ಬೆಂಗಳೂರು: ಆಸ್ಟ್ರೇಲಿಯಾದ ಸ್ಟಾರ್ ವೇಗದ ಬೌಲರ್ ಜಾಶ್ ಹೇಝಲ್‌ವುಡ್ (Josh Hazlewood) ಸದ್ಯ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಹಾಗಾಗಿ ಮಾರ್ಚ್ 28ರಂದು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯ ಆರಂಭಿಕ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಕ್ಕೆ ಆಸೀಸ್ ವೇಗಿ ಲಭ್ಯರಾಗುವುದು ಅನುಮಾನ. ಇದರೊಂದಿಗೆ 19ನೇ ಆವೃತ್ತಿಯ ಆರಂಭಕ್ಕೂ ಮುನ್ನ ರಜತ್ ಪಾಟಿದಾರ್ ನಾಯಕತ್ವದ ಆರ್‌ಸಿಬಿ ಭಾರಿ ಹಿನ್ನಡೆಯಾಗಿದೆ.
ಜಾಶ್ ಹೇಝಲ್‌ವುಡ್ ಕಳೆದ ನವೆಂಬರ್‌ನಲ್ಲಿ ನಡೆದಿದ್ದ ವಿಕ್ಟೋರಿಯಾ ಮತ್ತು ನ್ಯೂ ಸೌತ್ ವೇಲ್ಸ್ ನಡುವಿನ ಶೆಫೀಲ್ಡ್ ಶೀಲ್ಡ್ ಪಂದ್ಯದ ನಂತರ ಯಾವುದೇ ಸ್ಪರ್ಧಾತ್ಮಕ ಕ್ರಿಕೆಟ್ ಪಂದ್ಯವನ್ನೂ ಆಡಿಲ್ಲ. ಬಳಿಕ 2025–26ರ ಆಷಸ್ ಸರಣಿಗೆ ಮುನ್ನವೇ ಅವರು ಗಾಯದ ಕಾರಣದಿಂದ ತಂಡದಿಂದ ಹೊರಗುಳಿದಿದ್ದರು. ತದ ನಂತರ ಅವರನ್ನು ಆಸ್ಟ್ರೇಲಿಯಾದ ಟಿ20 ವಿಶ್ವಕಪ್ ತಂಡದಲ್ಲಿ ಸೇರಿಸಲಾಗಿತ್ತಾದರೂ ಐರ್ಲೆಂಡ್ ವಿರುದ್ಧದ ಆರಂಭಿಕ ಪಂದ್ಯಕ್ಕೂ ಐದು ದಿನಗಳ ಮುನ್ನ ಹೇಝಲ್‌ವುಡ್ ಮತ್ತೆ ಗಾಯಕ್ಕೆ ತುತ್ತಾಗಿದ್ದರು. ನಂತರ ಇವರ ಸ್ಥಾನಕ್ಕೆ ಬ್ಯಾಟರ್ ಸ್ಟೀವ್ ಸ್ಮಿತ್ ಸೇರಿಕೊಂಡಿದ್ದರು.
IPL 2026: ವೆಂಕಟೇಶ್ ಅಯ್ಯರ್ ಔಟ್! ಆರ್‌ಸಿಬಿ ಪ್ಲೇಯಿಂಗ್ XI ಕಟ್ಟಿದ ಸಂಜಯ್ ಬಾಂಗರ್!
“ಅವರು (ಜಾಶ್ ಹೇಝಲ್‌ವುಡ್) ಇನ್ನೂ ಫಿಸಿಯೋಗಳ ಮೇಲ್ವಿಚಾರಣೆಯಲ್ಲಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ ಅವರ ಆಡುವಿಕೆಯು ವೈದ್ಯಕೀಯ ಅನುಮತಿ ಸಿಗುವುದರ ಮೇಲೆ ಅವಲಂಬಿತವಾಗಿದೆ. ಇನ್ನೂ ಸಮಯ ಇದೆ, ಆದರೆ ಈ ಕ್ಷಣಕ್ಕಾಗಿ ನಾವು ಕಾದು ನೋಡಬೇಕಾಗಿದೆ," ಎಂದು ಮೂಲಗಳು ಹೇಳಿರುವುದನ್ನು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ಹತ್ತೊಂಬತ್ತನೇ ಆವೃತ್ತಿಯ ಐಪಿಎಲ್ ಟೂರ್ನಿಯ ಆರಂಭಿಕ 20 ಪಂದ್ಯಗಳ ವೇಳಾಪಟ್ಟಿಯನ್ನು ಬಿಸಿಸಿಐ ಮಾರ್ಚ್ 11 ರಂದು ಪ್ರಕಟಿಸಿತ್ತು. ಐದು ರಾಜ್ಯಗಳ ಚುನಾವಣೆಯ ದಿನಾಂಕಗಳನ್ನು ಚುನಾವಣಾ ಆಯೋಗ ಪ್ರಕಟಿಸಿದ ನಂತರ ಸಂಪೂರ್ಣ ವೇಳಾಪಟ್ಟಿಯನ್ನು ಸಾರ್ವಜನಿಕವಾಗಿ ಪ್ರಕಟಿಸಲಾಗುತ್ತದೆ. ಆದರೆ ಬೆಂಗಳೂರಿನಲ್ಲಿ ನಡೆಯಲಿರುವ ಪಂದ್ಯಗಳಿಗೆ ಕರ್ನಾಟಕ ಸರ್ಕಾರದ ತಜ್ಞ ಸಮಿತಿಯಿಂದ ಅನುಮೋದನೆ ಪಡೆಯುವುದು ಅಗತ್ಯವಾಗಿದೆ. ಸ್ಟೇಡಿಯಂ ಐಪಿಎಲ್ ಪಂದ್ಯಗಳನ್ನು ಆಯೋಜಿಸಲು ಸಿದ್ಧವಾಗಿದೆಯೇ ಎಂಬುದನ್ನು ಪರಿಶೀಲಿಸಲು ಈ ಸಮಿತಿ ಮಾರ್ಚ್ 13ರಂದು ಭೇಟಿ ನೀಡಿ ಪರಿಶೀಲನೆ ನಡೆಸುವ ನಿರೀಕ್ಷೆಯಿದೆ. ಜೊತೆಗೆ ಪಂದ್ಯ ದಿನದ ವ್ಯವಸ್ಥೆಗಳ ಕುರಿತು ಪರಿಶೀಲನೆ ನಡೆಸಲಾಗುತ್ತದೆ.
IPL 2026: ʻಆರ್‌ಸಿಬಿಗೆ ಎರಡನೇ ಟ್ರೋಫಿʼ-ವಿರಾಟ್ ಕೊಹ್ಲಿ ಬಗ್ಗೆ ಇರ್ಫಾನ್ ಪಠಾಣ್ ದೊಡ್ಡ ಹೇಳಿಕೆ!
2026ರ ಐಪಿಎಲ್‌ಗೆ ಆರ್‌ಸಿಬಿ ಸಂಪೂರ್ಣ ತಂಡ: ರಜತ್ ಪಾಟಿದಾರ್ (ನಾಯಕ), ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಕೃಣಾಲ್ ಪಾಂಡ್ಯ, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ರೊಮಾರಿಯೋ ಶೆಫರ್ಡ್, ಜಾಕೋಬ್ ಬೆಥೆಲ್, ಜಾಶ್ ಹೇಝಲ್‌ವುಡ್, ಯಶ್ ದಯಾಳ್, ಭುವನೇಶ್ವರ್ ಕುಮಾರ್, ನುವಾನ್ ತುಷಾರ, ರಾಸಿಖ್ ಸಲಾಂ, ಅಭಿನಂದನ್ ಸಿಂಗ್, ಸುಯಶ್ ಶರ್ಮಾ, ವೆಂಕಟೇಶ್ ಅಯ್ಯರ್, ಮಂಗೇಶ್ ಯಾದವ್, ಜಾಕೋಬ್ ಡಫಿ, ಸಾತ್ವಿಕ್ ದೇಸ್ವಾಲ್, ಜೋರ್ಡಾನ್ ಕಾಕ್ಸ್, ವಿಹಾನ್ ಮಲ್ಹೋತ್ರಾ, ಕಾನಿಷ್ಕ್ ಚೌಹಾಣ್, ವಿಕಿ ಓಸ್ತ್ವಾಲ್.