ನವದೆಹಲಿ: ಆಸ್ಟ್ರೇಲಿಯಾ ತಂಡ ಸ್ಟಾರ್ ಆಲ್‌ರೌಂಡರ್ ಕ್ಯಾಮೆರಾನ್ ಗ್ರೀನ್ (Cameron Green) ಅವರನ್ನು 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯ ಮಿನಿ ಹರಾಜಿನಲ್ಲಿ ಕೋಲ್ಕತಾ ನೈಟ್ ರೈಡರ್ಸ್ (KKR) ತಂಡ 25.2 ಕೋಟಿ ರು.ಗಳಿಗೆ ಖರೀಸಿದೆ. ಆ ಮೂಲಕ ಐಪಿಎಲ್ ಟೂರ್ನಿಯ ಇತಿಹಾಸದಲ್ಲಿಯೇ ಅತ್ಯಂತ ದುಬಾರಿ ವಿದೇಶ ಆಟಗಾರ ಎಂಬ ದಾಖಲೆಯನ್ನು ಬರೆದಿದ್ದಾರೆ. ಹರಾಜಿಗೂ ಮುನ್ನ ಕ್ಯಾಮೆರಾನ್ ಗ್ರೀನ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡ ಖರೀದಿಸಬಹುದೆಂದು ನಿರೀಕ್ಷೆ ಮಾಡಲಾಗಿತ್ತು. ಅದರಂತೆ ಕೊನೆಯವರೆಗೂ ಮೂರು ಬಾರಿ ಬಾರಿ ಚಾಂಪಿಯನ್ಸ್ ಕೋಲ್ಕತಾ ನೈಟ್ ರೈಡರ್ಸ್ ತಂಡದ ಜೊತೆ ಭಾರಿ ಪೈಪೋಟಿ ನಡೆಸಿತ್ತು. ಆದರೆ, ಆಸೀಸ್ ಆಲ್‌ರೌಂಡರ್ ಕೆಕೆಆರ್ ತೆಕ್ಕೆಗೆ ಬಿದ್ದರು.
ಮಿನಿ ಹರಾಜಿನಲ್ಲಿ ಕ್ಯಾಮೆರಾನ್ ಗ್ರೀನ್ ಅವರ ಹೆಸರು ಬರುತ್ತಿದ್ದಂತೆ ರಾಜಸ್ಥಾನ್ ರಾಯಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಆಸಕ್ತಿ ತೋರಿದವು. ಆರಂಭದಿಂದಲೇ ಕೋಲ್ಕತಾ ನೈಟ್ ರೈಡರ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಆಸೀಸ್ ಆಲ್‌ರೌಂಡರ್‌ಗೆ ಬಿಡ್ ಸಲ್ಲಿಸಬಹುದೆಂದು ನಿರೀಕ್ಷೆ ಮಾಡಲಾಗಿತ್ತು. ಆರ್‌ಆರ್ ಮತ್ತು ಎಂಐ ಮುಂದೆ ಬರುವ ಮೂಲಕ ಅಚ್ಚರಿ ಮೂಡಿಸಿದ್ದವು. ಕೋಲ್ಕತಾ ಫ್ರಾಂಚೈಸಿ 64.30 ಕೋಟಿ ರು ಹಾಗೂ ಚೆನ್ನೈ ಫ್ರಾಂಚೈಸಿ 43.40 ಕೋಟಿ ರು. ಗಳ ಮೂಲಕ ಮಿನಿ ಹರಾಜಿಗೆ ಪ್ರವೇಶ ಮಾಡಿತ್ತು.
ಕ್ಯಾಮೆರಾನ್ ಗ್ರೀನ್‌ಗಾಗಿ ಬಿಡ್ಡಿಂಗ್ ವಾರ್ ನಡೆಸಿದ್ದ ಕೆಕೆಆರ್, ಸಿಎಸ್‌ಕೆ
ಕ್ಯಾಮೆರಾನ್ ಗ್ರೀನ್ ಅವರು ಬಿಡ್ 2.80 ಕೋಟಿ ರು ತಲುಪುತ್ತಿದ್ದಂತೆ ಕೋಲ್ಕತಾ ಫ್ರಾಂಚೈಸಿ ಪೈಪೋಟಿಗೆ ಇಳಿಯಿತು. ಈ ವೇಳೆ ರಾಜಸ್ಥಾನ್ ರಾಯಲ್ಸ್ ಹಾಗೂ ಕೆಕೆಆರ್ ನಡುವೆ ಬಲಾಬಲ ನಡೆದಿತ್ತು. ಒಮ್ಮೆ ಅವರ ಬಿಡ್ ಮೊತ್ತ 10 ಕೋಟಿ ರು ದಾಟುತ್ತಿದ್ದಂತೆ ಆರ್‌ಆರ್ ಹೊರಗಡೆ ಉಳಿಯಿತು. ನಂತರ ಸಿಎಸ್‌ಕೆ ಪೈಪೋಟಿಗೆ ಇಳಿಯಿತು.
ಗ್ರೀನ್‌ಗಾಗಿ ಕೆಕೆಆರ್ ಹಾಗೂ ಸಿಎಸ್‌ಕೆ ನಡುವೆ ತೀವ್ರ ಪೈಪೋಟಿ ನಡೆಸಿದ್ದವು. ಹಾಗಾಗಿ ಕ್ಯಾಮೆರಾನ್ ಗ್ರೀನ್ ಅವರ ಮೊತ್ತ 20 ಕೋಟಿ ರುಗಳಿಗೆ ತಕ್ಷನ ದಾಟಿತು. ನಂತರ ಈ ಎರಡೂ ತಂಡಗಳ ನಡೆಸಿದ ತೀವ್ರ ಪೈಪೋಟಿಯಿಂದ ಆಸೀಸ್ ಆಲ್‌ರೌಂಡರ್ ಮೊತ್ತ 24.75 ಕೋಟಿ ರು. ಗಳಿಗೆ ತಲುಪಿತು. ಅಂತಿಮವಾಗಿ ಚೆನ್ನೈ ಫ್ರಾಂಚೈಸಿಯನ್ನು ಹಿಂದಿಕ್ಕಿ ಕೋಲ್ಕತಾ ನೈಟ್ ರೈಡರ್ಸ್, ಕ್ಯಾಮೆರಾನ್ ಗ್ರೀನ್ ಅವರನ್ನು 25.2 ಕೋಟಿ ರು. ಗಳಿಗೆ ಸೇರಿಸಿಕೊಂಡಿತು.
IPL Auction 2026 Live: ಕ್ಯಾಮೆರಾನ್ ಗ್ರೀನ್‌ಗೆ 25.2 ಕೋಟಿ ರು, ಆರ್‌ಸಿಬಿಗೆ ಸೇರಿದ ವೆಂಕಟೇಶ್ ಅಯ್ಯರ್!
ವಿಶೇಷ ದಾಖಲೆ ಬರೆದ ಕ್ಯಾಮೆರಾನ್ ಗ್ರೀನ್
25.2 ಕೋಟಿ ರು. ಗಳನ್ನು ಪಡೆಯುವ ಮೂಲಕ ಕ್ಯಾಮೆರಾನ್ ಗ್ರೀನ್ ಐಪಿಎಲ್ ಇತಿಹಾಸದಲ್ಲಿ ದೊಡ್ಡ ದಾಖಲೆಯನ್ನು ಬರೆದಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ದುಬಾರಿ ಮೊತ್ತವನ್ನು ಪಡೆದ ವಿದೇಶಿ ಆಟಗಾರ ಎಂಬ ದಾಖಲೆಯನ್ನು ಬರೆದಿದ್ದಾರೆ. ಆ ಮೂಲಕ ತಮ್ಮ ಆಸ್ಟ್ರೇಲಿಯಾ ಸಹ ಆಟಗಾರ ಮಿಚೆಲ್ ಸ್ಟಾರ್ಕ್ ಹಾಗೂ ಇಂಗ್ಲೆಂಡ್ ತಂಡದ ಆಲ್‌ರೌಂಡರ್ ಸ್ಯಾಮ್ ಕರನ್ ಅವರನ್ನು ಹಿಂದಿಕ್ಕಿದ್ದಾರೆ. 2024ರ ಐಪಿಎಲ್ ಮಿನಿ ಹರಾಜಿನಲ್ಲಿ ಸ್ಟಾರ್ಕ್ ಅವರನ್ನು ಕೆಕೆಆರ್ 24.75 ಕೋಟಿ ರು. ಗಳಿಗೆ ಖರೀದಿಸಿತ್ತು.