ಐಪಿಎಲ್​ ಸುನಿತಾ ವಿಲಿಯಮ್ಸ್​ ವಿದೇಶ ಫ್ಯಾಷನ್​ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

MI vs CSK: ಮುಂಬೈ ಮಣಿಸಿದ ಚೆನ್ನೈ ಸೂಪರ್‌ ಕಿಂಗ್ಸ್‌

ಚೊಚ್ಚಲ ಪಂದ್ಯವನ್ನಾಡಿದ ಕೇರಳದ 24 ವರ್ಷದ ವಿಘ್ನೇಶ್ ಪುತ್ತೂರು 32 ರನ್‌ಗೆ ಪ್ರಮುಖ ಮೂರು ವಿಕೆಟ್‌ ಕಿತ್ತು ಗಮನ ಸೆಳೆದರು. ಜತೆಗೆ ತಮ್ಮ ಆಯ್ಕೆಯನ್ನು ಕೂಡ ಸಮರ್ಥಿಸಿಕೊಂಡರು. ಅನುಭವಿ ವೇಗಿ ಟ್ರೆಂಟ್‌ ಬೌಲ್ಡ್‌ ವಿಕೆಟ್‌ ಲೆಸ್‌ ಎನಿಸಿದರು. ಉಳಿದಂತೆ ವಿಲ್‌ ಜಾಕ್ಸ್‌ ಮತ್ತು ದೀಪಕ್‌ ಚಹರ್‌ ತಲಾ ಒಂದು ವಿಕೆಟ್‌ ಪಡೆದರು.

ಮುಂಬೈ ವಿರುದ್ಧ 4 ವಿಕೆಟ್‌ ಗೆಲುವು ಸಾಧಿಸಿದ ಸೂಪರ್‌ ಕಿಂಗ್ಸ್‌

Profile Abhilash BC Mar 23, 2025 11:12 PM

ಚೆನ್ನೈ: ಬ್ಯಾಟಿಂಗ್‌ ಮತ್ತು ಬೌಲಿಂಗ್‌ನಲ್ಲಿ ಸರ್ವಾಂಗೀಣ ಪ್ರದರ್ಶನ ತೋರಿದ ಮಾಜಿ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್ಸ್‌ ಭಾನುವಾರದ ದ್ವಿತೀಯ ಐಪಿಎಲ್‌ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ತಂಡವನ್ನು 4 ವಿಕೆಟ್‌ಗಳಿಂದ ಮಣಿಸುವಲ್ಲಿ ಯಶಸ್ವಿಯಾಗಿದೆ. ಗೆಲುವಿಗೆ 4 ರನ್‌ ಬೇಕಿದ್ದಾಗ ರಚಿನ್‌ ರವೀಂದ್ರ ಸಿಕ್ಸರ್‌ ಬಾರಿಸುವ ಮೂಲಕ ಚೆನ್ನೈ ಗೆಲುವನ್ನು ಸಾರಿದರು.

ಇಲ್ಲಿನ ಚೆಪಾಕ್‌ ಕ್ರಿಕೆಟ್‌ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ನಡೆಸಿದ ಮುಂಬೈ ಇಂಡಿಯನ್ಸ್‌ 9 ವಿಕೆಟ್‌ಗೆ 155 ರನ್‌ ಬಾರಿಸಿದರೆ, ಗುರಿ ಬೆನ್ನಟ್ಟಿದ ಚೆನ್ನೈ ಸೂಪರ್‌ ಕಿಂಗ್ಸ್‌ 19.1 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 158 ರನ್‌ ಗಳಿಸಿ ಗೆಲುವು ಸಾಧಿಸಿತು.

ಸಣ ಮೊತ್ತವಾದರೂ ಕೂಡ ಇದನ್ನು ಬಾರಿಸಲು ಚೆನ್ನೈ ಪರದಾಟ ನಡೆಸಿತು. ನಾಯಕ ಋತುರಾಜ್‌ ಗಾಯಕ್ವಾಡ್‌ ವಿಕೆಟ್‌ ಪತನದ ಬಳಿಕ ತಂಡ ನಾಟಕೀಯ ಕುಸಿತ ಕಂಡಿತು. ಗಾಯಕ್ವಾಡ್‌ ಅವರು ಆರಂಭಕಾರ ರಚಿನ್‌ ರವೀಂದ್ರ ಜತೆ ಸೇರಿ 2ನೇ ವಿಕೆಟ್‌ಗೆ 67 ರನ್‌ಗಳ ಜತೆಯಾಟ ನಡೆಸಿದರು. ಇದೇ ಜತೆಯಾಟ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿತು. ಗಾಯಕ್ವಾಡ್‌ ಬಿರುಸಿನ ಬ್ಯಾಟಿಂಗ್‌ ಮೂಲಕ 6 ಬೌಂಡರಿ ಮತ್ತು 3 ಸಿಕ್ಸರ್‌ ಸಿಡಿಸಿ 53 ರನ್‌ ಗಳಿಸಿದರು.

ಹಾರ್ಡ್‌ ಹಿಟ್ಟರ್‌ ಶಿವಂ ದುಬೆ(9), ದೀಪಕ್‌ ಹೂಡಾ(3), ರಾಹುಲ್‌ ತ್ರಿಪಾಠಿ(2) ಮತ್ತು ಸ್ಯಾಮ್‌ ಕರನ್‌(4) ಒಂದಂಕಿ ಗಳಿಸಿ ಪೆವಿಲಿಯನ್‌ ಪರೇಡ್‌ ನಡೆಸಿದರು. ಆರಂಭಿಕನಾಗಿ ಕಣಕ್ಕಿಳಿದ ರಚಿನ್‌ ರವೀಂದ್ರ ಅಜೇಯ ಅರ್ಧಶತಕ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. 4 ಸಿಕ್ಸರ್‌ ಮತ್ತು 2 ಬೌಂಡರಿ ಬಾರಿಸಿ 65*ಗಳಿಸಿದರು. ಕೊನೆಯ ಹಂತದಲ್ಲಿ ಧೋನಿ ಬ್ಯಾಟಿಂಗ್‌ ಬಂದರೂ ರನ್‌ ಗಳಿಸದೆ ಅಜೇಯರಾಗಿ ಉಳಿದರು.

ಚೊಚ್ಚಲ ಪಂದ್ಯವನ್ನಾಡಿದ ಕೇರಳದ 24 ವರ್ಷದ ವಿಘ್ನೇಶ್ ಪುತ್ತೂರು 32 ರನ್‌ಗೆ ಪ್ರಮುಖ ಮೂರು ವಿಕೆಟ್‌ ಕಿತ್ತು ಗಮನ ಸೆಳೆದರು. ಜತೆಗೆ ತಮ್ಮ ಆಯ್ಕೆಯನ್ನು ಕೂಡ ಸಮರ್ಥಿಸಿಕೊಂಡರು. ಅನುಭವಿ ವೇಗಿ ಟ್ರೆಂಟ್‌ ಬೌಲ್ಡ್‌ ವಿಕೆಟ್‌ ಲೆಸ್‌ ಎನಿಸಿದರು. ಉಳಿದಂತೆ ವಿಲ್‌ ಜಾಕ್ಸ್‌ ಮತ್ತು ದೀಪಕ್‌ ಚಹರ್‌ ತಲಾ ಒಂದು ವಿಕೆಟ್‌ ಪಡೆದರು.

ಇದಕ್ಕೂ ಮುನ್ನ ಬ್ಯಾಟಿಂಗ್‌ ನಡೆಸಿದ ಮುಂಬೈ, ಅತ್ಯಂತ ಕಳಪೆ ಮಟ್ಟದ ಬ್ಯಾಟಿಂಗ್‌ ನಡೆಸಿ ಅಲ್ಪ ಮೊತ್ತಕ್ಕೆ ಕುಸಿಯಿತು. ಖಾತೆ ತೆರೆಯುವ ಮುನ್ನವೇ ಮಾಜಿ ನಾಯಕ ರೋಹಿತ್‌ ಶರ್ಮ ಶೂನ್ಯಕ್ಕೆ ವಿಕೆಟ್‌ ಕಳೆದುಕೊಂಡರು. ಇದೇ ವೇಳೆ ಐಪಿಎಲ್‌ನಲ್ಲಿ ಅತ್ಯಧಿಕ ಶೂನ್ಯ ಸುತ್ತಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ರೋಹಿತ್‌(18 ಬಾರಿ) ಅವರು ದಿನೇಶ್‌ ಕಾರ್ತಿಕ್‌ ಮತ್ತು ಗ್ಲೆನ್‌ ಮ್ಯಾಕ್ಸ್‌ವೆಲ್‌ ಜತೆ ಜಂಟಿ ಅಗ್ರಸ್ಥಾನಕ್ಕೇರಿದರು. ರೋಹಿತ್‌ ವಿಕೆಟ್‌ ಎಡಗೈ ವೇಗಿ ಖಲೀಲ್‌ ಅಹ್ಮದ್‌ ಪಾಲಾಯಿತು.

ಆರ್‌ಸಿಬಿಯಿಂದ ಮುಂಬೈ ಸೇರಿದ ವಿಲ್‌ ಜಾಕ್ಸ್‌ ಕೂಡ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ಎಡವಿದರು. ಬಡಬಡನೆ 2 ಬೌಂಡರಿ ಬಾರಿಸಿ 11 ರನ್‌ಗೆ ಆಟ ಮುಗಿಸಿದರು. ಹಂಗಾಮಿ ನಾಯಕ ಸೂರ್ಯಕುಮಾರ್‌ ಯಾದವ್‌ ನಿಧಾನಗತಿಯ ಬ್ಯಾಟಿಂಗ್‌ ನಡೆಸಿ 26 ಎಸೆತಗಳಿಂದ 29 ರನ್‌ ಬಾರಿಸಿದರು.

ಇದನ್ನೂ ಓದಿ SRH vs RR: ರಾಜಸ್ಥಾನ್‌ ವಿರುದ್ಧ 44 ರನ್‌ ಅಂತರದ ಗೆಲುವು ಸಾಧಿಸಿದ ಹೈದರಾಬಾದ್‌

ಸ್ಫೋಟಕ ಬ್ಯಾಟಿಂಗ್‌ಗೆ ಹೆಸರುವಾಸಿಯಾದ ತಿಲಕ್‌ ವರ್ಮಾ ಕೂಡ ದೊಡ್ಡ ಮೊತ್ತ ಪೇರಿಸುವಲ್ಲಿ ವಿಫಲರಾದರು. ತಲಾ ಎರಡು ಸಿಕ್ಸರ್‌ ಮತ್ತು ಬೌಂಡರಿ ನೆರವಿನಿಂದ 31 ರನ್‌ ಗಳಿಸಿದರು. ಇವರದ್ದೇ ಮುಂಬೈ ಸರದಿಯ ಅತ್ಯಧಿಕ ವೈಯಕ್ತಿಕ ಗಳಿಕೆ. ಇನ್ನೇನು 100ರೊಳಗೆ ಗಂಟು ಮೂಟೆ ಕಟ್ಟುತ್ತದೆ ಎನ್ನುವಾಗ ಅಂತಿಮ ಹಂತದಲ್ಲಿ ವೇಗಿ ದೀಪಕ್‌ ಚಹರ್‌ ಬಿರುಸಿನ ಬ್ಯಾಟಿಂಗ್‌ ನಡೆಸಿ 15 ಎಸೆತಗಳಿಂದ ಅಜೇಯ 28( 2 ಸಿಕ್ಸರ್‌, 2 ಬೌಂಡರಿ) ರನ್‌ ಬಾರಿಸಿದ ಪರಿಣಾಮ ತಂಡ 150 ರ ಗಡಿ ದಾಟಿ ಸ್ಪರ್ಧಾತ್ಮಕ ಮೊತ್ತ ದಾಖಲಿಸಿತು.



ನೂರ್‌ ಸ್ಪಿನ್‌ ಕಮಾಲ್‌

ಸ್ಪಿನ್‌ ಟ್ರ್ಯಾಕ್‌ನಲ್ಲಿ ಕೈಚಳಕ ತೋರಿದ ಅಫಘಾನಿಸ್ತಾನ ಸ್ಪಿನ್ನರ್‌ ನೂರ್‌ ಅಹ್ಮದ್‌ 4 ಓವರ್‌ ಎಸೆದು ಕೇವಲ 18 ರನ್‌ ವೆಚ್ಚದಲ್ಲಿ 4 ವಿಕೆಟ್‌ ಕೆಡವಿದರು. 10 ವರ್ಷದ ಬಳಿಕ ತವರು ತಂಡದ ಪರ ಆಡಲಿಳಿದ ಹಿರಿಯ ಸ್ಪಿನ್ನರ್‌ ಆರ್‌.ಅಶ್ವಿನ್‌ ಮತ್ತು ವೇಗಿ ನಥನ್‌ ಎಲ್ಲಿಸ್‌ ತಲಾ ಒಂದು ವಿಕೆಟ್‌ ಕಿತ್ತರೆ, ಎಡಗೈ ವೇಗಿ ಖಲೀಲ್‌ ಅಹ್ಮದ್‌ 29 ಕ್ಕೆ 3 ವಿಕೆಟ್‌ ಉರುಳಿಸಿದರು.