ಆರ್‌ಸಿಬಿ ಜತೆ 18 ವರ್ಷ ಸಮಯ ಕಳೆದಿದ್ದ ಎವನ್ ಸ್ಪೀಚ್ಲಿಗೆ ವಿರಾಟ್ ಕೊಹ್ಲಿ ಭಾವನಾತ್ಮಕ ಸಂದೇಶ!
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಕಳೆದ 18 ವರ್ಷಗಳಿಂದ ಹೆಡ್ ಫಿಸಿಯೊ ಆಗಿ ಸೇವೆ ಸಲ್ಲಿಸಿದ್ದ ಎವನ್ ಸ್ಪೀಚ್ಲಿ ಅವರು ವಿದಾಯ ಹೇಳಿದ್ದಾರೆ. ಆ ಮೂಲಕ ತಮ್ಮ ದೀರ್ಘಾವಧಿ ಆರ್‌ಸಿಬಿ ಜೊತೆಗಿನ ಪಯಣವನ್ನು ಅಂತ್ಯ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಭಾವನಾತ್ಮಕ ಸಂದೇಶ ರವಾನಿಸಿದ್ದಾರೆ.
ಎವನ್ ಸ್ಪೀಚ್ಲಿಗೆ ವಿರಾಟ್ ಕೊಹ್ಲಿ ಭಾವನಾತ್ಮಕ ಸಂದೇಶ. -
ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿದ ಸದಸ್ಯರಲ್ಲಿ ಒಬ್ಬರಾದ ಮಾಜಿ ಹೆಡ್ ಫಿಸಿಯೊ ಎವನ್ ಸ್ಪೀಚ್ಲಿ (Evan Speechly) ಅವರ ಪಯಣ ಅಂತ್ಯವಾಗಿದೆ. 2008ರಿಂದ 2025ರವರೆಗೆ 18 ವರ್ಷಗಳ ಕಾಲ ತಂಡಕ್ಕೆ ಸೇವೆ ಸಲ್ಲಿಸಿದ್ದ ಸ್ಪೀಚ್ಲಿಗೆ ಆರ್‌ಸಿಬಿ ಭಾವನಾತ್ಮಕ ವಿದಾಯ ಸಮರ್ಪಿಸಿದೆ. ಐಪಿಎಲ್ ಪ್ರವಾಸದ ಹಲವು ಸೀಸನ್‌ಗಳಲ್ಲಿ ಆರ್‌ಸಿಬಿ ತಂಡದಲ್ಲಿ ಎಲೆಮರೆಯ ಕಾಯಿಯಂತೆ ಕಾರ್ಯನಿರ್ವಹಿಸಿದ್ದ ಸ್ಪೀಚ್ಲಿ, ವಿಶೇಷ ವಿದಾಯದ ಕಾರ್ಯಕ್ರಮಕ್ಕಾಗಿ ಮತ್ತೆ ಬೆಂಗಳೂರಿಗೆ ಆಗಮಿಸಿದರು. ಈ ಸಂದರ್ಭದಲ್ಲಿ ಆಟಗಾರರು ಹಾಗೂ ಸಹಾಯಕ ಸಿಬ್ಬಂದಿ ಒಂದೇ ವೇದಿಕೆಯಲ್ಲಿ ಸೇರಿ ಅವರ ಕೊಡುಗೆಗಳನ್ನು ಗೌರವಿಸಿದರು.
ಎವಾನ್ ಸ್ಪೀಚ್ಲಿ ಅವರ ಬೀಳ್ಕೋಡುಗೆ ಕಾರ್ಯಕ್ರಮದಲ್ಲಿ ಆರ್‌ಸಿಬಿ ಆಟಗಾರರು ಕೂಡ ಉಪಸ್ಥಿತರಿದ್ದರು. ವಿಶೇಷವಾಗಿ ಎವನ್ ಅವರ ಜೊತೆಗೆ 18 ವರ್ಷಗಳ ಸಮಯ ಕಳೆದಿರುವ ಏಕೈಕ ಸದಸ್ಯ ವಿರಾಟ್ ಕೊಹ್ಲಿ. ಹಾಗಾಗಿ ವಿರಾಟ್ ಕೊಹ್ಲಿ ಈ ಸಂದರ್ಭದಲ್ಲಿ ಎವನ್ ಸ್ಪೀಚ್ಲಿ ಅವರಿಗೆ ಭಾವನಾತ್ಮಕ ಸಂದೇಶವನ್ನು ರವಾನಿಸಿದ್ದಾರೆ.
“ಆರ್‌ಸಿಬಿಯಲ್ಲಿ ನಾನು ಬಹುಶಃ ನಿಮ್ಮೊಂದಿಗೇ ಹೆಚ್ಚು ಸಮಯ ಕಳೆದಿದ್ದೇನೆ. ನೀವು ಈ ತಂಡದ ಮೂಲ ಸದಸ್ಯರಲ್ಲಿ ಒಬ್ಬರು. ನಿಮ್ಮ ಪರಿಶ್ರಮ ಮತ್ತು ವೃತ್ತಿಪರತೆಯ ಜೊತೆಗೆ, ನಿಮ್ಮ ದಯೆ, ಕಾಳಜಿ ಮತ್ತು ಪ್ರಾಮಾಣಿಕತೆಯೇ ಯಾವಾಗಲೂ ವಿಶೇಷವಾಗಿ ಗಮನ ಸೆಳೆದಿವೆ. ಈ ಗುಣಗಳನ್ನು ನಾನು ಸದಾ ನನ್ನೊಂದಿಗೆ ತೆಗೆದುಕೊಂಡು ಹೋಗುತ್ತೇನೆ. ನೀವು ಈ ಕುಟುಂಬದ ಭಾಗವಾಗಿದ್ದೀರಿ, ಇದ್ದೀರಿ ಮತ್ತು ಮುಂದೆಯೂ ಇರುತ್ತೀರಿ ಎಂದು ಹೇಳಲು ಹೆಮ್ಮೆಯಾಗಿದೆ. ನಾವು ನಿಮ್ಮನ್ನು ಎಂದಿಗೂ ಮಮತೆಯಿಂದ ನೆನಪಿಸಿಕೊಳ್ಳುತ್ತೇವೆ,” ಎಂದು ಕೊಹ್ಲಿ ಅವರು ಆರ್‌ಸಿಬಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ವಿಡಿಯೊದಲ್ಲಿ ಹೇಳಿದ್ದಾರೆ.
ಸ್ಕ್ಯಾನಿಂಗ್‌ಗೆ ಲಂಡನ್‌ಗೆ ಮರಳಿದ ಫಿಲ್ ಸಾಲ್ಟ್; ಆರ್‌ಸಿಬಿಗೆ ಆತಂಕ
ಆರ್‌ಸಿಬಿ ಕ್ರಿಕೆಟ್ ಡೈರೆಕ್ಟರ್ ಬೊಬಾಟ್ ಹೇಳಿದ್ದೇನು?
“ಎವಾನ್ ನಮ್ಮ ಹೆಡ್ ಫಿಸಿಯೊ ಆಗಿ ದೀರ್ಘಕಾಲ ಸೇವೆ ಸಲ್ಲಿಸಿದ್ದಾರೆ. ಅವರ ಕೊಡುಗೆಯನ್ನು ಗುರುತಿಸಲು, ಅವರೊಂದಿಗೆ ಕೆಲವು ಕ್ಷಣಗಳನ್ನು ಕಳೆಯಲು ಮತ್ತು ಆರ್‌ಸಿಬಿಗಾಗಿ ಅವರು ಮಾಡಿದ ಎಲ್ಲ ಸಾಧನೆಗಳನ್ನು ಆಚರಿಸಲು ನಾವು ಅವರನ್ನು ಮತ್ತೆ ಕರೆತಂದಿದ್ದೇವೆ,” ಎಂದು ಆರ್‌ಸಿಬಿ ಕ್ರಿಕೆಟ್ ಡೈರೆಕ್ಟರ್ ಬೋಬಾಟ್ ಹೇಳಿದ್ದಾರೆ.
𝙀𝙣𝙙 𝙤𝙛 𝙖𝙣 𝙚𝙧𝙖, 𝙀𝙫𝙖𝙣 𝙎𝙥𝙚𝙚𝙘𝙝𝙡𝙮! Your legacy at RCB will always be remembered. 🙌❤️
— Royal Challengers Bengaluru (@RCBTweets) May 4, 2026
Evan Speechly was our Head Physio for 18 long years, from 2008 to 2025 - one of the OGs of RCB. He flew down to Bengaluru for a special farewell, and we were all teary eyed!… pic.twitter.com/fjVJR80V1j
ಆರ್‌ಸಿಬಿ ಕುಟುಂಬವಿದ್ದಂತೆ: ಎವನ್ ಸ್ಪೀಚ್ಲಿ
“ನಿನ್ನೆ(ಸೋಮವಾರ) ಹೋಟೆಲ್‌ಗೆ ಕಾಲಿಟ್ಟಾಗ ಅದು ಮನೆಗೆ ಮರಳಿದಂತೆ ಅನುಭವವಾಯಿತು. ನಮ್ಮಲ್ಲಿ ಅನೇಕರು ಇಲ್ಲಿ ಬಹುಕಾಲದಿಂದ ಇದ್ದೇವೆ ಮತ್ತು ಆರ್‌ಸಿಬಿ ಎಂದಿಗೂ ಕುಟುಂಬದಂತೆಯೇ ಅನುಭವವಾಗಿದೆ. ವಿಶ್ವ ಕ್ರಿಕೆಟ್‌ನಲ್ಲಿರುವ ಪ್ರತಿಯೊಬ್ಬರೂ ಕನಿಷ್ಠ ಒಂದು ಸೀಸನ್‌ಗೆ ಇಲ್ಲಿ ಸಮಯ ಕಳೆಯಲು ಇಷ್ಟಪಡುತ್ತಾರೆ. ಆದರೆ ನನಗೆ 18 ಸೀಸನ್‌ಗಳ ಅನುಭವ ಸಿಕ್ಕಿರುವುದು ಅದೃಷ್ಟ. ನಾನು ಯಾವಾಗಲೂ ಆರ್‌ಸಿಬಿಯ ಭಾಗವಾಗಿಯೇ ಭಾವಿಸುತ್ತೇನೆ,” ಎಂದು ಎವನ್ ಸ್ಪೀಚ್ಲಿ ತಿಳಿಸಿದ್ದಾರೆ.
ಸುಮಾರು ಎರಡು ದಶಕಗಳ ಕಾಲ ಆರ್‌ಸಿಬಿಯಲ್ಲಿ ಸೇವೆ ಸಲ್ಲಿಸಿದ ಸ್ಪೀಚ್ಲಿ, ಹಲವು ತಲೆಮಾರುಗಳ ಆಟಗಾರರೊಂದಿಗೆ ಕೆಲಸ ಮಾಡಿದ್ದು, ತಂಡದ ವಿಶ್ವಾಸಾರ್ಹ ಮತ್ತು ಗೌರವಾನ್ವಿತ ಸದಸ್ಯ ಎಂಬ ಹೆಗ್ಗಳಿಕೆಯನ್ನು ಗಳಿಸಿದ್ದರು. ಈ ಬೀಳ್ಕೊಡುಗೆ ಕಾರ್ಯಕ್ರಮವು ಫ್ರಾಂಚೈಸಿಯ ಸಂಸ್ಕೃತಿ ಮತ್ತು ಪರಂಪರೆಯನ್ನು ರೂಪಿಸುವಲ್ಲಿ ಹಿನ್ನೆಲೆಯಲ್ಲಿ ಕೆಲಸ ಮಾಡುವ ವ್ಯಕ್ತಿಗಳ ಮಹತ್ವವನ್ನು ಮತ್ತೊಮ್ಮೆ ನೆನಪಿಸಿತು.
ಅಗ್ರ ಸ್ಥಾನದ ಮೇಲೆ ಆರ್‌ಸಿಬಿ ಕಣ್ಣು
ರಜತ್ ಪಾಟಿದಾರ್ ನಾಯಕತ್ವದ ಆರ್‌ಸಿಬಿ ತಂಡ ಇಲ್ಲಿವರೆಗೂ ಆಡಿದ 9 ಪಂದ್ಯಗಳಲ್ಲಿ ಆರರಲ್ಲಿ ಗೆಲುವು ಸಾಧಿಸಿದ್ದು, ಇನ್ನುಳಿದ ಮೂರರಲ್ಲಿ ಸೋಲು ಅನುಭವಿಸಿದೆ. ಇದೀಗ ಟೂರ್ನಿಯ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಅಲಂಕರಿಸಿದೆ. ಇದರ ಜೊತೆಗೆ ಇತರೆ ತಂಡಗಳಿಗಿಂತ ಉತ್ತಮ ರನ್ ರೇಟ್ ಅನ್ನು ಆರ್‌ಸಿಬಿ (+1.420) ಕಾಯ್ದುಕೊಂಡಿದೆ. ಏಪ್ರಿಲ್ 30 ರಂದು ತನ್ನ ಕೊನೆಯ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಎದುರು 4 ವಿಕೆಟ್‌ಗಳ ಸೋಲು ಅನುಭವಿಸಿತ್ತು. ಇದೀಗ ಆರ್‌ಸಿಬಿ ಮೇ 7 ರಂದು ಏಕನಾ ಕ್ರೀಡಾಂಗಣದಲ್ಲಿ ಲಖನೌ ಸೂಪರ್ ಜಯಂಟ್ಸ್ ವಿರುದ್ಧ ಮುಂದಿನ ಪಂದ್ಯವನ್ನು ಆಡಲಿದೆ.