ನವದೆಹಲಿ: ಪ್ರಸ್ತುತ ಜರುಗುತ್ತಿರುವ 2025-27ರ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ (WTC 2027 Final) ಫೈನಲ್ಗೆ ಅರ್ಹತೆ ಪಡೆಯಲು ಭಾರತ (India's WTC Final Scenario) ಸೇರಿದಂತೆ ನಾಲ್ಕು ತಂಡಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ಭಾರತ ತಂಡಗಳು ಫೈನಲ್ ಪ್ರವೇಶಿಸುವ ರೇಸ್ನಲ್ಲಿವೆ.
ಸದ್ಯ ಅಂಕಪಟ್ಟಿಯಲ್ಲಿ ನ್ಯೂಜಿಲೆಂಡ್ ತಂಡ ಶೇ.72.22ರ ಪಾಯಿಂಟ್ಸ್ ಸರಾಸರಿಯೊಂದಿಗೆ ಮೊದಲ ಸ್ಥಾನದಲ್ಲಿದೆ. ದಕ್ಷಿಣ ಆಫ್ರಿಕಾ ಶೇ.71.43ರೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾ ಶೇ.69.23ರೊಂದಿಗೆ ಮೂರನೇ ಸ್ಥಾನದಲ್ಲಿದೆ. ಭಾರತ ಶೇ.51.52ರೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ಆದರೆ, 2026ರ ಕೊನೆಯ ತಿಂಗಳುಗಳು ಹಾಗೂ 2027ರ ಆರಂಭದಲ್ಲಿ ನಡೆಯಲಿರುವ ಟೆಸ್ಟ್ ಸರಣಿಗಳ ಫಲಿತಾಂಶಗಳು ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ ತರಬಹುದು.
ದಕ್ಷಿಣ ಆಫ್ರಿಕಾ ವಿರುದ್ಧ ಮೊದಲನೇ ಟೆಸ್ಟ್ನಲ್ಲಿ ವಿಶ್ವ ದಾಖಲೆ ಬರೆದ ಲಿಟನ್ ದಾಸ್!
ಯಾವ ಸರಣಿಗಳು ನಿರ್ಣಾಯಕ?
ನವೆಂಬರ್ 19 ರಂದು ಆರಂಭವಾಗಲಿರುವ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿ ಡಬ್ಲ್ಯುಟಿಸಿ ಅಂಕಪಟ್ಟಿಯ ಮೇಲೆ ಮಹತ್ವದ ಪರಿಣಾಮ ಬೀರಲಿದೆ. ಮತ್ತೊಂದೆಡೆ, ಹಾಲಿ ಚಾಂಪಿಯನ್ ದಕ್ಷಿಣ ಆಫ್ರಿಕಾ ತಂಡ ಬಾಂಗ್ಲಾದೇಶ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಡುತ್ತಿದ್ದು, ಈ ಸರಣಿಯ ಫಲಿತಾಂಶವೂ ಅದರ ಸ್ಥಾನಮಾನದ ಮೇಲೆ ಪರಿಣಾಮ ಬೀರಲಿದೆ.
ಆಸ್ಟ್ರೇಲಿಯಾ ತಂಡ ಮುಂಬರುವ ತಿಂಗಳುಗಳಲ್ಲಿ ನ್ಯೂಜಿಲೆಂಡ್ ವಿರುದ್ಧ ನಾಲ್ಕು ಪಂದ್ಯಗಳ ಹಾಗೂ ಭಾರತ ವಿರುದ್ಧ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಸೆಣಸಲಿದೆ. ಈ ಎರಡೂ ಸರಣಿಗಳು ಅಂಕಪಟ್ಟಿಯ ಲೆಕ್ಕಾಚಾರವನ್ನು ಸಂಪೂರ್ಣವಾಗಿ ಬದಲಿಸುವ ಸಾಮರ್ಥ್ಯ ಹೊಂದಿವೆ.
ಇದರ ಜೊತೆಗೆ ನ್ಯೂಜಿಲೆಂಡ್ ತಂಡ ಶ್ರೀಲಂಕಾ ಮತ್ತು ಪಾಕಿಸ್ತಾನ ವಿರುದ್ಧ ತಲಾ ಎರಡು ಟೆಸ್ಟ್ ಪಂದ್ಯಗಳನ್ನು ಆಡಲಿದೆ. ದಕ್ಷಿಣ ಆಫ್ರಿಕಾ ತಂಡ ಇಂಗ್ಲೆಂಡ್ ವಿರುದ್ಧ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ತವರಿನಲ್ಲಿ ಆಡಲಿದ್ದು, ಬಳಿಕ ಶ್ರೀಲಂಕಾ ಪ್ರವಾಸ ಕೈಗೊಂಡು ಎರಡು ಪಂದ್ಯಗಳ ಸರಣಿಯಲ್ಲಿ ಭಾಗವಹಿಸಲಿದೆ. ಹೀಗಾಗಿ ಭಾರತ ಇನ್ನೂ ಏಳು ಟೆಸ್ಟ್ ಪಂದ್ಯಗಳನ್ನು ಆಡಬೇಕಿದೆ. ನ್ಯೂಜಿಲೆಂಡ್ಗೆ 10, ಆಸ್ಟ್ರೇಲಿಯಾಗೆ ಒಂಬತ್ತು ಹಾಗೂ ದಕ್ಷಿಣ ಆಫ್ರಿಕಾಗೆ ಏಳು ಪಂದ್ಯಗಳು ಬಾಕಿ ಉಳಿದಿವೆ.
ಭಾರತ ಫೈನಲ್ಗೆ ಅರ್ಹತೆ ಪಡೆಯುವುದು ಹೇಗೆ?
ಶುಭಮನ್ ಗಿಲ್ ನಾಯಕತ್ವ ಹಾಗೂ ಗೌತಮ್ ಗಂಭೀರ್ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿರುವ ಭಾರತ ತಂಡಕ್ಕೆ ಇನ್ನು ಮುಂದೆ ಹೆಚ್ಚಿನ ಎಡವಟ್ಟುಗಳಿಗೆ ಅವಕಾಶವಿಲ್ಲ. ಈ WTC ಋತುವಿನಲ್ಲಿ ಈಗಾಗಲೇ ಆಡಿರುವ 11 ಟೆಸ್ಟ್ ಪಂದ್ಯಗಳಲ್ಲಿ ನಾಲ್ಕರಲ್ಲಿ ಸೋಲು ಕಂಡಿರುವ ಭಾರತ, ಉಳಿದ ಏಳು ಪಂದ್ಯಗಳಲ್ಲಿ ಹೆಚ್ಚಿನ ಗೆಲುವು ದಾಖಲಿಸಬೇಕಾದ ಅನಿವಾರ್ಯತೆಯಲ್ಲಿದೆ.
ನ್ಯೂಜಿಲೆಂಡ್ ವಿರುದ್ಧದ ಎರಡೂ ಟೆಸ್ಟ್ ಪಂದ್ಯಗಳನ್ನು ಗೆದ್ದರೂ ಭಾರತಕ್ಕೆ ಫೈನಲ್ ಪ್ರವೇಶ ಖಚಿತವಾಗುವುದಿಲ್ಲ. ಏಕೆಂದರೆ WTC ಫೈನಲ್ಗೆ ಅರ್ಹತೆ ಪಡೆಯಲು ಅಂಕಪಟ್ಟಿಯಲ್ಲಿ ಅಗ್ರ ಎರಡು ಸ್ಥಾನಗಳಲ್ಲಿ ಒಂದನ್ನು ಪಡೆದುಕೊಳ್ಳಬೇಕು.
ಅಷ್ಟೇ ಅಲ್ಲದೆ, ಭಾರತ ನ್ಯೂಜಿಲೆಂಡ್ ವಿರುದ್ಧದ ಎರಡೂ ಪಂದ್ಯಗಳು ಹಾಗೂ ಆಸ್ಟ್ರೇಲಿಯಾ ವಿರುದ್ಧದ ಐದೂ ಪಂದ್ಯಗಳನ್ನು ಗೆದ್ದರೂ ಫೈನಲ್ ಪ್ರವೇಶಿಸಲು ಸಾಧ್ಯವಾಗದ ಸನ್ನಿವೇಶವಿದೆ. ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ತಂಡಗಳು ತಮ್ಮ ಉಳಿದ ಪಂದ್ಯಗಳಲ್ಲಿ ಗೆಲುವು ಸಾಧಿಸಿದರೆ ಭಾರತಕ್ಕೆ ಹಿನ್ನಡೆಯಾಗಬಹುದು.
ಹೀಗಾಗಿ ಭಾರತ ತಂಡ ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧದ ಸರಣಿಗಳಲ್ಲಿ ಭರ್ಜರಿ ಗೆಲುವು ದಾಖಲಿಸುವುದರ ಜೊತೆಗೆ, ಅಂಕಪಟ್ಟಿಯಲ್ಲಿರುವ ತನ್ನ ಪ್ರತಿಸ್ಪರ್ಧಿ ತಂಡಗಳ ಫಲಿತಾಂಶಗಳ ಮೇಲೆಯೂ ಅವಲಂಬಿಸಬೇಕಾಗುತ್ತದೆ.
ಉದಾಹರಣೆಗೆ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ನಡುವಿನ ಟೆಸ್ಟ್ ಸರಣಿ ಡ್ರಾದಲ್ಲಿ ಅಂತ್ಯಗೊಂಡರೆ ಅದು ಭಾರತಕ್ಕೆ ಅನುಕೂಲವಾಗಬಹುದು. ಇದರಿಂದ ಎರಡೂ ತಂಡಗಳ ಪಾಯಿಂಟ್ಸ್ ಪರ್ಸೆಂಟೇಜ್ನಲ್ಲಿ ದೊಡ್ಡ ಏರಿಕೆ ಆಗುವುದನ್ನು ತಡೆಯಬಹುದು.
IND vs NZ: ಜಸ್ಪ್ರೀತ್ ಬುಮ್ರಾಗೆ ಸೂಕ್ತ ಯೋಜನೆ ರೂಪಿಸಿದ್ದೇವೆಂದ ಟಾಮ್ ಲೇಥಮ್!
ಕೆಲವು ಲೆಕ್ಕಾಚಾರಗಳ ಪ್ರಕಾರ, ನ್ಯೂಜಿಲೆಂಡ್ ವಿರುದ್ಧ 2-0 ಅಂತರದ ಸರಣಿ ಗೆಲುವು ಹಾಗೂ ಆಸ್ಟ್ರೇಲಿಯಾ ವಿರುದ್ಧ 3-2ರ ಸರಣಿ ಗೆಲುವು ಸಾಧಿಸಿದರೂ ಭಾರತಕ್ಕೆ ಅಗ್ರ ಎರಡು ಸ್ಥಾನ ಖಚಿತವಾಗುವುದಿಲ್ಲ. ಇಂತಹ ಸಂದರ್ಭದಲ್ಲಿ ನ್ಯೂಜಿಲೆಂಡ್ ಅಥವಾ ದಕ್ಷಿಣ ಆಫ್ರಿಕಾ ವಿರುದ್ಧ ಪಾಕಿಸ್ತಾನ ಮತ್ತು ಶ್ರೀಲಂಕಾ ತಂಡಗಳು ಗೆಲುವು ಸಾಧಿಸಲಿ ಎಂದು ಭಾರತ ನಿರೀಕ್ಷಿಸಬೇಕಾಗುತ್ತದೆ.
ಇನ್ನೊಂದೆಡೆ, ಉಳಿದ ಪಂದ್ಯಗಳ ಫಲಿತಾಂಶಗಳು ಭಾರತದ ಪರವಾಗಿ ಬಂದರೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯುವ ಅವಕಾಶವೂ ಇದೆ. ಹೀಗಾಗಿ 2025-27ರ WTC ಚಕ್ರದ ಅಂತಿಮ ಹಂತದಲ್ಲಿ ಪ್ರತಿ ಪಂದ್ಯವೂ ನಿರ್ಣಾಯಕವಾಗಿದ್ದು, ನಾಲ್ಕು ತಂಡಗಳ ನಡುವಿನ ಪೈಪೋಟಿ ಕುತೂಹಲ ಮೂಡಿಸಿದೆ.