ನವದೆಹಲಿ: ಗುಜರಾತ್ ಟೈಟನ್ಸ್ (GT) ಎದುರು ತನ್ನ ಕೊನೆಯ ಪಂದ್ಯದಲ್ಲಿಅಭೂತ ಪೂರ್ವ ಗೆಲುವು ದಾಖಲಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ, ಇದೀಗ ಏಪ್ರಿಲ್ 27 ರಂದು ಇಲ್ಲಿನ ಅರುಣ್ ಜೇಟ್ಲಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುವ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯ 39ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲು ಸಜ್ಜಾಗುತ್ತಿದೆ. ಅಂದ ಹಾಗೆ ಈ ಪಂದ್ಯಕ್ಕೆ ಆರಂಭಿಕ ಬ್ಯಾಟ್ಸ್‌ಮನ್ ಫಿಲ್ ಸಾಲ್ಟ್ ಅವರು ಆಡುವ ಬಗ್ಗೆ ಆರ್‌ಸಿಬಿ ಬ್ಯಾಟಿಂಗ್ ಕೋಚ್ ದಿನೇಶ್ ಕಾರ್ತಿಕ್ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.
ಏಪ್ರಿಲ್ 24 ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ಗಾಯದ ಕಾರಣ ಫಿಲ್ ಸಾಲ್ಟ್ ಆಡಿರಲಿಲ್ಲ. ಹಾಗಾಗಿ ಇವರ ಬದಲು ಇಂಗ್ಲೆಂಡ್ ತಂಡದ ಆಲ್‌ರೌಂಡರ್ ಜಾಕೋಬ್ ಬೆಥೆಲ್ ಆಡಿದ್ದರು. ಇವರು ವಿರಾಟ್ ಕೊಹ್ಲಿ ಜೊತೆ ಇನಿಂಗ್ಸ್ ಆರಂಭಿಸಿದ್ದರು, ಆದರೆ ಅವರು ತಮ್ಮ ಬ್ಯಾಟಿಂಗ್‌ನಲ್ಲಿ ಪ್ರಭಾವ ಬೀರುವಲ್ಲಿ ವಿಫಲರಾಗಿದ್ದರು. ಈ ಪಂದ್ಯದಲ್ಲಿ ಆರ್‌ಸಿಬಿ ಗೆಲುವು ಪಡೆದಿತ್ತು.
RCB vs DC: ಆರ್‌ಸಿಬಿ ಪಂದ್ಯಕ್ಕೆ ಡೆಲ್ಲಿ ತಂಡದಲ್ಲಿ ಎರಡು ಬದಲಾವಣೆ ಸಾಧ್ಯತೆ
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದ ನಿಮಿತ್ತ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಆರ್‌ಸಿಬಿ ಬ್ಯಾಟಿಂಗ್ ಕೋಚ್ ದಿನೇಶ್ ಕಾರ್ತಿಕ್‌ಗೆ ಫಿಲ್ ಸಾಲ್ಟ್ ಅವರ ಗಾಯದ ಬಗ್ಗೆ ಸುದ್ದಿಗಾರರು ಪ್ರಶ್ನೆಯನ್ನು ಕೇಳಿದರು. ಇದಕ್ಕೆ ಅವರು ಮುಂದಿನ ಪಂದ್ಯದಲ್ಲಿಯೂ ಫಿಲ್ ಸಾಲ್ಟ್ ಬೆಂಚ್ ಕಾಯಲಿದ್ದಾರೆಂದು ಹೇಳಿದ್ದಾರೆ. ಹಾಗಾಗಿ ಜಾಕೋಬ್ ಬೆಥೆಲ್ ಅವರು ವಿದೇಶಿ ಆಟಗಾರನ ಸ್ಥಾನದಲ್ಲಿ ವಿರಾಟ್ ಕೊಹ್ಲಿ ಜೊತೆಗೆ ಇನಿಂಗ್ಸ್ ಆರಂಭಿಸಲಿದ್ದಾರೆಂದು ತಿಳಿಸಿದ್ದಾರೆ. ಅಂದ ಹಾಗೆ ಜಿಟಿ ವಿರುದ್ಧದ ಪಂದ್ಯದಲ್ಲಿ ಗಾಯಕ್ಕೆ ತುತ್ತಾಗಿದ್ದ ರಸಿಖ್ ದಾರ್ ಸಲಾಮ್ ಅವರು ಕೂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ.
ಫಿಲ್ ಸಾಲ್ಟ್ ಬಗ್ಗೆ ದಿನೇಶ್ ಕಾರ್ತಿಕ್ ಹೇಳಿದ್ದೇನು?
"ಪ್ರಸ್ತುತ ಸನ್ನಿವೇಶದಲ್ಲಿ ಫಿಲ್ ಸಾಲ್ಟ್ ಗಾಯದಿಂದ ಬಳಲುತ್ತಿದ್ದಾರೆ ಹಾಗೂ ಅವರು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದದ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ," ಎಂದು ಬ್ಯಾಟಿಂಗ್ ಕೋಚ್ ದಿನೇಶ್ ಕಾರ್ತಿಕ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಫಿಲ್ ಸಾಲ್ಟ್ ಜೊತೆಗೆ ರಸಿಖ್ ದಾರ್ ಸಲಾಮ್ ಅವರು ಕೂಡ ಈ ಪಂದ್ಯಕ್ಕೆ ಅನುಮಾನ. ಹಾಗಾಗಿ ಮುಂದಿನ ಪಂದ್ಯಕ್ಕೆ ಆರ್‌ಸಿಬಿ ಟೀಮ್ ಮ್ಯಾನೇಜ್‌ಮೆಂಟ್‌ಗೆ ತಲೆ ನೋವು ಶುರುವಾಗಿದೆ. ಏಕೆಂದರೆ ರಸಿಖ್ ದಾರ್ ಕಳೆದ ಪಂದ್ಯದಲ್ಲಿ ತಮ್ಮ ಕೌಶಲಭರಿತ ಬೌಲಿಂಗ್ ಮೂಲಕ ಮಧ್ಯಮ ಹಾಗೂ ಡೆತ್ ಓವರ್‌ಗಳಲ್ಲಿ ಎದುರಾಳಿ ಬ್ಯಾಟ್ಸ್‌ಮನ್‌ಗಳ ಒತ್ತಡ ಹೇರುತ್ತಿದ್ದರು. ಹಾಗಾಗಿ ಅವರ ಸ್ಥಾನದಲ್ಲಿ ಯಾವ ದೇಶಿ ಬೌಲರ್ ಅನ್ನು ತಂಡ ಕಣಕ್ಕೆ ಇಳಿಸಲಿದೆ ಎಂದು ಕಾದು ನೋಡಬೇಕಾಗಿದೆ.