ನವದೆಹಲಿ: ಬಹುನಿರೀಕ್ಷಿತ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿ ಆರಂಭವಾಗಲು ದಿನಗಣನೆ ಶುರುವಾಗಿದ್ದು, ಈಗಾಗಲೇ ಎಲ್ಲಾ ಫ್ರಾಂಚೈಸಿಗಳು ಸಿದ್ಧತೆ ನಡೆಸುತ್ತಿವೆ. ಇದಾಗಿಯೂ, ಪಶ್ಚಿಮ ಬಂಗಾಳ ಮತ್ತು ತಮಿಳುನಾಡು ಸೇರಿದಂತೆ ಕೆಲವು ರಾಜ್ಯಗಳಲ್ಲಿ ಚುನಾವಣೆ ಇರುವುದರಿಂದ ಈ ಬಾರಿಯ ಐಪಿಎಲ್ ವೇಳಾಪಟ್ಟಿ ಇನ್ನೂ ಪ್ರಕಟವಾಗಿಲ್ಲ. ಈ ಹಿನ್ನೆಲೆಯಲ್ಲಿ ಅಧಿಕೃತ ಮಾಹಿತಿ ಹಂಚಿಕೊಂಡಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಕಾರ್ಯದರ್ಶಿ ದೇವಜಿತ್ ಸೈಕಿಯಾ, (Devajit Saikia) ಮಾರ್ಚ್ 13ರ ಒಳಗೆ ಟೂರ್ನಿಯ ಮೊದಲ ಇಪ್ಪತ್ತು ದಿನಗಳ ವೇಳಾಪಟ್ಟಿ ಬಿಡುಗಡೆ ಮಾಡುವುದಾಗಿ ಮಾಹಿತಿ ನೀಡಿದ್ದಾರೆ.
ಈ ಕುರಿತು ಖಾಸಗಿ ಸುದ್ದಿ ಮಾಧ್ಯಮವೊಂದರ ಜೊತೆ ಮಾಹಿತಿ ಹಂಚಿಕೊಂಡಿರುವ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ, "ಕೆಲವು ರಾಜ್ಯಗಳಲ್ಲಿನ ಚುನಾವಣಾ ದಿನಾಂಕಗಳನ್ನು ಘೋಷಿಸಿದ ನಂತರ ನಾವು 2 ಅಥವಾ 3 ದಿನಗಳಲ್ಲಿ ಟೂರ್ನಿಯ ಮೊದಲ 20 ದಿನಗಳ ವೇಳಾಪಟ್ಟಿಯನ್ನು ಪ್ರಕಟಿಸುತ್ತೇವೆ ಮತ್ತು ಟೂರ್ನಿಯ ಇನ್ನುಳಿದ ಪಂದ್ಯಗಳ ವೇಳಾಪಟ್ಟಿಯನ್ನು ನಂತರ ಪ್ರಕಟಿಸುತ್ತೇವೆ," ಎಂದು ಹೇಳಿದ್ದಾರೆ.
T20 World Cup: ಡ್ಯಾರಿಲ್ ಮಿಚೆಲ್‌ಗೆ ಚೆಂಡಿನಿಂದ ಥ್ರೋ ಹೊಡೆದ ಅರ್ಷದೀಪ್ ಸಿಂಗ್‌ಗೆ ದಂಡ!
ಮಾರ್ಚ್ 28 ರಂದು ಆರಂಭವಾಗುವ ಈ ಟೂರ್ನಿಯ ಸಮಯದಲ್ಲಿ ಹಲವು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯುವ ಕಾರಣ ಭದ್ರತಾ ವ್ಯವಸ್ಥೆಗಳ ಮೇಲೆ ಪರಿಣಾಮ ಬೀರಲಿದೆ. ಇದರ ಪರಿಣಾಮ ಬಿಸಿಸಿಐ ಹಂತ ಹಂತವಾಗಿ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ.
ವೇಳಾ ಪಟ್ಟಿ ಪ್ರಕಟಿಸಲು ತಡ ಯಾಕೆ?
ಟೂರ್ನಿಯ ವೇಳೆ ಅಸ್ಸಾಂ, ಪಶ್ಚಿಮ ಬಂಗಾಳ, ತಮಿಳುನಾಡು ಮತ್ತು ಕೇರಳ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯುವುದರಿಂದ ಪೊಲೀಸರು ಚುನಾವಣಾ ಕರ್ತವ್ಯದಲ್ಲಿರುವ ಕಾರಣ ಪಂದ್ಯಗಳಿಗೆ ಭದ್ರತೆ ಒದಗಿಸಲು ಸಾಧ್ಯವಾಗುವುದಿಲ್ಲ. ಚುನಾವಣಾ ಆಯೋಗ ಇನ್ನೂ, ಚುನಾವಣೆ ನಡೆಯುವ ದಿನಾಂಕಗಳನ್ನು ಅಂತಿಮಗೊಳಿಸದ ಕಾರಣ ಬಿಸಿಸಿಐ ಟೂರ್ನಿಯ ವೇಳಾಪಟ್ಟಿ ಪ್ರಕಟಿಸಲು ವಿಳಂಬವಾಗುತ್ತಿದೆ.
ಬೆಂಗಳೂರಿನಲ್ಲಿ ಉದ್ಘಾಟನಾ ಪಂದ್ಯ?
ಕಳೆದ ಜೂನ್‌ನಲ್ಲಿ ಸಂಭವಿಸಿದ್ದ ಕಾಲ್ತುಳಿತದ ಬಳಿಕ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಸುವುದನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ ಇದೀಗ ರಾಜ್ಯ ಗೃಹ ಇಲಾಖೆ ಎಂ ಚಿನ್ನಸ್ವಾಮಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಪಂದ್ಯ ನಡೆಸುವುದಕ್ಕೆ ಷರತ್ತು ಬದ್ಧ ಅನುಮತಿ ನೀಡಿದ್ದು, ಹಾಲಿ ಚಾಂಪಿಯನ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ತಂಡಗಳ ನಡುವಿನ ಉದ್ಘಾಟನಾ ಪಂದ್ಯ ಬೆಂಗಳೂರಿನಲ್ಲಿ ನಡೆಯುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.
ಟಿ20 ವಿಶ್ವಕಪ್ ಚಾಪಿಯನ್ಸ್ ಭಾರತ ತಂಡಕ್ಕೆ 131 ಕೋಟಿ ರು ನಗದು ಬಹುಮಾನ ಘೋಷಿಸಿದ ಬಿಸಿಸಿಐ!
ಐಪಿಎಲ್‌ಗೂ ತಟ್ಟಿದ ಎಲ್‌ಪಿಜಿ ಬಿಕ್ಕಟ್ಟು
ದಿನದಿಂದ ದಿನಕ್ಕೆ ಇಸ್ರೇಲ್, ಅಮೆರಿಕಾ ಹಾಗೂ ಇರಾನ್ ನಡುವಿನ ಉದ್ವಿಘ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಧ್ಯಪ್ರಾಚ್ಯದಲ್ಲಿ ತೈಲ ಬಿಕ್ಕಟ್ಟು ಉಂಟಾಗುತ್ತಿದೆ. ಇದ್ದಕ್ಕಿದ್ದಂತೆ ಭಾರತದಲ್ಲಿ ಎಲ್‌ಪಿಜಿ ಕಮರ್ಷಿಯಲ್ ಗ್ಯಾಸ್ ಅಭಾವ ಉಂಟಾಗಿರುವುದನ್ನು ಸೂಕ್ಷ್ಮವಾಗಿ ಪರಿಗಣಿಸಿರುವ ಐಪಿಎಲ್ ಆಡಳಿತ ಮಂಡಳಿ ಅಧ್ಯಕ್ಷ ಅರುಣ್ ಧುಮಾಲ್, "ನಾವು ಪರಿಸ್ಥಿತಿಯನ್ನು ಪರಿಶೀಲಿಸುತ್ತಿದ್ದೇವೆ. ಈ ಯುದ್ಧದಲ್ಲಿ ಪ್ರತಿದಿನ ಹೊಸ ಬೆಳವಣಿಗೆಗಳು ನಡೆಯುತ್ತಿವೆ, ಆದ್ದರಿಂದ ಈ ಸಮಯದಲ್ಲಿ ಖಚಿತವಾಗಿ ಏನನ್ನೂ ಹೇಳಲಾಗುವುದಿಲ್ಲ. 2026ರ ಐಪಿಎಲ್ ಮುಂದಿನ ಕೆಲವು ದಿನಗಳಲ್ಲಿ ಪ್ರಾರಂಭವಾಗಲಿದೆ. ಆ ಸಮಯದಲ್ಲಿ ಪರಿಸ್ಥಿತಿಯ ತೀವ್ರತೆಯನ್ನು ಆಧರಿಸಿ ನಾವು ನಿರ್ಧಾರ ತೆಗೆದುಕೊಳ್ಳುತ್ತೇವೆ," ಎಂದು ತಿಳಿಸಿದ್ದಾರೆ.