ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

GT vs SRH: ಗುಜರಾತ್‌ ಟೈಟನ್ಸ್‌ ಬೌಲರ್‌ಗಳಿಗೆ ಸುಲಭ ತುತ್ತಾದ ಸನ್‌ರೈಸರ್ಸ್‌ ಹೈದರಾಬಾದ್‌!

GT vs SRH Match Highlights: ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಎರಡೂ ವಿಭಾಗಗಳಲ್ಲಿ ಅಧಿಕಾರಯುತ ಪ್ರದರ್ಶನವನ್ನು ತೋರಿದ ಗುಜರಾತ್‌ ಟೈಟನ್ಸ್‌ ತಂಡ, 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ 82 ರನ್‌ಗಳ ಭಾರಿ ಅಂತರದಲ್ಲಿ ಗೆದ್ದು ಬೀಗಿತು. ಈ ಗೆಲುವಿನ ಬಳಿಕ ಜಿಟಿ ಟೂರ್ನಿಯ ಪಾಯಿಂಟ್ಸ್‌ ಟೇಬಲ್‌ನಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸಿದೆ.

ಸನ್‌ರೈಸರ್ಸ್‌ಗೆ ಶಾಕ್‌ ನೀಡಿದ ಟೈಟನ್ಸ್.

ಅಹಮದಾಬಾದ್‌: ವಾಷಿಂಗ್ಟನ್‌ ಸುಂದರ್‌ ಅರ್ಧಶತಕ ಹಾಗೂ ಕಗಿಸೊ ರಬಾಡ (Kagiso Rabada) ಅವರ ಮಾರಕ ಬೌಲಿಂಗ್‌ ದಾಳಿಯ ಸಹಾಯದಿಂದ ಗುಜರಾತ್‌ ಟೈಟನ್ಸ್‌ ತಂಡ, 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಟೂರ್ನಿಯ 56ನೇ ಪಂದ್ಯದಲ್ಲಿ (GT vs SRH) ಬಲಿಷ್ಠ ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ 82 ರನ್‌ಗಳ ಭರ್ಜರಿ ಗೆಲುವು ಪಡೆಯಿತು. ಆ ಮೂಲಕ ಟೂರ್ನಿಯ ಪಾಯಿಂಟ್ಸ್‌ ಟೇಬಲ್‌ನಲ್ಲಿ 16 ಅಂಕಗಳ ಮೂಲಕ ಅಗ್ರ ಸ್ಥಾನವನ್ನು ಅಲಂಕರಿಸಿತು ಹಾಗೂ ಪ್ಲೇಆಫ್ಸ್‌ಗೆ ಬಹುತೇಕ ಅರ್ಹತೆ ಪಡೆಯಿತು. ಇನ್ನು ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ ಪ್ಯಾಟ್‌ ಕಮಿನ್ಸ್‌ ಸಾರಥ್ಯದ ಎಸ್‌ಆರ್‌ಎಚ್‌ ತಂಡ, ಮೂರನೇ ಸ್ಥಾನಕ್ಕೆ ಕುಸಿಯಿತು.

ಮಂಗಳವಾರ ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ 169 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಸನ್‌ರೈಸರ್ಸ್‌ ಹೈದರಾಬಾದ್‌ ತಂಡ, ಸುಲಭವಾಗಿ ಗೆಲ್ಲಬಹುದೆಂದು ಅಂದಾಜಿಸಲಾಗಿತ್ತು. ಆದರೆ, ಪವರ್‌ಪ್ಲೇನಲ್ಲಿಯೇ ಕಗಿಸೊ ರಬಾಡ ಹಾಗೂ ಮೊಹಮ್ಮದ್‌ ಸಿರಾಜ್‌ ತಮ್ಮ ಮಾರಕ ಬೌಲಿಂಗ್‌ ದಾಳಿಯ ಮೂಲಕ ಅಗ್ರ ಕ್ರಮಾಂಕವನ್ನು ಕೆಡವಿದರು. ಅಪಾಯಕಾರಿ ಟ್ರಾವಿಸ್‌ ಹೆಡ್‌ ಅವರನ್ನು ಸಿರಾಜ್‌ ಔಟ್‌ ಮಾಡಿದರೆ, ರಬಾಡ ಅವರು ತಮ್ಮ ಮಾರಕ ದಾಳಿಯಿಂದ ಅಭಿಷೇಕ್‌ ಶರ್ಮಾ, ಇಶಾನ್‌ ಕಿಶನ್‌ ಹಾಗೂ ರವಿಚಂದ್ರನ್‌ ಸ್ಮರಣ್‌ ಅವರನ್ನು ಔಟ್‌ ಮಾಡಿದರು. ಆ ಮೂಲಕ ಎಸ್‌ಆರ್‌ಎಚ್‌ ಪವರ್‌ಪ್ಲೇನಲ್ಲಿ 32 ರನ್‌ಗಳಿಗೆ 4 ವಿಕೆಟ್‌ ಕಳೆದುಕೊಂಡಿತು.

RCB vs KKR ಪಂದ್ಯಕ್ಕೆ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಬಲಿಷ್ಠ ಪ್ಲೇಯಿಂಗ್‌ XI ವಿವರ!

ನಂತರ, ಮಧ್ಯಮ ಕ್ರಮಾಂಕದಲ್ಲಿ ಜೇಸನ್‌ ಹೋಲ್ಡರ್‌ ಹಾಗೂ ಪ್ರಸಿಧ್‌ ಕೃಷ್ಣ ಕೆಳಗೆ ತಳ್ಳಿದರು. ಪ್ರಸಿಧ್‌ ಕೃಷ್ಣ, ಸಲೀಲ್‌ ಅರೋರಾ ಅವರನ್ನು ಔಟ್‌ ಮಾಡಿದರೆ, ಜೇಸನ್‌ ಹೋಲ್ಡರ್‌, ಅಪಾಯಕಾರಿ ಹೆನ್ರಿಕ್‌ ಕ್ಲಾಸೆನ್‌, ನಿತೀಶ್‌ ಕುಮಾರ್‌ ರೆಡ್ಡಿ ಹಾಗೂ ಶಿವಾಂಗ್‌ ಕುಮಾರ್‌ ಅವರನ್ನು ಔಟ್‌ ಮಾಡಿದರು. ನಂತರ 8 ಎಸೆತಗಳಲ್ಲಿ 19 ರನ್‌ ಗಳಿಸಿ ಆಡುತ್ತಿದ್ದ ನಾಯಕ ಪ್ಯಾಟ್‌ ಕಮಿನ್ಸ್‌, ಪ್ರಸಿಧ್‌ ಕೃಷ್ಣಗೆ ಶರಣಾದರು. ಅಂತಿಮವಾಗಿ ಸನ್‌ರೈಸರ್ಸ್‌ ಹೈದರಾಬಾದ್‌ ಬ್ಯಾಟಿಂಗ್‌ ವೈಫಲ್ಯದಿಂದಾಗಿ ಕೇವಲ 14.5 ಓವರ್‌ಗಳಿಗೆ 86 ರನ್‌ಗಳಿಗೆ ಆಲ್‌ಔಟ್‌ ಆಯಿತು.



ಗುಜರಾತ್‌ ಟೈಟನ್ಸ್‌ ಪರ ಮಾರಕ ಬೌಲಿಂಗ್‌ ದಾಳಿ ನಡೆಸಿದ ಕಗಿಸೊ ರಬಾಡ ಹಾಗೂ ಜೇಸನ್‌ ಹೋಲ್ಡರ್‌ ತಲಾ ಮೂರು ವಿಕೆಟ್‌ಗಳನ್ನು ಕಬಳಿಸಿದರೆ, ಪ್ರಸಿಧ್‌ ಕೃಷ್ಣ ಎರಡು ವಿಕೆಟ್‌ಗಳನ್ನು ಪಡೆದರು. ಮೊಹಮ್ಮದ್‌ ಸಿರಾಜ್‌ ಹಾಗೂ ರಶೀದ್‌ ಖಾನ್‌ ಒಂದು ವಿಕೆಟ್‌ ಕಿತ್ತರು.

ಗುಜರಾತ್‌ಗೆ ಆಘಾತ ನೀಡಿದ ಪ್ರಫ್ರುಲ್‌ ಹಿಂಗೆ

ಇದಕ್ಕೂ ಮುನ್ನ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ಗುಜರಾತ್‌ ಟೈಟನ್ಸ್‌ ತಂಡಕ್ಕೂ ಉತ್ತಮ ಆರಂಭ ಸಿಗಲಿಲ್ಲ. ಪ್ರಫುಲ್‌ ಹಿಂಗೆ ಹೊಸ ಚೆಂಡಿನಲ್ಲಿ ಮಾರಕ ದಾಳಿ ನಡೆಸಿ ಶುಭಮನ್‌ ಗಿಲ್‌ ಹಾಗೂ ಜೋಸ್‌ ಬಟ್ಲರ್‌ ಅವರನ್ನು ಔಟ್‌ ಮಾಡಿ ಜಿಟಿಗೆ ಆರಂಭಿಕ ಆಘಾತ ನೀಡಿದ್ದರು. ಒಂದು ಹಂತದಲ್ಲಿ ಉತ್ತಮವಾಗಿ ಬ್ಯಾಟ್‌ ಮಾಡಿ 22 ರನ್‌ ಗಳಿಸಿದ್ದ ನಿಶಾಂತ್‌ ಸಂಧು ಅವರನ್ನು ಪ್ಯಾಟ್‌ ಕಮಿನ್ಸ್‌ ಔಟ್‌ ಮಾಡಿದ್ದರು. ‌



ಜಿಟಿಗೆ ಆಸರೆಯಾದ ಸುದರ್ಶನ್‌, ಸುಂದರ್‌ ಅರ್ಧಶತಕ

ಆದರೆ, ಒಂದು ತುದಿಯಲ್ಲಿ ದೀರ್ಘಾವಧಿ ಬ್ಯಾಟ್‌ ಮಾಡಿದ ಆರಂಭಿಕ ಸಾಯಿ ಸುದರ್ಶನ್‌, ಕಂಡೀಷನ್ಸ್‌ಗೆ ತಕ್ಕಂತೆ ಬ್ಯಾಟ್‌ ಮಾಡಿದರು. ಅವರು ಆಡಿದ 44 ಎಸೆತಗಳಲ್ಲಿ ಎರಡು ಸಿಕ್ಸರ್‌ ಹಾಗೂ 5 ಬೌಂಡರಿಗಳೊಂದಿಗೆ 61 ರನ್‌ ಗಳಿಸಿದರು. ಆ ಮೂಲಕ ತಂಡದ ಮೊತ್ತವನ್ನು 120 ರ ಗಡಿ ದಾಟಿಸಿದ ಬಳಿಕ ಔಟ್‌ ಆದರು. ನಂತರ ತಂಡದ ಜವಾಬ್ದಾರಿ ಹೊತ್ತ ವಾಷಿಂಗ್ಟನ್‌ ಸುಂದರ್‌ ಕೂಡ ಕೊನೆಯವರೆಗೂ ಜವಾಬ್ದಾರಿಯುತವಾಗಿ ಬ್ಯಾಟ್‌ ಮಾಡಿದರು. ಅವರು ಆಡಿದ 33 ಎಸೆತಗಳಲ್ಲಿ ಒಂದು ಸಿಕ್ಸರ್‌ ಹಾಗೂ 7 ಬೌಂಡರಿಗಳೊಂದಿಗೆ 50 ರನ್‌ ಗಳನ್ನು ಗಳಿಸಿದರು. ಕೊನೆಯಲ್ಲಿ ಜೇಸನ್‌ ಹೋಲ್ಡರ್‌ 11 ರನ್‌ ಗಳಿಸಿದರು.



ಅಂತಿಮವಾಗಿ ಗುಜರಾತ್‌ ಟೈಟನ್ಸ್‌ ತಂಡ, ತನ್ನ ಪಾಲಿನ 20 ಓವರ್‌ಗಳಿಗೆ 5 ವಿಕೆಟ್ ನಷ್ಟಕ್ಕೆ 168 ರನ್‌ಗಳನ್ನು ಕಲೆ ಹಾಕಿತ್ತು. ಆ ಮೂಲಕ ಎದುರಾಳಿ ಎಸ್‌ಆರ್‌ಎಚ್‌ಗೆ 169 ರನ್‌ಗಳ ಗುರಿಯನ್ನು ನೀಡಿತು. ಪ್ರಫುಲ್‌ ಹಿಂಗೆ ಹಾಗೂ ಸಾಕಿಬ್‌ ಹುಸೇನ್‌ ತಲಾ ಎರಡೆರಡು ವಿಕೆಟ್‌ ಕಿತ್ತರು.

ಸ್ಕೋರ್‌ ವಿವರ

ಗುಜರಾತ್‌ ಟೈಟನ್ಸ್: 20 ಓವರ್‌ಗಳಿಗೆ 168-5 (ಸಾಯಿ ಸುದರ್ಶನ್‌ 61, ವಾಷಿಂಗ್ಟನ್‌ ಸುಂದರ್‌ 51; ಪ್ರಫುಲ್‌ ಹಿಂಗೆ 17ಕ್ಕೆ 2, ಸಾಕಿಬ್‌ ಹುಸೇನ್‌ 37ಕ್ಕೆ 2)

ಸನ್‌ರೈಸರ್ಸ್‌ ಹೈದರಾಬಾದ್‌: 14.5 ಓವರ್‌ಗಳಿಗೆ 86-10 ( ಪ್ಯಾಟ್‌ ಕಮಿನ್ಸ್‌ 19, ಸಲೀಲ್‌ ಅರೋರಾ 16; ಕಗಿಸೊ ರಬಾಡ 28ಕ್ಕೆ 3, ಜೇಸನ್‌ ಹೋಲ್ಡರ್‌ 20ಕ್ಕೆ 3, ಪ್ರಸಿಧ್‌ ಕೃಷ್ಣ 23 ಕ್ಕೆ 2)

ಪಂದ್ಯ ಶ್ರೇಷ್ಠ ಪ್ರಶಸ್ತಿ: ಕಗಿಸೊ ರಬಾಡ