ನವದೆಹಲಿ: ಮುಂಬರುವ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯ ಆರಂಭಿಕ ಹಂತದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಪ್ಲೇಯಿಂಗ್ XIನಲ್ಲಿ ಆಲ್‌ರೌಂಡರ್ ವೆಂಕಟೇಶ್ ಅಯ್ಯರ್‌ಗೆ (Venkatesh Iyer) ಸ್ಥಾನ ಸಿಗುವುದು ಅನುಮಾನ ಎಂದು ಭಾರತೀಯ ಕ್ರಿಕೆಟ್‌ನ ಸ್ಪಿನ್ ದಿಗ್ಗಜ ಅನಿಲ್ ಕುಂಬ್ಳೆ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಏಕೆಂದರೆ ಐಪಿಎಲ್ ಚಾಂಪಿಯನ್ ಪ್ಲೇಯಿಂಗ್ XI ಅನ್ನು ಬದಲಿಸಲು ಆರ್‌ಸಿಬಿ ಟೀಮ್ ಮ್ಯಾನೇಜ್‌ಮೆಂಟ್‌ಗೆ ಬಯಸುವುದಿಲ್ಲ ಎಂದು ಟೀಮ್ ಇಂಡಿಯಾ ಮಾಜಿ ನಾಯಕ ತಿಳಿಸಿದ್ದಾರೆ. ಅಂದ ಹಾಗೆ ಕೋಲ್ಕತಾ ನೈಟ್ ರೈಡರ್ಸ್ 2026ರ ಐಪಿಎಲ್ ಮಿನಿ ಹರಾಜಿಗೆ ಮಧ್ಯ ಪ್ರದೇಶ ಆಲ್‌ರೌಂಡರ್ ಅನ್ನು ರಿಲೀಸ್ ಮಾಡಿತ್ತು. ಅದರಂತೆ ಬೆಂಗಳೂರು ಫ್ರಾಂಚೈಸಿ 7 ಕೋಟಿ ರು. ಗಳಿಗೆ ಖರೀದಿಸಿತ್ತು.
ಅಬುಧಾಬಿಯಲ್ಲಿ ನಡೆದಿದ್ದ ಮಿನಿ ಹರಾಜಿನಲ್ಲಿ ವೆಂಕಟೇಶ್ ಅಯ್ಯರ್ ಅವರನ್ನು ಖರೀದಿಸಲು ಆರ್‌ಸಿಬಿ, ಕೆಕೆಆರ್ ಜೊತೆ ಪರಸ್ಪರ ಪೈಪೋಟಿ ನಡೆಸಿತ್ತು.ಅಂತಿಮವಾಗಿ 7 ಕೋಟಿ ರು. ಗಳಿಗೆ ಆರ್‌ಸಿಬಿ ವೆಂಕಟೇಶ್ ಅಯ್ಯರ್ ಅವರನ್ನು ಬೆಂಗಳೂರು ಫ್ರಾಂಚೈಸಿ ಖರೀದಿಸಿತ್ತು. ಜಿಯೊ ಸ್ಟಾರ್ ಜೊತೆ ಮಾತನಾಡಿದ ಅನಿಲ್ ಕುಂಬ್ಳೆ, ಆರ್‌ಸಿಬಿ ತನ್ನ ಗೆಲುವಿನ ಪ್ಲೇಯಿಂಗ್ XI ಬಗ್ಗೆ ಅನುಮಾನವನ್ನು ಹುಟ್ಟು ಹಾಕಲು ಇಷ್ಟವಿಲ್ಲ ಎಂದಿದ್ದಾರೆ.
"ವೆಂಕಟೇಶ್ ಅಯ್ಯರ್ ಆರಂಭದಲ್ಲಿ ಆರ್‌ಸಿಬಿಯ ಆಡುವ ಹನ್ನೊಂದರ ಬಳಗದಲ್ಲಿ ಇರುವುದಿಲ್ಲ. ಗೆಲ್ಲುವ ತಂಡದಲ್ಲಿ ಅನುಮಾನ ಸೃಷ್ಟಿಸಬಾರದು. ಅದಕ್ಕಾಗಿಯೇ ಅವರು ರವಿ ಬಿಷ್ಣೋಯ್ ಅವರನ್ನು ಬೆನ್ನಟ್ಟಲಿಲ್ಲ, ಆದ್ದರಿಂದ ಸುಯಶ್ ಶರ್ಮಾ ಭಾರತದ ಹಿರಿಯ ಸ್ಪಿನ್ನರ್‌ನಿಂದ ಬೆದರಿಕೆಗೆ ಒಳಗಾಗುವುದಿಲ್ಲ," ಎಂದು ಜಿಯೋಸ್ಟಾರ್‌ನ ಕ್ರಿಕೆಟ್ ಪಂಡಿತ ಅನಿಲ್ ಕುಂಬ್ಳೆ ಹೇಳಿದ್ದಾರೆ.
IPL 2026: ಮಿನಿ ಹರಾಜಿನಲ್ಲಿ ಕೋಟಿ-ಕೋಟಿ ಜೇಬಿಗಿಳಿಸಿಕೊಂಡ ಅನ್‌ಕ್ಯಾಪ್ಡ್ ಆಟಗಾರರು!
"ಆರ್‌ಸಿಬಿ ಬಿಡ್‌ನಿಂದ ಹೊರಗುಳಿಯಬಹುದು ಎಂದು ಭಾವಿಸಿತ್ತು, ಆದರೆ ಅವರು ಹಾಗೆ ಮಾಡಲಿಲ್ಲ, ಆದ್ದರಿಂದ ಅವರು ವೆಂಕಟೇಶ್ ಅಯ್ಯರ್ ಅವರನ್ನು ಹೊಂದಲು ಸಂತೋಷಪಡುತ್ತಾರೆ," ಎಂದು ಸ್ಪಿನ್ ದಿಗ್ಗಜ ತಿಳಿಸಿದ್ದಾರೆ.
ವೆಂಕಟೇಶ್ ಅಯ್ಯರ್ 62 ಐಪಿಎಲ್ ಪಂದ್ಯಗಳಿಂದ 1468 ರನ್‌ಗಳನ್ನು ಬಾರಿಸಿದ್ದಾರೆ. ಇದರಲ್ಲಿ ಅವರು ಕೆಕೆಆರ್ ಪರ ಒಂದು ಶತಕ ಹಾಗೂ 12 ಅರ್ಧಶತಕಗಳನ್ನು ಬಾರಿಸಿದ್ದಾರೆ. 2025ರ ಐಪಿಎಲ್ ಮೆಗಾ ಹರಾಜಿನಲ್ಲಿ ಕೋಲ್ಕತಾ ಫ್ರಾಂಚೈಸಿಯು ವೆಂಕಟೇಶ್ ಅಯ್ಯರ್ ಅವರನ್ನು 23.75 ಕೋಟಿ ರು. ಗಳಿಗೆ ಖರೀದಿಸಿತ್ತು. ಆದರೆ, ಕಳೆದ ಸೀಸನ್‌ನಲ್ಲಿ ಅಯ್ಯರ್ ಬ್ಯಾಟಿಂಗ್‌ನಲ್ಲಿ ವೈಫಲ್ಯ ಅನುಭವಿಸಿದ್ದರು. ಅವರು ಆಡಿದ 11 ಪಂದ್ಯಗಳಿಂದ 20.29ರ ಸರಾಸರಿಯಲ್ಲಿ ಕೇವಲ 142 ರನ್‌ಗಳಿಗೆ ಸೀಮಿತರಾಗಿದ್ದರು.
IPL 2026: ಕೊಹ್ಲಿ-ಸಾಲ್ಟ್ ಓಪನರ್ಸ್; ಹರಾಜಿನ ಬಳಿಕ ಆರ್‌ಸಿಬಿ ತಂಡದ ಬಲಿಷ್ಠ ಪ್ಲೇಯಿಂಗ್ XI
ಆರ್‌ಸಿಬಿ ಆಯ್ಕೆಯನ್ನು ಶ್ಲಾಘಿಸಿದ ಅನಿಲ್ ಕುಂಬ್ಳೆ
2025ರ ಐಪಿಎಲ್ ಗೆದ್ದಿದ್ದ ಬಹುತೇಕ ಆಟಗಾರರನ್ನು ಬೆಂಗಳೂರು ಫ್ರಾಂಚೈಸಿ ಉಳಿಸಿಕೊಂಡಿದೆ ಏಂದು ಹೇಳಿದ ಅನಿಲ್ ಕುಂಬ್ಳೆ, ಜಾಕೋಬ್ ಡಫಿ, ಜಾರ್ಡನ್ ಕಾಕ್ಸ್ ಹಾಗೂ ಯುವ ಆಲ್‌ರೌಂಡರ್ ಮಂಗೇಶ್ ಯಾದವ್ ಅವರನ್ನು ಖರೀದಿಸಿದೆ ಎಂದು ತಿಳಿಸಿದ್ದಾರೆ.
"ಚಾಂಪಿಯನ್ ಆಗಿದ್ದ ಬಹುತೇಕ ಆಟಗಾರರನ್ನು ಬೆಂಗಳೂರು ಫ್ರಾಂಚೈಸಿ ಉಳಿಸಿಕೊಂಡಿದೆ. ಒಂದು ವೇಳೆ ಈ ಆಟಗಾರರು ವಿಫಲರಾದರೆ, ಇವರಿಗೆ ಬ್ಯಾಕ್ ಅಪ್ ಆಗಿ ಕೆಲ ಆಟಗಾರರನ್ನು ಖರೀದಿಸಿದೆ," ಎಂದು ಸ್ಪಿನ್ ದಿಗ್ಗಜ ಹೇಳಿದ್ದಾರೆ.
"ಜಾಶ್ ಹೇಝಲ್‌ವುಡ್‌ಗೆ ಜಾಕೋಬ್ ಡಫಿ ಬ್ಯಾಕಪ್ ಆಗಲಿದ್ದಾರೆ ಮತ್ತು ಫಿಲ್ ಸಾಲ್ಟ್ ಬದಲಿಗೆ ಜೋರ್ಡಾನ್ ಕಾಕ್ಸ್ ಬ್ಯಾಕಪ್ ಆಗಲಿದ್ದಾರೆ. ಯಶ್ ದಯಾಳ್ ಬದಲಿಗೆ ಮಂಗೇಶ್ ಯಾದವ್ ಬ್ಯಾಕಪ್ ಆಗಿ ತಂಡಕ್ಕೆ ಸೇರ್ಪಡೆಗೊಳ್ಳುತ್ತಾರೆ. ಅವರು ಹೆಚ್ಚು ಕ್ರಿಕೆಟ್ ಆಡಿಲ್ಲದಿದ್ದರೂ, ಸಾಕಷ್ಟು ಸಾಮರ್ಥ್ಯ ಹೊಂದಿರುವ ಎಡಗೈ ಸೀಮರ್," ಎಂದು ಕುಂಬ್ಳೆ ತಿಳಿಸಿದ್ದಾರೆ.