IPL 2026: ಐಪಿಎಲ್ ಮಿನಿ ಹರಾಜಿನಲ್ಲಿ ಆಂಡ್ರೆ ರಸೆಲ್ ಮೇಲೆ ಕಣ್ಣಿರುವ 3 ತಂಡಗಳು!
2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಮಿನಿ ಹರಾಜಿಗೂ ಮುನ್ನ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ವೆಸ್ಟ್ ಇಂಡೀಸ್ ಆಲ್‌ರೌಂಡರ್ ಆಂಡ್ರೆ ರಸೆಲ್ ಅವರನ್ನು ಬಿಡುಗಡೆ ಮಾಡಿದೆ. ಹಾಗಾಗಿ ಡಿಸೆಂಬರ್‌ನಲ್ಲಿ ನಡೆಯುವ ಮಿನಿ ಹರಾಜಿನಲ್ಲಿ ವಿಂಡೀಸ್ ಆಲ್‌ರೌಂಡರ್ ಹೆಚ್ಚಿನ ಬೇಡಿಕೆ ಬರಬಹುದು. ಅಂದ ಹಾಗೆ ರಸೆಲ್ ಅವರನ್ನು ಖರೀದಿಸಬಲ್ಲ ಮೂರು ತಂಡಗಳ ಬಗ್ಗೆ ಇಲ್ಲಿ ವಿವರಿಸಲಾಗಿದೆ.
2026ರ ಐಪಿಎಲ್ ಮಿನಿ ಹರಾಜಿನಲ್ಲಿ ಆಂಡ್ರೆ ರಸೆಲ್ ಮೇಲೆ ಕಣ್ಣಿಟ್ಟಿರುವ ಮೂರು ಫ್ರಾಂಚೈಸಿಗಳು. -
ನವದೆಹಲಿ: ಕೋಲ್ಕತ್ತಾ ನೈಟ್ ರೈಡರ್ಸ್ (Kolkata Knight Riders) ತಂಡ, 2014ರಲ್ಲಿ ವೆಸ್ಟ್ ಇಂಡೀಸ್ ದೈತ್ಯ ಆಲ್‌ರೌಂಡರ್ ಆಂಡ್ರೆ ರಸೆಲ್ (Andre Russell) ಅವರನ್ನು ಖರೀದಿಸಿತ್ತು. ಅವರು ಅಂದಿನಿಂದ 2025 ರವರೆಗೆ ಐಪಿಎಲ್‌ನಲ್ಲಿ ಕೆಕೆಆರ್ ಪರ ಆಡಿದ್ದರು. ಆ ಮೂಲಕ ಅವರು ಸಾಕಷ್ಟು ಮ್ಯಾಚ್ ವಿನ್ನಿಂಗ್ ಪ್ರದರ್ಶನವನ್ನು ತೋರಿದ್ದರು. ಆದಾಗ್ಯೂ, 2026ರ ಐಪಿಎಲ್ ಮಿನಿ (IPL 2026 Mini Auction) ಹರಾಜಿಗೂ ಮುನ್ನ ಕೋಲ್ಕತಾ ಫ್ರಾಂಚೈಸಿ ರಸೆಲ್ ಅವರನ್ನು ಬಿಡುಗಡೆ ಮಾಡಿದೆ.
ವೆಸ್ಟ್ ಇಂಡೀಸ್ ಆಲ್‌ರೌಂಡರ್ 11 ವರ್ಷಗಳ ಕಾಲ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪ್ರಮುಖ ಸದಸ್ಯರಾಗಿದ್ದರು. ಇದೀಗ ಅವರು ಮಿನಿ ಹರಾಜಿನ ಭಾಗವಾಗಲು ಸಜ್ಜಾಗಿದ್ದಾರೆ. ಆದ್ದರಿಂದ, ಹರಾಜಿನಲ್ಲಿ ಆಂಡ್ರೆ ರಸೆಲ್ ಅವರನ್ನು ಯಾವ ತಂಡಗಳು ಟಾರ್ಗೆಟ್ ಮಾಡಬಹುದೆಂದು ಇಲ್ಲಿ ವಿವರಿಸಲಾಗಿದೆ. ಕೆಕೆಆರ್ ಪರ ಆಡಿದ 139 ಪಂದ್ಯಗಳ 115 ಇನಿಂಗ್ಸ್‌ಗಳಲ್ಲಿ ಅವರು 13 ಅರ್ಧಶತಕಗಳು ಸೇರಿದಂತೆ 175ರ ಸ್ಟ್ರೈಕ್ ರೇಟ್‌ನಲ್ಲಿ 2658 ರನ್‌ಗಳನ್ನು ಸಿಡಿಸಿದ್ದಾರೆ. ರಸೆಲ್ ಇದರಲ್ಲಿ 187 ಬೌಂಡರಿಗಳು ಮತ್ತು 225 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಇನ್ನು ಕೆಕೆಆರ್ 124 ವಿಕೆಟ್‌ಗಳನ್ನು ಕಬಳಿಸಿದ್ದಾರೆ.
IPL 2026: ಆರ್‌ಸಿಬಿ ಸೇರಿದಂತೆ ಎಲ್ಲಾ 10 ಫ್ರಾಂಚೈಸಿಗಳು ಉಳಿಸಿಕೊಂಡಿರುವ, ಬಿಡುಗಡೆ ಮಾಡಿದ ಆಟಗಾರರ ಪಟ್ಟಿ!
1.ಡೆಲ್ಲಿ ಕ್ಯಾಪಿಟಲ್ಸ್
2026ರ ಐಪಿಎಲ್ ಮಿನಿ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್, ಆಂಡ್ರೆ ರಸೆಲ್ ಅವರನ್ನು ಟಾರ್ಗೆಟ್ ಮಾಡಬಹುದು. ಏಕೆಂದರೆ ಅಕ್ಷರ್ ಪಟೇಲ್ ನಾಯಕತ್ವದ ತಂಡದಲ್ಲಿ ಬಲಿಷ್ಠ ವಿದೇಶಿ ಆಲ್‌ರೌಂಡರ್ ಕೊರತೆಯಿದೆ. ರಸೆಲ್ ಡೆಲ್ಲಿಗೆ ಪರಿಪೂರ್ಣ ಆಲ್‌ರೌಂಡರ್ ಆಗಿರಬಹುದು. ಡೆಲ್ಲಿ ಕ್ಯಾಪಿಟಲ್ಸ್‌ನ ಸಣ್ಣ ಮೈದಾನಗಳಲ್ಲಿ ರಸೆಲ್ ಸುಲಭವಾಗಿ ಭರ್ಜರಿ ಸಿಕ್ಸರ್‌ಗಳನ್ನು ಹೊಡೆಯಬಹುದು. ಹಾಗಾಗಿ ಡೆಲ್ಲಿ ಫ್ರಾಂಚೈಸಿ ರಸೆಲ್ ಅವರನ್ನು ಖರೀದಿಸಲು ಬಯಸಬಹುದು.
2.ಚೆನ್ನೈ ಸೂಪರ್ ಕಿಂಗ್ಸ್
2026ರ ಐಪಿಎಲ್ ಮಿನಿ ಹರಾಜಿಗೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ತನ್ನ ಬಹುತೇಕ ಎಲ್ಲಾ ಆಟಗಾರರನ್ನು ಬಿಡುಗಡೆ ಮಾಡಿದೆ. ರವೀಂದ್ರ ಜಡೇಜಾ ಮತ್ತು ಸ್ಯಾಮ್ ಕರನ್ ನಿರ್ಗಮನದೊಂದಿಗೆ, ಮುಂಬರುವ ಮಿನಿ ಹರಾಜಿಗೂ ಮುನ್ನ ಕೆಳ ಮಧ್ಯಮ ಕ್ರಮಾಂಕದಲ್ಲಿ ಬೌಲ್ ಮಾಡಬಲ್ಲ ಮತ್ತು ಸ್ಫೋಟಕವಾಗಿ ಬ್ಯಾಟ್ ಮಾಡಬಲ್ಲ ಆಲ್‌ರೌಂಡರ್ ಅನ್ನು ಖರೀದಿಸಲು ಸಿಎಸ್‌ಕೆ ಎದುರು ನೋಡುತ್ತಿದೆ. ಈ ಪಾತ್ರಕ್ಕೆ ವಿಂಡೀಸ್ ಆಲ್‌ರೌಂಡರ್ ಸೂಕ್ತವಾಗಬಹುದು. ಏಕೆಂದರೆ ಈ ಹಿಂದೆ ಡ್ವೇನ್ ಬ್ರಾವೊ ಸಿಎಸ್‌ಕೆಗೆ ಈ ಪಾತ್ರವನ್ನು ನಿರ್ವಹಿಸಿದ್ದರು.
Andre Russell: ಕೋಲ್ಕತಾ ನೈಟ್ ರೈಡರ್ಸ್ ಜತೆಗಿನ 11 ವರ್ಷಗಳ ಪಯಣ ಮುಗಿಸಿದ ದೈತ್ಯ ಆಲ್‌ರೌಂಡರ್!
3.ಪಂಜಾಬ್ ಕಿಂಗ್ಸ್
ಮಿನಿ ಹರಾಜಿಗೂ ಮುನ್ನ ಪಂಜಾಬ್ ಕಿಂಗ್ಸ್ ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್‌ವೆಲ್ ಅವರನ್ನು ಬಿಡುಗಡೆ ಮಾಡಿದೆ. ಏಕೆಂದರೆ 2025ರ ಐಪಿಎಲ್ ಟೂರ್ನಿಯಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ನಿರೀಕ್ಷಿತ ಪ್ರದರ್ಶನವನ್ನು ತೋರುವಲ್ಲಿ ವಿಫಲರಾಗಿದ್ದರು. ಇದೀಗ ಪಂಜಾಬ್, ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಉತ್ತಮ ಪ್ರದರ್ಶನ ನೀಡಬಲ್ಲ ವಿದೇಶಿ ಆಲ್‌ರೌಂಡರ್ ಅನ್ನು ಹುಡುಕುತ್ತಿದೆ. ಇದಕ್ಕೆ ಆಂಡ್ರೆ ರಸೆಲ್ ಉತ್ತಮ ಆಯ್ಕೆ. ಕಳೆದ ಸೀಸನ್‌ನಲ್ಲಿ ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಪಂಜಾಬ್ ಕಿಂಗ್ಸ್ ಫೈನಲ್‌ಗೆ ಪ್ರವೇಶ ಮಾಡಿತ್ತು. ಆದರೆ, ಫೈನಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ದ ಸೋತು ರನ್ನರ್ ಅಪ್‌ಗೆ ತೃಪ್ತಿಪಟ್ಟಿತ್ತು.