ನವದೆಹಲಿ: ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ (IND vs NZ) ಭಾರತ ತಂಡ ಉತ್ತಮ ಪ್ರದರ್ಶನ ನೀಡುತ್ತಿದೆ. ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಗೆಲುವು ದಾಖಲಿಸಿರುವ ಭಾರತ, ಮೂರನೇ ಪಂದ್ಯ ಮಳೆಯಿಂದಾಗಿ ಒಂದೂ ಎಸೆತ ಕಾಣದೆ ರದ್ದುಗೊಂಡಿದ್ದರಿಂದ ಸರಣಿಯಲ್ಲಿ ಸೋಲುವ ಭೀತಿಯಿಂದ ಪಾರಾಗಿದೆ. ಇದೀಗ ನಾಲ್ಕನೇ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಸರಣಿ ವಶಪಡಿಸಿಕೊಳ್ಳುವ ಗುರಿಯೊಂದಿಗೆ ಟೀಮ್ ಇಂಡಿಯಾ ಕಣಕ್ಕಿಳಿಯಲಿದೆ.
ಇದರ ನಡುವೆ 2027ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಭಾರತ ತಂಡದ ಸಿದ್ಧತೆಗಳ ಬಗ್ಗೆಯೂ ಚರ್ಚೆಗಳು ಆರಂಭವಾಗಿವೆ. ಮುಂಬರುವ ವಿಶ್ವಕಪ್ ಟೂರ್ನಿಯಿಂದ ದೃಷ್ಟಿಯಿಂದ ತಂಡದ ಆಟಗಾರರ ಆಯ್ಕೆ ಹಾಗೂ ವೇಗದ ಬೌಲಿಂಗ್ ವಿಭಾಗದ ಸಂಯೋಜನೆ ಹೇಗಿರಬೇಕು ಎಂಬ ಕುತೂಹಲ ಮೂಡಿದೆ.
ಈ ಕುರಿತು ಭಾರತದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಮೊಹಮ್ಮದ್ ಸಿರಾಜ್ ಹಾಗೂ ಅರ್ಷದೀಪ್ ಸಿಂಗ್ ಅವರಲ್ಲಿ ಒಬ್ಬರನ್ನು ಆಯ್ಕೆ ಮಾಡಬೇಕಾದರೆ ತಾವು ಎಡಗೈ ವೇಗಿ ಅರ್ಷದೀಪ್ಗೆ ಆದ್ಯತೆ ನೀಡುವುದಾಗಿ ಹೇಳಿದ್ದಾರೆ.
ಭಾರತೀಯ ಕ್ರಿಕೆಟ್ನ ಭವಿಷ್ಯದ ಶ್ರೇಷ್ಠ ಟೆಸ್ಟ್ ಆಟಗಾರನನ್ನು ಆರಿಸಿದ ಅಂಬಾಟಿ ರಾಯುಡು!
"ಅರ್ಷದೀಪ್ ಸಿಂಗ್ ಮತ್ತು ಮೊಹಮ್ಮದ್ ಸಿರಾಜ್ ಅವರಲ್ಲಿ ಒಬ್ಬರನ್ನು ಆಯ್ಕೆ ಮಾಡಬೇಕೆಂದರೆ ನಾನು ಅರ್ಷದೀಪ್ ಅವರನ್ನು ಆರಿಸಿಕೊಳ್ಳುತ್ತೇನೆ. ವೈಯಕ್ತಿಕವಾಗಿ ತಂಡದಲ್ಲಿ ಒಬ್ಬ ಎಡಗೈ ವೇಗದ ಬೌಲರ್ ಇರಬೇಕು ಎಂದು ಬಯಸುತ್ತೇನೆ. ಏಕೆಂದರೆ, ಅವರ ಬೌಲಿಂಗ್ನ ವಿಭಿನ್ನ ಆಂಗಲ್ ತಂಡಕ್ಕೆ ಅಗತ್ಯವಾಗಿರುತ್ತದೆ. ಅಲ್ಲದೆ, ಅವರು ಚೆಂಡನ್ನು ಎರಡೂ ದಿಕ್ಕುಗಳಲ್ಲಿ ಸ್ವಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಸಿರಾಜ್ ಕೂಡ ಇದೇ ರೀತಿಯ ಕೌಶಲ ಹೊಂದಿದ್ದಾರೆ. ಆದರೆ, ಮುಂದಿನ ಪಂದ್ಯದಲ್ಲಿ ಅವರಿಗೆ ಅವಕಾಶ ಸಿಕ್ಕರೆ ಹೇಗೆ ಪ್ರದರ್ಶನ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ," ಎಂದು ಇರ್ಫಾನ್ ಪಠಾಣ್ ಕ್ರಿಕ್ಇನ್ಫೋಗೆ ತಿಳಿಸಿದ್ದಾರೆ.
"ಸಿರಾಜ್ ಸಾಕಷ್ಟು ಅನುಭವ ಹೊಂದಿರುವ ಬೌಲರ್. ಅವರಿಗೆ ಸಿಗುವ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡು ಆಯ್ಕೆಗಾರರಿಗೆ ತಲೆನೋವು ಉಂಟುಮಾಡುವಂತಹ ಪ್ರದರ್ಶನ ನೀಡುವುದನ್ನು ನೋಡಲು ಬಯಸುತ್ತೇನೆ. ಸಿರಾಜ್ ವಿಚಾರದಲ್ಲಿ ಭಾರತ ತಂಡ ಯೋಚಿಸಬೇಕಾದ ಒಂದು ಪ್ರಮುಖ ಅಂಶವಿದೆ. ಹೊಸ ಚೆಂಡಿನಲ್ಲಿ ಅವರು ಅತ್ಯುತ್ತಮವಾಗಿ ಬೌಲಿಂಗ್ ಮಾಡಬಲ್ಲರು. ಆದರೆ ಹಳೆಯ ಚೆಂಡಿನಲ್ಲೂ ಅದೇ ರೀತಿಯ ಪರಿಣಾಮಕಾರಿ ಬೌಲಿಂಗ್ ಮಾಡಲು ಸಾಧ್ಯವೇ ಎಂಬುದನ್ನು ಸಾಬೀತುಪಡಿಸಬೇಕಿದೆ," ಎಂದು ಹೇಳಿದ್ದಾರೆ.
ʻಆ ದಿನಗಳು ತುಂಬಾ ಕಠಿಣವಾಗಿದ್ದವುʼ: ತಮ್ಮ ಕಷ್ಟದ ಅವಧಿಯನ್ನು ನೆನೆದ ಸೂರ್ಯಕುಮಾರ್ ಯಾದವ್!
"ಪ್ರಸ್ತುತ ಅವರು (ಸಿರಾಜ್) ಸಾಕಷ್ಟು ಅನುಭವ ಹೊಂದಿದ್ದಾರೆ. ಅವಕಾಶ ಸಿಕ್ಕರೆ ಈ ಪ್ರಶ್ನೆಗೆ ತಮ್ಮ ಪ್ರದರ್ಶನದ ಮೂಲಕ ಉತ್ತರ ನೀಡಬಹುದು. ಸದ್ಯ ಅರ್ಷದೀಪ್ ಮತ್ತು ಸಿರಾಜ್ ನಡುವೆ ಪೈಪೋಟಿ ಇದೆ. ಆದರೆ ಅರ್ಷದೀಪ್ ಸ್ವಲ್ಪ ಮುನ್ನಡೆಯಲ್ಲಿದ್ದಾರೆ ಎಂದು ನಾನು ಭಾವಿಸುತ್ತೇನೆ," ಎಂದು ಪಠಾಣ್ ಹೇಳಿದ್ದಾರೆ.
ಬೇ ಓವಲ್ನಲ್ಲಿ ನಾಲ್ಕನೇ ಏಕದಿನ ಪಂದ್ಯ
ಇನ್ನೊಂದೆಡೆ, ಭಾರತ ತಂಡ ಸರಣಿಯ ನಾಲ್ಕನೇ ಏಕದಿನ ಪಂದ್ಯಕ್ಕೆ ಸಿದ್ಧತೆ ನಡೆಸುತ್ತಿದೆ. ನವೆಂಬರ್ 13ರಂದು ಮೌಂಟ್ ಮೌಂಗನುಯಿಯ ಬೇ ಓವಲ್ ಮೈದಾನದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಲಿವೆ.
ಈಗಾಗಲೇ ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಸೋಲು ಕಂಡಿರುವ ನ್ಯೂಜಿಲೆಂಡ್ ತಂಡ ತವರಿನಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಗೆಲುವಿನ ಹಾದಿಗೆ ಮರಳಲು ಎದುರು ನೋಡುತ್ತಿದೆ. ಭಾರತ ತಂಡ ಮಾತ್ರ ನಾಲ್ಕನೇ ಪಂದ್ಯ ಗೆದ್ದು ಸರಣಿ ತನ್ನದಾಗಿಸಿಕೊಳ್ಳುವ ವಿಶ್ವಾಸದಲ್ಲಿದೆ.