IPL 2026ರಲ್ಲಿ ರನ್ ಹೊಳೆ ಹರಿಯಲು ಬಲವಾದ ಕಾರಣ ತಿಳಿಸಿದ ಮುತ್ತಯ್ಯ ಮುರಳಿಧರನ್!
IPL 2026: 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಎಲ್ಲಾ ಪಂದ್ಯಗಳಲ್ಲಿ ಹೆಚ್ಚೂ-ಕಡಿಮೆ 200 ರನ್‌ಗಳು ದಾಖಲಾಗಿವೆ ಹಾಗೂ ಬೌಲರ್‌ಗಳು ದುಬಾರಿಯಾಗುತ್ತಿದ್ದಾರೆ. ಈ ಬಗ್ಗೆ ಸನ್‌ರೈಸರ್ಸ್ ಹೈದರಾಬಾದ್ ತಂಡದ ಸ್ಪಿನ್ ಬೌಲಿಂಗ್ ಕೋಚ್ ಮುತ್ತಯ್ಯ ಮುರಳಿಧರನ್ ಪ್ರತಿಕ್ರಿಯೆ ನೀಡಿದ್ದಾರೆ.
ಐಪಿಎಲ್ ಟೂರ್ನಿಯಲ್ಲಿ ರನ್ ಹೊಳೆ ಹರಿಸಲು ಕಾರಣ ತಿಳಿಸಿದ ಮುರಳಿಧರನ್. -
ನವದೆಹಲಿ: ಪ್ರಸ್ತುತ ನಡೆಯುತ್ತಿರುವ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2206) ಟೂರ್ನಿಯ ಬಹುತೇಕ ಪಂದ್ಯಗಳಲ್ಲಿ 200ಕ್ಕೂ ಅಧಿಕ ರನ್‌ಗಳು ದಾಖಲಾಗುತ್ತಿವೆ. ಜಸ್‌ಪ್ರೀತ್ ಬುಮ್ರಾ (Jasprit Bumrah) ಸೇರಿದಂತೆ ವಿಶ್ವದ ಘಟಾನುಘಟಿ ಬೌಲರ್‌ಗಳು ಕೂಡ ಈ ಸೀಸನ್‌ನಲ್ಲಿ ದುಬಾರಿಯಾಗುತ್ತಿದ್ದಾರೆ. ಇದಕ್ಕೆ ಕಾರಣವೇನೆಂದು ಸನ್‌ರೈಸರ್ಸ್ ಹೈದರಾಬಾದ್ ತಂಡದ ಸ್ಪಿನ್ ಬೌಲಿಂಗ್ ಕೋಚ್ ಮುತ್ತಯ್ಯ ಮುರಳಿಧರನ್ (Muttiah Muralitharan) ಬಹಿರಂಗಪಡಿಸಿದ್ದಾರೆ. ಕ್ರಿಕೆಟ್ ಅಭಿಮಾನಿಗಳಿಗೆ ಮನೋರಂಜನೆ ನೀಡುವ ಉದ್ದೇಶದಿಂದ ಐಪಿಎಲ್ ಟೂರ್ನಿಯನ್ನು ವಿನ್ಯಾಸಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ. ಐಪಿಎಲ್ ಅನ್ನು ಕ್ರಿಕೆಟ್ ಅಭಿವೃದ್ಧಿಗೆ ಒತ್ತು ನೀಡುವ ವೇದಿಕೆಯಾಗಿ ಅಲ್ಲದೆ, ಹೆಚ್ಚು ವ್ಯವಹಾರ ಮತ್ತು ಮನರಂಜನೆಗೆ ಸಂಬಂಧಿಸಿದ ಉತ್ಪನ್ನವಾಗಿ ನೋಡಲಾಗುತ್ತಿದೆ ಎಂದಿದ್ದಾರೆ.
ಬುಧವಾರ (ಏಪ್ರಿಲ್ 29) ರಾತ್ರಿ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಕಾದಾಟ ನಡೆಸಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಮುಂಬೈ ಇಂಡಿಯನ್ಸ್ 243 ರನ್‌ಗಳನ್ನು ಕಲೆ ಹಾಕಿತ್ತು. ಬಳಿಕ ಗುರಿಯನ್ನು ಹಿಂಬಾಲಿಸಿದ ಸನ್‌ರೈಸರ್ಸ್ ಹೈದರಾಬಾದ್ ತಂಡ ಒತ್ತಡವಿಲ್ಲದೆ 19ನೇ ಓವರ್‌ನಲ್ಲಿ ಗೆಲುವಿನ ದಡ ಸೇರಿತ್ತು. ಇದಕ್ಕೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ ನೀಡಿದ್ದ 265 ರನ್‌ಗಳ ಗುರಿಯನ್ನು ಪಂಜಾಬ್ ಕಿಂಗ್ಸ್ ಇನ್ನೂ 6 ಎಸೆತಗಳು ಬಾಕಿ ಇರುವಾಗಲೇ ಯಶಸ್ವಿಯಾಗಿ ಚೇಸ್ ಮಾಡಿತ್ತು.
ಇದೀಗ ತಂಡಗಳು ಇನಿಂಗ್ಸ್ ಅನ್ನು ನಿಧಾನವಾಗಿ ಆರಂಭಿಸುವ ಬದಲು ಪವರ್‌ಪ್ಲೇ ಅವಧಿಯಲ್ಲೇ ಆಕ್ರಮಣಕಾರಿ ಆಟ ಪ್ರದರ್ಶಿಸುತ್ತಿವೆ, ಇದರಿಂದ ಒಟ್ಟು ಸ್ಕೋರ್‌ಗಳು ಗಮನಾರ್ಹವಾಗಿ ಹೆಚ್ಚಾಗಿವೆ. ಟಾಪ್‌ಆರ್ಡರ್ ಬ್ಯಾಟರ್‌ಗಳು ಮಧ್ಯಮ ಕ್ರಮಾಂಕದ ಆಟಗಾರರು ಮತ್ತು ಫಿನಿಷರ್‌ಗಳಿಗಿಂತಲೂ ಹೆಚ್ಚು ವೇಗದಲ್ಲಿ ರನ್‌ಗಳನ್ನು ಗಳಿಸುತ್ತಿದ್ದಾರೆ.
ಸನ್‌ರೈಸರ್ಸ್ ಹೈದರಾಬಾದ್ ತಂಡದ ಗೆಲುವಿನ ಬಳಿಕ ಸುದ್ದಿಗೋಷ್ಠಿಯಲ್ಲಿ ಮುತ್ತಯ್ಯ ಮುರಳಿಧರನ್ ಅವರಿಗೆ ಇದೇ ಪ್ರಶ್ನೆಯನ್ನು ಕೇಳಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಅವರು, "ಹೆಚ್ಚಿನ ರನ್‌ಗಳನ್ನು ಗಳಿಸುವಂತಹ ಪಿಚ್‌ಗಳು ಇವಾಗಿವೆ. ನಾವು ಸಮತೋಲನಯುತ ಪಿಚ್‌ಗಳನ್ನು ಒದಗಿಸಿದರೆ, ಪ್ರೇಕ್ಷಕರಿಗೆ ಬಹುಶಃ ಇದರಿಂದ ಬೇಸರವಾಗಬಹುದು," ಎಂದು ಹೇಳಿದ್ದಾರೆ.
ಬೌಲರ್‌ಗಳು ಹೆಚ್ಚು ರನ್‌ಗಳನ್ನು ನೀಡುತ್ತಿರುವುದಕ್ಕೆ ಅವರನ್ನು ದೂರಬಾರದು ಎಂದು ಮುತ್ತಯ್ಯ ಮುರಳಿಧರನ್ ಹೇಳಿದ್ದಾರೆ. ಬದಲಾಗಿ, ಪಿಚ್ ಪರಿಸ್ಥಿತಿಗಳು ಮತ್ತು ಐಪಿಎಲ್‌ನ ವಿಸ್ತೃತ ರಚನೆಯೇ ಇದಕ್ಕೆ ಕಾರಣವೆಂದು ಅವರು ಸೂಚಿಸಿದ್ದಾರೆ. ಈ ವಿನ್ಯಾಸ ಮನರಂಜನೆಯನ್ನು ಹೆಚ್ಚಿಸುವ ರೀತಿಯಲ್ಲಿ ರೂಪಿಸಲಾಗಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
MI vs SRH: ಮುಂಬೈ ಇಂಡಿಯನ್ಸ್ ಎದುರು ಸನ್‌ರೈಸರ್ಸ್ ಹೈದರಾಬಾದ್‌ಗೆ ಅಧಿಕಾರಯುತ ಜಯ!
ಇಂಪ್ಯಾಕ್ಟ್ ನಿಯಮದ ಬಗ್ಗೆ ಮುರಳಿಧರನ್ ಅಭಿಪ್ರಾಯ
ಇದರ ಜೊತೆಗೆ, ಇಂಪ್ಯಾಕ್ಟ್ ಪ್ಲೇಯರ್ ನಿಯಮವು ಹೈ-ಸ್ಕೋರಿಂಗ್ ಪಂದ್ಯಗಳಿಗೆ ಹೇಗೆ ಕಾರಣವಾಗುತ್ತಿದೆ ಎಂಬುದನ್ನೂ ಅವರು ಉಲ್ಲೇಖಿಸಿದರು. ಈ ನಿಯಮದಿಂದ ಅಭಿಮಾನಿಗಳ ಆಸಕ್ತಿ ಹೆಚ್ಚುವುದಲ್ಲದೆ, ಪ್ರಾಯೋಜಕರು ಕೂಡ ನಿರಂತರವಾಗಿ ತೊಡಗಿಸಿಕೊಳ್ಳುತ್ತಾರೆ ಎಂದು ಹೇಳಿದರು.
ಇಂಪ್ಯಾಕ್ಟ್ ಸಬ್ ನಿಯಮವು ಬ್ಯಾಟಿಂಗ್ ಲೈನ್‌ಅಪ್‌ಗೆ ಹೆಚ್ಚಿನ ಡೆಪ್ತ್ ನೀಡಿದ್ದು, ಆರಂಭದಲ್ಲೇ ವಿಕೆಟ್‌ಗಳು ಬೀಳುವ ಅಪಾಯವನ್ನು ಕಡಿಮೆ ಮಾಡಿದೆ. ತಂಡಗಳು ನಂತರದ ಹಂತದಲ್ಲಿ ತಮ್ಮ ಬ್ಯಾಟಿಂಗ್ ಅನ್ನು ಬಲಪಡಿಸಿಕೊಳ್ಳಲು ಸಾಧ್ಯವಾಗುತ್ತಿದೆ.
“ಈ ಕಾಲದ ಅಭಿಮಾನಿಗಳು ಮನರಂಜನೆಗೆ ಹೆಚ್ಚು ಒತ್ತು ನೀಡುತ್ತಾರೆ. ಅವರು ಬೌಂಡರಿ ಮತ್ತು ಸಿಕ್ಸರ್‌ಗಳನ್ನು ನೋಡಲು ಇಷ್ಟಪಡುತ್ತಾರೆ. ಅದಕ್ಕಾಗಿಯೇ ಟೂರ್ನಿಯನ್ನು ಈ ರೀತಿಯಾಗಿ ರೂಪಿಸಲಾಗಿದೆ. ಹೆಚ್ಚುವರಿ ಆಟಗಾರ ಬಂದು ಬ್ಯಾಟ್ ಮಾಡುವ ವ್ಯವಸ್ಥೆ ಮತ್ತು ತಂಡಗಳು ಕಡಿಮೆ ಸ್ಕೋರ್‌ಗೆ ಸೀಮಿತವಾಗದಂತೆ ನೋಡಿಕೊಳ್ಳುವುದು.
ಇದು ಸಂಪೂರ್ಣವಾಗಿ ಮನರಂಜನೆಗೆ ಕೇಂದ್ರೀಕೃತವಾಗಿದೆ. ಕ್ರಿಕೆಟ್ ಅಭಿವೃದ್ಧಿಯ ದೃಷ್ಟಿಯಿಂದ ನೋಡಲಾಗುತ್ತಿಲ್ಲ. ಈಗ ಇದು ದೊಡ್ಡ ವ್ಯವಹಾರವಾಗಿದ್ದು, ಪ್ರಾಯೋಜಕರು ಮತ್ತು ಇತರೆ ಅಂಶಗಳು ಇದರ ಭಾಗವಾಗಿವೆ. ಪಂದ್ಯ ಬೇಸರವಾದರೆ, ಪ್ರಾಯೋಜಕರು ಮತ್ತು ಜನರ ಆಸಕ್ತಿ ಕಡಿಮೆಯಾಗುತ್ತದೆ,” ಎಂದು ಅವರು ಹೇಳಿದ್ದಾರೆ.