ನವದೆಹಲಿ: ಐದು ಬಾರಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ (Mumbai Indians) ತಂಡ ಮುಂದಿನ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯ ನಿಮಿತ್ತ ಲಖನೌ ಸೂಪರ್ ಜಯಂಟ್ಸ್ ತಂಡದಿಂದ ಟ್ರೇಡ್ ಡೀಲ್ ಮೂಲಕ ಶಾರ್ದುಲ್ ಠಾಕೂರ್ (Shardul Thakur) ಅವರನ್ನು ಕರೆಸಿಕೊಂಡಿದೆ. 2024ರ ಐಪಿಎಲ್ ಟೂರ್ನಿಯ ಹರಾಜಿನಲ್ಲಿ ಶಾರ್ದುಲ್ ಠಾಕೂರ್ ಅವರನ್ನು 2 ಕೋಟಿ ರು. ಗಳಿಗೆ ಗಾಯಾಳು ಮೊಹ್ಸಿನ್ ಖಾನ್ ಅವರ ಸ್ಥಾನಕ್ಕೆ ತರಲಾಗಿತ್ತು. ಈ ಸೀಸನ್‌ನಲ್ಲಿ ಶಾರ್ದುಲ್ ಠಾಕೂರ್ 10 ಪಂದ್ಯಗಳನ್ನು ಆಡಿದ್ದರು. ಇವರು ಎಲ್‌ಎಸ್‌ಜಿ ಪರ ಶಾರ್ದುಲ್ ಅವರು ಅವಕಾಶ ಸಿಕ್ಕಾಗಲೆಲ್ಲಾ ಉತ್ತಮ ಪ್ರದರ್ಶನವನ್ನು ತೋರುವ ಮೂಲಕ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಮುಂಬೈ ಫ್ರಾಂಚೈಸಿ ಕೂಡ 2 ಕೋಟಿ ರು. ಗಳಿಗೆ ಖರೀದಿಸಿದೆ.
ಅಂದ ಹಾಗೆ ಕಳೆದ ಐಪಿಎಲ್ ಹರಾಜಿನಲ್ಲಿ ಶಾರ್ದುಲ್ ಠಾಕೂರ್ ಅವರನ್ನು ಯಾವುದೇ ಫ್ರಾಂಚೈಸಿ ಖರೀದಿಸಿರಲಿಲ್ಲ. ಹಾಗಾಗಿ ಮೆಗಾ ಆಕ್ಷನ್‌ನಲ್ಲಿ ಶಾರ್ದುಲ್ ಅನ್‌ಸೋಲ್ಡ್ ಆಗಿದ್ದರು. ಆದರೆ, ಟೂರ್ನಿಯ ಆರಂಭಕ್ಕೂ ಮುನ್ನ ಯುವ ವೇಗದ ಬೌಲರ್ ಮೊಹಿನ್ ಖಾನ್ ಗಾಯಕ್ಕೆ ತುತ್ತಾಗಿದ್ದರು. ಈ ಹಿನ್ನೆಲೆಯಲ್ಲಿ ಅಲ್‌ಸೋಲ್ಡ್ ಆಗಿದ್ದ ಶಾರ್ದುಲ್ ಠಾಕೂರ್ ಅವರನ್ನು ಲಖನೌ ಫ್ರಾಂಚೈಸಿ ಖರೀದಿಸಿತ್ತು. ಇವರು ಆಡಿದ ಆರಂಭಿಕ ಎರಡು ಪಂದ್ಯಗಳಿಂದ 6 ವಿಕೆಟ್‌ಗಳನ್ನು ಕಬಳಿಸಿದ್ದರು. ಇದರಲ್ಲಿ ಅವರು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ 4 ವಿಕೆಟ್ ಸಾಧನೆ ಮಾಡಿದ್ದರು. ಆ ಮೂಲಕ ಕಳೆದ ಟೂರ್ನಿಯಲ್ಲಿ ಆಡಿದ 10 ಪಂದ್ಯಗಳಿಂದ 13 ವಿಕೆಟ್‌ಗಳನ್ನು ಕಬಳಿಸಿದ್ದಾರೆ.
IPL 2026: ಕೆಕೆಆರ್ ತಂಡಕ್ಕೆ ಶೇನ್ ವ್ಯಾಟ್ಸನ್ ಸಹಾಯಕ ಕೋಚ್ ಆಗಿ ಸೇರ್ಪಡೆ
ತಮ್ಮ ಐಪಿಎಲ್ ವೃತ್ತಿ ಜೀವನದಲ್ಲಿ ಶಾರ್ದುಲ್ ಠಾಕೂರ್ ಅವರು ಆಡಿದ 105 ಪಂದ್ಯಗಳಿಂದ 107 ವಿಕೆಟ್‌ಗಳು ಹಾಗೂ 325 ರನ್‌ಗಳನ್ನು ಕಲೆ ಹಾಕಿದ್ದಾರೆ. 2018 ಮತ್ತು 2021ರಲ್ಲಿ ಇವರು ಚೆನ್ನೈ ಸೂಪರ್ ಕಿಂಗ್ಸ್ ಪರ ಎರಡು ಬಾರಿ ಐಪಿಎಲ್ ಗೆದ್ದಿದ್ದಾರೆ. ಇದಕ್ಕೂ ಮುನ್ನ ಸ್ಪಿನ್ ದಿಗ್ಗಜ ಆರ್ ಅಶ್ವಿನ್ ಅವರು, ಶಾರ್ದುಲ್ ಠಾಕೂರ್ ಅವರನ್ನು ಮುಂಬೈ ಇಂಡಿಯನ್ಸ್ ಟ್ರೇಡ್ ಡೀಲ್ ಮಾಡುತ್ತಿರುವ ಬಗ್ಗೆ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ತಿಳಿಸಿದ್ದರು.
ಮುಂಬೈ ನಿವಾಸಿ ಶಾರ್ದುಲ್ ಠಾಕೂರ್ ಈ ಹಿಂದೆ ಮುಂಬೈ ಇಂಡಿಯನ್ಸ್ ತಂಡಕ್ಕೆ ಆಡಿದ್ದಾರೆ. ಇದಲ್ಲದೆ, ಅವರು 2015 ರಿಂದ ಆರು ವಿಭಿನ್ನ ಐಪಿಎಲ್ ತಂಡಗಳ ಪರ ಮೈದಾನದಲ್ಲಿ ಕಾಣಿಸಿಕೊಂಡಿದ್ದಾರೆ. ಲಖನೌ ಸೂಪರ್ ಜಯಂಟ್ಸ್ ಜೊತೆಗೆ ಶಾರ್ದುಲ್ ಈ ಹಿಂದೆ ಚೆನ್ನೈ ಸೂಪರ್ ಕಿಂಗ್ಸ್, ಪಂಜಾಬ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್, ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರೈಸಿಂಗ್ ಪುಣೆ ಸೂಪರ್ ಜಯಂಟ್ಸ್ ಪರ ಆಡಿದ್ದಾರೆ. ಅವರು ಎರಡು ಬಾರಿ ಪ್ರತ್ಯೇಕ ಸಂದರ್ಭಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಭಾಗವಾಗಿದ್ದಾರೆ.
ಮುಂಬೈ ಮತ್ತು ಚೆನ್ನೈ ಎರಡೂ ತಂಡಗಳಿಗೆ ಆಡಿದ ಕೆಲವೇ ಆಟಗಾರರಲ್ಲಿ ಶಾರ್ದುಲ್ ಠಾಕೂರ್ ಕೂಡ ಒಬ್ಬರು. ಮುಂಬೈ ಇಂಡಿಯನ್ಸ್ ನಿಂದ ಚೆನ್ನೈ ಸೂಪರ್ ಕಿಂಗ್ಸ್ ಅಥವಾ ಸಿಎಸ್‌ಕೆಯಿಂದ ಮುಂಬೈಗೆ ಸ್ಥಳಾಂತರಗೊಂಡ ಕೆಲವೇ ಆಟಗಾರರಲ್ಲಿ ಠಾಕೂರ್ ಕೂಡ ಸೇರಿದ್ದಾರೆ. ಎರಡೂ ತಂಡಗಳಿಗೆ ಆಡಿದ ಆಟಗಾರರ ಪಟ್ಟಿಯಲ್ಲಿ ಅಂಬಟಿ ರಾಯುಡು, ದೀಪಕ್ ಚಹರ್, ಪಿಯೂಷ್ ಚಾವ್ಲಾ, ಮಿಚೆಲ್ ಸ್ಯಾಂಟ್ನರ್, ಡ್ವೇನ್ ಬ್ರಾವೋ, ಹರ್ಭಜನ್ ಸಿಂಗ್ ಮತ್ತು ಇನ್ನೂ ಅನೇಕರು ಸೇರಿದ್ದಾರೆ.