)
4.ಸೂರ್ಯಕುಮಾರ್ ಯಾದವ್ (ನಾಯಕ, ಬ್ಯಾಟ್ಸ್‌ಮನ್)
5.ಹಾರ್ದಿಕ್ ಪಾಂಡ್ಯ (ವೇಗದ ಬೌಲಿಂಗ್ ಆಲ್‌ರೌಂಡರ್)
6.ಶಿವಂ ದುಬೆ (ವೇಗದ ಬೌಲಿಂಗ್ ಆಲ್‌ರೌಂಡರ್)
7.ರಿಂಕು ಸಿಂಗ್ (ಬ್ಯಾಟ್ಸ್‌ಮನ್)
8.ಅರ್ಷದೀಪ್ ಸಿಂಗ್/ ಕುಲ್ದೀಪ್ ಯಾದವ್ (ಸ್ಪಿನ್ ಆಲ್‌ರೌಂಡರ್, ಸ್ಪಿನ್ನರ್)
9.ಜಸ್‌ಪ್ರೀತ್ ಬುಮ್ರಾ/ಹರ್ಷಿತ್ ರಾಣಾ (ವೇಗದ ಬೌಲರ್)
10.ಅರ್ಷದೀಪ್ ಸಿಂಗ್ (ವೇಗದ ಬೌಲರ್)
11.ವರುಣ್ ಚಕ್ರವರ್ತಿ (ಸ್ಪಿನ್ನರ್)
IND vs NZ: ಇಶಾನ್ ಕಿಶನ್-ಸೂರ್ಯಕುಮಾರ್ ಅಬ್ಬರ, ಎರಡನೇ ಟಿ20ಐ ಗೆದ್ದ ಭಾರತ ತಂಡ!
ಪಂದ್ಯದ ವಿವರ
ಭಾರತ vs ನ್ಯೂಜಿಲೆಂಡ್
ಮೂರನೇ ಟಿ20ಐ ಪಂದ್ಯ
ದಿನಾಂಕ: ಜನವರಿ 25, 2026
ಸಮಯ: ಸಂಜೆ 07 ಗಂಟೆಗೆ
ಸ್ಥಳ: ಬರ್ಸಪರ ಸ್ಟೇಡಿಯಂ, ಗುವಾಹಟಿ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್
ಲೈವ್ ಸ್ಟ್ರೀಮಿಂಗ್: ಜಿಯೊ ಹಾಟ್‌ಸ್ಟಾರ್