ಬೆಂಗಳೂರು: ಕರ್ನಾಟಕ ತಂಡದ ಹಿರಿಯ ಆಲ್‌ರೌಂಡರ್ ಕೃಷ್ಣಪ್ಪ ಗೌತಮ್ (Krishnappa Gowtham) ಅವರು ಡಿಸೆಂಬರ್ 22 ರಂದು ಸೋಮವಾರ ಎಲ್ಲಾ ಸ್ವರೂಪದ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಆ ಮೂಲಕ ತಮ್ಮ 14 ವರ್ಷಗಳ ಕ್ರಿಕೆಟ್ ವೃತ್ತಿ ಬದುಕಿಗೆ ಪೂರ್ಣ ವಿರಾಮ ಇಟ್ಟಿದ್ದಾರೆ. ಆಫ್ ಸ್ಪಿನ್ ಹಾಗೂ ಕೆಳ ಕ್ರಮಾಂಕದಲ್ಲಿ ತಮ್ಮ ಸ್ಪೋಟಕ ಬ್ಯಾಟಿಂಗ್ ಮೂಲಕ ಹೆಸರು ಮಾಡಿದ್ದ ಅವರು, ಭಾರತ ಎ (India A), ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಹಾಗೂ ರಣಜಿ ಸೇರಿದಂತೆ ದೇಶಿ ಕ್ರಿಕೆಟ್‌ನಲ್ಲಿ ಆಡಿದ್ದರು. ಇವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಹಾಕುವ ಮೂಲಕ ಈ ಮಹತ್ವದ ನಿರ್ಧಾರವನ್ನು ಪ್ರಕಟಿಸಿದ್ದಾರೆ.
2012ರಲ್ಲಿ ಇವರು ಕರ್ನಾಟಕ ತಂಡದ ಪರ ಉತ್ತರ ಪ್ರದೇಶ ವಿರುದ್ಧದ ಪಂದ್ಯದ ಮೂಲಕ ರಣಜಿ ಟ್ರೋಫಿ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ತಮ್ಮ ಪದಾರ್ಪಣೆ ಪಂದ್ಯದಲ್ಲಿಯೇ ಅವರು ಟೀಮ್ ಇಂಡಿಯಾ ಮಾಜಿ ಸ್ಟಾರ್‌ಗಳಾದ ಸುರೇಶ್ ರೈನಾ ಹಾಗೂ ಭುವನೇಶ್ವರ್ ಕುಮಾರ್ ಅವರನ್ನು ಔಟ್ ಮಾಡಿ ಗಮನ ಸೆಳೆದಿದ್ದರು. ಸ್ಪಿನ್ ಬೌಲಿಂಗ್ ಜೊತೆಗೆ ಕೆಳ ಬ್ಯಾಟಿಂಗ್ ಕ್ರಮಾಂಕದಲ್ಲಿ ಸ್ಪೋಟಕ ಆಟದ ಮೂಲಕ ಕರ್ನಾಟಕ ತಂಡದಲ್ಲಿ ತಮ್ಮ ಸ್ಥಾನವನ್ನು ಗಟ್ಟಿ ಮಾಡಿಕೊಂಡಿದ್ದರು.
ಆರ್‌ಸಿಬಿ ಫ್ಯಾನ್ಸ್‌ಗೆ ಸಿಹಿ ಸುದ್ದಿ! 2025ರಲ್ಲಿ ಅತಿ ಹೆಚ್ಚು ವಿಕೆಟ್ ಪಡೆದು ದಾಖಲೆ ಬರೆದ ಜಾಕೋಬ್ ಡಫಿ!
2016-17ರ ರಣಜಿ ಟ್ರೋಫಿ ಟೂರ್ನಿಯಲ್ಲಿ ಕೆ ಗೌತಮ್ ಅವರು ಶ್ರೇಷ್ಠ ಪ್ರದರ್ಶನವನ್ನು ತೋರಿದ್ದರು. ಅವರು ಆಡಿದ್ದ ಕೇವಲ 8 ಪಂದ್ಯಗಳಿಂದ 27 ವಿಕೆಟ್‌ಗಳನ್ನು ಕಬಳಿಸಿದ್ದರು. ಈ ಋತುವಿನಲ್ಲಿಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಅಸ್ಸಾಂ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ಚೊಚ್ಚಲ ಶತಕವನ್ನು ಬಾರಿಸಿದ್ದರು. ಆ ಮೂಲಕ ತಮ್ಮಲ್ಲಿರುವ ಆಲ್‌ರೌಂಡರ್ ಕೌಶಲವನ್ನು ಅನಾವರಣಗೊಳಿಸಿದ್ದರು. ಅಂದಿನಿಂದ ಅವರು ಆಲ್‌ರೌಂಡರ್ ತಮ್ಮನ್ನು ತಾವು ಗುರುತಿಸಿಕೊಂಡಿದ್ದರು.
ದೇಶಿ ಕ್ರಿಕೆಟ್ ಅಂಕಿಅಂಶ
ದೇಶಿ ಕ್ರಿಕೆಟ್‌ನಲ್ಲಿ ಆಡಿದ 59 ಪ್ರಥಮ ದರ್ಜೆ ಪಂದ್ಯಗಳು ಹಾಗೂ 68 ಲಿಸ್ಟ್ ಎ ಪಂದ್ಯಗಳಿಂದ ಒಟ್ಟು 320 ವಿಕೆಟ್‌ಗಳನ್ನು ಕಬಳಿಸಿದ್ದರು. ಇದರ ಜೊತೆಗೆ ಕೆಳ ಬ್ಯಾಟಿಂಗ್ ಕ್ರಮಾಂಕದಲ್ಲಿ ಉಪಯುಕ್ತ ಕಾಣಿಕೆ ನೀಡಿದ್ದಾರೆ. 2023ರ ವರೆಗೂ ಅವರು ಕರ್ನಾಟಕ ತಂಡದ ಪರ ನಿಯಮಿತವಾಗಿ ಆಡುತ್ತಿದ್ದರು. ನಂತರ ಅವರು ಕರ್ನಾಟಕ ತಂಡದಲ್ಲಿ ಸ್ಥಾನವನ್ನು ಕಳೆದುಕೊಂಡಿದ್ದರು.
ಇವರು ಭಾರತ ಎ ತಂಡದ ಪರ ಸಾಕಷ್ಟು ಬಾರಿ ಆಡಿದ್ದಾರೆ. ನ್ಯೂಜಿಲೆಂಡ್ ಎ, ವೆಸ್ಟ್ ಇಂಡೀಸ್ ಎ, ಆಸ್ಟ್ರೇಲಿಯಾ ಎ ಹಾಗೂ ಇಂಗ್ಲೆಂಡ್ ಲಯನ್ಸ್ ವಿರುದ್ಧ ಆಡಿದ್ದಾರೆ. 2021ರಲ್ಲಿ ಭಾರತ ತಂಡದ ನೆಟ್ ಬೌಲರ್ ಆಗಿ ಇದ್ದರು, ನಂತರ ಅವರನ್ನು ಶ್ರೀಲಂಕಾ ಪ್ರವಾಸದ ಭಾರತ ತಂಡಕ್ಕೆ ಆಯ್ಕೆ ಮಾಡಲಾಗಿತ್ತು. ಈ ಸರಣಿಯಲ್ಲಿ ಅವರು ಒಂದು ಪಂದ್ಯವನ್ನು ಆಡಿ ಒಂದು ವಿಕೆಟ್ ಪಡೆದಿದ್ದರು.
ಟಿ20 ವಿಶ್ವಕಪ್ ಭಾರತ ತಂಡದಿಂದ ಶುಭಮನ್ ಗಿಲ್‌ರನ್ನು ಕೈ ಬಿಡಲು ನೈಜ ಕಾರಣ ತಿಳಿಸಿದ ಆಕಾಶ ಚೋಪ್ರಾ!
ಐಪಿಎಲ್‌ನಲ್ಲಿ ಹಲವು ತಂಡಗಳ ಪರ ಆಡಿದ್ದ ಗೌತಮ್
ಕೆ ಗೌತಮ್ ಅವರು ಐಪಿಎಲ್ ಟೂರ್ನಿಯಲ್ಲಿಯೂ ಹಲವು ತಂಡಗಳ ಪರ ಆಡಿದ್ದಾರೆ. ಅವರು ರಾಜಸ್ಥಾನ್ ರಾಯಲ್ಸ್, ಪಂಜಾಬ್ ಕಿಂಗ್ಸ್, ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಲಖನೌ ಸೂಪರ್ ಜಯಂಟ್ಸ್ ಪರ ಆಡಿದ್ದಾರೆ. 2021ರ ಐಪಿಎಲ್ ಮಿನಿ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ 9.25 ಕೋಟಿ ರು. ಗಳಿಗೆ ಖರೀದಿಸಿತ್ತು. ಒಟ್ಟಾರೆ ಇವರು ಐಪಿಎಲ್ ಹಲವು ಸೀಸನ್‌ಗಳಿಂದ 35 ಕ್ಕೂ ಅಧಿಕ ಕೋಟಿ ರು. ಗಳನ್ನು ಗಳಿಸಿದ್ದಾರೆ.