ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IPL 2026: ವೈಭವ್‌ ಸೂರ್ಯವಂಶಿಗೆ ವಿರಾಟ್‌ ಕೊಹ್ಲಿ ನೀಡಿದ್ದ ಸಂದೇಶವನ್ನು ರಿವೀಲ್‌ ಮಾಡಿದ ಆರ್‌ಸಿಬಿ!

2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಫೈನಲ್‌ ಪಂದ್ಯದ ಬಳಿಕ ರಾಜಸ್ಥಾನ್‌ ರಾಯಲ್ಸ್‌ ಯುವ ಆರಂಭಿಕ ವೈಭವ್‌ ಸೂರ್ಯವಂಶಿ ಹಾಗೂ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ದಿಗ್ಗಜ ವಿರಾಟ್‌ ಕೊಹ್ಲಿ ಅವರ ಸಂಭಾಷಣೆ ಅತ್ಯಂತ ವಿಶೇಷವಾಗಿತ್ತು. ಈ ವೇಳೆ ಯುವ ಬ್ಯಾಟ್ಸ್‌ಮನ್‌ಗೆ ಕೊಹ್ಲಿ ಯಾವ ಸಂದೇಶವನ್ನು ನೀಡಿದ್ದರು ಎಂಬುದನ್ನು ಆರ್‌ಸಿಬಿ ರಿವೀಲ್‌ ಮಾಡಿದೆ.

ವೈಭವ್‌ ಸೂರ್ಯವಂಶಿಗೆ ಕೊಹ್ಲಿ ನೀಡಿದ್ದ ಸಲಹೆ ರಿವೀಲ್‌ ಮಾಡಿದ ಆರ್‌ಸಿಬಿ.

ನವದೆಹಲಿ: ಇಂಡಿಯನ್‌ ಪ್ರೀಮಿಯರ್‌ ಲೀಗ್‌ 2026ರ (IPL 2026) ಟೂರ್ನಿಯಲ್ಲಿ ಗಮನಾರ್ಹ ಬ್ಯಾಟಿಂಗ್‌ ಪ್ರದರ್ಶನವನ್ನು ತೋರುವ ಮೂಲಕ ಆರೆಂಜ್‌ ಕ್ಯಾಪ್‌ ಸೇರಿದಂತೆ ಒಟ್ಟು 5 ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದ ರಾಜಸ್ಥಾನ್‌ ರಾಯಲ್ಸ್‌ ತಂಡದ ಆರಂಭಿಕ ವೈಭವ್‌ ಸೂರ್ಯವಂಶಿ (Vaibhav Sooryavanshi) ಇದೀಗ ಭಾರತೀಯ ಕ್ರಿಕೆಟ್‌ ಹೊಸ ಸೆನ್ಸೇಷನ್‌ ಎಂದರೆ ತಪ್ಪಾಗಲಾರದು. ಐಪಿಎಲ್‌ ಟೂರ್ನಿಯ ಫೈನಲ್‌ ಬಳಿಕ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಮಾಜಿ ನಾಯಕ ವಿರಾಟ್‌ ಕೊಹ್ಲಿ (Virat Kohli) ಅವರು ಯುವ ಬ್ಯಾಟ್ಸ್‌ಮನ್‌ ವೈಭವ್‌ ಸೂರ್ಯವಂಶಿ ಜೊತೆ ಸಂಭಾಷಣೆ ನಡೆಸಿದ್ದರು. ಈ ಸಂಭಾಷಣೆಯಲ್ಲಿ ಕೊಹ್ಲಿ ಏನು ಮಾತನಾಡಿದ್ದರು ಎಂಬುದನ್ನು ಆರ್‌ಸಿಬಿ ಇದೀಗ ರಿವೀಲ್‌ ಮಾಡಿದೆ.

ಮೇ 31 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದಿದ್ದ ಫೈನಲ್‌ ಪಂದ್ಯದಲ್ಲಿ ಗುಜರಾತ್‌ ಟೈಟನ್ಸ್‌ ಎದುರು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ 5 ವಿಕೆಟ್‌ಗಳ ಗೆಲುವು ಪಡೆದಿತ್ತು. ಆ ಮೂಲಕ ರಜತ್‌ ಪಾಟಿದಾರ್‌ ಅವರ ನಾಯಕತ್ವದ ಆರ್‌ಸಿಬಿ ಸತತ ಎರಡನೇ ಬಾರಿ ಐಪಿಎಲ್‌ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತ್ತು. ಇದೀಗ ಆರ್‌ಸಿಬಿ, ಕೊಹ್ಲಿ ಹಾಗೂ ವೈಭವ್‌ ಅವರ ನಡುವಣ ಸಂಭಾಷಣೆಯ ವಿಡಿಯೊವನ್ನು ತನ್ನ ಸೋಶಿಯಲ್‌ ಮೀಡಿಯಾ ಖಾತೆಗಳಲ್ಲಿ ಅಪ್‌ಲೋಡ್‌ ಮಾಡಿದೆ.

ವೈಭವ್‌ ಸೂರ್ಯವಂಶಿಗೆ ಈಗಲೇ ಭಾರತ ತಂಡದಲ್ಲಿ ಚಾನ್ಸ್‌ ನೀಡಬೇಡಿ: ಸಂಜಯ್‌ ಮಾಂಜ್ರೇಕರ್‌!

ವೈಭವ್‌ ಸೂರ್ಯವಂಶಿ ಅವರಿಗೆ ಫೈನಲ್ ಪಂದ್ಯದ ಬಳಿಕ ಅನುಭವಿ ಕ್ರಿಕೆಟ್ ತಾರೆ ವಿರಾಟ್‌ ಕೊಹ್ಲಿ ಅವರನ್ನು ಭೇಟಿಯಾಗುವ ಅವಕಾಶ ದೊರೆಯಿತು. ಈ ವೇಳೆ ಮಾಜಿ ನಾಯಕ ಕೊಹ್ಲಿ, ಯುವ ಆಟಗಾರನೊಂದಿಗೆ ಮಾತುಕತೆ ನಡೆಸಿ ಅಮೂಲ್ಯವಾದ ಸಲಹೆಗಳನ್ನು ನೀಡಿದ್ದರು. ತಮ್ಮ ಅನುಭವವನ್ನು ಹಂಚಿಕೊಂಡ ಕೊಹ್ಲಿ, ಭವಿಷ್ಯದ ಬಗ್ಗೆ ಸ್ಪಷ್ಟ ದೃಷ್ಟಿಕೋನ ಹೊಂದಿರುವುದರ ಜೊತೆಗೆ ನಿರಂತರವಾಗಿ ಕಲಿಯುವ ಮನೋಭಾವವನ್ನು ಉಳಿಸಿಕೊಳ್ಳುವಂತೆ ಸೂರ್ಯವಂಶಿಗೆ ಮಾರ್ಗದರ್ಶನ ನೀಡಿದರು. ಅವರ ಈ ಸಲಹೆಗಳು ಯುವ ಆಟಗಾರನ ಮುಂದಿನ ಕ್ರಿಕೆಟ್ ಪಯಣಕ್ಕೆ ನೆರವಾಗಲಿವೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.



"ಇಲ್ಲಿಂದ ಇನ್ನೂ ಅಗ್ರ ದರ್ಜೆಗೆ ಹೋಗಬೇಕು. ಇದುವರೆಗೆ ಏನು ಸಾಧನೆಯಾಗಿದೆಯೋ ಅದು ನಿಮ್ಮ ಕಠಿಣ ಪರಿಶ್ರಮ ಮತ್ತು ಆತ್ಮವಿಶ್ವಾಸದ ಫಲ. ಈಗ ಯಾರು ಏನು ಹೇಳುತ್ತಾರೆ, ಹೇಗೆ ಮಾತನಾಡುತ್ತಾರೆ ಎಂಬುದಕ್ಕೆ ಗಮನ ಕೊಡಬೇಡ. ಆ ಮಾತುಗಳನ್ನು ಕೇಳದೆ ನಿನ್ನ ಆಟದ ಮೇಲೆ ಗಮನ ಹರಿಸು. ಎರಡು ವರ್ಷಗಳ ಕಾಲ ಬ್ಯಾಟ್‌ ಮೂಲಕ ಉತ್ತರ ಕೊಡು. ನಂತರ ಎಲ್ಲವೂ ತಾನಾಗಿಯೇ ಸಾಬೀತಾಗುತ್ತದೆ. ‘ಒಬ್ಬ ಬಿಹಾರಿ ಎಲ್ಲರಿಗಿಂತ ಮೇಲು’ ಎಂಬ ಮಾತಿನಂತೆ, ಬಳಿಕ ಆಟವೇ ಮುಗಿಯುತ್ತದೆ," ಎಂದು ವಿರಾಟ್‌ ಕೊಹ್ಲಿ ಹೇಳಿದ್ದಾರೆ.

ಭಾರತ ತಂಡಕ್ಕೆ ವೈಭವ್‌ ಸೂರ್ಯವಂಶಿ ಆಯ್ಕೆ; ಮೌನ ಮುರಿದ ಬಿಸಿಸಿಐ ಕಾರ್ಯದರ್ಶಿ

2026ರ ಐಪಿಎಲ್‌ ಟೂರ್ನಿಯಲ್ಲಿ ವೈಭವ್‌ ಸೂರ್ಯವಂಶಿ ಅವರು ವಿರಾಟ್‌ ಕೊಹ್ಲಿ ಅವರ ಆರ್‌ಸಿಬಿ ವಿರುದ್ಧ ಕಣಕ್ಕಿಳಿದಾಗ ಅದ್ಭುತ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ್ದರು. ಯುವ ಆರಂಭಿಕ ಬ್ಯಾಟರ್ ಕೇವಲ 26 ಎಸೆತಗಳಲ್ಲಿ 78 ರನ್‌ಗಳನ್ನು ಸಿಡಿಸಿ ಎಲ್ಲರ ಗಮನ ಸೆಳೆದರು. ಅನುಭವಿಗಳಿಂದ ಕೂಡಿದ್ದ ಬೌಲಿಂಗ್ ದಾಳಿಯನ್ನು ಅವರು ನಿರ್ಭೀತಿಯಿಂದ ಎದುರಿಸಿದರು. ಜಾಶ್‌ ಹೇಝಲ್‌ವುಡ್‌, ಕೃಣಾಲ್‌ ಪಾಂಡ್ಯ, ರಸಿಕ್‌ ದಾರ್‌ ಸಲಾಮ್‌ ಹಾಗೂ ಭುವನೇಶ್ವರ್‌ ಕುಮಾರ್‌ ಅವರಂತಹ ಬೌಲರ್‌ಗಳ ವಿರುದ್ಧ ಬ್ಯಾಟ್ ಬೀಸಿದ ಸೂರ್ಯವಂಶಿ, 300ರ ಅಸಾಧಾರಣ ಸ್ಟ್ರೈಕ್‌ರೇಟ್‌ನೊಂದಿಗೆ ಸ್ಫೋಟಕ ಇನಿಂಗ್ಸ್‌ ಆಡಿದರು. ಅವರ ಈ ಮಿಂಚಿನ ಪ್ರದರ್ಶನವು ಯುವ ಪ್ರತಿಭೆಯ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದು, ಭಾರತೀಯ ಕ್ರಿಕೆಟ್‌ನ ಭವಿಷ್ಯದ ಭರವಸೆಯ ಆಟಗಾರರಲ್ಲಿ ಒಬ್ಬರಾಗಿದ್ದಾರೆ.