ಮುಂಬೈ: ಮುಂಬರುವ 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ನಿಮಿತ್ತ (IPL 2026) ಫ್ರಾಂಚೈಸಿಗಳು ಈಗಾಗಲೇ ಪೂರ್ವ ತಯಾರಿ ಆರಂಭಿಸಿವೆ. ಇದರ ನಡುವೆ ಸಂಜು ಸ್ಯಾಮ್ಸನ್ (Sanju Samson)ಈ ಬಾರಿ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ಪರ ಕಣಕ್ಕಿಳಿಯಲಿದ್ದಾರೆ. ಅವರನ್ನು ರಾಜಸ್ಥಾನ್ ರಾಯಲ್ಸ್ (Rajasthan Royals)ಕೈ ಬಿಟ್ಟ ಕಾರಣ ಸಿಎಸ್‌ಕೆ ತಂಡವನ್ನು ಸೇರಿಕೊಂಡಿದ್ದಾರೆ. ಇದರಿಂದ ಈ ಬಾರಿ ರಾಜಸ್ಥಾನ್ ತಂಡದ ನಾಯಕತ್ವ ವಹಿಸುವವರು ಯಾರು? ಎನ್ನುವ ಗೊಂದಲಗಳು ಶುರುವಾಗಿವೆ. ಈ ನಡುವೆ ರಾಜಸ್ಥಾನ್ ತಂಡದ ಆಟಗಾರ ರಿಯಾನ್ ಪರಾಗ್ (Riyan Parag) ತಂಡದ ಪೂರ್ಣಾವಧಿ ನಾಯಕನಾಗುವ ಸಾಧ್ಯತೆಗಳ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸೈಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿ ಸೇರಿದಂತೆ ದೇಶಿ ಕ್ರಿಕೆಟ್‌ನಲ್ಲಿ ಪರಾಗ್, ಅಸ್ಸಾಂ ತಂಡ ಹಾಗೂ ರಾಯಲ್ಸ್ ತಂಡವನ್ನು ಈ ಹಿಂದೆ ಮುನ್ನಡೆಸಿದ ಅನುಭವ ಹೊಂದಿದ್ದಾರೆ. ಸ್ಯಾಮ್ಸನ್ ಅನುಪಸ್ಥಿತಿಯಲ್ಲಿ ಅವರು ಈವರೆಗೆ 8 ಪಂದ್ಯಗಳಲ್ಲಿ ತಂಡದ ನಾಯಕತ್ವ ವಹಿಸಿದ್ದರು.
ಈ ಕುರಿತು ಸ್ಟಾರ್ ಸ್ಪೋರ್ಟ್ಸ್ ಜೊತೆ ಮಾಹಿತಿ ಹಂಚಿಕೊಂಡಿರುವ ರಾಜಸ್ಥಾನ್ ರಾಯಲ್ಸ್ ತಂಡದ ಆಟಗಾರ ರಿಯಾನ್ ಪರಾಗ್, "ಕಳೆದ ಋತುವಿನ ಐಪಿಎಲ್‌ನಲ್ಲಿ ನಾನು ಏಳರಿಂದ ಎಂಟು ಪಂದ್ಯಗಳಿಗೆ ನಾಯಕತ್ವ ವಹಿಸಿದ್ದೆ. ಡ್ರೆಸ್ಸಿಂಗ್ ರೂಮ್‌ನಲ್ಲಿ ನಾವು ನಿರ್ಧಾರಗಳನ್ನು ತೆಗೆದುಕೊಳ್ಳುವಾಗ, ನಾನು 80 ರಿಂದ 85 ಪ್ರತಿಶತದಷ್ಟು ಸರಿಯಾಗಿ ಕೆಲಸ ಮಾಡಿದ್ದೇನೆ," ಎಂದು ಅವರು ಹೇಳಿದ್ದಾರೆ.
IPL 2026: ಐಪಿಎಲ್ ಮಿನಿ ಹರಾಜಿನಲ್ಲಿ ಆಂಡ್ರೆ ರಸೆಲ್ ಮೇಲೆ ಕಣ್ಣಿರುವ 3 ತಂಡಗಳು!
ತಂಡ ಅವಕಾಶ ಕೊಟ್ಟರೆ ನಾಯಕತ್ವ ವಹಿಸಲು ಸಿದ್ಧ: ಪರಾಗ್
ಸದ್ಯದ ಮಟ್ಟಿಗೆ ಈ ಕುರಿತು ನನ್ನ ಬಳಿ ಯಾರೂ ಚರ್ಚಿಸಿಲ್ಲ. ಡಿಸೆಂಬರ್ 16ರಂದು ಅಬುಧಾಬಿಯಲ್ಲಿ ನಡೆಯಲಿರುವ ಈ ಬಾರಿಯ ಹರಾಜಿನ ಬಳಿಕ ನಾಯಕತ್ವದ ಕುರಿತು ನಿರ್ಧಾರ ಕೈಗೊಳ್ಳುವುದಾಗಿ ತಂಡದ ಮಾಲೀಕ ಮನೋಜ್ ಬಡಾಲೆ ತಿಳಿಸಿದ್ದಾರೆ ಎಂದು ಪರಾಗ್ ಹೇಳಿದರು.
ಈ ಕುರಿತು ಮಾತನಾಡಿರುವ ರಿಯಾನ್ ಪರಾಗ್, "ಮನೋಜ್ ಸರ್ ನಾಯಕತ್ವದ ಬಗ್ಗೆ ನಿರ್ಧಾರವನ್ನು ಹರಾಜಿನ ನಂತರ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ. ನಾನು ಈಗ ಅದರ ಬಗ್ಗೆ ಯೋಚಿಸಿದರೆ, ನನ್ನ ಮನಸ್ಥಿತಿಯನ್ನು ಹಾಳು ಮಾಡಿಕೊಳ್ಳುತ್ತೇನೆ. ತಂಡದ ಆಡಳಿತವು ನಾನು ನಾಯಕತ್ವಕ್ಕೆ ಸರಿಯಾದ ವ್ಯಕ್ತಿ ಎಂದು ಭಾವಿಸಿದರೆ, ನಾನು ನನ್ನ ಕೈ ಎತ್ತಲು ಸಿದ್ಧನಿದ್ದೇನೆ. ಒಬ್ಬ ಆಟಗಾರನಾಗಿ ನಾನು ಹೆಚ್ಚಿನ ಕೊಡುಗೆ ನೀಡಬಲ್ಲೆ ಎಂದು ಅವರು ಭಾವಿಸಿದರೆ, ನಾನು ಅದಕ್ಕೂ ಸಿದ್ಧನಿದ್ದೇನೆ. ನಾಯಕತ್ವ ಸುಲಭ ಎಂಬ ತಪ್ಪು ಕಲ್ಪನೆ ಎಲ್ಲರಿಗೂ ಇದೆ. ಆದರೆ ಅದು ಕ್ರಿಕೆಟ್ ಆಟವನ್ನು ಶೇಕಡಾ 20 ಕ್ಕೆ ಇಳಿಸುತ್ತದೆ. ನೀವು ಎಲ್ಲಾ ಸಭೆಗಳಿಗೆ ಹಾಜರಾಗಬೇಕು, ಪ್ರಾಯೋಜಕರ ಚಿತ್ರೀಕರಣಕ್ಕೆ ಹಾಜರಾಗಬೇಕು ಮತ್ತು ಮಾಧ್ಯಮಗಳಿಗೆ ಉತ್ತರಿಸಬೇಕು. ನಾನು ಒಬ್ಬ ವ್ಯಕ್ತಿಯಾಗಿ ಈ ವಿಷಯಗಳನ್ನು ನಿಭಾಯಿಸಬೇಕಾಗಿದೆ," ಎಂದು ಪರಾಗ್ ತಿಳಿಸಿದ್ದಾರೆ.
IPL 2026: ಡೆಲ್ಲಿ ಕ್ಯಾಪಿಟಲ್ಸ್ ನಾಯಕತ್ವವನ್ನು ನಿರಾಕರಿಸಿದ್ದೇಕೆಂದು ತಿಳಿಸಿದ ಕೆಎಲ್ ರಾಹುಲ್!
ಈಗಾಗಲೇ ಎಲ್ಲಾ ಫ್ರಾಂಚೈಸಿಗಳು ಈ ಬಾರಿಯ ಐಪಿಎಲ್ ಹರಾಜಿಗೆ ಸಜ್ಜಾಗಿದ್ದು, ಡಿಸೆಂಬರ್ 16ರಂದು ಅಬುಧಾಬಿಯಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ.