ಮುಂಬೈ: ಬುಧವಾರ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಮುಂಬೈ ಇಂಡಿಯನ್ಸ್ (MI) ತಂಡ 6 ವಿಕೆಟ್‌ಗಳಿಂದ ಸೋಲು ಅನುಭವಿಸಿದ ಬಳಿಕ ಗಾಯದಿಂದ ಹೊರಗುಳಿದಿರುವ ಮಾಜಿ ನಾಯಕ ರೋಹಿತ್ ಶರ್ಮಾ (Rohit Sharma) ಡಗೌಟ್‌ನಲ್ಲಿ ಮುಖವನ್ನು ಕೈಯಿಂದ ಮುಚ್ಚಿಕೊಂಡ ಪ್ರಸಂಗ ನಡೆಯಿತು. ತಮ್ಮ ನಾಯಕತ್ವದಲ್ಲಿ ಐದು ಬಾರಿ ಚಾಂಪಿಯನ್ಸ್ ಮಾಡಿರುವ ತಮ್ಮ ತಂಡದ ಸತತ ಸೋಲುಗಳನ್ನು ನೋಡಲು ಸಾಧ್ಯವಾಗದೆ, ಅವರು ಈ ರೀತಿ ಬೇಸರ ಮಾಡಿಕೊಂಡರು. 243 ರನ್‌ಗಳ ಗುರಿಯನ್ನು ನೀಡಿದರೂ ಎದುರಾಳಿ ತಂಡವನ್ನು ಕಟ್ಟಿ ಹಾಕಲು ಸಾಧ್ಯವಾಗಲಿಲ್ಲವೆಂದು ಅವರು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
ರೋಹಿತ್ ಶರ್ಮಾ ಗಾಯಕ್ಕೆ ತುತ್ತಾಗಿದ್ದಾರೆ ಹಾಗೂ ಹಲವು ಪಂದ್ಯಗಳಿಂದ ಬೆಂಚ್ ಕಾಯುತ್ತಿದ್ದಾರೆ. ಅವರು ಮುಂದಿನ ಪಂದ್ಯಗಳಲ್ಲಿ ಕಣಕ್ಕೆ ಇಳಿಯುವ ಸಾಧ್ಯತೆ ಇದೆ. ಅಂದ್ ಹಾಗೆ ರೋಹಿತ್ ಶರ್ಮಾ ಅವರ ಅನುಪಸ್ಥಿತಿಯಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರ ರಯಾನ್ ರಿಕೆಲ್ಟನ್ (123* ರನ್) ಹಾಗೂ ವಿಲ್ ಜ್ಯಾಕ್ಸ್ (46 ರನ್) ಇನಿಂಗ್ಸ್ ಆರಂಭಿಸಿದರು. ಈ ಇಬ್ಬರೂ ಪವರ್‌ಪ್ಲೇನಲ್ಲಿ 78 ರನ್‌ಗಳನ್ನು ಕಲೆ ಹಾಕಿದ್ದರು. ಎಂಟನೇ ಓವರ್‌ನಲ್ಲಿ ವಿಲ್ ಜ್ಯಾಕ್ಸ್ ವಿಕೆಟ್ ಒಪ್ಪಿಸಿದ್ದರು.
IPL 2026: ಮುಂಬೈ ಇಂಡಿಯನ್ಸ್ ನಾಯಕನಾಗಿ ಹಾರ್ದಿಕ್ ಪಾಂಡ್ಯ ಸ್ಥಾನವನ್ನು ತುಂಬಬಲ್ಲ ಮೂವರು!
ನಮನ್ ಧೀರ್ 17 ಎಸೆತಗಳಲ್ಲಿ 22 ರನ್ ಗಳಿಸಿ ವಿಕೆಟ್ ಒಪ್ಪಿಸಿದರೆ, ನಾಯಕ ಹಾರ್ದಿಕ್ ಪಾಂಡ್ಯ 15 ಎಸೆತಗಳಲ್ಲಿ 31 ರನ್ ಗಳಿಸಿ ಔಟ್ ಆಗಿದ್ದರು. ಆದರೆ, ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು 20 ಓವರ್‌ಗಳನ್ನು ಪೂರ್ಣಗೊಳಿಸಿದ ರಯಾಲ್ ರಿಕೆಲ್ಟನ್ ಅವರು 55 ಎಸೆತಗಳಲ್ಲಿ ಮುಂಬೈ ಇಂಡಿಯನ್ಸ್ ಪರ ವೇಗದ ಶತಕ ಸಿಡಿಸಿದ್ದರು. ಆ ಮೂಲಕ ಮುಂಬೈ 243 ರನ್‌ಗಳನ್ನು ಕಲೆ ಹಾಕಿತ್ತು.
ಬಳಿಕ ಗುರಿ ಹಿಂಬಾಲಿಸಿದ ಸನ್‌ರೈಸರ್ಸ್ ಹೈದರಾಬಾದ್ ತಂಡದ ಪ್ರಮುಖ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿ ಹಾಕುವಲ್ಲಿ ಮುಂಬೈ ಬೌಲರ್‌ಗಳಿಂದ ಸಾಧ್ಯವಾಗಲಿಲ್ಲ. ಎಲ್ಲಾ ಬೌಲರ್‌ಗಳು 10.63ರ ಸರಾಸರಿಯಲ್ಲಿ ರನ್ ಬಿಟ್ಟುಕೊಟ್ಟರು. ಜಸ್‌ಪ್ರೀತ್ ಬುಮ್ರಾ ವಿಕೆಟ್ ಪಡೆಯದೆ 54 ರನ್‌ಗಳನ್ನು ನೀಡಿ ದುಬಾರಿ ಸ್ಪೆಲ್ ಬೌಲ್ ಮಾಡಿದರು. ಅಶ್ವಿನಿ ಕುಮಾರ್ ಎರಡು ಓವರ್‌ಗಳಿಗೆ 41 ರನ್‌ಗಳನ್ನು ಬಿಟ್ಟುಕೊಟ್ಟರು. ಘಝನ್‌ಫರ್ ಅವರು 51 ರನ್ ನೀಡಿದರೂ ಎರಡು ವಿಕೆಟ್ ಕಿತ್ತರು. ಟ್ರಾವಿಸ್ ಹೆಡ್ ಹಾಗೂ ಹೆನ್ರಿಕ್ ಕ್ಲಾಸೆನ್ ಅವರ ಸ್ಪೋಟಕ ಅರ್ಧಶತಕಗಳ ಬಲದಿಂದ ಸನ್‌ರೈಸರ್ಸ್ ತಂಡ 19ನೇ ಓವರ್‌ನಲ್ಲಿಯೇ ಗೆದ್ದು ಬೀಗಿತು.
IPL 2026ರಲ್ಲಿ ರನ್ ಹೊಳೆ ಹರಿಯಲು ಬಲವಾದ ಕಾರಣ ತಿಳಿಸಿದ ಮುತ್ತಯ್ಯ ಮುರಳಿಧರನ್!
ಪಂದ್ಯವನ್ನು ನೋಡುತ್ತಾ ಡಗೌಟ್‌ನಲ್ಲಿ ಕುಳಿತಿದ್ದ ರೋಹಿತ್ ಶರ್ಮಾ ಅಸಹಾಯಕರಾಗಿ ಕಾಣಿಸುತ್ತಿದ್ದರು. ನಾಯಕತ್ವದ ಗುಂಪಿನಲ್ಲಿ ಇಲ್ಲದ ಕಾರಣ ಅವರಿಂದ ಯಾವುದೇ ಸಲಹೆಗಳು ಹೊರಬರುತ್ತಿಲ್ಲ. ಪ್ರಸ್ತುತ ನಾಯಕ ಹಾರ್ದಿಕ್ ಪಾಂಡ್ಯ ಕೂಡ ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅವರು ತಮ್ಮ ಬೌಲರ್‌ಗಳನ್ನು ಬೆಂಬಲಿಸಿ, ತಂಡವು ಬೌಲರ್‌ಗಳ ಕಾರಣದಿಂದ ವಿಫಲವಾಗಿಲ್ಲ, ಬದಲಾಗಿ ತಂಡದೊಳಗಿನ ಏಕತೆಯ ಕೊರತೆಯಿಂದ ಸಮಸ್ಯೆ ಉಂಟಾಗಿದೆ ಎಂದು ಹೇಳಿದ್ದಾರೆ.
“ಈ ಸೀಸನ್‌ನಲ್ಲಿ ನಮ್ಮ ಬಳಿ ಹೆಚ್ಚು ಆಯ್ಕೆಗಳಿಲ್ಲ; ನಾವು ಯಾವ ಬದಲಾವಣೆಗಳನ್ನು ಮಾಡಬಹುದು ಎಂಬುದನ್ನು ನೋಡಬೇಕು. ನಾನು ನನ್ನ ಬೌಲರ್‌ಗಳನ್ನು ದೂರುವುದಿಲ್ಲ. ಒಟ್ಟಾರೆ ಒಂದು ತಂಡವಾಗಿ, ಮುಂಬೈ ಇಂಡಿಯನ್ಸ್ ಈ ಹಿಂದೆ ತೋರುತ್ತಿದ್ದ ಪ್ರದರ್ಶನವನ್ನು ನಾವು ತೋರಿಸಲು ಸಾಧ್ಯವಾಗಿಲ್ಲ. ನಾವು ಯಾವೆಲ್ಲಾ ಕೆಲಸ ಮಾಡಬೇಕು ಎಂಬುದನ್ನು ಗಂಭೀರವಾಗಿ ಪರಿಶೀಲಿಸಬೇಕು,” ಎಂದು ಹಾರ್ದಿಕ್ ಪಾಂಡ್ಯ ಪಂದ್ಯದ ನಂತರ ತಿಳಿಸಿದ್ದಾರೆ.