ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಆರ್‌ಸಿಬಿಗೆ ಟ್ರೋಫಿ ಬೇಟೆಯಾಡಲು ಬಂದ 'ಧುರಂಧರ' ರಜತ್ ಪಾಟಿದಾರ!

ಆರ್‌ಸಿಬಿ ತಂಡದ ಕನಸಿಗೆ ಟ್ರೋಫಿಯ ರೂಪ ತಂದುಕೊಟ್ಟ ನಾಯಕ ರಜತ್‌ ಪಾಟಿದಾರ್‌. ನಾವು ಡಿಫೆಂಡಿಂಗ್‌ ಚಾಂಪಿಯನ್ಸ್‌ ಅಂತ ಆಡೋದಿಲ್ಲ, ನಾವು ಬಂದಿರುವುದು ಟ್ರೋಫಿಗಳನ್ನು ಗೆಲ್ಲಲು. ಅದಕ್ಕೆ ಬೇಕಾದ ಆಟವಾಡಲಿದ್ದೇವೆ ಎಂದೇ ಹೇಳಿಕೊಂಡು ಬಂದಿದ್ದ ರಜತ್‌, ಇದೀಗ ಕ್ವಾಲಿಫೈಯರ್‌ 1 ಪಂದ್ಯದಲ್ಲಿ ಅಬ್ಬರಿಸಿ ತಂಡವನ್ನು ಫೈನಲ್‌ಗೆ ಕೊಂಡೊಯ್ದಿದ್ದಾರೆ.

ಆರ್‌ಸಿಬಿ ನಾಯಕ ರಜತ್‌ ಪಾಟಿದಾರ್

ಧುರಂಧರ್‌ ಈಗ ಮನೆ ಮಾತಾಗಿದೆ. ಬಾಲಿವುಡ್‌ ತಾರೆ ರಣವೀರ್‌ ಸಿಂಗ್‌ ನಟನೆಯ ಈ ಸಿನಿಮಾ ಅಪಾರ ಯಶಸ್ಸು ಕಂಡು ಐತಿಹಾಸಿಕ ದಾಖಲೆಗಳನ್ನು ನಿರ್ಮಿಸಿದೆ. ಅಂದಹಾಗೆ ಈ ಸಿನಿಮಾದಷ್ಟೇ ಸದ್ದು ಮಾಡಿರುವುದು ರಣವೀರ್‌ ಸಿಂಗ್‌ ಅವರ ಲಾಂಗ್‌ ಹೇರ್‌ ಮತ್ತು ಬಿಯರ್ಡ್‌ ಲುಕ್. ಅಂಥದ್ದೇ ಸ್ಟೈಲ್‌ ಕಾಪಿ ಮಾಡಿರುವ ಆರ್‌ಸಿಬಿ ನಾಯಕ ರಜತ್‌ ಪಾಟಿದಾರ್‌ ಈಗ ಐಪಿಎಲ್‌ ಅಖಾಡದ 'ಧುರಂಧರ'ನಂತೆ ಕಂಗೊಳಿಸುತ್ತಿರುವುದಷ್ಟೇ ಅಲ್ಲ ಹಾಗೆಯೇ ಅಬ್ಬರಿಸುತ್ತಿದ್ದಾರೆ ಕೂಡ.

ಎಷ್ಟೂ ಘಟಾನುಘಟಿ ಆಟಗಾರರನ್ನು ಹೊಂದಿದ್ದರೂ ಆರ್‌ಸಿಬಿ ತನ್ನ ಮೊದಲ ಇಂಡಿಯನ್ ಪ್ರೀಮಿಯರ್‌ ಲೀಗ್‌ ಕಿರೀಟಕ್ಕಾಗಿ ಬರೋಬ್ಬರಿ 18 ವರ್ಷಗಳು ಕಾಯಬೇಕಾಯಿತು. ಕಿಂಗ್‌ ವಿರಾಟ್‌ ಕೊಹ್ಲಿ ಅವರ ಭಗೀರತ ಪ್ರಯತ್ನಕ್ಕೆ 2025ರಲ್ಲಿ ಫಲ ಸಿಕ್ಕಿತ್ತು. ಇದು ಸಾಧ್ಯವಾಗಿದ್ದು ರಜತ್‌ ಪಾಟಿದಾರ್‌ ಅವರ ಕ್ಯಾಪ್ಟನ್ಸಿ ಇಂದ ಎಂದರೆ ತಪ್ಪಾಗಲಾರದು.

RCB vs GT: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರಿನ ಮೊದಲನೇ ಕ್ವಾಲಿಫೈಯರ್‌ ದಾಖಲೆಗಳು!

ಕ್ಯಾಪ್ಟನ್ಸಿ ಬಹಳಾ ಮುಖ್ಯ ಸಂಗತಿ

ವಿರಾಟ್‌ ಕೊಹ್ಲಿ ಅಂತಹ ದಿಗ್ಗಜ ಆರ್‌ಸಿಬಿ ಕ್ಯಾಪ್ಟನ್ಸಿ ಬಿಟ್ಟ ಬಳಿಕ ಆ ಸ್ಥಾನವನ್ನು ತುಂಬಿ ತಂಡವನ್ನು ಯಶಸ್ಸಿನ ಹಾದಿಯಲ್ಲಿ ಕೊಂಡೊಯ್ಯುವುದು ಅಷ್ಟು ಸುಲಭದ ಮಾತಲ್ಲ. ಈ ಹಾದಿಯಲ್ಲಿ ಕೊಹ್ಲಿಗೆ ಎಲ್ಲಿಯಾದರೂ ಅಸಮಾಧಾನವಾಗಿದ್ರೆ ಆ ಕ್ಯಾಪ್ಟನ್‌ ಕಥೆ ಮುಗಿಯಿತು ಅಂತ. ಆದರೆ, ಒಬ್ಬ ಸೂಪರ್‌ ಸ್ಟಾರ್‌ ಆಟಗಾರನ ಎದುರು ಇನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಡದ ಆಟಗಾರ ಕ್ಯಾಪ್ಟನ್ಸಿ ಕೈಗೆತ್ತುಕೊಂಡು ತಂಡವನ್ನು ಮುನ್ನಡೆಸುತ್ತಿರುವ ರೀತಿಗೆ ಎಷ್ಟು ಹೊಗಳಿದರೂ ಸಾಲದು.

ಕ್ಯಾಪ್ಟನ್ಸಿ ಏಕೆ ಅಷ್ಟು ಮುಖ್ಯವಾಗುತ್ತೆ? ಅಂದ್ರೆ ಶ್ರೇಷ್ಠ ಆಟಗಾರರಿದ್ದು, ಶ್ರೇಷ್ಠ ಕ್ಯಾಪ್ಟನ್‌ ಕೂಡ ಇದ್ದು ಹೊಂದಾಣಿಕೆ ಸರಿಬರಲಿಲ್ಲ ಎಂದರೆ ತಂಡದ ಪ್ರದರ್ಶನ ಹಳ್ಳ ಹಿಡಿಯುತ್ತದೆ. ಇದಕ್ಕೆ ಅತ್ಯುತ್ತಮ ಉದಾಹರಣೆ ಮುಂಬೈ ಇಂಡಿಯನ್ಸ್‌ ತಂಡ.

ತಂಡದಲ್ಲಿ ಇರೊರೆಲ್ಲಾ ಚಾಂಪಿಯನ್ಸ್‌. ರೋಹಿತ್‌ ಶರ್ಮಾ, ಸೂರ್ಯಕುಮಾರ್‌ ಯಾದವ್‌, ಜಸ್‌ಪ್ರೀತ್‌ ಬುಮ್ರಾ ಮತ್ತು ಕ್ಯಾಪ್ಟನ್‌ ಹಾರ್ದಿಕ್‌ ಪಾಂಡ್ಯ ಎಲ್ಲರೂ ಮ್ಯಾಚ್‌ ವಿನ್ನರ್ಸ್‌. ಆದರೆ, ಆಟಗಾರರ ನಡುವಣ 'ಈಗೊ ಕ್ಲ್ಯಾಷ್‌' ತಂಡದ ತಾಳಮೇಳವನ್ನೇ ಹದಗೆಡಿಸಿಬಿಟ್ಟಿದೆ.

RCB vs GT ಪಂದ್ಯದಲ್ಲಿ ಟಾಸ್‌ ಸೋತ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮೊದಲ ಬ್ಯಾಟಿಂಗ್‌!

ಕೊಹ್ಲಿ - ರಜತ್‌ ಬಾಂಧವ್ಯ ಮೆಚ್ಚುವಂಥದ್ದು

ವಿರಾಟ್‌ ಕೊಹ್ಲಿ ಮತ್ತು ರಜತ್‌ ಪಾಟಿದಾರ್‌ ನಡುವೆ ಏನಾದರೂ ಈ ರೀತಿಯ 'ಈಗೋ' ಕ್ಲ್ಯಾಷ್‌ ಆಗಿದ್ದರೆ ಆರ್‌ಸಿಬಿ ಕಥೆಯೂ ಇಷ್ಟು ಹೊತ್ತಿಗೆ ವ್ಯಥೆಯಾಗಿರುತ್ತಿತ್ತು. ಆದರೆ, ಕೊಹ್ಲಿ ಟೀಮ್‌ ಮ್ಯಾನ್‌. ಕ್ಯಾಪ್ಟನ್‌ ಮಾತನ್ನು ಶಿರಸಾ ಪಾಲಿಸುವವ, ತಮಗೆ ಕೊಟ್ಟ ಜವಾಬ್ದಾರಿಗಳನ್ನು ಶಿಸ್ತಿನಿಂದ ನಿಭಾಯಿಸುವ ಸಿಪಾಯಿ. ಇದು ರಜತ್‌ ಕ್ಯಾಪ್ಟನ್ಸಿ ಯಸ್ಸಿಗೊಂದು ಕಾರಣ ಎನ್ನಬಹುದು.

ನಾಯಕತ್ವ ರಜತ್‌ಗೆ ಹೊಸದೇನಲ್ಲ

ಕೇವಲ ಎರಡು ತಿಂಗಳು ನಡೆಯುವ ಐಪಿಎಲ್‌ನಲ್ಲಿ ಕ್ಯಾಪ್ಟನ್ಸಿ ನಿಭಾಯಿಸುವುದಕ್ಕೂ, ದೇಶಿ ಕ್ರಿಕೆಟ್‌ನಲ್ಲಿ ಹಲವು ತಿಂಗಳುಗಳ ಕಾಲ ಕ್ಯಾಪ್ಟನ್ಸಿ ಹೊರೆ ಹೊತ್ತು ತಂಡವನ್ನು ಯಶಸ್ಸಿನ ಹಾದಿಯಲ್ಲಿ ಮುನ್ನಡೆಸುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ.

ರಣಜಿ ಕ್ರಿಕೆಟ್‌, ವಿಜಯ್ ಹಝಾರೆ ಮತ್ತು ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿ ಟೂರ್ನಿಗಳಲ್ಲಿ ಮಧ್ಯ ಪ್ರದಶೇವನ್ನು ಮುನ್ನಡೆಸಿ ಯಶಸ್ಸು ತಂದುಕೊಟ್ಟ ಕೀರ್ತಿ ರಜತ್‌ ಪಾಟಿದಾರ್‌ ಅವರದ್ದು. ಇಲ್ಲಿ ಅವರು ತಮ್ಮ ಕ್ಯಾಪ್ಟನ್ಸಿ ತಂತ್ರಗಾರಿಕೆಗಳನ್ನು ಮೊನಚುಗೊಳಿಸಿಕೊಂಡಿದ್ದಾರೆ. ಇದೇ ಕಾರಣಕ್ಕೆ ಐಪಿಎಲ್‌ ಕ್ಯಾಪ್ಟನ್ಸಿ ಅವರಿಗೆ ಎಲ್ಲಿಯೂ ಒತ್ತಡದಂತೆ ಕಂಡೇ ಇಲ್ಲ.

ಗ್ರೇಟೆಸ್ಟ್‌ ಇಂಜುರಿ ರೀಪ್ಲೇಸ್‌ಮೆಂಟ್‌

2011ರಲ್ಲಿ ಡಚ್‌ ವೇಗದ ಬೌಲರ್‌ ಡರ್ಕ್‌ ನ್ಯಾನೆಸ್‌ ಗಾಯಗೊಂಡ ಕಾರಣ ಅವರ ಸ್ಥಾನಕ್ಕೆ ಆರ್‌ಸಿಬಿ ತಂಡ ಇಂಜುರಿ ರೀಪ್ಲೇಸ್‌ಮೆಂಟ್‌ ಪ್ಲೇಯರ್‌ ಆಗಿ ವೆಸ್ಟ್‌ ಇಂಡೀಸ್‌ ದೈತ್ಯ ಕ್ರಿಸ್‌ ಗೇಲ್ ಅವರನ್ನು ಐಪಿಎಲ್ ಅಖಾಡಕ್ಕೆ ಕರೆತಂದಿತು. ನಂತರ ನಡೆದದ್ದು ಈಗ ಇತಿಹಾಸದ ಪುಟಗಳಲ್ಲಿ ಒಂದು ಅಧ್ಯಾಯವಾಗಿ ಉಳಿದಿದೆ.

ಅದೇ ಮಾದರಿ ರಜತ್‌ ಪಾಟಿದಾರ್‌ ಕೂಡ ಆರ್‌ಸಿಬಿ ತಂಡಕ್ಕೆ ಹಿಂದಿರುಗಿದ್ದು ಇಂಜುರಿ ರೀಪ್ಲೇಸ್‌ಮೆಂಟ್‌ ಪ್ಲೇಯರ್‌ ಆಗಿ. ಐಪಿಎಲ್‌ 2022 ಟೂರ್ನಿಯ ನಾಕ್‌ಔಟ್‌ ಪಂದ್ಯದಲ್ಲಿ ಲಖನೌ ಎದುರು ಸೆಂಚುರಿ ಬಾರಿಸಿದ್ದರೂ ರಜತ್‌ ಪಾಟಿದಾರ್‌ ನಂತರದ ಹರಾಜಿನಲ್ಲಿ ಮಾರಾಟವಾಗದೇ ಉಳಿದಿದ್ದರು.

ಬಳಿಕ ಐಪಿಎಲ್‌ 2023 ಟೂರ್ನಿ ಮಧ್ಯದಲ್ಲಿ ಲವನೀತ್‌ ಸಿಸೋಡಿಯಾ ಗಾಯಗೊಂಡ ಕಾರಣ ಅವರ ಸ್ಥಾನದಲ್ಲಿ ಬದಲಿ ಆಟಗಾರನಾಗಿ ಆರ್‌ಸಿಬಿ ಬಳಗಕ್ಕೆ ಹಿಂದಿರುಗಿದರು. ಹೊಸ ಹುರುಪಿನೊಂದಿಗೆ ಬಂದು ಮ್ಯಾಚ್‌ ವಿನ್ನಿಂಗ್‌ ಇನಿಂಗ್ಸ್‌ಗಳನ್ನಾಡಿದ ಪಾಟಿದಾರ್‌ಗೆ ನಂತರ ಆರ್‌ಸಿಬಿ ನಾಯಕತ್ವವೇ ಲಭ್ಯವಾಯಿತು.

18 ವರ್ಷಗಳ ಕನಸಿಗೆ ಟ್ರೋಫಿಯ ರೂಪ ಕೊಟ್ಟ ನಾಯಕನಾಗಿ ರಜತ್ ಪಾಟಿದಾರ್ ಈಗ ಆರ್‌ಸಿಬಿ ಅಭಿಮಾನಿಗಳ ಹೃದಯದಲ್ಲಿ ಶಾಶ್ವತ ಸ್ಥಾನ ಪಡೆದಿದ್ದಾರೆ. ಏಕಂದ್ರೆ ಆರ್‌ಸಿಬಿ ಅಭಿಮಾನಿಗಳು ಕೇವಲ ನಾಯಕನನ್ನು ಹುಡುಕುತ್ತಿರಲಿಲ್ಲ; ಟ್ರೋಫಿಗಳನ್ನು ಗೆದ್ದುಕೊಡುವ ವ್ಯಕ್ತಿಯನ್ನು ಹುಡುಕುತ್ತಿದ್ದರು.

ಎದುರಾಳಿಗಳಿಗೆ ಭಯ ಹುಟ್ಟಿಸುವಂತಹ ಆಟ

ಐಪಿಎಲ್‌ 2026 ಟೂರ್ನಿಯ ಕ್ವಾಲಿಫೈಯರ್‌ 1 ಪಂದ್ಯದಲ್ಲಿ ಗುಜರಾತ್‌ ಟೈಟನ್ಸ್‌ ಎದುರು ಅಜೇಯ 93 ರನ್‌ ಸಿಡಿಸಿ ಆರ್‌ಸಿಬಿಗೆ ಬೃಹತ್‌ ಜಯ ತಂದುಕೊಟ್ಟ ಬಳಿಕ ಮಾತನಾಡಿದ ರಜತ್‌ ಪಾಟಿದಾರ್‌, "ನಾವಿಲ್ಲಿ ಬಂದಿರುವುದೇ ಎದುರಾಳಿಗಳಿಗೆ ಭಯ ಹುಟ್ಟಿಸಲು," ಎಂಬ ವಿಶ್ವಾಸದ ಮಾತುಗಳನ್ನು ಆಡಿದ್ದಾರೆ.

ರಣವೀರ್‌ ಸಿಂಗ್ ಮಾದರಿ ಗಡ್ಡ ಬಿಟ್ಟು ಉದ್ದನೆಯ ಹೇರ್‌ ಸ್ಟೈಲ್‌ ಮಾಡಿ ಮಿಂಚಿದ್ದಷ್ಟೇ ಅಲ್ಲ, ಫಿಯರ್‌ ಲೆಸ್‌ ಬ್ಯಾಟಿಂಗ್‌ ಮೂಲಕ ಆರ್‌ಸಿಬಿಗೆ ಟ್ರೋಫಿಗಳನ್ನು ಗೆದ್ದುಕೊಡಲು ಬಂದಿರುವ ಧುರಂಧರ ಎನ್ನುವಂತೆ ರಜತ್‌ ಪಾಟಿದಾರ್‌ ಗರ್ಜಿಸುತ್ತಿದ್ದಾರೆ.

ಕ್ಯಾಪ್ಟನ್ ರಜತ್‌ ಅವರ ಆಟ ಕಂಡು ನಿಮಗೂ ಹೀಗೇ ಅನ್ಸಿದ್ಯಾ? ಕಾಮೆಂಟ್‌ ಮೂಲಕ ತಿಳಿಸಿ.