ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

CSK vs LSG: ಲಖನೌ ವಿಶ್ವಾಸವನ್ನು ಕುಗ್ಗಿಸಿದ ಚೆನ್ನೈ, ಹ್ಯಾಟ್ರಿಕ್‌ ಜಯದೊಂದಿಗೆ ಐದನೇ ಸ್ಥಾನಕ್ಕೆ ಸೂಪರ್‌ ಕಿಂಗ್ಸ್‌!

CSK vs LSG Match Highlights: ಊರ್ವಿಲ್‌ ಪಟೇಲ್‌ ದಾಖಲೆಯ ಅರ್ಧಶತಕ ಹಾಗೂ ಜೇಮಿ ಓವರ್ಟನ್‌ ಮಾರಕ ಬೌಲಿಂಗ್‌ ಸಹಾಯದಿಂದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ, ಎದುರಾಳಿ ಲಖನೌ ಸೂಪರ್‌ ಜಯಂಟ್ಸ್‌ ಎದುರು 5ವಿಕೆಟ್‌ ಗೆಲುವು ಸಾಧಿಸಿತು. ಆ ಮೂಲಕ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಹ್ಯಾಟ್ರಿಕ್‌ ಗೆಲುವು ಪಡೆದು ಪಾಯಿಂಟ್ಸ್‌ ಟೇಬಲ್‌ನಲ್ಲಿ ಐದನೇ ಸ್ಥಾನಕ್ಕೆ ಲಗ್ಗೆ ಇಟ್ಟಿತು. ಇನ್ನು ಸೋತ ಎಲ್‌ಎಸ್‌ಜಿ ಬಹುತೇಕ ಪ್ಲೇಆಫ್ಸ್‌ ರೇಸ್‌ನಿಂದ ಹೊರಬಿದ್ದಿದೆ.

ಲಖನೌ ಸವಾಲು ಗೆದ್ದು ಪ್ಲೇಆಫ್ಸ್‌ಗೆ ಸನಿಹವಾದ ಸಿಎಸ್‌ಕೆ.

ಚೆನ್ನೈ: ಜೇಮಿ ಓವರ್ಟನ್‌ ಮಾರಕ ಬೌಲಿಂಗ್‌ ದಾಳಿ ಹಾಗೂ ಊರ್ವಿಲ್‌ ಪಟೇಲ್‌ (Urvil Patel) ದಾಖಲೆಯ ಅರ್ಧಶತಕದ ಬಲದಿಂದ ಚೆನ್ನೈ ಸೂಪರ್‌ ಕಿಂಗ್ಸ್‌ (CSK) ತಂಡ, ಎದುರಾಳಿ ಲಖನೌ ಸೂಪರ್‌ ಜಯಂಟ್ಸ್‌ ಎದುರು 5 ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿತು. ಆ ಮೂಲಕ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಟೂರ್ನಿಯ ಹ್ಯಾಟ್ರಿಕ್‌ ಗೆಲುವಿನೊಂದಿಗೆ ಋತುರಾಜ್‌ ಗಾಯಕ್ವಾಡ್‌ ನಾಯಕತ್ವದ ಸಿಎಸ್‌ಕೆ ಪಾಯಿಂಟ್ಸ್‌ ಟೇಬಲ್‌ನಲ್ಲಿ ಐದನೇ ಸ್ಥಾನಕ್ಕೇರುವ ಮೂಲಕ ಪ್ಲೇಆಫ್ಸ್‌ಗೆ ಇನ್ನಷ್ಟು ಸನಿಹವಾಗಿದೆ. ಆದರೆ, ಈ ಟೂರ್ನಿಯಲ್ಲಿ ಎಂಟನೇ ಸೋಲು ಅನುಭವಿಸಿದ ರಿಷಭ್‌ ಪಂತ್‌ ನಾಯಕತ್ವದ ಎಲ್‌ಎಸ್‌ಜಿ ಪ್ಲೇಆಫ್ಸ್‌ ರೇಸ್‌ನಿಂದ ಬಹುತೇಕ ಹೊರಬಿದ್ದಿದೆ.

ಭಾನುವಾರ ಇಲ್ಲಿನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದಿದ್ದ ಮೊದಲನೇ ಹೆಡರ್‌ ಪಂದ್ಯದಲ್ಲಿ ಲಖನೌ ಸೂಪರ್‌ ಜಯಂಟ್ಸ್‌ ನೀಡಿದ್ದ 204 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಚೆನ್ನೈ ಸೂಪರ್‌ ಕಿಂಗ್ಸ್‌, ಊರ್ವಿಲ್‌ ಪಟೇಲ್‌ ಅವರ ದಾಖಲೆಯ ಅರ್ಧಶತಕದ ಬಲದಿಂದ 19.2 ಓವರ್‌ಗಳಿಗೆ 5 ವಿಕೆಟ್‌ಗಳ ನಷ್ಟಕ್ಕೆ 208 ರನ್‌ ಗಳಿಸಿ ಗೆದ್ದು ಬೀಗಿತು. ಆ ಮೂಲಕ ತವರು ಅಭಿಮಾನಿಗಳ ಎದುರು ಆರನೇ ಗೆಲುವು ಪಡೆಯಿತು. ಇನ್ನುಳಿದ ಮೂರು ಪಂದ್ಯಗಳಲ್ಲಿ ಎರಡರಲ್ಲಿ ಗೆಲುವು ಪಡೆದರೆ, ಸಿಎಸ್‌ಕೆ ನಾಕ್‌ಔಟ್‌ ಹಂತಕ್ಕೆ ಪ್ರವೇಶ ಮಾಡಲಿದೆ.

CSK vs LSG: ಐಪಿಎಲ್‌ನ ಜಂಟಿ ವೇಗದ ಅರ್ಧಶತಕ ಬಾರಿಸಿ ವಿಭಿನ್ನವಾಗಿ ಸಂಭ್ರಮಿಸಿದ ಊರ್ವಿಲ್‌ ಪಟೇಲ್!

ಸಿಎಸ್‌ಕೆ ಭರ್ಜರಿ ಆರಂಭ

ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಬ್ಯಾಟಿಂಗ್‌ ಚೇಸಿಂಗ್‌ನಲ್ಲಿ ಉತ್ತಮವಾಗಿತ್ತು. ಆರಂಭಿಕ ಸಂಜು ಸ್ಯಾಮ್ಸನ್‌ ಕೇವಲ 14 ಎಸೆತಗಳಲ್ಲಿ 28 ರನ್‌ ಗಳಿಸಿದರು ಹಾಗೂ ಋತುರಾಜ್‌ ಗಾಯಕ್ವಾಡ್‌ ಅವರ ಜೊತೆಗೆ 45 ರನ್‌ಗಳ ಜೊತೆಯಾಟವನ್ನು ಆಡಿ ಸಿಎಸ್‌ಕೆಗೆ ಉತ್ತಮ ಆರಂಭ ನೀಡಿ ಔಟ್‌ ಆದರು. ನಂತರ ಗಾಯಕ್ವಾಡ್‌ ಹಾಗೂ ಊರ್ವಿಲ್‌ ಪಟೇಲ್‌ ಜೋಡಿ ಕೇವಲ 34 ಎಸೆತಗಳಲ್ಲಿ 81 ರನ್‌ಗಳ ಜೊತೆಯಾಟವನ್ನು ಆಡಿ ತಂಡಕ್ಕೆ ಭದ್ರ ಅಡಿಪಾಯ ಹಾಕಿತು. ಒಂದು ತುದಿಯಲ್ಲಿ ಅತ್ಯುತ್ತಮ ಬ್ಯಾಟ್‌ ಮಾಡಿದ ನಾಯಕ ಗಾಯಕ್ವಾಡ್‌ 28 ಎಸೆತಗಳಲ್ಲಿ 42 ರನ್‌ ಗಳಿಸಿ ಅರ್ಧಶತಕದಂಚಿನಲ್ಲಿ ಔಟ್‌ ಆದರು.



ಊರ್ವಿಲ್‌ ಪಟೇಲ್‌ ದಾಖಲೆಯ ಅರ್ಧಶತಕ

ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದು ಪವರ್‌ಪ್ಲೇನಲ್ಲಿ ಅಬ್ಬರಿಸಿದ ಊರ್ವಿಲ್‌ ಪಟೇಲ್‌ ಕೇವಲ 13 ಎಸೆತಗಳಲ್ಲಿ ಅರ್ಧಶತಕವನ್ನು ಪೂರ್ಣಗೊಳಿಸಿದರು. ಆ ಮೂಲಕ ಐಪಿಎಲ್‌ ಇತಿಹಾಸದಲ್ಲಿ ಅತ್ಯಂತ ವೇಗದ ಅರ್ಧಶತಕವನ್ನು ಸಿಡಿಸಿದರು. ಆ ಮೂಲಕ ಯಶಸ್ವಿ ಜೈಸ್ವಾಲ್‌ ಅವರ ದಾಖಲೆಯನ್ನು ಸರಿಗಟ್ಟಿದರು. ಇವರು ಅಂತಿಮವಾಗಿ ಆಡಿದ 23 ಎಸೆತಗಳಲ್ಲಿ 8 ಸಿಕ್ಸರ್‌ ಹಾಗೂ 2 ಬೌಂಡರಿಗಳೊಂದಿಗೆ 65 ರನ್‌ ಚಚ್ಚಿದರು ಹಾಗೂ ಸಿಎಸ್‌ಕೆ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಕಾರ್ತಿಕ್‌ ಶರ್ಮಾ 20 ರನ್‌ ಕೊಡುಗೆ ನೀಡಿದರು. ಕೊನೆಯಲ್ಲಿ ನಿರ್ಣಾಯಕ ಬ್ಯಾಟ್‌ ಮಾಡಿದ ಶಿವಂ ದುಬೆ ಹಾಗೂ ಪ್ರಶಾಂತ್‌ ವೀರ್‌ ಕ್ರಮವಾಗಿ 18 ರನ್‌ ಹಾಗೂ 15 ರನ್‌ ಗಳಿಸಿ ಸಿಎಸ್‌ಕೆ ತಂಡವನ್ನು ಗೆಲ್ಲಿಸಿದರು.



ಜಾಶ್‌ ಇಂಗ್ಲಿಸ್‌ ಸ್ಪೋಟಕ ಬ್ಯಾಟಿಂಗ್‌

ಇದಕ್ಕೂ ಮುನ್ನ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ಲಖನೌ ಸೂಪರ್‌ ಜಯಂಟ್ಸ್‌ ತಂಡದ ಪರ ಬ್ಯಾಟಿಂಗ್‌ನಲ್ಲಿ ಗಮನ ಸೆಳೆದಿದ್ದು ಜಾಶ್‌ ಇಂಗ್ಲಿಸ್‌. ಸಿಎಸ್‌ಕೆ ಬೌಲರ್‌ಗಳ ಪರಿಣಾಮಕಾರಿ ಬೌಲಿಂಗ್‌ನಲ್ಲಿ ನಿರಂತರವಾಗಿ ವಿಕೆಟ್‌ ಉರುಳುತ್ತಿದ್ದರೂ ಮತ್ತೊಂದು ತುದಿಯಲ್ಲಿ ಜಾಶ್‌ ದೀರ್ಘಾವಧಿ ಬ್ಯಾಟ್‌ ಮಾಡಿದರು. ಅವರು ಆಡಿದ ಕೇವಲ 33 ಎಸೆತಗಳಲ್ಲಿ 10 ಬೌಂಡರಿ ಹಾಗೂ 6 ಸಿಕ್ಸರ್‌ಗಳ ಮೂಲಕ 85 ರನ್‌ ಚಚ್ಚಿದ್ದರು. ಇವರನ್ನು ಹೊರತುಪಡಿಸಿ ಅಗ್ರ ಹಾಗೂ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ಸ್‌ಮನ್‌ಗಳು ಸಂಪೂರ್ಣವಾಗಿ ವಿಫಲರಾದರು.



203 ರನ್‌ ಕಲೆ ಹಾಕಿದ್ದ ಎಲ್‌ಎಸ್‌ಜಿ

ಮಿಚೆಲ್‌ ಮಾರ್ಷ್‌, ನಿಕೋಲಸ್‌ ಪೂರನ್‌, ರಿಷಭ್‌ ಪಂತ್‌, ಏಡೆನ್‌ ಮಾರ್ಕ್ರಮ್‌ ಹಾಗೂ ಅಕ್ಷತ್‌ ರಘುವಂಶಿ ಸಿಎಸ್‌ಕೆ ಶಿಸ್ತುಬದ್ದ ದಾಲಿಗೆ ನಲುಗಿದರು. ಆದರೆ, ಕೊನೆಯಲ್ಲಿ ಬ್ಯಾಟಿಂಗ್‌ನಲ್ಲಿ ಗಮನ ಸೆಳೆದ ಶಹಬಾಝ್‌ ಅಹ್ಮದ್‌ 25 ಎಸೆತಗಳಲ್ಲಿ ಅಜೇಯ 43 ರನ್‌ ಗಳಿಸಿದರು. ಆ ಮೂಲಕ ಲಖನೌ ಸೂಪರ್‌ ಜಯಂಟ್ಸ್‌ ತನ್ನ ಪಾಲಿನ 20 ಓವರ್‌ಗಳಿಗೆ 8 ವಿಕೆಟ್‌ ನಷ್ಟಕ್ಕೆ 203 ರನ್‌ಗಳನ್ನು ಕಲೆ ಹಾಕಿತ್ತು. ಸಿಎಸ್‌ಕೆ ಪರ ಜೇಮಿ ಓವರ್ಟನ್‌ 3 ವಿಕೆಟ್‌ ಕಿತ್ತರೆ, ಅನ್ಷುಲ್‌ ಕಾಂಬೋಜ್‌ ಎರಡು ವಿಕೆಟ್‌ ಪಡೆದರು.