ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ವೈಭವ್‌ ಸೂರ್ಯವಂಶಿಗೆ ಈಗಲೇ ಭಾರತ ತಂಡದಲ್ಲಿ ಅವಕಾಶ ನೀಡಬೇಡಿ: ಆಕಾಶ್‌ ಚೋಪ್ರಾ ವಾರ್ನಿಂಗ್‌!

2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಪ್ರದರ್ಶನದ ಆಧಾರದ ಮೇಲೆ ರಾಜಸ್ಥಾನ್‌ ರಾಯಲ್ಸ್‌ ಆರಂಭಿಕ ಬ್ಯಾಟ್ಸ್‌ಮನ್‌ ವೈಭವ್‌ ಸೂರ್ಯವಂಶಿಗೆ ತಕ್ಷಣ ಭಾರತ ತಂಡದಲ್ಲಿ ಅವಕಾಶ ನೀಡಬೇಡಿ ಎಂದು ಮಾಜಿ ಕ್ರಿಕೆಟಿಗ ಆಕಾಶ್‌ ಚೋಪ್ರಾ ಬಿಸಿಸಿಐಗೆ ಎಚ್ಚರಿಕೆ ನೀಡಿದ್ದಾರೆ. ಇನ್ನೂ ವೈಭವ್‌ಗೆ ವಯಸ್ಸಿದೆ, ಹಾಗಾಗಿ ಅವರಿಗೆ ಮುಂದಿನ ಟಿ20 ವಿಶ್ವಕಪ್‌ ಟೂರ್ನಿಯನ್ನು ನೋಡಿಕೊಂಡು ಅವಕಾಶವನ್ನು ನೀಡಿ ಎಂದಿದ್ದಾರೆ.

ವೈಭವ್‌ ಸೂರ್ಯವಂಶಿ ಬಗ್ಗೆ ಬಿಸಿಸಿಐಗೆ ಆಕಾಶ್‌ ಚೋಪ್ರಾ ಎಚ್ಚರಿಕೆ.

ನವದೆಹಲಿ: ಇಂಡಿಯನ್‌ ಪ್ರೀಮಿಯರ್‌ ಲೀಗ್‌ 2026ರ (IPL 2026) ಟೂರ್ನಿಯಲ್ಲಿ ಅದ್ಭುತ ಬ್ಯಾಟಿಂಗ್‌ ಪ್ರದರ್ಶನವನ್ನು ತೋರುತ್ತಿರುವ ರಾಜಸ್ಥಾನ್‌ ರಾಯಲ್ಸ್‌ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ವೈಭವ್‌ ಸೂರ್ಯವಂಶಿ (Vaibhav Sooryavanshi) ಬಗ್ಗೆ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿಗೆ ಮಾಜಿ ಕ್ರಿಕೆಟಿಗ ಆಕಾಶ್‌ ಚೋಪ್ರಾ (Aakash chopra) ಎಚ್ಚರಿಕೆಯನ್ನು ನೀಡಿದ್ದಾರೆ. ಬುಧವಾರ ಮುಲ್ಲಾನ್‌ಪುರದಲ್ಲಿ ನಡೆದಿದ್ದ ಎಲಿಮಿನೇಟರ್‌ ಪಂದ್ಯದಲ್ಲಿ ಸ್ಪೋಟಕ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದ 15ರ ವಯಸ್ಸಿನ ಬ್ಯಾಟರ್‌, ಆಡಿದ 29 ಎಸೆತಗಳಲ್ಲಿ ಬರೋಬ್ಬರಿ 12 ಸಿಕ್ಸರ್‌ ಹಾಗೂ 5 ಬೌಂಡರಿಗಳೊಂದಿಗೆ 97 ರನ್‌ಗಳನ್ನು ಬಾರಿಸಿದ್ದರು, ಆ ಮೂಲಕ ರಾಜಸ್ಥಾನ್‌ ರಾಯಲ್ಸ್‌ ತಂಡದ ಗೆಲುವಿಗೆ ನೆರವು ನೀಡಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಸದ್ಯ ಭಾರತ ಟಿ20 ತಂಡದಲ್ಲಿ ಸಂಜು ಸ್ಯಾಮ್ಸನ್‌ ಹಾಗೂ ಅಭಿಷೇಕ್‌ ಶರ್ಮಾ ಉತ್ತಮ ಪ್ರದರ್ಶನವನ್ನು ತೋರುತ್ತಿದ್ದಾರೆ ಹಾಗೂ ಈ ಇಬ್ಬರೂ ಕೂಡ ಪ್ರಸ್ತುತ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಉತ್ತಮವಾದ ರನ್‌ಗಳನ್ನು ದಾಖಲಿಸಿದ್ದಾರೆ. ಹಾಗಾಗಿ 19ನೇ ಆವೃತ್ತಿಯಲ್ಲಿ ವೈಭವ್‌ ಸೂರ್ಯವಂಶಿಯ ಬ್ಯಾಟಿಂಗ್‌ ಪ್ರದರ್ಶನವನ್ನು ನೋಡಿ, 15ರ ವಯಸ್ಸಿನ ಆಟಗಾರನಿಗೆ ತಕ್ಷಣ ಭಾರತ ತಂಡದಲ್ಲಿ ಅವಕಾಶ ನೀಡಬಾರದು ಎಂದು ಬಿಸಿಸಿಐಗೆ ಎಚ್ಚರಿಕೆಯನ್ನು ನೀಡಿದ್ದಾರೆ.

IPL 2026: ಸುನೀಲ್‌ ಗವಾಸ್ಕರ್‌, ಸಂಜಯ್‌ ಬಾಂಗರ್‌ ಪಾದ ಸ್ಪರ್ಶಿಸಿದ ವೈಭವ್‌ ಸೂರ್ಯವಂಶಿ! ವಿಡಿಯೊ

ತಮ್ಮ ಅಧಿಕೃತ ಯೂಟ್ಯೂಬ್‌ ಚಾನೆಲ್‌ನಲ್ಲಿ ಮಾತನಾಡಿದ ಆಕಾಶ್‌ ಚೋಪ್ರಾ,"ಮುಂದಿನ ವಿಶ್ವಕಪ್‌ಗೆ ಇನ್ನೂ ಎರಡು ವರ್ಷಗಳ ಸಮಯ ಇದೆ. ಅದಕ್ಕೆ ಸಾಕಷ್ಟು ಸಮಯವಿದೆ. ಹೌದು, ಇದು ಖಂಡಿತವಾಗಿಯೂ ಉತ್ಸಾಹ ಮೂಡಿಸುವ ವಿಷಯ. ಇದನ್ನು ನಿರ್ಲಕ್ಷ್ಯ ಮಾಡಲು ಸಾಧ್ಯವಿಲ್ಲ, ಏಕೆಂದರೆ ಐಪಿಎಲ್‌ ಭಾರತದಲ್ಲಿನ ಅತ್ಯುತ್ತಮ ಟಿ20 ಟೂರ್ನಿಯಾಗಿದೆ. ಆದ್ದರಿಂದ ಯಾರಾದರೂ ದಾಖಲೆಗಳನ್ನು ಮುರಿದು, ಹೊಸ ಇತಿಹಾಸ ನಿರ್ಮಿಸುತ್ತಿದ್ದರೆ ಅದನ್ನು ಗಂಭೀರವಾಗಿ ಪರಿಗಣಿಸಲೇಬೇಕು. ಈ ಹುಡುಗ ವಿಶೇಷ ಪ್ರತಿಭೆ ಹೊಂದಿದ್ದಾನೆ ಎಂಬುದರಲ್ಲಿ ಯಾವುದೇ ಅನುಮಾನ ಇಲ್ಲ. ಆದರೆ ಯಾರಾದರೂ ಚೆನ್ನಾಗಿ ಆಡಿದ್ದಾರೆ ಎಂದು ಮಾತ್ರಕ್ಕಾಗಿ ತಂಡದಲ್ಲಿ ತಕ್ಷಣ ಬದಲಾವಣೆಗಳನ್ನು ಮಾಡಬಾರದು,” ಎಂದು ಹೇಳಿದ್ದಾರೆ.

“ಯಾರನ್ನಾದರೂ ತಂಡದಿಂದ ಹೊರಗಿಡುವುದು ಅಷ್ಟು ಸುಲಭವಲ್ಲ; ಹಾಗೆ ಮಾಡಬೇಕಾದರೆ, ಅವರು ತಂಡದಲ್ಲಿ ಸತತವಾಗಿ ವಿಫಲರಾಗಬೇಕು. ಈಗಾಗಲೇ ಒಬ್ಬರು ಟಾಪರ್ ಆಗಿದ್ದರೆ, ಇನ್ನೊಬ್ಬರು ಹೆಚ್ಚು ಅಂಕಗಳನ್ನು ಪಡೆಯಬಹುದು ಎಂದುಕೊಂಡು ಅವರನ್ನು ಬದಲಾಯಿಸಲು ಸಾಧ್ಯವಿಲ್ಲ,” ಎಂದು ಆಕಾಶ್‌ ಚೋಪ್ರಾ ತಿಳಿಸಿದ್ದಾರೆ.

IPL 2026: ʻನ್ಯೂ ಸಿಕ್ಸ್‌ ಮಷಿನ್‌ʼ-ವೈಭವ್‌ ಸೂರ್ಯವಂಶಿಗೆ ಹೊಸ ಹೆಸರು ನಾಮಕರಣ ಮಾಡಿದ ಕ್ರಿಸ್‌ ಗೇಲ್‌!

ಸೂರ್ಯವಂಶಿಯೇ ಭಾರತೀಯ ಕ್ರಿಕೆಟ್‌ ಅಲ್ಲ: ಚೋಪ್ರಾ

“ನೀವು ಅಭಿಷೇಕ್‌ ಶರ್ಮಾ ಮತ್ತು ಸಂಜು ಸ್ಯಾಮ್ಸನ್‌ ಬಗ್ಗೆ ಮಾತನಾಡುತ್ತಿದ್ದೀರಿ. ಈ ಕ್ಷಣದಲ್ಲಿ ಅವರನ್ನು ತಂಡದಿಂದ ಕೈಬಿಡಲು ಸಾಧ್ಯವಿಲ್ಲ. ಏಕೆಂದರೆ ಈಗ ಹಾಗೆ ಮಾಡಿದರೆ, ಎರಡು ಅಥವಾ ಮೂರು ವರ್ಷಗಳ ಬಳಿಕ ವೈಭವ್‌ ಸೂರ್ಯವಂಶಿ ಅವರಿಗೂ ಕೆಟ್ಟ ಫಾರ್ಮ್ ಬಂದರೆ ಇದೇ ತತ್ವವನ್ನು ನೀವು ಮತ್ತೆ ಅನುಸರಿಸಬೇಕಾಗುತ್ತದೆ."

"ಆಗ ಹೊಸದಾಗಿ ಬೆಳಕಿಗೆ ಬರುವ ಮತ್ತೊಬ್ಬ ಯುವ ಆಟಗಾರನನ್ನು ಇದೇ ಮಟ್ಟಕ್ಕೆ ತರುವ ಪ್ರಯತ್ನ ಮಾಡುತ್ತೀರಿ. ಆದ್ದರಿಂದ ಅಜಿತ್‌ ಅಗರ್ಕರ್‌, ಆರ್‌ಪಿ ಸಿಂಗ್‌ ಮತ್ತು ಪ್ರಜ್ಞಾನ್‌ ಓಜಾ ಅವರ ಮೇಲೆ ಸಾಕಷ್ಟು ಪರಿಶೀಲನೆ ಮತ್ತು ಒತ್ತಡ ಇರುತ್ತದೆ. ಆದರೆ ಅವರು ಭಾರತೀಯ ಕ್ರಿಕೆಟ್‌ಗೆ ಏನು ಉತ್ತಮವೋ ಅದನ್ನೇ ಮಾಡಬೇಕು, ಮತ್ತು ವೈಭವ್ ಭಾರತೀಯ ಕ್ರಿಕೆಟ್‌ನ ಪ್ರತಿನಿಧಿಯಾಗಿದ್ದಾನೆ,” ಎಂದು ಅವರು ಹೇಳಿದ್ದಾರೆ.

“ಅವರೇ ಭಾರತೀಯ ಕ್ರಿಕೆಟ್ ಅಲ್ಲ. ಆದರೆ ಅವರು ಭಾರತೀಯ ಕ್ರಿಕೆಟ್‌ನ ಒಂದು ಭಾಗ. ಈ ವಿಚಾರ ಆಯ್ಕೆ ಸಮಿತಿಗೂ ಗೊತ್ತಿರುತ್ತದೆ ಎಂದು ನಾನು ಭಾವಿಸುತ್ತೇನೆ. ಅವರು ಭಾರತೀಯ ಕ್ರಿಕೆಟ್‌ಗೆ ಸರಿಯಾದ ನಿರ್ಧಾರವನ್ನೇ ತೆಗೆದುಕೊಳ್ಳುತ್ತಾರೆ. ಆದರೆ ಅದು ನಾಳೆಯೇ ಆಗಬೇಕೆಂದಿಲ್ಲ. ಅದಕ್ಕೆ ಸಮಯ ತೆಗೆದುಕೊಳ್ಳಬಹುದು. ಅವರ ಮುಂದಿರುವ ಕ್ರಿಕೆಟ್ ಜೀವನ ಇನ್ನೂ 20 ವರ್ಷಗಳಷ್ಟು ಉದ್ದವಾಗಿದೆ. ಆದ್ದರಿಂದ ಯಾವುದೇ ಆತುರದ ಅಗತ್ಯವಿಲ್ಲ,” ಎಂದರು.