ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

'ಆಸೀಸ್ ತಂಡದ ಎಲ್ಲರಿಗೂ ಮಾಹಿತಿ ಇತ್ತು': ಬಾಲ್ ಟ್ಯಾಂಪರಿಂಗ್ ಸಂಬಂಧ ಹೊಸ ಬಾಂಬ್ ಸಿಡಿಸಿದ ಕ್ಯಾಮರನ್ ಬ್ಯಾನ್‌ಕ್ರಾಫ್ಟ್!

2018ರ ದಕ್ಷಿಣ ಆಫ್ರಿಕಾ ಪ್ರವಾಸದ ಬಾಲ್ ಟ್ಯಾಂಪರಿಂಗ್ ಪ್ರಕರಣದಲ್ಲಿ ಇಡೀ ಆಸ್ಟ್ರೇಲಿಯಾ ತಂಡಕ್ಕೆ ಮಾಹಿತಿ ಇತ್ತು ಎಂದು ಕ್ಯಾಮರನ್ ಬ್ಯಾನ್‌ಕ್ರಾಫ್ಟ್ ಆರೋಪಿಸಿದ್ದಾರೆ. ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್ ಸೇರಿದಂತೆ ಹಿರಿಯ ಆಟಗಾರರು ಹಾಗೂ ಕೋಚಿಂಗ್ ಸಿಬ್ಬಂದಿಯ ಪಾತ್ರದ ಬಗ್ಗೆ ಹೊಸ ಮಾಹಿತಿಗಳನ್ನು ಬಹಿರಂಗಪಡಿಸಿದ್ದಾರೆ.

ಬಾಲ್ ಟ್ಯಾಂಪರಿಂಗ್ ಸಂಬಂಧ ಹೊಸ ಬಾಂಬ್ ಸಿಡಿಸಿದ ಬ್ಯಾನ್‌ಕ್ರಾಫ್ಟ್!

ಚೆಂಡು ವಿರೂಪ ಪ್ರಕರಣ ಸಂಬಂಧ ಬಾಂಬ್‌ ಸಿಡಿಸಿದ ಕ್ಯಾಮರನ್‌ ಬ್ಯಾನ್‌ಕ್ರಾಫ್ಟ್‌. -

Profile
Ramesh Kote Nov 18, 2026 11:40 PM

ನವದೆಹಲಿ: ಎಂಟು ವರ್ಷಗಳ ಹಿಂದೆ (2018) ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ನಡೆದಿದ್ದ ಆಸ್ಟ್ರೇಲಿಯಾ ತಂಡದ ಬಾಲ್ ಟ್ಯಾಂಪರಿಂಗ್ ಪ್ರಕರಣಕ್ಕೆ (Ball Tampering Scandal) ಸಂಬಂಧಿಸಿದಂತೆ ಮಾಜಿ ಕ್ರಿಕೆಟಿಗ ಕ್ಯಾಮರನ್ ಬ್ಯಾನ್‌ಕ್ರಾಫ್ಟ್ (Cameron Bancroft) ಸ್ಫೋಟಕ ಹೇಳಿಕೆ ನೀಡಿದ್ದಾರೆ. ಚೆಂಡಿಗೆ ಸ್ಯಾಂಡ್‌ಪೇಪರ್ ಬಳಸಿದ ಪ್ರಕರಣದ ಬಗ್ಗೆ ಕೇವಲ ಮೂವರು ಆಟಗಾರರಿಗೆ ಮಾತ್ರವಲ್ಲ, ಇಡೀ ತಂಡಕ್ಕೆ ಮಾಹಿತಿ ಇತ್ತು ಎಂದು ಅವರು ಗಂಭೀರ ಆರೋಪಿಸಿದ್ದಾರೆ. ಹಿರಿಯ ಆಟಗಾರರು ಹಾಗೂ ಕೋಚಿಂಗ್ ಸಿಬ್ಬಂದಿಗೂ ಈ ಕಾರ್ಯಾಚರಣೆಯ ಸಂಪೂರ್ಣ ವಿವರ ತಿಳಿದಿತ್ತು ಎಂದು ಬ್ಯಾನ್‌ಕ್ರಾಫ್ಟ್ ಬಹಿರಂಗಪಡಿಸಿದ್ದಾರೆ.

ದಿ ವೆಸ್ಟ್ ಆಸ್ಟ್ರೇಲಿಯನ್ ಪತ್ರಿಕೆಯಲ್ಲಿ ಪ್ರಕಟವಾದ ಸುದೀರ್ಘ ಲೇಖನದಲ್ಲಿ ಬ್ಯಾನ್‌ಕ್ರಾಫ್ಟ್ ಈ ಹಿಂದೆ ನಡೆದಿದ್ದ ತನಿಖೆಯ ವೇಳೆ ಕೆಲವು ಪ್ರಮುಖ ಮಾಹಿತಿಗಳನ್ನು ಮುಚ್ಚಿಟ್ಟಿದ್ದಾಗಿ ಒಪ್ಪಿಕೊಂಡಿದ್ದಾರೆ. ಬಾಲ್ ಟ್ಯಾಂಪರಿಂಗ್ ಎಷ್ಟು ಸಮಯದಿಂದ ನಡೆಯುತ್ತಿತ್ತು ಮತ್ತು ಇದರಲ್ಲಿ ಇತರರ ಪಾತ್ರವೇನು ಎಂಬುದನ್ನು ತನಿಖಾಧಿಕಾರಿಗಳಿಗೆ ಸಂಪೂರ್ಣವಾಗಿ ತಿಳಿಸಿರಲಿಲ್ಲ ಎಂದು ಹೇಳಿದ್ದಾರೆ.

ಕ್ರಿಕೆಟ್ ಆಸ್ಟ್ರೇಲಿಯಾ ಈ ಪ್ರಕರಣಕ್ಕೆ ಸಂಬಂಧಿಸಿದವರಿಂದ ಗೌಪ್ಯವಾಗಿ ಮಾಹಿತಿ ಪಡೆಯಲು ವೇದಿಕೆಯೊಂದನ್ನು ರೂಪಿಸುವುದಾಗಿ ಘೋಷಿಸಿದ ಕೆಲವೇ ಗಂಟೆಗಳಲ್ಲಿ ಬ್ಯಾನ್‌ಕ್ರಾಫ್ಟ್ ಅವರ ಈ ಹೇಳಿಕೆ ಹೊರಬಿದ್ದಿದೆ. ಆದರೆ, ಮತ್ತೊಮ್ಮೆ ತನಿಖೆ ನಡೆಸುವುದಿಲ್ಲ ಅಥವಾ ಹೆಚ್ಚುವರಿ ಶಿಕ್ಷೆ ವಿಧಿಸುವುದಿಲ್ಲ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಸ್ಪಷ್ಟಪಡಿಸಿದೆ.

Ball-tampering scandal: ʻಇದು ಶೇ 100 ರಷ್ಟು ಸತ್ಯʼ-ಉಸ್ಮಾನ್‌ ಖವಾಜ ಆರೋಪಕ್ಕೆ ಡೇವಿಡ್‌ ವಾರ್ನರ್‌ ಪ್ರತಿಕ್ರಿಯೆ!

‘ಇದು ಕೇವಲ ಮೂವರ ಕೆಲಸವಾಗಿರಲಿಲ್ಲ, ಇಡೀ ತಂಡಕ್ಕೆ ಗೊತ್ತಿತ್ತು!’

“ದಕ್ಷಿಣ ಆಫ್ರಿಕಾದಲ್ಲಿ ನಾನು ಚೆಂಡಿಗೆ ಸ್ಯಾಂಡ್‌ಪೇಪರ್ ಬಳಸುತ್ತಿದ್ದ ವಿಚಾರ ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್ ಮತ್ತು ನನಗೆ ಮಾತ್ರ ತಿಳಿದಿರಲಿಲ್ಲ. ಇಡೀ ತಂಡಕ್ಕೆ ಇದರ ಬಗ್ಗೆ ಮಾಹಿತಿ ಇತ್ತು,” ಎಂದು ಬ್ಯಾನ್‌ಕ್ರಾಫ್ಟ್ ತಮ್ಮ ಲೇಖನದಲ್ಲಿ ಬರೆದಿದ್ದಾರೆ.

ಹಿಂದಿನ ತನಿಖೆಯ ಸಂದರ್ಭದಲ್ಲಿ ಇತರ ವ್ಯಕ್ತಿಗಳನ್ನು ಈ ಪ್ರಕರಣದಲ್ಲಿ ಸಿಲುಕಿಸಲು ಅಥವಾ ತನಿಖೆಗೆ ಅಡ್ಡಿಪಡಿಸಲು ಇಷ್ಟವಿಲ್ಲದ ಕಾರಣ ಕೆಲವು ಮಾಹಿತಿಗಳನ್ನು ಮುಚ್ಚಿಟ್ಟಿದ್ದಾಗಿ ಅವರು ತಿಳಿಸಿದ್ದಾರೆ. ತಮ್ಮ ಹಿಂದಿನ ಹೇಳಿಕೆಯಿಂದ ತನಿಖಾಧಿಕಾರಿಗಳಿಗೆ ಪ್ರಕರಣದ ಸಂಪೂರ್ಣ ಚಿತ್ರಣ ಸಿಕ್ಕಿರಲಿಲ್ಲ ಎಂಬುದನ್ನೂ ಒಪ್ಪಿಕೊಂಡಿದ್ದಾರೆ.

ʻಸ್ಮಿತ್‌, ವಾರ್ನರ್‌ ಮಾತ್ರವಲ್ಲ, ಎಲ್ಲರೂ ತಪ್ಪು ಮಾಡಿದ್ದಾರೆʼ: ಚೆಂಡು ವಿರೂಪ ಪ್ರಕರಣದ ಬಗ್ಗೆ ಬಾಂಬ್‌ ಸಿಡಿಸಿದ ಉಸ್ಮಾನ್‌ ಖವಾಜ!

ಡ್ರೆಸ್ಸಿಂಗ್ ರೂಮ್‌ನಲ್ಲೇ ನಡೆದಿತ್ತು ಚರ್ಚೆ

ದಕ್ಷಿಣ ಆಫ್ರಿಕಾ ವಿರುದ್ಧ ಪೋರ್ಟ್ ಎಲಿಜಬೆತ್‌ನಲ್ಲಿ ನಡೆದಿದ್ದ ಎರಡನೇ ಟೆಸ್ಟ್ ಪಂದ್ಯದ ವೇಳೆ ಬಾಲ್ ಟ್ಯಾಂಪರಿಂಗ್ ಕುರಿತು ಚರ್ಚೆಗಳು ನಡೆದಿದ್ದವು ಎಂದು ಬ್ಯಾನ್‌ಕ್ರಾಫ್ಟ್ ವಿವರಿಸಿದ್ದಾರೆ. ಪಂದ್ಯದ ಎರಡನೇ ದಿನದ ಟೀ ವಿರಾಮದ ಸಮಯದಲ್ಲಿ ಚೆಂಡಿನಿಂದ ಹೆಚ್ಚು ರಿವರ್ಸ್ ಸ್ವಿಂಗ್ ಪಡೆಯುವ ಮಾರ್ಗಗಳ ಬಗ್ಗೆ ಆಟಗಾರರು ಮತ್ತು ಕೋಚಿಂಗ್ ಸಿಬ್ಬಂದಿ ಚರ್ಚಿಸಿದ್ದರು.



ಈ ಚರ್ಚೆಯಲ್ಲಿ ಡೇವಿಡ್ ವಾರ್ನರ್ ಸ್ಯಾಂಡ್‌ಪೇಪರ್ ಬಳಸಿ ಚೆಂಡಿನ ಒಂದು ಭಾಗವನ್ನು ಒರಟಾಗಿಸುವ ಸಲಹೆ ನೀಡಿದ್ದರು ಎಂದು ಬ್ಯಾನ್‌ಕ್ರಾಫ್ಟ್ ಆರೋಪಿಸಿದ್ದಾರೆ. ಬೌಲಿಂಗ್ ಕೋಚ್ ಡೇವಿಡ್ ಸಾಕರ್ ಮತ್ತು ಮುಖ್ಯ ಕೋಚ್ ಡ್ಯಾರೆನ್ ಲೆಹ್ಮನ್ ಕೂಡ ಆ ಸಂದರ್ಭದಲ್ಲಿ ಹಾಜರಿದ್ದರು ಎಂದು ತಿಳಿಸಿದ್ದಾರೆ.

“ಈ ಕೆಲಸವನ್ನು ಮಾಡಬಹುದೇ ಎಂದು ನನ್ನನ್ನು ಕೇಳಲಾಯಿತು. ಆಗ ನನಗೆ ಅಸಹಜ ಮತ್ತು ಒತ್ತಡದ ಪರಿಸ್ಥಿತಿ ಎದುರಾಗಿತ್ತು. ಇದು ತಪ್ಪು ಎಂದು ನನಗೆ ತಿಳಿದಿತ್ತು. ಸ್ಯಾಂಡ್‌ಪೇಪರ್ ಬಳಸುವುದು ಕ್ರಿಕೆಟ್ ನಿಯಮಗಳ ಮಿತಿಯನ್ನು ಮೀರುವುದಷ್ಟೇ ಅಲ್ಲ, ಅದು ಮೋಸ ಎಂಬ ಅರಿವೂ ನನಗಿತ್ತು,” ಎಂದು ಅವರು ಹೇಳಿದ್ದಾರೆ.

ʻಉಸ್ಮಾನ್‌ ಖವಾಜರನ್ನು ಸಂಕಷ್ಟಕ್ಕೆ ತಳ್ಳಿದ್ದೀರಿʼ: ಪ್ಯಾಟ್‌ ಕಮಿನ್ಸ್‌ ವಿರುದ್ಧ ಡೇವಿಡ್‌ ವಾರ್ನರ್‌ ಕಿಡಿ!

“ಚೆಂಡನ್ನು ಸಾಮಾನ್ಯವಾಗಿ ಹೊಳಪು ಮಾಡುವುದು ಮತ್ತು ಸಲೀವಾ ಬಳಸುವಂತಹ ವಿಧಾನಗಳಿಂದ ನಿರೀಕ್ಷಿತ ರಿವರ್ಸ್ ಸ್ವಿಂಗ್ ಸಿಗುತ್ತಿರಲಿಲ್ಲ. ನಾವು ಒತ್ತಡದಲ್ಲಿದ್ದೆವು. ಅಂತಹ ಪರಿಸ್ಥಿತಿಯಲ್ಲಿ ಡೇವಿಡ್ ವಾರ್ನರ್ ಸ್ಯಾಂಡ್‌ಪೇಪರ್ ಬಳಸುವ ಸಾಧ್ಯತೆಯನ್ನು ಮುಂದಿಟ್ಟರು,” ಎಂದು ಬ್ಯಾನ್‌ಕ್ರಾಫ್ಟ್ ವಿವರಿಸಿದ್ದಾರೆ.

ಈ ಕಾರ್ಯಾಚರಣೆ ನಡೆಯುತ್ತಿದ್ದ ಸಂದರ್ಭದಲ್ಲಿ ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್, ಜಾಶ್ ಹೇಝಲ್‌ವುಡ್ ಮತ್ತು ಮಿಚೆಲ್ ಮಾರ್ಷ್ ಅವರೊಂದಿಗೆ ಚೆಂಡಿನ ಚಲನೆಯ ಬಗ್ಗೆ ನಿರಂತರವಾಗಿ ಚರ್ಚಿಸುತ್ತಿದ್ದೆ ಎಂದು ಅವರು ಹೇಳಿದ್ದಾರೆ. ವಿಕೆಟ್ ಕೀಪರ್ ಟಿಮ್ ಪೈನ್ ಅವರೊಂದಿಗೂ ಬದಲಾಯಿಸಲಾದ ಚೆಂಡಿನ ಪರಿಣಾಮಕಾರಿತ್ವದ ಕುರಿತು ಮಾತನಾಡಿದ್ದಾಗಿ ತಿಳಿಸಿದ್ದಾರೆ.

ಬೌಲರ್‌ಗಳಿಂದ ಚೆಂಡು ಸಾಕಷ್ಟು ರಿವರ್ಸ್ ಸ್ವಿಂಗ್ ಆಗುತ್ತಿದೆಯೇ ಎಂಬ ಬಗ್ಗೆ ಪ್ರತಿಕ್ರಿಯೆ ಪಡೆಯುತ್ತಿದ್ದೆ ಎಂದು ಬ್ಯಾನ್‌ಕ್ರಾಫ್ಟ್ ಹೇಳಿದ್ದಾರೆ. ಇದರಿಂದಾಗಿ ಈ ಕೃತ್ಯವು ಯಾರಿಗೂ ತಿಳಿಯದೆ ನಡೆದ ವೈಯಕ್ತಿಕ ಘಟನೆ ಆಗಿರಲಿಲ್ಲ ಎಂಬುದು ಅವರ ಹೇಳಿಕೆಯಿಂದ ಸ್ಪಷ್ಟವಾಗುತ್ತದೆ.