ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

RCB vs LSG: ರಸಿಖ್‌ ಸಲಾಮ್‌ ಮಾರಕ ದಾಳಿ, ಲಖನೌ ಎದುರು ಗೆದ್ದು ಅಗ್ರ ಸ್ಥಾನಕ್ಕೇರಿದ ಆರ್‌ಸಿಬಿ!

RCB vs LSG match Highlights: ರಸಿಖ್‌ ದಾರ್‌ ಸಲಾಮ್‌ ಮಾರಕ ಬೌಲಿಂಗ್‌ ದಾಳಿಯ ಸಹಾಯದಿಂದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ, ಎದುರಾಳಿ ಲಖನೌ ಸೂಪರ್‌ ಜಯಂಟ್ಸ್‌ ಎದುರು 5 ವಿಕೆಟ್‌ ಗೆಲುವು ಪಡೆಯಿತು. ಆ ಮೂಲಕ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಪುನಃ ಅಲಂಕರಿಸಿತು.

ಲಖನೌ ಸೂಪರ್‌ ಜಯಂಟ್ಸ್‌ ಎದುರು ಆರ್‌ಸಿಬಿಗೆ 5 ವಿಕೆಟ್‌ ಜಯ.

ಬೆಂಗಳೂರು: ಬೌಲಿಂಗ್‌ ಹಾಗೂ ಬ್ಯಾಟಿಂಗ್‌ ಎರಡೂ ವಿಭಾಗಗಳಲ್ಲಿ ಅಧಿಕಾರಯುತ ಪ್ರದರ್ಶನವನ್ನು ತೋರಿದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡ, ಎದುರಾಳಿ ಲಖನೌ ಸೂಪರ್‌ ಜಯಂಟ್ಸ್‌ (LSG) ಎದುರು 5 ವಿಕೆಟ್‌ ಭರ್ಜರಿ ಗೆಲುವು ಪಡೆಯತು. ಆ ಮೂಲಕ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಟೂರ್ನಿಯಲ್ಲಿ ನಾಲ್ಕನೇ ಗೆಲುವು ಸಾಧಿಸಿ, ಪಾಯಿಂಟ್ಸ್‌ ಟೇಬಲ್‌ನಲ್ಲಿ ಅಗ್ರ ಸ್ಥಾನಕ್ಕೆ ಪುನಃ ಮರಳಿತು. ಆದರೆ, ರಿಷಭ್‌ ಪಂತ್‌ ನಾಯಕತ್ವದ ಎಲ್‌ಎಸ್‌ಜಿ ತಂಡ ಈ ಋತುವಿನಲ್ಲಿ ಮೂರನೇ ಸೋಲು ಅನುಭವಿಸಿತು. ಆರ್‌ಸಿಬಿ ಪರ ಬೌಲಿಂಗ್‌ನಲ್ಲಿ ಗಮನ ಸೆಳೆದ ಜಾಶ್‌ ಹೇಝಲ್‌ವುಡ್‌ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಬುಧವಾರ ಇಲ್ಲಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಎಲ್‌ಎಸ್‌ಜಿ ನೀಡಿದ್ದ 147 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಆರ್‌ಸಿಬಿ, ವಿರಾಟ್‌ ಕೊಹ್ಲಿ, ರಜತ್‌ ಪಾಟಿದಾರ್‌ ಹಾಗೂ ಜಿತೇಶ ಶರ್ಮಾ ಅವರ ಸ್ಪೋಟಕ ಬ್ಯಾಟಿಂಗ್‌ ಸಹಾಯದಿಂದ 15.1 ಓವರ್‌ಗಳಿಗೆ 5 ವಿಕೆಟ್‌ ನಷ್ಟಕ್ಕೆ 149 ರನ್‌ ಗಳಿಸಿ ಗೆದ್ದು ಬೀಗಿತು. ಆರ್‌ಸಿಬಿ ಪರ ಇನಿಂಗ್ಸ್‌ ಆರಂಭಿಸಿದ ಫಿಲ್‌ ಸಾಲ್ಟ್‌ (7) ಅವರು ಬೇಗ ವಿಕೆಟ್‌ ಒಪ್ಪಿಸಿದರು. ಆದರೆ, ಇಂಪ್ಯಾಕ್ಟ್‌ ಪ್ಲೇಯರ್‌ ಆಗಿ ಆಡಿದ ವಿರಾಟ್‌ ಕೊಹ್ಲಿ ಸ್ಪೋಟಕ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿ 34 ಎಸೆತಗಳಲ್ಲಿ ಒಂದು ಸಿಕ್ಸರ್ ಹಾಗೂ 6 ಬೌಂಡರಿಗಳೊಂದಿಗೆ 49 ರನ್‌ ಗಳಿಸಿದರು. ಆ ಮೂಲಕ ಆರ್‌ಸಿಬಿಗೆ ಉತ್ತಮ ಆರಂಭ ನೀಡಿ ಆವೇಶ ಖಾನ್‌ಗೆ ವಿಕೆಟ್‌ ಒಪ್ಪಿಸಿದರು ಹಾಗೂ ಕೇವಲ ಒಂದು ರನ್‌ನಿಂದ ಅರ್ಧಶತಕ ವಂಚಿತರಾದರು.

IPL 2026: 4 ವಿಕೆಟ್‌ ಕಿತ್ತು ಆರ್‌ಸಿಬಿ ಡೆತ್ ಬೌಲಿಂಗ್ ಬಲ ಹೆಚ್ಚಿಸಿದ ರಸಿಖ್‌ ದಾರ್‌ ಸಲಾಂ ಯಾರು?

ಆರ್‌ಸಿಬಿ ನಾಯಕ ರಜತ್‌ ಪಾಟಿದಾರ್‌ ಸ್ಪೋಟಕ ಬ್ಯಾಟಿಂಗ್‌ ನಡೆಸಿ 13 ಎಸೆತಗಳಲ್ಲಿ 27 ರನ್‌ ಹಾಗೂ ಜಿತೇಶ್‌ ಶರ್ಮಾ ಕೇವಲ 9 ಎಸೆತಗಳಲ್ಲಿ 23 ರನ್‌ ಚಚ್ಚಿದರು. ಈ ಇಬ್ಬರನ್ನು ಪ್ರಿನ್ಸ್‌ ಯಾದವ್‌ ಅವರು ಔಟ್‌ ಮಾಡಿದರು. ಕೊನೆಯಲ್ಲಿ ತಲಾ 14 ರನ್‌ ಗಳಿಸುವ ಮೂಲಕ ಟಿಮ್‌ ಡೇವಿಡ್‌ ಮತ್ತು ರೊಮ್ಯಾರಿಯೊ ಶೆಫರ್ಡ್‌ ಆರ್‌ಸಿಬಿಯನ್ನು ಬೇಗ ಗೆಲುವಿನ ದಡ ಮುಟ್ಟಿಸಿದರು. ಎಲ್‌ಎಸ್‌ಜಿ ಪರ ಪ್ರಿನ್ಸ್‌ ಯಾದವ್‌ 3 ವಿಕೆಟ್‌ ಹಾಗೂ ಆವೇಶ್‌ ಖಾನ್‌ 2 ವಿಕೆಟ್‌ ಕಿತ್ತರು.



146 ರನ್‌ ಕಲೆ ಹಾಕಿದ್ದ ಎಲ್‌ಎಸ್‌ಜಿ

ಇದಕ್ಕೂ ಮುನ್ನ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ಲಖನೌ ಸೂಪರ್‌ ಜಯಂಟ್ಸ್‌ ತಂಡ, ಜಾಶ್‌ ಹೇಝಲ್‌ವುಡ್‌, ಭುವನೇಶ್ವರ್‌ ಕುಮಾರ್‌ ಹಾಗೂ ರಸಿಖ್‌ ದಾರ್‌ ಸಲಾಮ್‌ ಸೇರಿ ಆರ್‌ಸಿಬಿ ಬೌಲಿಂಗ್‌ ಎದುರು ತತ್ತರಿಸಿತು. ಆ ಮೂಲಕ ತನ್ನ ಪಾಲಿನ 20 ಓವರ್‌ಗಳಿಗೆ 146 ರನ್‌ ಗಳಿಸಿ ತನ್ನೆಲ್ಲಾ 10 ವಿಕೆಟ್‌ಗಳನ್ನು ಕಳೆದುಕೊಂಡಿತು. ಆ ಮೂಲಕ ಆರ್‌ಸಿಬಿಗೆ ಕೇವಲ 147 ರನ್‌ ಗುರಿ ನೀಡಿತ್ತು.



ಲಖನೌ ಪರ ಆರಂಭಿಕ ಮಿಚೆಲ್‌ ಮಾರ್ಷ್‌ 32 ಎಸೆತಗಳಲ್ಲಿ 40 ರನ್‌, ಆಯುಷ್‌ ಬದೋನಿ 24 ಎಸೆತಗಳಲ್ಲಿ 38 ರನ್‌ ಹಾಗೂ ಮುಕುಲ್‌ ಚೌಧರಿ 28 ಎಸೆತಗಳಲ್ಲಿ 39 ರನ್‌ ಗಳಿಸಿದ್ದು, ಬಿಟ್ಟರೆ ಇನ್ನುಳಿದಂತೆ ರಿಷಭ್‌ ಪಂತ್‌, ನಿಕೋಲಸ್‌ ಪೂರನ್‌ ಹಾಗೂ ಅಬ್ದುಲ್‌ ಸಮದ್‌ ವಿಫಲರಾದರು.

ರಸಿಕ್‌ ಸಲಾಮ್‌ಗೆ 4 ವಿಕೆಟ್‌

ಆರ್‌ಸಿಬಿ ಪರ ಮಾರಕ ಬೌಲಿಂಗ್‌ ದಾಳಿ ನಡೆಸಿದ ರಸಿಖ್‌ ದಾರ್‌ ಸಲಾಮ್‌ 4 ವಿಕೆಟ್‌ ಕಿತ್ತರೆ, ಭುವನೇಶ್ವರ್‌ ಕುಮಾರ್‌ 3 ಹಾಗೂ ಜಾಶ್‌ ಹೇಝಲ್‌ವುಡ್‌ ಅತ್ಯುತ್ತಮ ಎಕಾನಮಿ ರೇಟ್‌ನೊಂದಿಗೆ ಒಂದು ವಿಕೆಟ್‌ ಕಿತ್ತು ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಕೃಣಾಲ್‌ ಪಾಂಡ್ಯ ಕೂಎ ಎರಡು ವಿಕೆಟ್‌ ಕಿತ್ತರು.



ಸ್ಕೋರ್‌ ವಿವರ

ಲಖನೌ ಸೂಪರ್‌ ಜಯಂಟ್ಸ್:‌ 20 ಓವರ್‌ಗಳಿಗೆ 146-10 (ಮಿಚೆಲ್‌ ಮಾರ್ಷ್‌ 40, ಮುಕುಲ್‌ ಚೌಧರಿ 39, ಆಯುಷ್‌ ಬದೋನಿ 38; ರಸಿಖ್‌ ದಾರ್‌ ಸಲಾಮ್‌ 24ಕ್ಕೆ 4, ಭುವನೇಶ್ವರ್‌ ಕುಮಾರ್‌ 27ಕ್ಕೆ 3, ಜಾಶ್‌ ಹೇಝಲ್‌ವುಡ್‌ 20 ಕ್ಕೆ 1, ಕೃಣಾಲ್‌ ಪಾಂಡ್ಯ 38 ಕ್ಕೆ 2)

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು: 15.1 ಓವರ್‌ಗಳಿಗೆ 149-5 (ವಿರಾಟ್‌ ಕೊಹ್ಲಿ 49, ರಜತ್‌ ಪಾಟಿದಾರ್‌ 27, ಜಿತೇಶ್‌ ಶರ್ಮಾ 23; ಪ್ರಿನ್ಸ್‌ ಯಾದವ್‌ 32 ಕ್ಕೆ 3, ಆವೇಶ್‌ ಖಾನ್‌ 23ಕ್ಕೆ 2)

ಪಂದ್ಯ ಶ್ರೇಷ್ಠ ಪ್ರಶಸ್ತಿ: ಜಾಶ್‌ ಹೇಝಲ್‌ವುಡ್‌