ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IPL 2027: 3 ಬಾರಿ ಆರ್‌ಸಿಬಿ ಬೌಲರ್‌ಗಳಿಗೆ ಚಳ್ಳೆ ಹಣ್ಣು ತಿನ್ನಿಸಿದ್ದ ಎಂಎಸ್‌ ಧೋನಿ!

ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಸಾರ್ವಕಾಲಕ ಶ್ರೇಷ್ಠ ನಾಯಕ ಎಂಎಸ್‌ ಧೋನಿ ತಮ್ಮ ಐಪಿಎಲ್‌ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದಾರೆ. ಅವರು ತಮ್ಮ ಐಪಿಎಲ್‌ ವೃತ್ತಿ ಜೀವನದಲ್ಲಿ ಆರ್‌ಸಿಬಿ ಎದುರು ಮೂರು ಬಾರಿ ಮ್ಯಾಚ್‌ ವಿನಿಂಗ್‌ ಇನಿಂಗ್ಸ್‌ಗಳನ್ನು ಆಡಿದ್ದಾರೆ. ಈ ಮೂರು ಇನಿಂಗ್ಸ್‌ಗಳನ್ನು ಇಲ್ಲಿ ವಿವರಿಸಲಾಗಿದೆ.

ಆರ್‌ಸಿಬಿ ಎದುರು ಎಂಎಸ್‌ ಧೋನಿಯ ಮೂರು ಮ್ಯಾಚ್‌ ವಿನ್ನಿಂಗ್‌ ಇನಿಂಗ್ಸ್‌ಗಳು.

ನವದೆಹಲಿ: ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ತಮ್ಮ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದಾರೆ. ಆ ಮೂಲಕ 2027ರ ಆವೃತ್ತಿಯಿಂದ (IPL 2027) ಸಿಎಸ್‌ಕೆ ತಂಡದ ಮೆಂಟರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಇದರೊಂದಿಗೆ ಐಪಿಎಲ್‌ನಲ್ಲಿ ಧೋನಿಯ ಆಟಗಾರಿಕೆಯ ಯುಗ ಅಂತ್ಯಗೊಂಡಿದೆ.

ಒತ್ತಡದ ಸಂದರ್ಭಗಳಲ್ಲಿ ಸಿಕ್ಸರ್‌ಗಳ ಸುರಿಮಳೆಗೈದು ತಂಡಕ್ಕೆ ಗೆಲುವು ತಂದುಕೊಡುವಲ್ಲಿ ಧೋನಿ ಎತ್ತಿದ ಕೈ. ಎದುರಾಳಿ ತಂಡಗಳ ಬೌಲರ್‌ಗಳಿಗೆ ಸಿಂಹಸ್ವಪ್ನವಾಗಿದ್ದ ಧೋನಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧವೂ ಹಲವು ಸ್ಮರಣೀಯ ಇನಿಂಗ್ಸ್‌ಗಳನ್ನು ಆಡಿದ್ದಾರೆ. ಅದರಲ್ಲೂ ಮೂರು ಪಂದ್ಯಗಳಲ್ಲಿ ಆರ್‌ಸಿಬಿ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ್ದರು.

IPL 2027: ಯಾರಿಂದಲೂ ಮುರಿಯಲಾಗದ ಎಂಎಸ್‌ ಧೋನಿಯ ಸಿಎಸ್‌ಕೆ ನಾಯಕತ್ವದ ದಾಖಲೆಗಳು!

2019ರಲ್ಲಿ 48 ಎಸೆತಗಳಲ್ಲಿ ಅಜೇಯ 84 ರನ್

2019ರಲ್ಲಿ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಧೋನಿ ತಮ್ಮ ಐಪಿಎಲ್ ವೃತ್ತಿಜೀವನದ ಅತ್ಯುತ್ತಮ ಇನಿಂಗ್ಸ್‌ವೊಂದನ್ನು ಆಡಿದ್ದರು. 162 ರನ್‌ಗಳ ಗುರಿ ಬೆನ್ನಟ್ಟಿದ ಚೆನ್ನೈ ತಂಡವು 83 ರನ್‌ಗಳಿಗೆ ಐದು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

ಆದರೆ ಧೋನಿ ಸ್ಫೋಟಕ ಬ್ಯಾಟಿಂಗ್ ಮೂಲಕ ತಂಡವನ್ನು ಗೆಲುವಿನ ಸನಿಹಕ್ಕೆ ತಂದಿದ್ದರು. ಕೊನೆಯ ಓವರ್‌ನಲ್ಲಿ ಚೆನ್ನೈಗೆ ಗೆಲ್ಲಲು 26 ರನ್‌ಗಳ ಅಗತ್ಯವಿತ್ತು. ಈ ವೇಳೆ ಮೂರು ಸಿಕ್ಸರ್ ಹಾಗೂ ಒಂದು ಬೌಂಡರಿ ಬಾರಿಸಿದ ಧೋನಿ ತಂಡವನ್ನು ಗೆಲುವಿನ ಹತ್ತಿರ ಕೊಂಡೊಯ್ದಿದ್ದರು. ಆದರೆ ಕೊನೆಯ ಎಸೆತದಲ್ಲಿ ಎರಡು ರನ್ ಗಳಿಸಲು ಸಾಧ್ಯವಾಗಲಿಲ್ಲ. ಧೋನಿ 48 ಎಸೆತಗಳಲ್ಲಿ ಅಜೇಯ 84 ರನ್ ಗಳಿಸಿದ್ದರು. ಅವರ ಇನಿಂಗ್ಸ್‌ನಲ್ಲಿ ಐದು ಬೌಂಡರಿ ಹಾಗೂ ಏಳು ಸಿಕ್ಸರ್‌ಗಳು ಸೇರಿದ್ದವು. ಇದು ಐಪಿಎಲ್‌ನಲ್ಲಿ ಧೋನಿಯ ಗರಿಷ್ಠ ವೈಯಕ್ತಿಕ ಸ್ಕೋರ್ ಆಗಿದೆ.

IPL 2027: ʻಎಂಎಸ್‌ ಧೋನಿ ಆಡುವುದಿಲ್ಲವಾದರೆ ರಿಲೀಸ್‌ ಮಾಡಿʼ-ಸಿಎಸ್‌ಕೆಗೆ ಆರ್‌ ಅಶ್ವಿನ್‌ ಸಲಹೆ!

2018ರಲ್ಲಿ ಕೇವಲ 34 ಎಸೆತಗಳಲ್ಲಿ ಅಜೇಯ 70 ರನ್

2018ರಲ್ಲಿ ಎರಡು ವರ್ಷಗಳ ನಿಷೇಧದ ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ತಂಡ ಐಪಿಎಲ್‌ಗೆ ಮರಳಿತ್ತು. ಈ ಆವೃತ್ತಿಯಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಧೋನಿ ಮತ್ತೊಮ್ಮೆ ತಮ್ಮ ಮ್ಯಾಚ್‌ ಫಿನಿಶಿಂಗ್ ಸಾಮರ್ಥ್ಯ ಪ್ರದರ್ಶಿಸಿದ್ದರು.

206 ರನ್‌ಗಳ ಕಠಿಣ ಗುರಿ ಬೆನ್ನಟ್ಟಿದ ಚೆನ್ನೈ ತಂಡ, ಕೇವಲ 74 ರನ್‌ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಈ ವೇಳೆ ಅಂಬಾಟಿ ರಾಯುಡು (82) ಜೊತೆಗೂಡಿದ ಧೋನಿ ಪಂದ್ಯಕ್ಕೆ ಹೊಸ ತಿರುವು ನೀಡಿದರು. ಕೇವಲ 34 ಎಸೆತಗಳಲ್ಲಿ ಅಜೇಯ 70 ರನ್ ಸಿಡಿಸಿದ ಅವರು ಏಳು ಸಿಕ್ಸರ್ ಹಾಗೂ ಒಂದು ಬೌಂಡರಿ ಬಾರಿಸಿದ್ದರು. ಕೊನೆಯದಾಗಿ ಮತ್ತೊಂದು ಸಿಕ್ಸರ್ ಸಿಡಿಸುವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು. ಈ ವೇಳೆ ಇನ್ನೂ ಎರಡು ಎಸೆತಗಳು ಬಾಕಿ ಉಳಿದಿದ್ದವು.

ಐಪಿಎಲ್‌ನಿಂದ ನಿವೃತ್ತರಾದ ಎಂ.ಎಸ್. ಧೋನಿ; ಸಿಎಸ್‌ಕೆ ತಂಡಕ್ಕೆ ಮೆಂಟರ್‌ ಆಗಿ ಹೊಸ ಜವಾಬ್ದಾರಿ

2008ರಲ್ಲಿ 30 ಎಸೆತಗಳಲ್ಲಿ 65 ರನ್

ಐಪಿಎಲ್ ಇತಿಹಾಸದಲ್ಲಿ ಆರ್‌ಸಿಬಿ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಮೊದಲ ಪಂದ್ಯದಲ್ಲೂ ಧೋನಿ ಅಬ್ಬರಿಸಿದ್ದರು. 2008ರಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ಧೋನಿ ಆರಂಭದಿಂದಲೇ ಆಕ್ರಮಣಕಾರಿ ಆಟವಾಡಿದ್ದರು.

ಕೇವಲ 24 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದ ಧೋನಿ, ಅಂತಿಮವಾಗಿ 30 ಎಸೆತಗಳಲ್ಲಿ 65 ರನ್ ಗಳಿಸಿ ಔಟಾಗಿದ್ದರು. ಅವರ ಸ್ಫೋಟಕ ಇನಿಂಗ್ಸ್‌ನಲ್ಲಿ ಒಂಬತ್ತು ಬೌಂಡರಿ ಹಾಗೂ ಮೂರು ಸಿಕ್ಸರ್‌ಗಳು ಸೇರಿದ್ದವು. ಧೋನಿಯ ಈ ಆಟದ ನೆರವಿನಿಂದ ಚೆನ್ನೈ ತಂಡ 5 ವಿಕೆಟ್‌ಗೆ 178 ರನ್ ಗಳಿಸಿತ್ತು. ಆದರೆ ಅಂತಿಮವಾಗಿ ಆರ್‌ಸಿಬಿ 13 ರನ್‌ಗಳ ಜಯ ದಾಖಲಿಸಿತ್ತು.

ಈ ಮೂರು ಇನಿಂಗ್ಸ್‌ಗಳು ಆರ್‌ಸಿಬಿ ವಿರುದ್ಧ ಧೋನಿ ಹೊಂದಿದ್ದ ಪ್ರಾಬಲ್ಯಕ್ಕೆ ಸಾಕ್ಷಿಯಾಗಿವೆ. ಇದೀಗ ಆಟಗಾರನಾಗಿ ಐಪಿಎಲ್‌ಗೆ ವಿದಾಯ ಹೇಳುತ್ತಿರುವ ಧೋನಿ, ಮೆಂಟರ್ ಆಗಿ ಚೆನ್ನೈ ತಂಡದೊಂದಿಗೆ ಹೊಸ ಇನಿಂಗ್ಸ್‌ ಆರಂಭಿಸಲಿದ್ದಾರೆ.