ನವದೆಹಲಿ: ಪ್ರಸ್ತುತ ನಡೆಯುತ್ತಿರುವ 2026 ಇಂಡಿಯನ್ ಪ್ರೀಮಿಯರ್ ಲೀಗ್ (IPL 2206) ಟೂರ್ನಿಯಲ್ಲಿ 15ರ ವಯಸ್ಸಿನ ಬಾಲಕ ವೈಭವ್ ಸೂರ್ಯವಂಶಿ (Vaibhav Sooryavanshi) ತಮ್ಮ ಅಪಾಯಕಾರಿ ಬ್ಯಾಟಿಂಗ್ ಮೂಲಕ ಜಸ್‌ಪ್ರೀತ್ ಬುಮ್ರಾ ಸೇರಿದಂತೆ ವಿಶ್ವದ ಅಗ್ರ ದರ್ಜೆಯ ಬೌಲರ್‌ಗಳನ್ನು ನಡುಗಿಸಿದ್ದಾರೆ. ಅವರು ಇಲ್ಲಿಯವರೆಗೂ ಆಡಿದ 10 ಪಂದ್ಯಗಳಲ್ಲಿ 404 ರನ್‌ಗಳು ಮತ್ತು ಸುಮಾರು 238ರ ಸ್ಟ್ರೈಕ್ ರೇಟ್‌ನೊಂದಿಗೆ ರನ್ ಚಚ್ಚಿರುವುದು ಗಮನಾರ್ಹ ಸಂಗತಿ. ಆ ಮೂಲಕ ವಿಶ್ವ ಕ್ರಿಕೆಟ್‌ನ ಹೊಸ ಸೆನ್ಸೇಷನಲ್ ಆಗಿ ಹೊರ ಹೊಮ್ಮಿದ್ದಾರೆ. ಆದರೂ ಮಾಜಿ ಕ್ರಿಕೆಟಿಗ ಹಾಗೂ ನಿರೂಪಕ ಸಂಜಯ್ ಮಾಂಜ್ರೇಕರ್ ಅವರು ರಾಜಸ್ಥಾನ್ ರಾಯಲ್ಸ್ ಆರಂಭಿಕ ಬ್ಯಾಟ್ಸ್‌ಮನ್ ವೈಭವ್ ಸೂರ್ಯವಂಶಿ ಅವರ ಟೆಸ್ಟ್ ಕ್ರಿಕೆಟ್ ಕೌಶಲದ ಬಗ್ಗೆ ಪ್ರಶ್ನೆ ಮಾಡಿದ್ದಾರೆ.
ಸ್ಪೋರ್ಟ್‌ಸ್ಟಾರ್ ಪಾಡ್‌ಕ್ಯಾಸ್ಟ್‌ನಲ್ಲಿ ಸಂಜಯ್ ಮಾಂಜ್ರೇಕರ್, ವೈಭವ್ ಸೂರ್ಯವಂಶಿ ಅವರ ಸಾಮರ್ಥ್ಯಗಳನ್ನು ಅನುಮೋದಿಸಿದರು. ಆಧುನಿಕ ಕ್ರಿಕೆಟ್‌ಗೆ ತಕ್ಕಂತೆ ವೈಭವ್ ಭಯಮುಕ್ತವಾಗಿ ಬ್ಯಾಟ್ ಮಾಡುತ್ತಿದ್ದಾರೆ ಹಾಗೂ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಿಗೆ ಅವರು ಸಂಪೂರ್ಣವಾಗಿ ಸಿದ್ಧರಾಗಿದ್ದಾರೆ ಎಂದು ಅವರು ನಂಬಿದ್ದಾರೆ.
IPL 2026: ʻಒಂದು ಕಾಲದಲ್ಲಿ ನನ್ನನ್ನು ಟೆಸ್ಟ್ ಕ್ರಿಕೆಟ್‌ಗೆ ಸೀಮಿತ ಮಾಡಿದ್ದರುʼ-ಕೆಎಲ್ ರಾಹುಲ್!
ಆದಾಗ್ಯೂ, 15ರ ಪ್ರಾಯದ ಆಟಗಾರನ ತಾಂತ್ರಿಕ ದೋಷವನ್ನು ಎತ್ತಿ ತೋರಿಸಿದ್ದಾರೆ. ವೈಭವ್ ಆಗಾಗ್ಗೆ ಚೆಂಡಿನಿಂದ ದೂರ ನಿಂತು ತಮ್ಮ ಹೊಡೆತಗಳನ್ನು ಆಡುತ್ತಾರೆ ಎಂದು ಹೇಳಿದ್ದಾರೆ. ಐಪಿಎಲ್‌ನಲ್ಲಿ ಈ ವಿಧಾನವು ನಡೆಯಬಹುದು, ಆದರೆ ಇಂಗ್ಲೆಂಡ್ ಅಥವಾ ಆಸ್ಟ್ರೇಲಿಯಾದ ಬೌನ್ಸ್ ಪಿಚ್‌ಗಳಲ್ಲಿ ವಿಶೇಷ ಟೆಸ್ಟ್ ಕ್ರಿಕೆಟ್‌ನಲ್ಲಿ ಈ ತಂತ್ರವು ಕೆಲಸ ಮಾಡುವುದಿಲ್ಲ ಎಂದು ಆರ್‌ಆರ್ ಬ್ಯಾಟ್ಸ್‌ಮನ್‌ಗೆ ಎಚ್ಚರಿಕೆ ನೀಡಿದ್ದಾರೆ.
ದುಡ್ಡು ಮಾಡಬೇಕೆಂದರೆ ಸ್ಪೋಟಕ ಬ್ಯಾಟಿಂಗ್ ಶೈಲಿ ಸಾಕು
"ನಿಮ್ಮ ಮಗುವನ್ನು ಶ್ರೀಮಂತ ಮತ್ತು ಪ್ರಸಿದ್ಧನನ್ನಾಗಿ ಮಾಡುವುದು ನಿಮ್ಮ ಏಕೈಕ ಮಹತ್ವಾಕಾಂಕ್ಷೆಯಾಗಿದ್ದರೆ, ಟಿ20 ಕ್ರಿಕೆಟ್‌ನ ಸ್ಫೋಟಕ ಬ್ಯಾಟಿಂಗ್ ಶೈಲಿ ಸಾಕು. ಆದರೆ, ಕ್ರಿಕೆಟ್ ವಿಮರ್ಶಕರು ಮತ್ತು ಒಟ್ಟಾರೆಯಾಗಿ ಕ್ರಿಕೆಟ್ ಜಗತ್ತು ನಿಮ್ಮನ್ನು ನಿಜವಾಗಿಯೂ ಗೌರವಿಸಬೇಕೆಂದು ನೀವು ಬಯಸಿದರೆ, ನೀವು ಟೆಸ್ಟ್ ಕ್ರಿಕೆಟ್‌ನ ಸೂಕ್ಷ್ಮ ವ್ಯತ್ಯಾಸಗಳನ್ನು ಕರಗತ ಮಾಡಿಕೊಳ್ಳಬೇಕು," ಎಂದು ಸಂಜಯ್ ಮಾಜ್ರೇಕರ್ ಹೇಳಿದ್ದಾರೆ.
ಆರ್‌ಸಿಬಿ ಜತೆ 18 ವರ್ಷ ಸಮಯ ಕಳೆದಿದ್ದ ಎವನ್ ಸ್ಪೀಚ್ಲಿಗೆ ವಿರಾಟ್ ಕೊಹ್ಲಿ ಭಾವನಾತ್ಮಕ ಸಂದೇಶ!
ವೈಭವ್ ಸೂರ್ಯವಂಶಿ ತಮ್ಮ ಬ್ಯಾಟಿಂಗ್ ಪರಾಕ್ರಮದಿಂದ ಗಮನ ಸೆಳೆದಿದ್ದರೂ ಭಾರತ ತಂಡಕ್ಕೆ ಅವರ ಹಾದಿ ಸುಲಭವಲ್ಲ. ಮಾಂಜ್ರೇಕರ್ ಒಂದು ಸಂಬಂಧಿತ ಪ್ರಶ್ನೆಯನ್ನು ಎತ್ತಿದರು.
"ಶುಭಮನ್ ಗಿಲ್ ಮತ್ತು ಯಶಸ್ವಿ ಜೈಸ್ವಾಲ್‌ನಂತಹ ಸ್ಟಾರ್‌ಗಳು 15 ವರ್ಷದ ಹುಡುಗನಿಗಾಗಿ ತಮ್ಮ ಸ್ಥಾನಗಳನ್ನು ಸ್ವಇಚ್ಛೆಯಿಂದ ತ್ಯಜಿಸುತ್ತಾರೆಯೇ? ಭಾರತ ತಂಡದಲ್ಲಿ ಆರಂಭಿಕ ಸ್ಥಾನಗಳಿಗೆ ಈಗಾಗಲೇ ದೀರ್ಘ ಸರತಿ ಸಾಲು ಇದೆ. ಪರಿಣಾಮವಾಗಿ, ವೈಭವ್ ಸ್ಫೋಟಕ ಬ್ಯಾಟಿಂಗ್‌ನತ್ತ ಮಾತ್ರವಲ್ಲದೆ ಸ್ಥಿರತೆ ಮತ್ತು ತಾಂತ್ರಿಕ ಪರಿಷ್ಕರಣೆಯತ್ತಲೂ ಗಮನಹರಿಸಬೇಕು. ಅವರು ಐಪಿಎಲ್ ಪ್ರದರ್ಶನವನ್ನು ಮಾತ್ರ ನೆಚ್ಚಿಕೊಳ್ಳಬಾರದು," ಎಂದು ಸಂಜಯ್ ಮಾಂಜ್ರೇಕರ್ ಸಲಹೆ ನೀಡಿದ್ದಾರೆ.