SRH vs LSG: ಟ್ರಾವಿಸ್ ಹೆಡ್‌ರನ್ನು ಕ್ಲೀನ್ ಬೌಲ್ಡ್ ಮಾಡಿದ ಪ್ರಿನ್ಸ್ ಯಾದವ್ ಯಾರು?
Who is Prince Yadav?: ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಏಳನೇ ಪಂದ್ಯದಲ್ಲಿ ಅಪಾಯಕಾರಿ ಆರಂಭಿಕ ಬ್ಯಾಟ್ಸ್‌ಮನ್ ಟ್ರಾವಿಸ್ ಹೆಡ್ ಅವರನ್ನು ಲಖನೌ ಸೂಪರ್ ಜಯಂಟ್ಸ್ ತಂಡದ ಯುವ ವೇಗಿ ಪ್ರಿನ್ಸ್ ಯಾದವ್ ಕ್ಲೀನ್ ಬೌಲ್ಡ್ ಮಾಡಿದರು. ಅಷ್ಟೇ ಅಲ್ಲದೆ ಹೆನ್ರಿಚ್ ಕ್ಲಾಸೆನ್ ಅವರನ್ನು ರನ್‌ಔಟ್ ಮಾಡಿ ಎಲ್ಲರ ಗಮನವನ್ನು ಸೆಳೆದಿದ್ದಾರೆ.

ಟ್ರಾವಿಸ್ ಹೆಡ್ ಅವರನ್ನು ಪ್ರಿನ್ಸ್ ಯಾದವ್ ಕ್ಲೀನ್ ಬೌಲ್ಡ್ ಮಾಡಿದರು.

ಹೈದರಾಬಾದ್: ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ 2025ರ ಇಂಡಿಯನ್ ಪೀಮಿಯರ್ ಲೀಗ್ (IPL 2025) ಟೂರ್ನಿಯ ಸನ್‌ರೈಸರ್ಸ್ ಹೈದರಾಬಾದ್ (SRH) ವಿರುದ್ಧದ ಪಂದ್ಯದಲ್ಲಿ ಲಖನೌ ಸೂಪರ್ ಜಯಂಟ್ಸ್ (LSG) ತಂಡದ ಯುವ ವೇಗಿ ಪ್ರಿನ್ಸ್ ಯಾದವ್ ಗಮನಾರ್ಹ ಬೌಲಿಂಗ್ ಪ್ರದರ್ಶನ ತೋರಿದರು. ಅವರು ಎಸ್‌ಆರ್‌ಎಚ್ ತಂಡದ ಅಪಾಯಕಾರಿ ಬ್ಯಾಟ್ಸ್‌ಮನ್ ಟ್ರಾವಿಸ್ ಹೆಡ್ (Travis Head) ಅವರನ್ನು ತಮ್ಮ ಮಾರಕ ಬೌಲಿಂಗ್ ದಾಳಿಯ ಮೂಲಕ ಕ್ಲೀನ್ ಬೌಲ್ಡ್ ಮಾಡಿ ಎಲ್ಲರ ಗಮನವನ್ನು ಸೆಳೆದರು. ಇದು ಇವರ ಐಪಿಎಲ್ ವೃತ್ತಿ ಜೀವನದ ಮೊಟ್ಟ ಮೊದಲ ವಿಕೆಟ್ ಆಗಿದೆ. ಇದೀಗ ಪ್ರಿನ್ಸ್ ಯಾದವ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೆಂಡ್ ಆಗಿದೆ.
ಗುರುವಾರ ನಡೆದಿದ್ದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾದ ಸನ್‌ರೈಸರ್ಸ್ ಹೈದರಾಬಾದ್ ಪರ ಆರಂಭಿಕನಾಗಿ ಬ್ಯಾಟಿಂಗ್‌ಗೆ ಬಂದಿದ್ದ ಟ್ರಾವಿಸ್ ಹೆಡ್ ಎಂದಿನಂತೆ ಸ್ಪೋಟಕ ಬ್ಯಾಟಿಂಗ್‌ಗೆ ಕೈ ಹಾಕಿದರು. ಮತ್ತೊರ್ವ ಆರಂಭಿಕ ಅಭಿಷೇಕ್ ಶರ್ಮಾ ಬೇಗ ವಿಕೆಟ್ ಒಪ್ಪಿಸಿದರೂ ತಲೆ ಕೆಡಿಸಿಕೊಳ್ಳದ ಹೆಡ್, ತಮ್ಮ ಸ್ಪೋಟಕ ಬ್ಯಾಟಿಂಗ್ ಮೂಲಕ ಲಖನೌ ಬೌಲರ್‌ಗಳಿಗೆ ತಲೆ ಕೆಡಿಸಿದರು. ಅವರು ಆಡಿದ 28 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 5 ಬೌಂಡರಿಗಳೊಂದಿಗೆ 47 ರನ್ ಸಿಡಿಸಿದ್ದರು. ಆ ಮೂಲಕ ದೊಡ್ಡ ಇನಿಂಗ್ಸ್ ಆಡುವ ಮುನ್ಸೂಚನೆಯನ್ನು ನೀಡಿದ್ದರು.
SRH vs LSG: ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಲಖನೌ ಸೂಪರ್ ಜಯಂಟ್ಸ್!
ಆದರೆ, 8ನೇ ಓವರ್‌ನಲ್ಲಿ ಮಾರಕ ಬೌಲಿಂಗ್ ದಾಳಿ ನಡೆಸಿದ ಪ್ರಿನ್ಸ್ ಯಾದವ್ ಎಸ್‌ಆರ್‌ಎಚ್ ಆರಂಭಿಕ ಬ್ಯಾಟ್ಸ್‌ಮನ್ ಮೇಲೆ ಒತ್ತಡ ಹೇರಿದರು. ಅದರಂತೆ ಮೂರನೇ ಎಸೆತದಲ್ಲಿ ಟ್ರಾವಿಸ್ ಹೆಡ್ ಅವರನ್ನು ದೊಡ್ಡ ಹೊಡೆತಕ್ಕೆ ಪ್ರೇರೇಪಿಸಿ ಕ್ಲೀನ್ ಬೌಲ್ಡ್ ಮಾಡಿದರು. ಇದು ಲಖನೌ ಪಾಲಿಗೆ ಅತ್ಯಂತ ದೊಡ್ಡ ವಿಕೆಟ್ ಆಗಿತ್ತು. ಒಂದು ವೇಳೆ ಟ್ರಾವಿಸ್ ಹೆಡ್ 15 ಓವರ್‌ಗಳವರೆಗೂ ಕ್ರೀಸ್‌ನಲ್ಲಿದಿದ್ದರೆ, ರನ್ ಹೊಳೆ ಹರಿಸುತ್ತಿದ್ದರು. ಆದರೆ, ಪ್ರಿನ್ಸ್ ಯಾದವ್ ಔಟ್ ಮಾಡಿದ್ದು, ಎಲ್‌ಎಸ್‌ಜಿ ನಾಯಕ ರಿಷಭ್ ಪಂತ್ ಅವರ ನಗು ಮುಖಕ್ಕೆ ಕಾರಣವಾಯಿತು.
You miss, I hit 🎯
— IndianPremierLeague (@IPL) March 27, 2025
Prince Yadav gets the huge wicket of Travis Head as his maiden #TATAIPL dismissal 👏
Updates ▶ https://t.co/X6vyVEuZH1#SRHvLSG | @LucknowIPL pic.twitter.com/VT3yLLlN9J
ಪ್ರಿನ್ಸ್ ಯಾದವ್ ಅವರು ಮತ್ತೊಂದು ನಿರ್ಣಾಯಕ ಬ್ಯಾಟ್ಸ್‌ಮನ್ ಅನ್ನು ಕೂಡ ಔಟ್ ಮಾಡಿದ್ದರು. 12ನೇ ಓವರ್‌ನ ಕೊನೆಯ ಎಸೆತದಲ್ಲಿ ಹೆನ್ರಿಚ್ ಕ್ಲಾಸೆನ್ ಅವರನ್ನು ರನ್‌ಔಟ್ ಮಾಡಿದ್ದರು. ಇವರು ಕೂಡ ಎಸ್‌ಆರ್‌ಎಚ್ ಪಾಲಿಗೆ ಕೀ ಬ್ಯಾಟ್ಸ್‌ಮನ್ ಆಗಿದ್ದರು. ಒಟ್ಟಾರೆ ತಾವು ಬೌಲ್ ಮಾಡಿದ ನಾಲ್ಕು ಓವರ್‌ಗಳಲ್ಲಿ ಪ್ರಿನ್ಸ್ ಯಾದವ್, 29 ರನ್ ನೀಡಿ ಒಂದು ವಿಕೆಟ್ ಕಿತ್ತರು. ಆ ಮೂಲಕ ಲಖನೌ ಪಾಲಿಗೆ ಯಶಸ್ವಿ ಬೌಲರ್ ಎನಿಸಿಕೊಂಡರು.
ಪ್ರಿನ್ಸ್ ಯಾದವ್ ಯಾರು?
ಪ್ರಿನ್ಸ್ ಯಾದವ್ ಅವರು ಮೂಲತಃ ಉತ್ತರ ಪ್ರದೇಶದ ಗಾಜಿಯಾಬಾದ್ ಆಟಗಾರ. ಅವರು 1998ರಲ್ಲಿ ಜನವರಿ 2 ರಂದು ಜನಿಸಿದ್ದರು. ಆದರೆ, ಅವರು ಡೆಲ್ಲಿ ತಂಡದ ಪರ ದೇಶಿ ಕ್ರಿಕೆಟ್ ಆಡುತ್ತಾರೆ. ಅವರು 2024ರ ಡೆಲ್ಲಿ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಆಡಿದ್ದ 10 ಇನಿಂಗ್ಸ್‌ಗಳಿಂದ 13 ವಿಕೆಟ್‌ಗಳನ್ನು ಕಬಳಿಸಿದ್ದರು. ಇದರ ಜೊತೆಗೆ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಹಾಗೂ ವಿಜಯ್ ಹಝಾರೆ ಟ್ರೋಫಿ ಟೂರ್ನಿಯಲ್ಲಿಯೂ ಅವರು ಡೆಲ್ಲಿ ತಂಡವನ್ನು ಪ್ರತಿನಿಧಿಸಿದ್ದಾರೆ. ವಿಜಯ್ ಹಝಾರೆ ಟ್ರೋಫಿ ಟೂರ್ನಿಯಲ್ಲಿ ಡೆಲ್ಲಿ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದರು. ಅವರು ಈ ಟೂರ್ನಿಯಲ್ಲಿ ಅವರು 11 ವಿಕೆಟ್‌ಗಳನ್ನು ಕಬಳಿಸಿದ್ದರು.
Hands up if you've executed an unusual run-out 🙌
— IndianPremierLeague (@IPL) March 27, 2025
P.S. - We're impressed by @LucknowIPL's fielding drills 😏#TATAIPL | #SRHvLSG pic.twitter.com/idIBZzncl9
30 ಲಕ್ಷ ರೂ. ಗಳಿಗೆ ಲಖನೌ ಸೇರಿದ್ದ ಪ್ರಿನ್ಸ್ ಯಾದವ್
ಕಳೆದ ವರ್ಷದ ಕೊನೆಯಲ್ಲಿ ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆದಿದ್ದ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜಿನಲ್ಲಿ ಲಖನೌ ಫ್ರಾಂಚೈಸಿ ಮೂಲ ಬೆಲೆ 30 ಲಕ್ಷ ರೂ. ಗಳಿಹೆ ಖರೀದಿಸಿತ್ತು. ಅಂದ ಹಾಗೆ ಡೆಲ್ಲಿ ಪರ 11 ಟಿ20 ವಿಕೆಟ್‌ಗಳನ್ನು ಕೂಡ ಅವರು ಪಡೆದಿದ್ದರು. ಅಂದ ಹಾಗೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ತಮ್ಮ ಐಪಿಎಲ್ ಪದಾರ್ಪಣೆ ಪಂದ್ಯದಲ್ಲಿ 4 ಓವರ್‌ಗಳಿಗೆ 47 ರನ್ ನೀಡಿ ಒಂದೂ ವಿಕೆಟ್ ಪಡೆದಿರಲಿಲ್ಲ. ಆ ಮೂಲಕ ದುಬಾರಿಯಾಗಿದ್ದರು. ಆದರೆ, ತಮ್ಮ ಎರಡನೇ ಪಂದ್ಯದಲ್ಲಿಯೇ ಉತ್ತಮ ಬೌಲಿಂಗ್ ಪ್ರದರ್ಶನ ತೋರಿದರು.