ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯ 19ನೇ ಆವೃತ್ತಿಯ ಟೂರ್ನಿಯಲ್ಲಿ ಮಾಜಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡವು ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ (CSK vs RR) ನಾಲ್ವರು ಆಟಗಾರರಿಗೆ ಪದಾರ್ಪಣೆ ಮಾಡುವ ಅವಕಾಶ ನೀಡಿದೆ. ಟಾಸ್ ವೇಳೆ ಸಿಎಸ್‌ಕೆ ನಾಯಕ ಋತುರಾಜ್ ಗಾಯಕ್ವಾಟ್ ಈ ವಿಷಯವನ್ನು ಬಹಿರಂಗ ಪಡಿಸಿದರು.
ಸಿಎಸ್‌ಕೆ ವರ್ಸಸ್ ಆರ್‌ಆರ್ ನಡುವಣ ಹೈ ವೋಲ್ಟೇಜ್ ಪಂದ್ಯದಲ್ಲಿ ಸಂಜು ಸ್ಯಾಮ್ಸನ್, ಕಾರ್ತಿಕ್ ಶರ್ಮಾ, ಮ್ಯಾಟ್ ಹೆನ್ರಿ ಮತ್ತು ಮ್ಯಾಥ್ಯೂ ಶಾರ್ಟ್ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಪದಾಪಣೆ ಮಾಡಿದರು. ಇದೇ ವೇಳೆ ಫಿಟ್ನೆಸ್ ಸಮಸ್ಯೆ ಕಾರಣ ಮಾಜಿ ನಾಯಕ ಹಾಗೂ ಸಿಎಸ್‌ಕೆ ದಿಗ್ಗಜ ಎಂಎಸ್ ಧೋನಿ ಆಡುವ 11ರ ಬಳಗದಿಂದ ಹೊರಗುಳಿದರು. ಅವರ ಅನುಪಸ್ಥಿತಿಯಲ್ಲಿ ಸಂಜು ಸ್ಯಾಮ್ಸನ್ ವಿಕೆಟ್‌ಕೀಪಿಂಗ್ ಜವಾಬ್ದಾರಿ ನಿಭಾಯಿಸುವುದು ಖಾತ್ರಿಯಾಯಿತು.
ಅಂದಹಾಗೆ ಪಂದ್ಯಕ್ಕೂ ಮೊದಲೇ ಸಂಜು ಸ್ಯಾಮ್ಸನ್, ಕಾರ್ತಿಕ್ ಶರ್ಮಾ ಮತ್ತು ಮ್ಯಾಟ್ ಹೆನ್ರಿ ತಂಡಕ್ಕೆ ಕಾಲಿಡಲಿದ್ದಾರೆ ಎಂಬುದು ನಿರೀಕ್ಷಿತವಾಗಿದ್ದರೂ, ಮ್ಯಾಟ್ ಶಾರ್ಟ್ ಸೇರ್ಪಡೆ ಅಚ್ಚರಿ ಆಗಿತ್ತು. ತಂಡದಲ್ಲಿ ಗಾಯಾಳುಗಳ ಸಮಸ್ಯೆ ಹೆಚ್ಚಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂಬುದು ತಿಳಿದುಬಂದಿದೆ.
IPL 2026: ಆರ್‌ಸಿಬಿಯನ್ನು ಗೆಲ್ಲಿಸಿ ಪತ್ನಿ ಅನುಷ್ಕಾ ಶರ್ಮಾಗೆ ಫ್ಲೈಯಿಂಗ್ ಕಿಸ್ ಕೊಟ್ಟ ವಿರಾಟ್ ಕೊಹ್ಲಿ!
ದಕ್ಷಿಣ ಆಫ್ರಿಕಾದ ಸ್ಪೋಟಕ ಬ್ಯಾಟ್ಸ್‌ಮನ್ ಡೆವಾಲ್ಡ್ ಬ್ರೆವಿಸ್ ಗಾಯಗೊಂಡಿರುವುದರಿಂದ ಈ ಪಂದ್ಯದಿಂದ ಹೊರಗುಳಿದಿದ್ದಾರೆ. ಅವರಿಗೆ ಸೈಡ್ ಸ್ಟ್ರೇನ್ ಸಮಸ್ಯೆ ಕಾಣಿಸಿಕೊಂಡಿದ್ದು, ಅವರ ಬದಲಿಗೆ ಮ್ಯಾಟ್ ಶಾರ್ಟ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಶಾರ್ಟ್ ಬ್ಯಾಟಿಂಗ್ ಜೊತೆಗೆ ಆಫ್ ಸ್ಪಿನ್ ಬೌಲಿಂಗ್ ಕೂಡ ಮಾಡಬಲ್ಲ ಆಟಗಾರನಾಗಿದ್ದು, ತಂಡದ ಸ್ಪಿನ್ ದಾಳಿಗೆ ಬಲ ನೀಡಬಲ್ಲರು.
ಇನ್ನೂ ಆರಂಭಿಕ ಆಘಾತ ಕಂಡ ಕಾರಣ ಸಿಎಸ್‌ಕೆ ತಂಡ ಮುಂಬೈಕರ್ ಸರ್ಫರಾಝ್ ಖಾನ್ ಅವರನ್ನು ಇಂಪ್ಯಾಕ್ಟ್ ಸಬ್ ಆಗಿ ಬಳಕೆ ಮಾಡಿಕೊಂಡಿತು. ಈ ಮೂಲಕ ಸರ್ಫರಾಝ್ ಖಾನ್ ಕೂಡ ಸಿಎಸ್‌ಕೆ ತಂಡಕ್ಕೆ ಪದಾರ್ಪಣೆ ಮಾಡಿದಂತ್ತಾಯಿತು. ಒಟ್ಟಾರೆ 5 ಹೊಸ ಆಟಗಾರರನ್ನು ಸಿಎಸ್‌ಕೆ ಮೊದಲ ಪಂದ್ಯದಲ್ಲೇ ಬಳಕೆ ಮಾಡಿಕೊಂಡಿದೆ.
IPL 2026: ರೋಹಿತ್ ಶರ್ಮಾ ರನ್ ಗಳಿಸುವ ಬಗ್ಗೆ ಡೇಲ್ ಸ್ಟೇನ್ ದೊಡ್ಡ ಹೇಳಿಕೆ!
ಆರ್‌ಆರ್ ವಿರುದ್ಧದ ಪಂದ್ಯದಲ್ಲಿ ಸಿಎಸ್‌ಕೆ ಕಣಕ್ಕಿಳಿಸಿದ ಪ್ಲೇಯಿಂಗ್ 11
01. ಋತುರಾಜ್ ಗಾಯಕ್ವಾಟ್ (ಕ್ಯಾಪ್ಟನ್/ ಓಪನರ್)
02. ಸಂಜು ಸ್ಯಾಮ್ಸನ್ (ವಿಕೆಟ್‌ಕೀಪರ್/ ಬ್ಯಾಟ್ಸ್‌ಮನ್)
03. ಆಯುಶ್ ಮಾತ್ರೆ (ಬ್ಯಾಟರ್)
04. ಮ್ಯಾಥ್ಯೂ ಶಾರ್ಟ್ (ಬ್ಯಾಟರ್)
05. ಶಿವಂ ದುಬೇ (ಆಲ್‌ರೌಂಡರ್)
06. ಕಾರ್ತಿಕ್ ಶರ್ಮಾ (ಆಲ್‌ರೌಂಡರ್)
07. ಜೇಮಿ ಓವರ್‌ಟರ್ನ್ (ಆಲ್‌ರೌಂಡರ್)
08. ನೂರ್ ಅಹ್ಮದ್ (ಸ್ಪಿನ್ನರ್)
09. ಮ್ಯಾಟ್ ಹೆನ್ರಿ (ಪೇಸರ್)
10.ಅನ್ಶುಲ್ ಕಂಬೋಜ್ (ಪೇಸರ್)
11.ಖಲೀಲ್ ಅಹ್ಮದ್ (ಎಡಗೈ ವೇಗಿ)
12.ಸರ್ಫರಾಝ್ ಖಾನ್ (ಬ್ಯಾಟರ್/ ಇಂಪ್ಯಾಕ್ಟ್ ಸಬ್)
ಗುವಾಹಟಿಯ ಬರ್ಸಾಪರ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಟಾಸ್ ಸೋತ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮೊದಲು ಬ್ಯಾಟ್ ಮಾಡುವಂತ್ತಾಯಿತು. ಕ್ಯಾಪ್ಟನ್ ಕೂಲ್ ಇಲ್ಲದೆ ಸಿಎಸ್‌ಕೆ ಕಣಕ್ಕಿಳಿದ ಅಪರೂಪದ ಪಂದ್ಯಗಳಲ್ಲಿ ಇದು ಒಂದು. 2019ರಲ್ಲಿ ಮುಂಬೈ ಇಂಡಿಯನ್ಸ್ ಎದುರು ಕೊನೆ ಬಾರಿ ಧೋನಿ ಸೇವೆ ಇಲ್ಲದೆ ಸಿಎಸ್‌ಕೆ ಕಣಕ್ಕಿಳಿದಿತ್ತು. ಆ ಪಂದ್ಯದಲ್ಲಿ ಚೆನ್ನೈ ತಂಡಕ್ಕೆ 1 ರನ್‌ಗಳ ವೀರೋಚಿತ ಸೋಲೆದುರಾಗಿತ್ತು.
ಸದ್ಯ ಎಂಎಸ್‌ಡಿ ಮೀನಖಂಡದ ಸ್ನಾಯು ಸೆಳೆತ ಸಮಸ್ಯೆ ಎದುರಿಸುತ್ತಿದ್ದಾರೆ. ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿ ತೆಗೆದುಕೊಂಡಿರುವ 44 ವರ್ಷದ ಹಿರಿಯ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಕೇವಲ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಮಾತ್ರ ತಮ್ಮ ಆಟ ಮುಂದುವರಿಸಿದ್ದು, 2026ರ ಟೂರ್ನಿ ಬಳಿಕ ಐಪಿಎಲ್‌ಗೂ ನಿವೃತ್ತಿ ಘೋಷಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.