RCB vs KKR ಪಂದ್ಯಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬಲಿಷ್ಠ ಪ್ಲೇಯಿಂಗ್ XI ವಿವರ!
RCBʼs Strongest Playimg XI: ಮುಂಬೈ ಇಂಡಿಯನ್ಸ್ ವಿರುದ್ಧ ಕಠಿಣ ಹೋರಾಟ ನಡೆಸಿ ಗೆಲುವು ಪಡೆಯುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಪ್ಲೇಆಫ್ಸ್‌ಗೆ ಸನಿಹವಾಗಿದೆ. ಬುಧವಾರ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಆರ್‌ಸಿಬಿ ಅಂತಿಮ ನಾಲ್ಕರಲ್ಲಿ ತನ್ನ ಸ್ಥಾನವನ್ನು ಖಚಿತಪಡಿಸಿಕೊಳ್ಳಲಿದೆ.
ಕೆಕೆಆರ್ ಪಂದ್ಯಕ್ಕೆ ಆರ್‌ಸಿಬಿ ಬಲಿಷ್ಠ ಪ್ಲೇಯಿಂಗ್ XI ವಿವರ. -
ರಾಯ್ಪುರ: ಹಾಲಿ ಚಾಂಪಿಯನ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೇ 13 ರಂದು ಇನ್‌ಫಾರ್ಮ್ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯ ಪಂದ್ಯದಲ್ಲಿ(RCB vs KKR) ಕಾದಾಟ ನಡೆಸಲು ಸಜ್ಜಾಗುತ್ತಿದೆ. ಕೆಕೆಆರ್ ಎದುರು ಗೆದ್ದು ರಜತ್ ಪಾಟಿದಾರ್ ನಾಯಕತ್ವದ ಆರ್‌ಸಿಬಿ ತಂಡ, ಪ್ಲೇಆಫ್ಸ್‌ಗೆ ತನ್ನ ಸ್ಥಾನವನ್ನು ಖಚಿತಪಡಿಸಿಕೊಳ್ಳಲು ಎದುರು ನೋಡುತ್ತಿದೆ. ಆದರೆ, ಕಳೆದ ನಾಲ್ಕು ಪಂದ್ಯಗಳನ್ನು ಸತತವಾಗಿ ಗೆದ್ದಿರುವ ಅಜಿಂಕ್ಯ ರಹಾನೆ ನಾಯಕತ್ವದ ಕೆಕೆಆರ್ ತಂಡ ಕೂ ಅದ್ಭುತ ಲಯದಲ್ಲಿದೆ. ಇದೀಗ ಇಲ್ಲಿನ ಶಾಹೀದ್ ವೀರ್ ನಾರಯಣ ಸಿಂಗ್ ಇಂಟರ್‌ನ್ಯಾಷನಲ್ ಕ್ರೀಡಾಂಗಣದಲ್ಲಿಯೂ ಮುಂದುವರಿಸಲು ಪ್ರಯತ್ನಿಸಲಿದೆ.
ಈ ಸೀಸನ್‌ನಲ್ಲಿ ಆರ್‌ಸಿಬಿಗೆ ಎರಡನೇ ತವರು ಅಂಗಣವಾಗಿರುವ ರಾಯ್ಪುರದಲ್ಲಿ ಕಳೆದ ಪಂದ್ಯದಲ್ಲಿ ಐದು ಬಾರಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಎದುರು ಕಠಿಣ ಹೋರಾಟ ನಡೆಸಿ ಅದೃಷ್ಟದಿಂದ ಗೆದ್ದಿತ್ತು. ಕೊನೆಯ ಎಸೆತದಲ್ಲಿ ಎರಡು ರನ್ ಅಗತ್ಯವಿದ್ದಾಗ ಬೆಂಗಳೂರು ತಂಡ ರೋಚಕವಾಗಿ ಗೆದ್ದಿತ್ತು. ಇದೀಗ ಅದೇ ಅಂಗಣದಲ್ಲಿ ಕೆಕೆಆರ್‌ಗೆ ಸೋಲಿನ ರುಚಿ ತೋರಿಸಲು ಆರ್‌ಸಿಬಿ ತಂಡ ಕಾಯುತ್ತಿದೆ. ಅಂದ ಹಾಗೆ ಈ ಪಂದ್ಯಕ್ಕೂ ಮುನ್ನ ಗುಜರಾತ್ ಟೈಟನ್ಸ್ ಹಾಗೂ ಲಖನೌ ಸೂಪರ್ ಜಯಂಟ್ಸ್ ಎದುರು ಗೆದ್ದು ಬೀಗಿತ್ತು.
ಇನ್‌ಫಾರ್ಮ್ ಕೆಕೆಆರ್ ತಂಡವನ್ನು ಮಣಿಸಲು ಯಾವ ರೀತಿ ಪ್ಲೇಯಿಂಗ್ XI ಅನ್ನು ಕಣಕ್ಕೆ ಇಳಿಸಬಹುದೆಂದು ಇಲ್ಲಿ ಚರ್ಚೆ ನಡೆಸಲಾಗಿದೆ. ಕಳೆದ ಪಂದ್ಯದಲ್ಲಿ ವೈಫಲ್ಯ ಅನುಭವಿಸಿದ ಆಟಗಾರರಿಗೆ ಕೆಕೆಆರ್ ಪಂದ್ಯದಲ್ಲಿಯೂ ಮುಂದುವರಿಸಬಹುದಾ? ಅಥವಾ ಆರಂಭಿಕ ಫಿಲ್ ಸಾಲ್ಟ್ ಅವರು ವಿರಾಟ್ ಕೊಹ್ಲಿ ಜೊತೆ ಇನಿಂಗ್ಸ್ ಆರಂಭಿಸುತ್ತಾರಾ? ಇವೆಲ್ಲಾ ಪ್ರಶ್ನೆಗಳಿಗೆ ಇಲ್ಲಿ ಉತ್ತರ ನೀಡಲಾಗಿದೆ.
RCB vs KKR: ಕೆಕೆಆರ್‌ಗೆ ಮಾಡು ಇಲ್ಲವೇ ಮಡಿ ಪಂದ್ಯ; ಆರ್‌ಸಿಬಿಗೆ ಪ್ಲೇ-ಆಫ್ ಪ್ರವೇಶಿಸುವ ಇರಾದೆ
ಆರಂಭಿಕರು: ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್/ಜೇಕಬ್ ಬೆಥೆಲ್
ವಿರಾಟ್ ಕೊಹ್ಲಿ ಅವರು ಕೆಕೆಆರ್ ಪಂದ್ಯದಲ್ಲಿ ಇನಿಂಗ್ಸ್ ಆರಂಭಿಸುದು ಬಹುತೇಕ ಖಚಿತ. ಇವರ ಜೊತೆ ಫಿಲ್ ಸಾಲ್ಟ್ ಅಥವಾ ಜೇಕಬ್ ಬೆಥೆಲ್ ಅವರಲ್ಲಿ ಒಬ್ಬರು ಇನಿಂಗ್ಸ್ ಆರಂಭಿಸಬಹುದು. ಫಿಲ್ ಸಾಲ್ಟ್ ಭಾರತಕ್ಕೆ ಪಂದ್ಯಕ್ಕೂ ಮುನ್ನ ಮರಳಬಹುದೆಂಬ ಬಗ್ಗೆ ವರದಿಯಾಗಿದೆ. ಹಾಗಾಗಿ ಅವರು ಮರಳಿದರೆ, ಕೊಹ್ಲಿ ಜೊತೆ ಆರಂಭಿಕನಾಗಿ ಕಾಣಿಸಬಹುದು. ಇಲ್ಲವಾದಲ್ಲಿ ಬೆಥೆಲ್ ಮುಂದುವರಿಯಲಿದ್ದಾರೆ.
ಮಧ್ಯಮ ಕ್ರಮಾಂಕ: ರಜತ್, ಜಿತೇಶ್ (ವಿ.ಕೀ), ಟಿಮ್ ಡೇವಿಡ್, ಶೆಫರ್ಡ್, ಕೃಣಾಲ್
ಈ ಸೀಸನ್‌ನಲ್ಲಿ ಆರ್‌ಸಿಬಿ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ಜೊತೆಗೆ ನಾಯಕ ರಜತ್ ಪಾಟಿದಾರ್ ಅವರನ್ನು ಹೆಚ್ಚು ಅವಲಂಬಿಸಿದೆ. ಆದರೆ, ಕಳೆದ ಪಂದ್ಯದಲ್ಲಿ ಮಧ್ಯಮ ಕ್ರಮಾಂಕದಲ್ಲಿ ಆಡಿದ್ದ ಕೃಣಾಲ್ ಪಾಂಡ್ಯ ಮ್ಯಾಚ್ ವಿನ್ನಿಂಗ್ ಇನಿಂಗ್ಸ್ ಆಡಿದ್ದರು. ಅವರು 46 ಎಸೆತಗಳಲ್ಲಿ 73 ರನ್ ಗಳಿಸಿದ್ದರು. ಇನ್ನು ಟಿಮ್ ಡೇವಿಡ್ ಅವರು ಈ ಬಾರಿ ಕೆಲ ಇನಿಂಗ್ಸ್‌ಗಳಲ್ಲಿ ಉತ್ತಮವಾಗಿ ಆಡಿದ್ದರೆ, ವಿಕೆಟ್ ಕೀಪರ್ ಜಿತೇಶ ಶರ್ಮಾ ಅವರಿಂದ ಇನ್ನೂ ಯಾವುದೇ ಪರಿಣಾಮಕಾರಿ ಇನಿಂಗ್ಸ್ ಮೂಡಿ ಬಂದಿಲ್ಲ. ಅವರು ಆಡಿದ 11 ಪಂದ್ಯಗಳಿಂದ ಗಳಿಸಿರುವುದು ಕೇವಲ 82 ರನ್‌ಗಳು ಮಾತ್ರ.
RCB vs KKR: ಕೆಕೆಆರ್ ವಿರುದ್ಧದ ಪಂದ್ಯಕ್ಕೆ ಆರ್‌ಸಿಬಿ ತಂಡದಲ್ಲಿ ಒಂದು ಬದಲಾವಣೆ ಸಾಧ್ಯತೆ
ಬೌಲರ್‌ಗಳು: ಭುವನೇಶ್ವರ್, ಹೇಝಲ್‌ವುಡ್, ಸುಯಶ್, ರಸಿಖ್ ಸಲಾಮ್
ಭುವನೇಶ್ವರ್ ಕುಮಾರ್ ಅವರು ಹೊಸ ಚೆಂಡಿನಲ್ಲಿ ವಿಕೆಟ್ ಪಡೆಯುವ ಸಾಮರ್ಥ್ಯವನ್ನು ಮುಂದುವರಿಸಿದ್ದಾರೆ. ಅವರು ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ನಾಲ್ಕು ವಿಕೆಟ್‌ಗಳ ಮೂಲಕ ಪರ್ಪಲ್ ಕ್ಯಾಪ್ ಅನ್ನು ತನ್ನ ವಶಕ್ಕೆ ಪಡೆದಿದ್ದರು. ನಂತರ ಬ್ಯಾಟಿಂಗ್‌ನಲ್ಲಿಯೂ ಒಂದು ಸಿಕ್ಸರ್ ಬಾರಿಸಿ ಆರ್‌ಸಿಬಿಗೆ ಜಯದ ಮಾಲೆ ತೊಡಸಿದ್ದರು. ಕೃಣಾಲ್ ಪಾಂಡ್ಯ ಹಾಗೂ ಜಾಶ ಹೇಝಲ್‌ವುಡ್ ಆರ್‌ಸಿಬಿ ಪರ ಅತಿ ಹೆಚ್ಚು ವಿಕೆಟ್ ಕಬಳಿಸಿದ ಎರಡನೇ ಬೌಲರ್‌ಗಳಾಗಿದ್ದಾರೆ.
ಕೆಕೆಆರ್ ಪಂದ್ಯಕ್ಕೆ ಆರ್‌ಸಿಬಿ ಬಲಿಷ್ಠ ಪ್ಲೇಯಿಂಗ್ XI
ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್/ಜಾಕೋಬ್ ಬೆಥೆಲ್, ರಜತ್ ಪಾಟಿದಾರ್ (ನಾಯಕ), ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಟಿಮ್ ಡೇವಿಡ್, ರೊಮ್ಯಾರಿಯೊ ಶೆಫರ್ಡ್, ಕೃಣಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜಾಶ ಹೇಝಲ್‌ವುಡ್, ಸುಯಾಶ್ ಶರ್ಮಾ, ರಸಿಖ್ ದಾರ್ ಸಲಾಮ್
ಇಂಪ್ಯಾಕ್ಟ್ ಪ್ಲೇಯರ್: ದೇವದತ್ ಪಡಿಕ್ಕಲ್