ಚೆನ್ನೈ: ಪ್ರಸ್ತುತ ನಡೆಯುತ್ತಿರುವ 2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಯ ಪಂದ್ಯದಲ್ಲಿ ಬಾಲ್ ಟ್ಯಾಂಪರಿಂಗ್ ಆರೋಪ ಕೇಳಿ ಬಂದಿದೆ. ಇಲ್ಲಿನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಭಾನುವಾರ ನಡೆದಿದ್ದ ಟೂರ್ನಿಯ ಮೂರನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ (Mumbai Indians) ಹಾಗೂ ಚೆನ್ನೈ ಸೂಪರ್ ಕಿಂಗ್ಸ್ (chennai Super Kings) ತಂಡಗಳು ಕಾದಾಟ ನಡೆಸಿದ್ದವು. ಈ ಪಂದ್ಯದಲ್ಲಿ ಸಿಎಸ್‌ಕೆ ತಂಡದ ಆಟಗಾರರು ಬಾಲ್ ಟ್ಯಾಂಪರಿಂಗ್ ಮಾಡಿದ್ದಾರೆಂದು ಅಭಿಮಾನಿಗಳು ಗಂಭೀರ ಆರೋಪ ಮಾಡಿದ್ದಾರೆ.ಸಿಎಸ್‌ಕೆ ಆಟಗಾರರು ಚೆಂಡು ವಿರೂಪಗೊಳಿಸಿದ ವಿಡಿಯೊವನ್ನು ಅಭಿಮಾನಿಯೊಬ್ಬರು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ವೀಕ್ಷಿಸಿದ ಅಭಿಮಾನಿಗಳು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಟೀಕಿಸಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೊದಲ್ಲಿ ಸಿಎಸ್‌ಕೆ ವೇಗಿ ಖಲೀಲ್ ಅಹ್ಮದ್ ಹಾಗೂ ನಾಯಕ ಋತುರಾಜ್ ಗಾಯಕ್ವಾಡ್ ಅವರು ಯಾವುದೋ ಒಂದು ವಸ್ತುವನ್ನು ಒಬ್ಬರಿಗೊಬ್ಬರು ವಿನಿಮಯ ಮಾಡಿಕೊಂಡರು. ಬೌಲ್ ಮಾಡುವುದಕ್ಕೂ ಮುನ್ನ ಖಲೀಲ್ ಅಹ್ಮದ್ ಅವರು ತಮ್ಮ ಜೇಬಿನಿಂದ ಯಾವುದೊ ಒಂದು ವಸ್ತುವನ್ನು ತೆಗೆದರು. ಈ ವೇಳೆ ತಮ್ಮ ಕೈನಲ್ಲಿದ್ದ ಚೆಂಡನ್ನು ಋತುರಾಜ್ ಗಾಯಕ್ವಾಡ್‌ಗೆ ಖಲೀಲ್ ಅಹ್ಮದ್ ಕೊಟ್ಟರು. ನಂತರ ನಾಯಕ ಋತುರಾಜ್ ಚೆಂಡನ್ನು ವೇಗಿಗೆ ಕೊಟ್ಟು ಅವರಿಂದ ಏನೋ ಒಂದು ವಸ್ತುವನ್ನು ತಗೆದುಕೊಂಡು ತಮ್ಮ ಜೇಬಿಗೆ ಹಾಕಿಕೊಂಡರು. ಈ ವಿಡಿಯೊವನ್ನು ಇಂಡಿಯಾ ಟುಡೇ ತಮ್ಮ ಸುದ್ದಿಯೊಂದಿಗೆ ಹಂಚಿಕೊಂಡಿದೆ.
MI vs CSK: ಮುಂಬೈ ಮಣಿಸಿದ ಚೆನ್ನೈ ಸೂಪರ್ ಕಿಂಗ್ಸ್
ಮುಂಬೈ ವಿರುದ್ದ ಚೆನ್ನೈ ಸೂಪರ್ ಕಿಂಗ್ಸ್‌ಗೆ ಜಯ
ಭಾನುವಾರ ನಡೆದಿದ್ದ ಎರಡನೇ ಹೆಡರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 4 ವಿಕೆಟ್‌ಗಳಿಂದ ಗೆಲುವು ಪಡೆಯಿತು. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬೌಲಿಂಗ್ ಅಯ್ಕೆ ಮಾಡಿಕೊಟ್ಟಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಖಲೀಲ್ ಅಹ್ಮದ್ ಮಾರಕ ಬೌಲಿಂಗ್ ದಾಳಿ ನಡೆಸಿದ್ದರು. ನಾಲ್ಕು ಓವರ್ ಬೌಲ್ ಮಾಡಿದ್ದ ಖಲೀಲ್ ಅಹ್ಮದ್ ಅವರು 29 ರನ್ ನೀಡಿ 3 ವಿಕೆಟ್ ಕಬಳಿಸಿದ್ದರು. ತಮ್ಮ ನಾಲ್ಕನೇ ಎಸೆತದಲ್ಲಿಯೇ ರೋಹಿತ್ ಶರ್ಮಾ ಅವರನ್ನು ಔಟ್ ಮಾಡಿದ್ದ ಎಡಗೈ ವೇಗಿ, ನಂತರದ ಓವರ್‌ನಲ್ಲಿ ರಿಯಾನ್ ರಿಕಲ್ಟನ್ ಅವರನ್ನು ಔಟ್ ಮಾಡಿದ್ದರು. ನಂತರ ಡೆತ್ ಓವರ್‌ಗಳಲ್ಲಿ ಟ್ರೆಂಟ್ ಬೌಲ್ಟ್ ಅವರನ್ನು ಖಲೀಲ್ ಅಹ್ಮದ್ ಔಟ್ ಮಾಡಿದ್ದರು.
ಖಲೀಲ್ ಅಹ್ಮದ್ ಅವರ ಜತೆಗೆ ಸ್ಪಿನ್ ಮೋಡಿ ಮಾಡಿದ ನೂರ್ ಅಹ್ಮದ್, ಮುಂಬೈ ಇಂಡಿಯನ್ಸ್ ತಂಡದ ಪ್ರಮುಖ ವಿಕೆಟ್‌ಗಳನ್ನು ಕೆಡವಿದರು. ಅವರು ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ರಾಬಿನ್ ಮಿಂಝ್ ಹಾಗೂ ನಮನ್ ದೀರ್ ಅವರ ವಿಕೆಟ್‌ಗಳನ್ನು ಕಬಳಿಸಿದರು. ಅಂತಿಮವಾಗಿ ಮುಂಬೈ ಇಂಡಿಯನ್ಸ್ ತಂಡ ತನ್ನ ಪಾಲಿನ 20 ಓವರ್‌ಗಳಿಗೆ 9 ವಿಕೆಟ್‌ಗಳ ನಷ್ಟಕೆ 155 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಚೆನ್ನೈ ಸೂಪರ್ ಕಿಂಗ್ಸ್‌ಗೆ 156 ರನ್‌ಗಳ ಗುರಿಯನ್ನು ನೀಡಿತು. 31 ರನ್ ಗಳಿಸಿದ ತಿಲಕ್ ವರ್ಮಾ ಮುಂಬೈ ಪರ ವೈಯಕ್ತಿಕ ಗರಿಷ್ಠ ಸ್ಕೋರರ್ ಎನಿಸಿಕೊಂಡರು.
ಬಳಿಕ ಗುರಿ ಹಿಂಬಾಲಿಸಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ, ರಚಿನ್ ರವೀಂದ್ರ (65*) ಹಾಗೂ ಋತುರಾಜ್ ಗಾಯಕ್ವಾಡ್ (53) ಅವರ ಅರ್ಧಶತಕಗಳ ಬಲದಿಂದ 19.1 ಓವರ್‌ಗಳಿಗೆ 6 ವಿಕೆಟ್‌ಗಳ ನಷ್ಟಕ್ಕೆ 158 ರನ್ ಗಳಿಸಿ 4 ವಿಕೆಟ್ ಗೆಲುವು ತನ್ನದಾಗಿಸಿಕೊಂಡಿತು. ಆ ಮೂಲಕ ಹದಿನೆಂಟನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಸಿಎಸ್‌ಕೆ ಶುಭಾರಂಭ ಕಂಡಿದೆ.